ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಸಣ್ಣ ಉದ್ದಿಮೆ ಮೇಲೆ ಹೆಚ್ಚಿನ ಪರಿಣಾಮ

ಎಂಡುರೆನ್ಸ್‌ ಇಂಟರ್‌ನ್ಯಾಷನಲ್‌ ಗ್ರೂಪ್‌ನ ಸಮೀಕ್ಷಾ ವರದಿ
Last Updated 25 ಜೂನ್ 2020, 12:02 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಬಿಕ್ಕಟ್ಟಿನಿಂದಾಗಿ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಹಲವು ಉದ್ದಿಮೆಗಳು ತಾತ್ಕಾಲಿಕವಾಗಿ ವಹಿವಾಟು ಸ್ಥಗಿತಗೊಳಿಸಿವೆ ಎಂದು ಸಣ್ಣ ಉದ್ದಿಮೆಗಳಿಗೆ ತಂತ್ರಜ್ಞಾನದ ನೆರವು ನೀಡುತ್ತಿರುವ ಎಂಡುರೆನ್ಸ್‌ ಇಂಟರ್‌ನ್ಯಾಷನಲ್‌ ಗ್ರೂಪ್‌ ಹೇಳಿದೆ.

ಜೂನ್‌ ತಿಂಗಳ ಮೊದಲ ಎರಡು ವಾರದಲ್ಲಿ 500 ‘ಎಂಎಸ್ಎಂಇ‘ಗಳಿಂದ ಪ್ರತಿಕ್ರಿಯೆ ಪಡೆದು ಈ ವರದಿ ಸಿದ್ಧಪಡಿಸಲಾಗಿದೆ. ಸಹಜ ಸ್ಥಿತಿಗೆ ಬರುವವರೆಗೂ ತಾತ್ಕಾಲಿಕವಾಗಿ ವಹಿವಾಟು ಸ್ಥಗಿತಗೊಳಿಸುವುದಾಗಿ ಮೂರರಲ್ಲಿ ಒಂದು ಉದ್ದಿಮೆ ತಿಳಿಸಿದೆ.

ಮಹಾನಗರಗಳಲ್ಲಿ, ರಿಟೇಲ್‌ ಮತ್ತು ತಯಾರಿಕಾ ವಲಯಗಳಲ್ಲಿ ‘ಎಂಎಸ್ಎಂಇ‘ಗಳ ಮೇಲೆ ಹೆಚ್ಚು ಪರಿಣಾಮ ಉಂಟಾಗಿದೆ.

ಸಣ್ಣ ಉದ್ದಿಮೆಗಳು ತಮ್ಮ ವಹಿವಾಟು ಉಳಿಸಿಕೊಳ್ಳಲು ಜಾಲತಾಣ ರೂಪಿಸುವ ಅಥವಾ ಇ–ಕಾಮರ್ಸ್‌ ವಹಿವಾಟು ಆರಂಭಿಸುವ ಬಗ್ಗೆ ಹೆಚ್ಚು ಗಮನ ನೀಡುತ್ತಿವೆ. ಅದರಲ್ಲಿಯೂ ಶೈಕ್ಷಣಿಕ ಸೇವೆಗಳನ್ನು ನೀಡುವ ಉದ್ದಿಮೆಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್‌ ಮಾಧ್ಯಮವನ್ನು ಬಳಸುತ್ತಿವೆ.

ರಿಟೇಲ್‌ ಮತ್ತು ಶೈಕ್ಷಣಿಕ ಸೇವೆಗಳನ್ನು ಒದಗಿಸುವ ಉದ್ದಿಮೆಗಳ ವರಮಾನವು ಇ–ಕಾಮರ್ಸ್‌ನಿಂದ ಕ್ರಮವಾಗಿ ಶೇ 53 ಮತ್ತು ಶೇ 65ರಷ್ಟು ಏರಿಕೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

‘ಕೋವಿಡ್‌ನಿಂದಾಗಿ ಪ್ರತಿಯೊಬ್ಬರೂ ತಮ್ಮ ಜೀವನದ ಬಗ್ಗೆ ಮರು ಚಿಂತನೆ ನಡೆಸುವಂತಾಗಿದೆ. ಡಿಜಿಟಲ್‌ ತಂತ್ರಜ್ಞಾನದ ಬಳಕೆಯಿಂದ ‘ಎಂಎಸ್ಎಂಇ‘ಗಳಿಗೆ ತಮ್ಮ ವಹಿವಾಟನ್ನು ಸಂಪೂರ್ಣವಾಗಿ ಕುಸಿಯದಂತೆ ನೋಡಿಕೊಳ್ಳಲು ಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇದುವೇ ಗ್ರಾಹಕರೊಂದಿಗೆ ಸಂಪರ್ಕದಲ್ಲಿರುವ ಮುಖ್ಯ ಸೇತುವೆಯಾಗಲಿದೆ’ ಎಂದು ಎಂಡುರೆನ್ಸ್‌ ಗ್ರೂಪ್‌ನ ಹಿರಿಯ ಉಪಾಧ್ಯಕ್ಷ ಮನಿಶ್‌ ದಲಾಲ್‌ ಹೇಳಿದ್ದಾರೆ.

ತಂತ್ರಜ್ಞಾನ ಪರಿಣತರ ಕೊರತೆ ಮತ್ತು ಜಾಲತಾಣಗಳನ್ನು ಅಭಿವೃದ್ಧಿಪಡಿಸಲು ತಗಲುವ ವೆಚ್ಚವು ದೊಡ್ಡ ಸವಾಲಾಗಿದೆ. ಇದರಿಂದಾಗಿ ‘ಎಂಎಸ್ಎಂಇ‘ಗಳು ಜಾಲತಾಣ ಅಭಿವೃದ್ಧಿಪಡಿಸುವ ವೃತ್ತಿಪರರ ಸಹಾಯ ಪಡೆಯಬೇಕಾಗಿ ಬರಲಿದೆ.

ಎಂಡುರೆನ್ಸ್‌ ಕಂಪನಿಯು ಸಣ್ಣ ಉದ್ದಿಮೆಗಳಿಗೆ ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಬಳಕೆ, ಇ–ಮಾರುಕಟ್ಟೆ ಸೇರಿದಂತೆ ಹಲವು ರೀತಿಯ ವಹಿವಾಟು ವಿಸ್ತರಣೆಯ ಸೇವೆಗಳನ್ನು ನೀಡುತ್ತಿದೆ.

60 %

ವಹಿವಾಟು ಸಹಜ ಸ್ಥಿತಿಗೆ ಮರಳಲು ಆರು ತಿಂಗಳು ಬೇಕಾಗಲಿದೆ ಎಂದಿರುವ ಉದ್ದಿಮೆಗಳು

50 %

ಸರ್ಕಾರದಿಂದ ತೆರಿಗೆ ವಿನಾಯಿತಿ ಅಥವಾ ರಿಯಾಯಿತಿ ನಿರೀಕ್ಷಿಸಿರುವ ಉದ್ದಿಮೆಗಳು

30 %

ಜಾಲತಾಣ ಅಥವಾ ಇ–ಕಾಮರ್ಸ್‌ ವಹಿವಾಟು ಆರಂಭಿಸಿದ ‘ಎಂಎಸ್ಎಂಇ‘ಗಳು

50 %

ಒಟ್ಟಾರೆ ವರಮಾನದಲ್ಲಿಇ–ಕಾಮರ್ಸ್‌ನಿಂದ ಆಗಿರುವ ಹೆಚ್ಚಳ

50 %

ವಿಡಿಯೊ ಕಾನ್ಫರೆನ್ಸ್‌ ಸಾಧನಗಳು ಮತ್ತು ವಾಟ್ಸ್‌ಆ್ಯಪ್‌ ಬಳಸುತ್ತಿರುವವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT