ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೋದ್ಯಮದ ಷೇರು ವಿಕ್ರಯ: ಭದ್ರತಾ ಒಪ್ಪಿಗೆ ಕಡ್ಡಾಯ

Last Updated 21 ಫೆಬ್ರುವರಿ 2021, 15:23 IST
ಅಕ್ಷರ ಗಾತ್ರ

ನವದೆಹಲಿ: ಷೇರು ವಿಕ್ರಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಾರ್ಗಸೂಚಿಗಳಲ್ಲಿ ಬದಲಾವಣೆ ತಂದಿದ್ದು, ಕೇಂದ್ರೋದ್ಯಮಗಳ ಷೇರು ಖರೀದಿಗೆ ಬಿಡ್‌ ಸಲ್ಲಿಸುವವರು ಭದ್ರತಾ ಸಂಸ್ಥೆಗಳಿಂದ ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

ಅರ್ಹ ಬಿಡ್‌ದಾರರು ಭದ್ರತಾ ಸಂಸ್ಥೆಗಳ ಒಪ್ಪಿಗೆ ಪಡೆದ ನಂತರವೇ ಮೌಲ್ಯಮಾಪನ ಸಮಿತಿಯು ಹಣಕಾಸು ಬಿಡ್‌ ಅನ್ನು ಮುಕ್ತಗೊಳಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಮುಂದಿನ ಹಣಕಾಸು ವರ್ಷದಲ್ಲಿ ಬಿಪಿಸಿಎಲ್‌, ಏರ್‌ ಇಂಡಿಯಾ, ಶಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ, ಕಂಟೈನರ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ, ಐಡಿಬಿಐ ಬ್ಯಾಂಕ್‌, ಬಿಎಂಎಲ್‌, ಪವನ್ ಹನ್ಸ್, ನೀಲಾಚಲ್‌ ಇಸ್ಪತ್‌ ನಿಗಮ್ ಕಂಪನಿಗಳ ಷೇರುಗಳನ್ನು ಮಾರಾಟ ಮಾಡಲಿದೆ.

ಗರಿಷ್ಠ ದರದ ಬಿಡ್‌ ಸಲ್ಲಿಸಿರುವವರು ಭದ್ರತಾ ಒಪ್ಪಿಗೆ ಪಡೆಯದೇ ಇದ್ದರೆ, ನಂತರದ ಬಿಡ್‌ದಾರರಿಗೆ ಆ ಗರಿಷ್ಠ ದರದೊಂದಿಗೆ ಹೊಂದಿಸುವ ಅವಕಾಶ ನೀಡಲಾಗುತ್ತದೆ.

ಷೇರುವಿಕ್ರಯ ಕುರಿತು ಕೈಗಾರಿಕಾ ಉತ್ತೇಜನ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆಯು (ಡಿಐಪಿಎಎಂ) 2018ರಲ್ಲಿ ಮಾರ್ಗಸೂಚಿ ಟಿಪ್ಪಣಿ ರೂಪಿಸಿತ್ತು. ಆದರೆ, ನಿಯಮದಲ್ಲಿ ಅಸ್ಪಷ್ಟತೆ ಇದ್ದ ಕಾರಣದಿಂದಾಗಿ ಅದರಲ್ಲಿ ಬದಲಾವಣೆ ತರಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

‘ಭದ್ರತಾ ಒಪ್ಪಿಗೆ ಪಡೆಯಲು, ಬಿಡ್‌ ಸಲ್ಲಿಸುವ ಸಂಸ್ಥೆಯು ಶೇ 10ಕ್ಕಿಂತಲೂ ಹೆಚ್ಚಿನ ಪಾಲು ಖರೀದಿಸಲು ಆಸಕ್ತಿ ಹೊಂದಿದ್ದರೆ ಆಗ ಅದು ತನ್ನ ಮಾತೃಸಂಸ್ಥೆ ಮತ್ತು ಮಾಲೀಕತ್ವದ ವಿವರಗಳನ್ನು ಬಹಿರಂಗಪಡಿಸಬೇಕು’ ಎಂದುಕಳೆದ ವಾರ ಇಲಾಖೆಯು ಹೊರಡಿಸಿರುವ ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಖರೀದಿದಾರ ಸಂಸ್ಥೆ ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ್ದ ಏಕೈಕ ಸಂಸ್ಥೆಯಾಗಿದ್ದರೆ, ಆಗ ಅದರ ನಿರ್ದೇಶಕರು ಮತ್ತು ಪಾಲುದಾರರು ಯಾವ ದೇಶದ ಪ್ರಜೆಗಳು ಎಂಬುದನ್ನು, ವಿಳಾಸ, ವಾಸವಿರುವ ದೇಶದ ವಿಶಿಷ್ಟ ಗುರುತಿನ ಸಂಖ್ಯೆ ಮತ್ತು ಪಾಸ್‌ಪೋರ್ಟ್‌ ಮಾಹಿತಿಗಳನ್ನು ಒದಗಿಸಬೇಕಾಗುತ್ತದೆ. ಬಿಡ್‌ ಸಲ್ಲಿಸಿರುವ ಸಂಸ್ಥೆಯು ಚೀನಾ ಮತ್ತು ಪಾಕಿಸ್ತಾನದಲ್ಲಿ ಕಚೇರಿ ಹೊಂದಿದ್ದರೆ ಆ ಕುರಿತ ಮಾಹಿತಿ ಮತ್ತು ಕಾರ್ಯವ್ಯಾಪ್ತಿಯ ಮಾಹಿತಿಗಳನ್ನು ಸ್ವಯಂ–ಘೋಷಣೆಯಲ್ಲಿ ತಿಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT