ಶುಕ್ರವಾರ, ಫೆಬ್ರವರಿ 26, 2021
20 °C

ಬೆಂಗಳೂರಿಗೂ ಕಾಲಿಟ್ಟ ಡೀಲ್‌ಷೇರ್‌ ವಹಿವಾಟು

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎರಡು ವರ್ಷಗಳ ಹಿಂದೆ ಜೈಪುರದಲ್ಲಿ ಕಾರ್ಯಾರಂಭ ಮಾಡಿದ್ದ ದಿನಸಿ ವಹಿವಾಟಿನ ಇ–ಕಾಮರ್ಸ್‌ ನವೋದ್ಯಮ ಡೀಲ್‌ಷೇರ್‌ (DealShare), ಈಗ ಬೆಂಗಳೂರಿಗೂ ಕಾಲಿಟ್ಟಿದೆ.

ಡೀಲ್‌ಷೇರ್‌ ಆ್ಯಪ್‌ ನೆರವಿನಿಂದ ಗ್ರಾಹಕರು ದವಸ ಧಾನ್ಯ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳನ್ನು ಸುಲಭವಾಗಿ ಖರೀದಿಸುವ ಸೌಲಭ್ಯವನ್ನು ಈ ಸ್ಟಾರ್ಟ್‌ಅಪ್‌ ನಗರದ ಗ್ರಾಹಕರಿಗೆ ಒದಗಿಸಲಿದೆ. ಕಡಿಮೆ ಮತ್ತು ಮಧ್ಯಮ ಆದಾಯದ ಗ್ರಾಹಕರನ್ನು ಇ–ಕಾಮರ್ಸ್‌ ವಹಿವಾಟಿನತ್ತ ಸೆಳೆಯಲು ಕಂಪನಿ ಕಾರ್ಯಪ್ರವೃತ್ತವಾಗಿದೆ. ಗ್ರಾಹಕರ ಮನೆ ಬಾಗಿಲಿಗೆ ಸರಕು ಪೂರೈಸುವ ಸೌಲಭ್ಯ ಒದಗಿಸಲಿದೆ.

‘ದೊಡ್ಡ ಬ್ರ್ಯಾಂಡ್‌ನ ದುಬಾರಿ ಉತ್ಪನ್ನಗಳ ಬದಲಿಗೆ ಸ್ಥಳೀಯ ತಯಾರಕರ ಉತ್ಪನ್ನಗಳ ಖರೀದಿಗೆ ಒಲವು ತೋರುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ವಹಿವಾಟು ವಿಸ್ತರಿಸಲಾಗುವುದು‘ ಎಂದು ಕಂಪನಿಯ ಸ್ಥಾಪಕ ಮತ್ತು ಸಿಇಒ ವಿನೀತ್‌ ರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಒಂದೂವರೆ ವರ್ಷದಲ್ಲಿ ಈ ನವೋದ್ಯಮದ ವಹಿವಾಟು ಗಮನಾರ್ಹವಗಿ ಬೆಳೆದಿದೆ. ರಾಜಸ್ಥಾನ, ಗುಜರಾತ್ ರಾಜ್ಯಗಳ 25 ನಗರಗಳಲ್ಲಿನ ಯಶಸ್ವಿ ವಹಿವಾಟಿನಿಂದ ಸ್ಪೂರ್ತಿ ಪಡೆದು ಬೆಂಗಳೂರಿನ ಮಾರುಕಟ್ಟೆ ಪ್ರವೇಶಿಸಿದ್ದೇವೆ. ಇಲ್ಲಿಗೆ ಕಾಲಿಡುವ ಮುಂಚೆ ಮುಂಬೈನಲ್ಲಿಯೂ ವಹಿವಾಟಿಗೆ ಚಾಲನೆ ನೀಡಿದ್ದೇವೆ. ಮುಂಬರುವ ದಿನಗಳಲ್ಲಿ ಮೈಸೂರು, ಮಂಗಳೂರು ಮತ್ತಿತರ ನಗರಗಳಲ್ಲಿ ಸೇವೆ ವಿಸ್ತರಿಸಲಾಗುವುದು. ಮಹಾ ನಗರಗಳಿಗೆ ಹೋಲಿಸಿದರೆ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿನ ಜೀವನಶೈಲಿ, ಗ್ರಾಹಕರ ಬ್ರ್ಯಾಂಡ್‌ ಆದ್ಯತೆ ವಿಭಿನ್ನವಾಗಿರುತ್ತದೆ. ಅದಕ್ಕೆ ತಕ್ಕಂತೆ ಉತ್ಪನ್ನಗಳನ್ನು ಒದಗಿಸಲಾಗುವುದು.

ಡೀಲ್‌ಷೇರ್ ದೋಸ್ತ್‌: ‘ಗ್ರಾಹಕರ ಅಗತ್ಯಗಳನ್ನು ಸ್ಥಳೀಯವಾಗಿಯೇ ಪೂರೈಸುವುದಕ್ಕೆ ಕಂಪನಿ ಆದ್ಯತೆ ನೀಡಲಿದೆ. ಇದೇ ಉದ್ದೇಶಕ್ಕೆ ಸ್ಥಳೀಯ ತಯಾರಕರ ಜತೆ ಒಪ್ಪಂದ ಮಾಡಿಕೊಂಡಿದೆ. ‘ಡೀಲ್‌ಷೇರ್ ದೋಸ್ತ್‌’ ಕಾರ್ಯಕ್ರಮದಡಿ– ಸ್ಥಳೀಯ ಉದ್ಯಮಿ, ವ್ಯಾಪಾರಿ, ತಯಾರಕರ ಪಾಲುದಾರಿಗೆಯಡಿ ಈ ವಹಿವಾಟನ್ನು ನಿರ್ವಹಿಸಲಾಗುವುದು. ಡೀಲ್‌ಷೇರ್‌ ಆ್ಯಪ್‌ ಅನ್ನು ಕನ್ನಡದಲ್ಲಿಯೂ ಅಭಿವೃದ್ಧಿಪಡಿಸಲಾಗಿದೆ.  ರಾಜ್ಯದಲ್ಲಿ ಎರಡು ಮತ್ತು ಮೂರನೇ ಹಂತದ ನಗರಗಳಿಗೂ ಸದ್ಯದಲ್ಲೇ ವಹಿವಾಟು ವಿಸ್ತರಿಸಲಾಗುವುದು. ಈ ಉದ್ದೇಶಕ್ಕೆ  ಉದ್ದೇಶಕ್ಕೆ ₹ 10 ಕೋಟಿಗೂ ಹೆಚ್ಚು ಹೂಡಿಕೆ ಮಾಡಲಾಗುತ್ತದೆ.

’ಅಗತ್ಯ ವಸ್ತುಗಳ ಖರೀದಿ, ಸಂಗ್ರಹ, ಸಾಗಾಣಿಕೆ ಮತ್ತು ವಿತರಣೆಯ ಎಲ್ಲ ಹಂತಗಳಲ್ಲಿ ಸುರಕ್ಷತೆ ಮತ್ತು ನೈರ್ಮಲ್ಯ ಕಾಪಾಡುವ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ‘ ಎಂದೂ ವಿನೀತ್‌  ಭರವಸೆ ನೀಡುತ್ತಾರೆ.

ಸಂತುಷ್ಟ ಗ್ರಾಹಕನೇ ಪ್ರಚಾರಕ: ಗ್ರಾಹಕರಿಂದ ಗ್ರಾಹಕರಿಗೆ ಬಾಯಿಮಾತಿನಿಂದ ಕಂಪನಿಯ ವಹಿವಾಟಿನ ಪ್ರಚಾರ ನಡೆಯಬೇಕು ಎನ್ನುವುದು ಕಂಪನಿಯ ಧೋರಣೆಯಾಗಿದೆ. ಬಳಕೆದಾರರು ಆ್ಯಪ್‌ನಲ್ಲಿ ಇತರ ಗ್ರಾಹಕರನ್ನು ಪರಿಚಯಿಸಿದರೆ ಉತ್ತೇಜನಾ ಕೊಡುಗೆ ರೂಪದಲ್ಲಿ ₹ 50 ನಗದು ವಾಪಸ್‌ ಕೊಡುವ ಸೌಲಭ್ಯ ಇಲ್ಲಿದೆ. ಕನಿಷ್ಠ ಖರೀದಿ ₹ 400 ಇರಲಿದೆ. ವಾಟ್ಸ್‌ಆ್ಯಪ್‌ ತಂಡ ರಚನೆ ಮೂಲಕ ಹೊಸ ಗ್ರಾಹಕರನ್ನು ಸೃಷ್ಟಿಸಲಾಗುತ್ತಿದೆ. ಒಬ್ಬ ಸಂತುಷ್ಟ ಗ್ರಾಹಕ 10 ಹೊಸ ಗ್ರಾಹಕರನ್ನು ಪರಿಚಯಿಸುತ್ತಾನೆ ಎನ್ನುವುದು ಅವರ ನಂಬಿಕೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು