ಬುಧವಾರ, ಮೇ 27, 2020
27 °C

ಕೊರೊನಾ ಹಿನ್ನೆಲೆ | ಸಾಲ ತೀರಿಸಲು ಈಗಲಾದರೂ ಅವಕಾಶ ಕೊಡಿ: ವಿಜಯ್‌ ಮಲ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ದೇಶದ ಬ್ಯಾಂಕುಗಳಿಂದ ನಾನು ಪಡೆದಿರುವ ಎಲ್ಲ ಸಾಲವನ್ನೂ ತೀರಿಸುತ್ತೇನೆ. ದೇಶವೇ ಕೋವಿಡ್‌–19 ಪಿಡುಗಿನಿಂದ ತತ್ತರಿಸಿ, ಅದರ ವಿರುದ್ಧ ಹೋರಾಡುತ್ತಿರುವ ಇಂಥ ಸಮಯದಲ್ಲಾದರೂ ನನ್ನ ಮನವಿಯನ್ನು ಪುರಸ್ಕರಿಸಬೇಕು’ ಎಂದು ಮದ್ಯದ ಉದ್ಯಮಿ ವಿಜಯ ಮಲ್ಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಮಾಡಿದ್ದಾರೆ.

ಇಲ್ಲಿನ ಬ್ಯಾಂಕುಗಳಿಂದ ₹9,000 ಕೋಟಿ ಸಾಲ ಪಡೆದು ವಂಚಿಸಿದ ಆರೋಪ ಹೊತ್ತಿರುವ ಮಲ್ಯ, ಸದ್ಯ ಬ್ರಿಟನ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ. ಭಾರತಕ್ಕೆ ಕರೆತರುವ ಸಲುವಾಗಿ ಭಾರತ, ಬ್ರಿಟನ್‌ನಲ್ಲಿ ಕಾನೂನು ಹೋರಾಟನಡೆಸುತ್ತಿದೆ.

‘ನನ್ನ ಒಡೆತನದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ವಿವಿಧ ಬ್ಯಾಂಕುಗಳಿಂದ ಪಡೆದಿರುವ ಎಲ್ಲ ಸಾಲವನ್ನು ತೀರಿಸುವುದಾಗಿ ಹಲವಾರು ಬಾರಿ ಹೇಳಿದ್ದೇನೆ. ಬ್ಯಾಂಕುಗಳು ನನ್ನ ಮನವಿಯನ್ನು ಪುರಸ್ಕರಿಸಿಲ್ಲ. ನನ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಜಾರಿ ನಿರ್ದೇಶನಾಲಯವೂ ಸ್ಪಂದಿಸುತ್ತಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಹಣಕಾಸು ಸಚಿವರು ನನ್ನ ಮಾತನ್ನು ಆಲಿಸುತ್ತಾರೆ ಎಂದು ಆಶಿಸುವೆ’ ಎಂದು ಅವರು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ. 

‘ನನ್ನ ಎಲ್ಲ ಕಂಪನಿಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರೂ, ನೌಕರರನ್ನು ಮನೆಗೆ ಕಳುಹಿಸಿಲ್ಲ. ಅವರಿಗೆ ನಿರ್ದಿಷ್ಟ ವೇತನ ನೀಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಬೇಕು’ ಎಂದೂ ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು