ಬುಧವಾರ, ಆಗಸ್ಟ್ 4, 2021
28 °C

‘ಕೋವಿಡ್: ವಿಮೆ ತಿರಸ್ಕೃತ ಆಗುವ ಸಾಧ್ಯತೆ ಕಡಿಮೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೊರೊನಾ ವಿಮೆ ಕ್ಲೇಮ್‌ ಅರ್ಜಿಯು ಕಾರ್ಪೊರೇಟ್‌ ವಲಯದಿಂದ, ಬೇರೆ ಬೇರೆ ಕಂಪನಿಗಳ ಸಮೂಹ ವಿಮೆಗೆ ಒಳಪಟ್ಟ ನೌಕರರಿಂದ ಬಂದಿದ್ದರೆ, ಅದು ತಿರಸ್ಕೃತವಾಗುವುದು ತೀರಾ ಕಡಿಮೆ’ ಎಂದು ವಿಮಾ ಕಂಪನಿಗಳ ಪ್ರತಿನಿಧಿಗಳು ಹಾಗೂ ಟಿಪಿಎ (ನೌಕರ ಕೆಲಸ ಮಾಡುವ ಕಂಪನಿ ಮತ್ತು ವಿಮಾ ಕಂಪನಿ ನಡುವಿನ ಮಧ್ಯವರ್ತಿ) ಪ್ರತಿನಿಧಿಗಳು ಹೇಳುತ್ತಾರೆ.

‘ಕಂಪನಿ ಕಡೆಯಿಂದ ಅಥವಾ ವೈಯಕ್ತಿಕವಾಗಿ ಆರೋಗ್ಯ ವಿಮಾ ಸೌಲಭ್ಯ ಪಡೆದುಕೊಂಡಿರುವವರು ಕೋವಿಡ್–19 ಕಾಯಿಲೆಗೆ ವಿಮಾ ಸೌಲಭ್ಯ ಪಡೆಯಬೇಕು ಎಂದಾದರೆ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಎಂಬ ವರದಿ ಬಂದಿರಲೇಬೇಕು. ಬೇರೆ ಯಾವುದೇ ಪರೀಕ್ಷೆಗಳಲ್ಲಿ ಕೋವಿಡ್–19 ಪಾಸಿಟಿವ್‌ ಬಂದಿದ್ದರೂ, ಅದು ವಿಮಾ ಸೌಲಭ್ಯ ಪಡೆಯಲು ನೆರವಾಗುವುದಿಲ್ಲ’ ಎಂದು ಟಿಪಿಎ ಪ್ರತಿನಿಧಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವ್ಯಕ್ತಿಯು ಚಿಕಿತ್ಸೆ ಪಡೆಯಲು ಮಾಡಿರುವ ವೆಚ್ಚ ಹಾಗೂ ವಿಮಾ ಕಂಪನಿಯಿಂದ ಮಂಜೂರಾಗುವ ಮೊತ್ತದ ನಡುವೆ ವ್ಯತ್ಯಾಸ ಆಗುವ ಸಾಧ್ಯತೆಗಳು ಇರುತ್ತವೆ. ಈ ವ್ಯತ್ಯಾಸಕ್ಕೆ, ವ್ಯಕ್ತಿ ಪಡೆದಿರುವ ವಿಮಾ ಯೋಜನೆಯ ನಿಬಂಧನೆಗಳು ಕಾರಣವಾಗಿರುತ್ತವೆ ಎಂದು ಅವರು ಹೇಳಿದರು.

‘ಕೆಲವು ಆಸ್ಪತ್ರೆಗಳು ಕೋವಿಡ್–19 ರೋಗಿಗಳಿಗೆ ವಿಮಾ ಸೌಲಭ್ಯವಿದ್ದರೂ ನಗದುರಹಿತ ಚಿಕಿತ್ಸೆ ಸೌಲಭ್ಯ ನೀಡದಿರುವ ವರದಿಗಳು ಇವೆ. ಆದರೆ, ವಿಮಾ ಕಂಪನಿ ಹಾಗೂ ಆಸ್ಪತ್ರೆ ನಡುವೆ ನಗದು ರಹಿತ ಚಿಕಿತ್ಸೆಯ ಒಪ್ಪಂದ ಇದ್ದರೆ, ಅಂತಹ ಆಸ್ಪತ್ರೆಗಳು ರೋಗಿಗಳಿಗೆ ಈ ಸೌಲಭ್ಯ ನಿರಾಕರಿಸುವಂತೆ ಇಲ್ಲ’ ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಈಚೆಗೆ ತಾಕೀತು ಮಾಡಿದೆ.

ಟಾಪ್–ಅಪ್ ಸೌಲಭ್ಯ: ಗಮನದಲ್ಲಿ ಇರಲಿ
ವಿಮಾ ಕವರೇಜ್ ಮೊತ್ತ ಸಾಕಾಗುವುದಿಲ್ಲ ಎಂದು ಅನ್ನಿಸಿದರೆ ಅದನ್ನು ಹೆಚ್ಚು ಮಾಡಿಕೊಳ್ಳಲು ಟಾಪ್‌–ಅಪ್‌ ಸೌಲಭ್ಯ ಇದೆ. ಆದರೆ, ಟಾಪ್‌–ಅಪ್‌ ಸೌಲಭ್ಯವನ್ನು ಕಾಯಿಲೆಗೆ ತುತ್ತಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ತೆಗೆದುಕೊಳ್ಳಲು ಅವಕಾಶವಿಲ್ಲ ಎಂದು ವಿಮಾ ಕಂಪನಿಯ ಪ್ರತಿನಿಧಿಯೊಬ್ಬರು ತಿಳಿಸಿದರು.

‘ಆರೋಗ್ಯ ವಿಮೆಯ ಮೊತ್ತ ಸಾಕಾಗದು ಎಂದು ಗ್ರಾಹಕರಿಗೆ ಅನ್ನಿಸಿದರೆ ಟಾಪ್‌–ಅಪ್‌ ಪಾಲಿಸಿಯನ್ನು ವ್ಯಕ್ತಿ ಆರೋಗ್ಯವಾಗಿ ಇರುವಾಗಲೇ ಖರೀದಿಸಬೇಕು. ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದಾಗ, ಮೂಲ ಮೊತ್ತ ಖಾಲಿ ಆದಾಗ ತಕ್ಷಣಕ್ಕೆ ಟಾಪ್–ಅಪ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಭಾರತೀಯ ಜೀವ ವಿಮಾ ನಿಗಮದ ಅಧಿಕಾರಿ ಬೂಕನಕೆರೆ ವಿಜಯೇಂದ್ರ ತಿಳಿಸಿದರು.

ಕೋವಿಡ್‌–19 ಕಾಯಿಲೆಗೆ ವಿಮಾ ಸೌಲಭ್ಯ ಪಡೆದುಕೊಳ್ಳಲು ‘ಕಾಯುವಿಕೆಯ ಅವಧಿ’ ಇಲ್ಲ. ಹಿಂದಿನ ದಿನ ವಿಮೆ ಮಾಡಿಸಿದ್ದರೂ, ಮಾರನೆಯ ದಿನ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಕೋವಿಡ್ ದೃಢಪಟ್ಟರೆ ವಿಮಾ ಸೌಲಭ್ಯ ತೆಗೆದುಕೊಳ್ಳಲು ಅಡ್ಡಿ ಇಲ್ಲ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು