ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಆರ್ಥಿಕತೆಗೆ ಕೋವಿಡ್‌ ಕಂಟಕ

ಚೀನಾದಿಂದ ಬಿಡಿಭಾಗಗಳ ರಫ್ತು ಸ್ಥಗಿತ l ಭಾರತದ ತಯಾರಿಕಾ ವಲಯಕ್ಕೆ ಗರ l ಉದ್ಯೋಗ ನಷ್ಟ ಭೀತಿ l ಪ್ರವಾಸೋದ್ಯಮ ಮಂಕು
Last Updated 13 ಫೆಬ್ರುವರಿ 2020, 19:48 IST
ಅಕ್ಷರ ಗಾತ್ರ

ಬೆಂಗಳೂರು:ಕೋವಿಡ್‌–19 (ಕೊರೊನಾವೈರಸ್‌) ಕಂಟಕದ ಕಾರಣಚೀನಾದಲ್ಲಿ ತಯಾರಿಕಾ ವಲಯ ಸ್ತಬ್ಧವಾಗಿದೆ. ಹೀಗಾಗಿ ಹಲವು ಬಿಡಿಭಾಗಗಳಿಗಾಗಿ ಆ ದೇಶವನ್ನೇ ಹೆಚ್ಚಾಗಿ ಅವಲಂಬಿಸಿರುವ ಭಾರತದ ತಯಾರಿಕಾ ವಲಯಕ್ಕೆ ಈಗ ಗರ ಬಡಿದಿದೆ.

ಚೀನಾದಿಂದ ಪೂರೈಕೆ ಸ್ಥಗಿತವಾಗಿರುವ ಕಾರಣ, ಭಾರತದ ಹಲವು ಕಂಪನಿಗಳು ತಯಾರಿಕೆಯನ್ನು ನಿಧಾನಗೊಳಿಸಿದರೆ, ಇನ್ನೂ ಕೆಲವು ಸ್ಥಗಿತಗೊಳಿಸುವ ಹಂತ ತಲುಪಿವೆ. ಈ ವಿಷಮಸ್ಥಿತಿಯು, ‘ಭಾರತದಲ್ಲೇ ತಯಾರಿಸಿ (ಮೇಕ್ ಇನ್ ಇಂಡಿಯಾ)’ ಅಭಿಯಾನ ಎಷ್ಟರಮಟ್ಟಿಗೆ ಸಫಲವಾಗಿದೆ ಎಂಬುದರ ಬಗ್ಗೆಯೂ ಚರ್ಚೆಯನ್ನು ಹುಟ್ಟುಹಾಕಿದೆ.

ಭಾರತದ ಆಟೊಮೊಬೈಲ್ ಕ್ಷೇತ್ರ, ಗೃಹಬಳಕೆ ಎಲೆಕ್ಟ್ರಾನಿಕ್ಸ್ ಸರಕುಗಳು, ಮೊಬೈಲ್–ಸ್ಮಾರ್ಟ್‌ಫೋನ್‌ ಮತ್ತು ಅವುಗಳ ಬಿಡಿಭಾಗಗಳ ತಯಾರಕಾ ಕಂಪನಿಗಳು ಬಿಡಿಭಾಗಗಳಿಗಾಗಿ ಚೀನಾವನ್ನೇ ಅವಲಂಬಿಸಿವೆ. ಸಿದ್ಧ ಉಡುಪು ತಯಾರಿಕಾ ಕ್ಷೇತ್ರವೂ ಕಚ್ಚಾ ವಸ್ತುಗಳಿಗಾಗಿ ಆ ದೇಶವನ್ನೇ ಅವಲಂಬಿಸಿದೆ.

ಚೀನಾದಲ್ಲಿ ವರ್ಷಾರಂಭದ ದೀರ್ಘರಜೆ ಫೆ. 10ಕ್ಕೆ ಕೊನೆಗೊಳ್ಳಬೇಕಿತ್ತು. ಕೋವಿಡ್‌ ವೈರಸ್‌ನ ಕಾರಣ ಈ ರಜೆಯನ್ನು ಫೆ. 17ಕ್ಕೆ ವಿಸ್ತರಿಸಲಾಗಿದೆ. ಆದರೆ, ಈ ರಜೆ ಮತ್ತೊಂದು ವಾರ ವಿಸ್ತರಣೆಯಾಗುವ ಸಾಧ್ಯತೆ ಇದೆ. ಹೀಗೇನಾದರೂ ಆದರೆ, ಅಗತ್ಯವಿರುವ ಬಿಡಿಭಾಗಗಳು ಮತ್ತು ಕಚ್ಚಾಸಾಮಗ್ರಿಗಳ ಸಂಗ್ರಹ ಕೆಲವೇ ದಿನಗಳಲ್ಲಿ ಖಾಲಿ ಆಗಲಿದೆ ಎಂದು ಉದ್ಯಮ ಕ್ಷೇತ್ರದ ಹಲವು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ಭಾರತದಲ್ಲಿ ತಯಾರಿಕಾ ಕ್ಷೇತ್ರವು ಚಟುವಟಿಕೆ ಸ್ಥಗಿತಗೊಳಿಸಿದರೆ ಸಾವಿರಾರು ಮಂದಿ ನೇರವಾಗಿ ಮತ್ತು ಲಕ್ಷಾಂತರ ಮಂದಿ ಪರೋಕ್ಷವಾಗಿ ಉದ್ಯೋಗವನ್ನು ತಾತ್ಕಾಲಿಕವಾಗಿ ಕಳೆದುಕೊಳ್ಳುವ ಅಪಾಯವಿದೆ ಎಂಬ ಕಳವಳ ವ್ಯಕ್ತವಾಗಿದೆ.

‘ಕೊರೊನಾ ವೈರಸ್ ನಮ್ಮ ಜನರಿಗೆ ಮತ್ತು ನಮ್ಮ ಆರ್ಥಿಕತೆಗೆ ಅತ್ಯಂತ ಅಪಾಯಕಾರಿ. ಈ ಅಪಾಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ನನ್ನ ಪ್ರಜ್ಞೆ ಹೇಳುತ್ತಿದೆ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಅವರ ಈ ಹೇಳಿಕೆ ಪರ ಮತ್ತು ವಿರುದ್ಧ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

‘ಸರ್ಕಾರವು ಎಲ್ಲಾ ಸ್ವರೂಪದ ಮುನ್ನೆ ಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಇವರು ದೇಶದ ಪ್ರಮುಖ ನಾಯಕಿಯ ಮಗ. ಈ ಬಗ್ಗೆ ವಿಮರ್ಶೆ ಮಾಡುವುದಿಲ್ಲ’ ಎಂದು ಕೇಂದ್ರ ಸಚಿವ ಹರ್ಷವರ್ಧನ್ ಅವರು, ರಾಹುಲ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತವು ಚೀನಾವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಏಕೆ ಅವಲಂಬಿಸಬೇಕು? ಭಾರತ ದಲ್ಲೇ ತಯಾರಿಸಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದರೆ, ಇಂದು ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಹಲವು ಉದ್ಯಮಿಗಳೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಟೊಮೊಬೈಲ್ ಉದ್ಯಮದ ಇಕ್ಕಟ್ಟು

‘ಚೀನಾದಿಂದ ಬಿಡಿಭಾಗಗಳ ಪೂರೈಕೆ ವ್ಯತ್ಯಯವಾದರೆ, ಪ್ರಸಕ್ತ ವರ್ಷ ಭಾರತದ ವಾಹನ ತಯಾರಿಕಾ ಪ್ರಮಾಣ ಶೇ 8.3ರಷ್ಟು ಕುಸಿತವಾಗಲಿದೆ’ ಎನ್ನುತ್ತದೆ ಫಿಚ್ ಸಲ್ಯೂಷನ್ಸ್ ಸಮೀಕ್ಷೆ.

‘ಭಾರತದ ವಾಹನ ತಯಾರಿಕಾ ಕಂಪನಿಗಳು ಶೇ 10–30ರಷ್ಟು ಬಿಡಿಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತವೆ. ವಿದ್ಯುತ್ ಚಾಲಿತ ವಾಹನಗಳ ವಿಭಾಗಕ್ಕೆ ಬಂದರೆ, ಆಮದು ಬಿಡಿಭಾಗಗಳ ಪ್ರಮಾಣ ಇನ್ನೂ ಎರಡು ಪಟ್ಟು ಹೆಚ್ಚುತ್ತದೆ. ಹೀಗಾಗಿ ಚೀನಾದಲ್ಲಿ ತಯಾರಿಕೆ ಸ್ಥಗಿತವಾಗಿರುವುದು, ಭಾರತದ ಆಟೊಮೊಬೈಲ್ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರುತ್ತದೆ’ ಎಂಬುದು ಫಿಚ್ ವಿವರಣೆ. ‘ಭಾರತ್ ಸ್ಟೇಜ್‌–6 (ಬಿಎಸ್‌–6) ವಾಹನಗಳ ತಯಾರಿಕೆಗೆ ಅಗತ್ಯವಾದ ಹಲವು ಬಿಡಿಭಾಗಗಳು ಸಹ ಚೀನಾದಿಂದ ಆಮದು ಆಗಬೇಕಿದೆ. ಅಲ್ಲಿ ತಯಾರಿಕೆ ಆರಂಭವಾಗದಿದ್ದರೆ, ಪೂರೈಕೆಯೂ ಆಗುವುದಿಲ್ಲ. ಹಾಗೇನಾದರೂ ಆದರೆ, ಬಿಎಸ್‌–6 ವಾಹನಗಳ ತಯಾರಿಕೆ ಆರಂಭಿಸುವುದು ಕಷ್ಟ’ ಎನ್ನುತ್ತಾರೆ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅಧಿಕಾರಿಗಳು.

‘ನಮ್ಮ ಬಹುತೇಕ ಎಲ್ಲಾ ಬಿಡಿಭಾಗಗಳ ಪೂರೈಕೆದಾರರು, ಹಲವು ಉತ್ಪನ್ನಗಳಿಗಾಗಿ ಚೀನಾವನ್ನು ಅವಲಂಬಿಸಿದ್ದಾರೆ. ಒಂದು ಬಿಡಿಭಾಗದ ಪೂರೈಕೆ ಸ್ಥಗಿತವಾದರೂ, ಕಾರನ್ನು ತಯಾರಿಸಲು ಸಾಧ್ಯವಿಲ್ಲ’ ಎಂದು ಮಾರುತಿ ಸುಜುಕಿ ಕಂಪನಿಯ ಅಧಿಕಾರಿಗಳು ಹೇಳುತ್ತಾರೆ. ಮೋಟರ್‌, ಬ್ಯಾಟರಿ, ಚಾರ್ಜರ್‌, ಕಂಟ್ರೋಲ್‌ ಉಪಕರಣ ಮತ್ತು ಅಲಂಕಾರಿಕ ಉಪಕರಣಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಬಿಡಿಭಾಗಗಳ ಪೂರೈಕೆ ಕೂಡ ಸ್ಥಗಿತವಾಗಿದೆ. ಭಾರತದಲ್ಲಿ ವರ್ತಕರ ಬಳಿ ಸಂಗ್ರಹ ಮುಗಿದರೆ, ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಯೂ ಸ್ಥಗಿತವಾಗುತ್ತದೆ ಎಂಬ ಭೀತಿ ವ್ಯಕ್ತವಾಗಿದೆ.

ಎಲೆಕ್ಟ್ರಾನಿಕ್‌ ಸರಕು ತಯಾರಿಕೆ ಕುಂಠಿತ

‘ಭಾರತದ ಮೊಬೈಲ್–ಸ್ಮಾರ್ಟ್‌ಫೋನ್‌, ಟಿವಿ, ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಮೊದಲಾದ ಗೃಹ ಬಳಕೆ ಎಲೆಕ್ಟ್ರಾನಿಕ್ ಸರಕುಗಳ ತಯಾರಿಕಾ ಕಂಪನಿಗಳು ಬಿಡಿಭಾಗಗಳನ್ನು ಚೀನಾದಿಂದ ತರಿಸುತ್ತಿವೆ. ಆಮದು ಮಾಡಿಕೊಂಡ ಬಿಡಿಭಾಗಗಳ ಸಂಗ್ರಹ ಒಂದು ವಾರದಲ್ಲಿ ಖಾಲಿಯಾಗುತ್ತದೆ. ಅಷ್ಟರಲ್ಲಿ ಬಿಡಿಭಾಗಗಳ ಪೂರೈಕೆ ಆರಂಭವಾಗದಿದ್ದರೆ, ಭಾರತದ ಕಂಪನಿಗಳು ತಯಾರಿಕೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ’ ಎಂದು ಗೃಹಬಳಕೆ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ತಯಾರಕರ ಸಂಘಟನೆ ಆತಂಕ ವ್ಯಕ್ತಪಡಿಸಿದೆ.

‘ಸ್ವಿಚ್‌, ಸ್ವಿಚ್‌ಬೋರ್ಡ್‌, ಕನೆಕ್ಟರ್‌, ಬಲ್ಬ್‌ಗಳನ್ನು ತಯಾರಿಸಲು ಅಗತ್ಯವಿರುವ ಬಿಡಿಭಾಗಗಳನ್ನೂ ಚೀನಾದಿಂದಲೇ ತರಿಸಿಕೊಳ್ಳಬೇಕಿದೆ. ಈ ಬಿಡಿಭಾಗಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವುದೂ ಕಷ್ಟದ ಕೆಲಸ. ಹೊಸ ತಯಾರಕರನ್ನು ಹುಡುಕಿ, ವಿನ್ಯಾಸ ಅಂತಿಮಗೊಳಿಸಿ, ದರ ನಿಗದಿ ಮಾಡುವ ಪ್ರಕ್ರಿಯೆಗೆ ಒಂದೆರಡು ತಿಂಗಳು ತಗಲುತ್ತದೆ. ಇಷ್ಟರಲ್ಲಿ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ತಾನು ಎದುರಿಸುತ್ತಿರುವ ಸವಾಲುಗಳ ಮೇಲೆ ಸಂಘಟನೆಯು ಬೆಳಕು ಚೆಲ್ಲಿದೆ.

ಗಾರ್ಮೆಂಟ್‌ ಉದ್ಯಮಕ್ಕೂ ಬರೆ

ಭಾರತದ ಸಿದ್ಧ ಉಡುಪು ತಯಾರಿಕಾ ಉದ್ಯಮವೂ ಜಿಪ್‌, ಗುಂಡಿ ಮತ್ತು ಲೇಬಲ್‌ಗಳಿಗಾಗಿ ಚೀನಾವನ್ನೇ ಅವಲಂಬಿಸಿದೆ. ದೇಶೀಯವಾಗಿ ತಯಾರಾಗುವ ಇಂತಹ ಉತ್ಪನ್ನಗಳ ಬೆಲೆ, ಆಮದು ಉತ್ಪನ್ನಗಳಿಗಿಂತ ಹಲವು ಪಟ್ಟು ಹೆಚ್ಚು. ಚೀನಾದಿಂದ ಪೂರೈಕೆ ಆರಂಭವಾಗದಿದ್ದರೆ, ದೇಶದ ಸಿದ್ಧ ಉಡುಪು ತಯಾರಿಕೆ ಮೇಲೆ ಪರಿಣಾಮ ಬೀರಲಿದೆ.

ಜಾಗತಿಕ ಆರ್ಥಿಕತೆ ಮೇಲೂ ಕರಿಛಾಯೆ

1 ಹಲವು ರಾಷ್ಟ್ರಗಳ ಕೈಗಾರಿಕೆಗಳು ಚೀನಾದಿಂದ ಪೂರೈಕೆಯಾಗುವ ಸರಕುಗಳ ಮೇಲೆ ಅವಲಂಬನೆ ಆಗಿರುವುದರಿಂದ ‘ಕೋವಿಡ್‌–19’ ವೈರಸ್‌ನ ಹಾವಳಿಯಿಂದ ಜಾಗತಿಕ ಆರ್ಥಿಕತೆಯ ಮೇಲೂ ಕರಿಛಾಯೆ ಆವರಿಸಿದೆ. ಆ್ಯಪಲ್‌ ಮೊಬೈಲ್‌ ಕಂಪನಿಗೆ ಸರಕುಗಳನ್ನು ಪೂರೈಸುವ 800 ಪೂರೈಕೆದಾರರಲ್ಲಿ 290 ಪೂರೈಕೆದಾರರು ಇರುವುದು ಚೀನಾದಲ್ಲಿ. ಹೀಗಾಗಿ ಈ ಕಂಪನಿಯ ಮೊಬೈಲ್‌ ತಯಾರಿಕೆ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ.

2 ಚೀನಾ ತಯಾರಿಸುವ ಅಟೊಮೊಬೈಲ್‌ ಸಲಕರಣೆಗಳಲ್ಲಿ ಶೇ 50ರಷ್ಟನ್ನು ವುಹಾನ್‌ ಹಾಗೂ ಅದರ ಸುತ್ತಲಿನ ಪ್ರದೇಶಗಳೇ ಪೂರೈಸುತ್ತಿದ್ದವು. ಅಲ್ಲಿನ ಕೈಗಾರಿಕಾ ಘಟಕಗಳು ಈಗ ಬಂದ್‌ ಆಗಿದ್ದರಿಂದ ಅಮೆರಿಕ ಮತ್ತು ಯುರೋಪ್‌ ಸೇರಿದಂತೆ ಜಗತ್ತಿನ ಆಟೊಮೊಬೈಲ್‌ ತಯಾರಿಕಾ ವಲಯ ಕುಂಠಿತಗೊಂಡಿದೆ. ಈ ವರ್ಷ ಕಾರುಗಳ ತಯಾರಿಕೆ ಸಂಖ್ಯೆಯಲ್ಲಿ ಸುಮಾರು 3.50 ಲಕ್ಷದಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

3 ಜಪಾನ್‌ನ ಪ್ರವಾಸೋದ್ಯಮಕ್ಕೆ ಚೀನಾದ ಕೊಡುಗೆ ಬಲುದೊಡ್ಡದು. 2020ರ ಮೊದಲ ತ್ರೈಮಾಸಿಕದಲ್ಲಿ 4 ಲಕ್ಷ ಪ್ರಯಾಣಿಕರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

4 ಜಗತ್ತಿನ ಶೇ 9ರಷ್ಟು ಟಿವಿ ಸೆಟ್‌ಗಳು ತಯಾರಾಗುವುದು ಚೀನಾದಲ್ಲಿ. ಅಲ್ಲಿನ ಚಟುವಟಿಕೆಗಳು ಈಗ ಬಹುತೇಕ ಸ್ಥಗಿತಗೊಂಡಿರುವ ಕಾರಣ ಟಿವಿ ಮಾರುಕಟ್ಟೆಗೂ ಬಿಸಿ ತಟ್ಟಿದೆ.

ಕುಸಿದ ಜಾಗತಿಕ ತೈಲ ಬೇಡಿಕೆ

‘ಕೋವಿಡ್‌–19’ ವೈರಸ್‌ನಿಂದಾಗಿ ಜಾಗತಿಕ ತೈಲ ಬೇಡಿಕೆಯಲ್ಲಿ ಭಾರಿ ಕುಸಿತ ಕಾಣಲಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಹೇಳಿದೆ. ಚೀನಾದಲ್ಲಿ ಬಹುತೇಕ ಕಾರ್ಖಾನೆಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿವೆ. ಅಲ್ಲಿನ ಸರಕುಗಳ ಮೇಲೆ ಅವಲಂಬನೆಯಾಗಿದ್ದ ಜಗತ್ತಿನ ಹಲವು ಕೈಗಾರಿಕಾ ವಲ ಯಗಳ ಉತ್ಪಾದನಾ ಚಟುವಟಿಕೆಗಳು ಏರುಪೇರಾಗಿವೆ. ಹೀಗಾಗಿ ತೈಲ ಬಳಕೆಯ ಪ್ರಮಾಣದಲ್ಲಿ ಭಾರಿ ಇಳಿಕೆ ಕಂಡಿದೆ.2020ರ ಮೊದಲ ತ್ರೈಮಾಸಿಕದಲ್ಲಿ ತೈಲ ಬೇಡಿಕೆ ದಿನಕ್ಕೆ 4.35 ಲಕ್ಷ ಬ್ಯಾರಲ್‌ಗಳಷ್ಟು ಕಡಿಮೆ ಆಗಲಿದೆ. ಇದು ಹತ್ತು ವರ್ಷಗಳಲ್ಲಿಯೇ ಕನಿಷ್ಠ.

‘ಸಾರ್ಸ್‌’ಗಿಂತ ಭೀಕರ ‘ಕೋವಿಡ್‌’

17 ವರ್ಷಗಳ ಹಿಂದೆ (2003ರಲ್ಲಿ) ಇಂಥದ್ದೇ ಒಂದು ಸೋಂಕಿನಿಂದ ಚೀನಾ ಕಂಗಾಲಾಗಿತ್ತು. ‘ಸಾರ್ಸ್‌’ ಹೆಸರಿನ ವೈರಸ್‌ ಚೀನಾದಲ್ಲಿ 750 ಮಂದಿಯನ್ನು ಬಲಿತೆಗೆದುಕೊಂಡಿದ್ದಲ್ಲದೆ ಅಲ್ಲಿಂದ 37 ರಾಷ್ಟ್ರಗಳಿಗೆ ಹಬ್ಬಿ, ಜಾಗತಿಕ ಆತಂಕಕ್ಕೆ ಕಾರಣವಾಗಿತ್ತು.

ಕೋವಿಡ್‌ ವೈರಸ್‌ ಅದಕ್ಕೂ ಭಯಾನಕ ಪರಿಣಾಮಗಳನ್ನು ಈಗ ಸೃಷ್ಟಿಸಿದೆ. ಸಾರ್ಸ್‌ಗಿಂತಲೂ ಆರು ಪಟ್ಟು ಹೆಚ್ಚು ವೇಗವಾಗಿ ಇದು ಪ್ರಸಾರ ಕಂಡಿದೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಹತ್ತಿರ ಹತ್ತಿರ 50,000 ಮಂದಿ ಸೋಂಕಿತರಾಗಿದ್ದಾರೆ.

ಸಾರ್ಸ್‌ ಸೋಂಕಿನ ಸಂದರ್ಭದಲ್ಲಿ ಚೀನಾ, ಜಗತ್ತಿನ ಆರನೇ ದೊಡ್ಡ ಆರ್ಥಿಕತೆಯಾಗಿತ್ತು. ಈ 17 ವರ್ಷಗಳಲ್ಲಿ ಅದು ಭಾರಿ ಪ್ರಗತಿಯನ್ನು ದಾಖಲಿಸಿದೆ. ಆರ್ಥಿಕವಾಗಿ ಹೆಚ್ಚು ಮುಕ್ತವಾಗಿದ್ದು, ಜಗತ್ತಿನ ಎರಡನೇ ಅತಿ ಬಲಿಷ್ಠ ಆರ್ಥಿಕತೆ ಎನಿಸಿಕೊಂಡಿದೆ. ಆದ್ದರಿಂದ ಕೋವಿಡ್‌ ದಾಳಿಯು ಚೀನಾದ ಆರ್ಥಿಕತೆಯ ಮೇಲೆ ಸಾರ್ಸ್‌ ದಾಳಿಗೂ ಹೆಚ್ಚಿನ ಪರಿಣಾಮವನ್ನು ಉಂಟುಮಾಡುತ್ತಿದೆ.

ಸಾರ್ಸ್‌ ದಾಳಿಯಿಟ್ಟಾಗ ಭಾರತ ತಯಾರಿಕಾ ವಲಯವು ಚೀನಾದ ಮೇಲೆ ಅಷ್ಟು ಅವಲಂಬನೆ ಆಗಿರಲಿಲ್ಲ. ಆದರೆ, ಈಗ ಅಲ್ಲಿನ ಬಿಡಿಭಾಗಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹೀಗಾಗಿ ಕೋವಿಡ್‌ ಭಾರತದ ಪಾಲಿಗೆ ಹೆಚ್ಚು ದುಬಾರಿಯಾಗಿದೆ.

ರಫ್ತು ಹೆಚ್ಚಿಸಲು ದೇಶಕ್ಕೆ ಅವಕಾಶ?

ಹಲವು ಸರಕುಗಳಿಗೆ ಚೀನಾವನ್ನು ಅವಲಂಬಿಸಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳು ಈಗ ಆ ಸರಕುಗಳಿಗಾಗಿ ಭಾರತದತ್ತ ನೋಡುತ್ತಿವೆ. ಇದನ್ನು ಬಳಸಿಕೊಂಡು ಭಾರತವು ರಫ್ತು ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳಿದ್ದರು. ಆದರೆ, ಈ ಅವಕಾಶವನ್ನು ಬಳಸಿಕೊಳ್ಳುವ ಸ್ಥಿತಿಯಲ್ಲಿ ಭಾರತ ಇಲ್ಲ ಎಂಬ ಅಭಿಪ್ರಾಯ ಉದ್ಯಮ ಕ್ಷೇತ್ರಗಳದ್ದು.

ಭಾರತದ ಬಹುತೇಕ ಸರಕು ತಯಾರಿಕಾ ಕ್ಷೇತ್ರಗಳು ಕಚ್ಚಾ ಸಾಮಗ್ರಿ ಮತ್ತು ಬಿಡಿಭಾಗಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತವೆ. ಇವುಗಳ ಪೂರೈಕೆ ಇಲ್ಲದಿದ್ದರೆ, ಬೇರೆ ದೇಶಗಳ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ. ಈ ಪರಿಸ್ಥಿತಿಯಿಂದ ನಾವು ಪಾಠ ಕಲಿಯಬೇಕಿದೆ ಎಂದು ಉದ್ಯಮ ಕ್ಷೇತ್ರದ ಸಂಘಟನೆಗಳು ಹೇಳಿವೆ.

ಭಾರತದಿಂದ ಸಿಮೆಂಟ್‌ ಮತ್ತು ಸಿರಾಮಿಕ್ಸ್‌ ರಫ್ತಿಗೆ ಉಜ್ವಲ ಅವಕಾಶಗಳು ಸೃಷ್ಟಿಯಾಗಿವೆ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT