ಬುಧವಾರ, ಜನವರಿ 22, 2020
17 °C
ಚಿಲ್ಲರೆ ಹಣದುಬ್ಬರ ಶೇ 7.35ಕ್ಕೆ ಏರಿಕೆ l 6 ವರ್ಷಗಳ ಗರಿಷ್ಠ ಮಟ್ಟ

ಗ್ರಾಹಕರಿಗೆ ಹಣದುಬ್ಬರದ ಬಿಸಿ; ತರಕಾರಿ ಬೆಲೆ ದುಬಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಡಿಸೆಂಬರ್‌ನಲ್ಲಿ 6 ವರ್ಷಗಳಲ್ಲಿನ ಗರಿಷ್ಠ ಮಟ್ಟವಾದ ಶೇ 7.35ಕ್ಕೆ ತಲುಪಿದೆ. ತರಕಾರಿಗಳ ಬೆಲೆ ಶೇ 60ರಷ್ಟು ದುಬಾರಿಯಾಗಿ ಜನರಿಗೆ ಬೆಲೆ ಏರಿಕೆಯ ಬಿಸಿ ತೀವ್ರವಾಗಿ ತಟ್ಟಿದೆ.

ನವೆಂಬರ್‌ ತಿಂಗಳಿಗೆ ಹೋಲಿಸಿದರೆ ಈರುಳ್ಳಿ (ಶೇ 328) ಮತ್ತು ಬೆಳ್ಳುಳ್ಳಿ (ಶೇ 146) ಬೆಲೆ ನಾಗಾಲೋಟದಲ್ಲಿ ಏರಿಕೆಯಾಗಿದೆ. ಬಳಕೆದಾರರಿಗೆ ಹೆಚ್ಚುವರಿ ಹೊರೆಯಾಗಿರುವುದರ ಜತೆಗೆ, ಮಂದಗತಿಯಲ್ಲಿ ಪ್ರಗತಿ ಕಾಣುತ್ತಿರುವ ಆರ್ಥಿಕತೆ ಪಾಲಿಗೂ ಹೊಸ ಅಡಚಣೆಯಾಗಿ ಪರಿಣಮಿಸಿದೆ. ಫೆಬ್ರುವರಿ ತಿಂಗಳಲ್ಲಿ ರೆಪೊ ದರಗಳು ಯಥಾಸ್ಥಿತಿಯಲ್ಲಿ ಇರುವ ಸಾಧ್ಯತೆ ಹೆಚ್ಚಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರವು 11 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಮಟ್ಟದಲ್ಲಿ (ಶೇ 5) ಇರಲಿದೆ ಎಂದು ಕೇಂದ್ರ ಸರ್ಕಾರವೇ ಅಂದಾಜು ಮಾಡಿದೆ. ಆಹಾರ ಪದಾರ್ಥಗಳ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದು ಬೆಲೆಗಳು ದುಬಾರಿಯಾಗಿ ಹಣದುಬ್ಬರವು ತೀವ್ರ ಏರಿಕೆ ಕಂಡಿದೆ. ದಾಖಲೆ ಮಟ್ಟಕ್ಕೆ ಏರಿದ್ದ ಈರುಳ್ಳಿ ಬೆಲೆಯಿಂದಾಗಿ ತರಕಾರಿಗಳ ಹಣದುಬ್ಬರವು ಗಣನೀಯ ಏರಿಕೆ ದಾಖಲಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ ನಿಗದಿಪಡಿಸಿದ್ದ ಹಿತಕರ ಮಟ್ಟವನ್ನೂ ಇದು (ಶೇ 6) ಮೀರಿದೆ. ತೀವ್ರಗತಿಯಲ್ಲಿ ಹೆಚ್ಚಳಗೊಂಡಿರುವ ಹಣದುಬ್ಬರದಿಂದಾಗಿ ಬಡ್ಡಿ ದರ ಕಡಿಮೆ ಮಾಡಿ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶಕ್ಕೆ ಅಡ್ಡಿಯಾಗಿ ಪರಿಣಮಿಸಲಿದೆ.

ಬಡ್ಡಿ ದರ ಕಡಿತ ಮಾಡುವ ನಿರ್ಧಾರಕ್ಕೆ ಬರುವ ಮೊದಲು, ಹಣ ದುಬ್ಬರ ಇಳಿಕೆ ಆಗುವುದನ್ನು ಆರ್‌ಬಿಐ ಕಾದು ನೋಡಲಿದೆ ಎಂದು ಬಹುತೇಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

‘ಬೆಲೆ ಸ್ಥಿರತೆಯು ಕೇಂದ್ರೀಯ ಬ್ಯಾಂಕ್‌ನ ಮುಖ್ಯ ಕಾಳಜಿಯಾಗಿದೆ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್‌ ಇತ್ತೀಚೆಗೆ ಅಭಿ‍ಪ್ರಾಯಪಟ್ಟಿದ್ದರು.

ನವೆಂಬರ್‌ನಲ್ಲಿ ಶೇ 5.54ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಒಂದೇ ತಿಂಗಳಲ್ಲಿ ಶೇ 1.81ರಷ್ಟು ಏರಿಕೆ ದಾಖಲಿಸಿದೆ. 2014ರ ಜುಲೈ (ಶೇ 7.39) ನಂತರದ ಗರಿಷ್ಠ ಮಟ್ಟದ ಹಣದುಬ್ಬರ ಇದಾಗಿರುವುದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ದೃಢಪಡುತ್ತದೆ.

ಹಣದುಬ್ಬರ ಈ ಪರಿ ಗಮನಾರ್ಹವಾಗಿ ಏರಿಕೆಯಾಗಲು ಕಾರಣವಾಗಿರುವ ಆಹಾರ ಹಣದುಬ್ಬರವು ನವೆಂಬರ್‌ನಲ್ಲಿ ಶೇ 10.01ರಷ್ಟಿತ್ತು. ಅದು ಈಗ ಶೇ 14.12ಕ್ಕೆ ಹೆಚ್ಚಳಗೊಂಡಿದೆ. ಸರಕುಗಳ ಪೂರೈಕೆ ಕೊರತೆಯಿಂದ ಬೆಲೆ ಏರುಗತಿಯಲ್ಲಿ ಇದೆ. ವರ್ಷದ ಹಿಂದಿನ ಮಟ್ಟಕ್ಕೆ ಹೋಲಿಸಿದರೆ ತರಕಾರಿ ಬೆಲೆ ಏರಿಕೆಯು ಶೇ 60.5ರಷ್ಟು ದಾಖಲಿಸಿದೆ.

ಚಿಲ್ಲರೆ ಹಣದುಬ್ಬರವು 2016ರ ಜುಲೈ ನಂತರ ಮೊದಲ ಬಾರಿಗೆ ಆರ್‌ಬಿಐನ ನಿರೀಕ್ಷೆ ಹುಸಿ ಮಾಡಿದೆ. ಇದು ಕೇಂದ್ರ ಸರ್ಕಾರದ ಚಿಂತೆ ಹೆಚ್ಚಿಸಿದೆ. ಹಣದುಬ್ಬರ ಏರುಗತಿಯಲ್ಲಿ ಇರುವ ಕಾರಣಕ್ಕೆ ಕೇಂದ್ರೀಯ ಬ್ಯಾಂಕ್‌, ಡಿಸೆಂಬರ್‌ನಲ್ಲಿ ರೆಪೊ ದರ ಕಡಿತ ಮಾಡಿರಲಿಲ್ಲ. ಅದರ ಮುಂದಿನ ನಡೆ ಏನು ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಆಹಾರ ಮತ್ತು ಇಂಧನ ವಲಯದ ಹಣದುಬ್ಬರ ಹೊರತು ಪಡಿಸಿದ ಸರಕು ಮತ್ತು ಸೇವೆಗಳ ಬೆಲೆ ಏರಿಕೆಯು ಹಿಂದಿನ ತಿಂಗಳಿಗೆ (ಶೇ 3.9) ಹೋಲಿಸಿದರೆ ಡಿಸೆಂಬರ್‌ನಲ್ಲಿ ಶೇ 3.7ಕ್ಕೆ ಇಳಿದಿದೆ.

ಆಹಾರ ಮತ್ತು ಇಂಧನ ಬೆಲೆ ಏರಿಳಿತ ಒಳಗೊಳ್ಳದ ಈ ಹಣದುಬ್ಬರವು, ಬೆಲೆ ಏರಿಕೆ ಪರಿಸ್ಥಿತಿಯ ನೈಜ ಚಿತ್ರಣ ನೀಡಲಿದೆ.

ಮುಂಗಾರು ಉತ್ಪಾದನೆ ಕುಸಿತ

ಮುಂಗಾರು ವಿಳಂಬ, ಅತಿವೃಷ್ಟಿ ಕಾರಣಕ್ಕೆ 2019–20ನೇ ಸಾಲಿನಲ್ಲಿ ಒರಟು ಧಾನ್ಯ, ಬೇಳೆ, ಎಣ್ಣೆ ಬೀಜ ಮತ್ತು ಕಬ್ಬು ಉತ್ಪಾದನೆಯು ಕ್ರಮವಾಗಿ ಶೇ 14.14, ಶೇ 14.09, ಶೇ 53.31 ಮತ್ತು 11.07ರಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

‘ಹದಿಮೂರು ರಾಜ್ಯಗಳಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯಿಂದಾಗಿ ಮುಂಗಾರಿನ ಹಲವಾರು ಫಸಲುಗಳ ಉತ್ಪಾದನೆ ಕುಸಿತ ಕಾಣಲಿದೆ’ ಎಂದು ಖಾಸಗಿ ಕಂಪನಿ ನ್ಯಾಷನಲ್‌ ಬಲ್ಕ್‌ ಹ್ಯಾಂಡ್ಲಿಂಗ್‌ ಕಾರ್ಪೊರೇಷನ್‌ (ಎನ್‌ಬಿಎಚ್‌ಸಿ) ಸಂಶೋಧನಾ ಮುಖ್ಯಸ್ಥ ಹನಿಷ್‌ ಕುಮಾರ್ ಸಿನ್ಹಾ ಹೇಳಿದ್ದಾರೆ.

ಉದ್ಯೋಗ ಸೃಷ್ಟಿಗೆ ಮುಳುವಾದ ಮಂದಗತಿ

ಮುಂಬೈ (ಪಿಟಿಐ): ಮಂದಗತಿಯ ಆರ್ಥಿಕ ಬೆಳವಣಿಗೆಯು ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಮುಳುವಾಗಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ಬಿಐ) ಸಂಶೋಧನಾ ವರದಿ ಹೇಳಿದೆ.

2018–19ನೇ ಹಣಕಾಸು ವರ್ಷದಲ್ಲಿ 89.7 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದವು. ಆದರೆ, ಆರ್ಥಿಕ ಬೆಳವಣಿಗೆ ಕುಂಠಿತವಾಗಿರುವುದರಿಂದ 2019–20ರಲ್ಲಿ 16 ಲಕ್ಷದಷ್ಟು ಕಡಿಮೆ ಉದ್ಯೋಗಗಳು ಸೃಷ್ಟಿಯಾಗಲಿವೆ. ಅಂದರೆ 73.7 ಲಕ್ಷದಷ್ಟು ಮಾತ್ರ ಹೊಸ ಉದ್ಯೋಗ ಅವಕಾಶಗಳು ಇರಲಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಮಾಹಿತಿ ಪ್ರಕಾರ, ತಿಂಗಳಿಗೆ ₹ 15 ಸಾವಿರ ವೇತನ ಪಡೆಯುವ ಉದ್ಯೋಗಿಗಳ ವಿವರ ಸಂಗ್ರಹಿಸಲಾಗುತ್ತಿದೆ. ಏಪ್ರಿಲ್‌ – ಅಕ್ಟೋಬರ್‌ ಅವಧಿಯಲ್ಲಿ 43.1 ಲಕ್ಷ ಮಂದಿ ಉದ್ಯೋಗಕ್ಕೆ ಸೇರ್ಪಡೆಯಾಗಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯದ ಉದ್ಯೋಗಗಳ ಮಾಹಿತಿಯನ್ನು ‘ಇಪಿಎಫ್‌ಒ’ ಪರಿಗಣಿಸುವುದಿಲ್ಲ. ಇವು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ವ್ಯಾಪ್ತಿಯಲ್ಲಿವೆ.

ಆದರೆ, ಎನ್‌ಪಿಎಸ್‌ನಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2019–20ನೇ ಹಣಕಾಸು ವರ್ಷದಲ್ಲಿ ಸೃಷ್ಟಿಸಲಿರುವ ಒಟ್ಟಾರೆ ಉದ್ಯೋಗದಲ್ಲಿ 39 ಸಾವಿರ ಕಡಿಮೆ ಇರುವ ಅಂದಾಜು ಮಾಡಲಾಗಿದೆ.

 ಕೆಲವು ಕಂಪನಿಗಳು ದಿವಾಳಿ ಪ್ರಕ್ರಿಯೆಯಲ್ಲಿ ಇರುವುದರಿಂದ ಗುತ್ತಿಗೆ ನೌಕರರ ನೇಮಕ ಕಡಿಮೆಯಾಗುತ್ತಿದೆ ಎಂದು ವರದಿ ತಿಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು