ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ನಲ್ಲಿರುವ ಹಣ ಎಷ್ಟು ಸುರಕ್ಷಿತ ?

Last Updated 20 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ಪಂಜಾಬ್ –ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ (ಪಿಎಂಸಿ) ಹಗರಣದ ಬೆನ್ನಲ್ಲೇ, ಬ್ಯಾಂಕ್‌ನಲ್ಲಿರುವ ಗ್ರಾಹಕರ ಹಣ ಎಷ್ಟು ಸುರಕ್ಷಿತ ಎನ್ನುವ ಚರ್ಚೆ ಮುನ್ನೆಲೆಗೆ ಬಂದಿದೆ. ನಿಶ್ಚಿತ ಠೇವಣಿ, ಆರ್.ಡಿ., ಉಳಿತಾಯ ಖಾತೆ ಹೀಗೆ ಹಲವು ರೀತಿಯಲ್ಲಿ ಬ್ಯಾಂಕ್‌ನಲ್ಲಿ ಹಣ ಹೂಡುವ ಗ್ರಾಹಕರು ಎಷ್ಟರ ಮಟ್ಟಿಗೆ ನೆಮ್ಮದಿಯಿಂದ ಇರಬಹುದು ಎಂಬ ಪ್ರಶ್ನೆ ಎದ್ದಿದೆ. ಈ ಹೊತ್ತಿನಲ್ಲಿ, ಬ್ಯಾಂಕ್‌ನಲ್ಲಿರುವ ಹಣಕ್ಕೆ ಯಾರು ಹೊಣೆ ಎನ್ನುವುದಕ್ಕೆ ಉತ್ತರ ನೀಡುವ ಜತೆಗೆ ಗ್ರಾಹಕರು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಬ್ಯಾಂಕ್‌ನಲ್ಲಿ ಇಟ್ಟಿರುವ ಸಂಪೂರ್ಣ ಹಣ ಸುರಕ್ಷಿತವೇ: ಎಷ್ಟೇ ದೊಡ್ಡ ಮೊತ್ತದ ಹಣವಿರಲಿ ಬ್ಯಾಂಕ್‌ನಲ್ಲಿ ಇಟ್ಟರೆ ಅದು ಸುರಕ್ಷಿತ ಎಂಬ ಭಾವನೆ ಗ್ರಾಹಕರಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ನಿರ್ದೇಶನದಂತೆ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದರಿಂದ ಜನಸಾಮಾನ್ಯರಲ್ಲಿ ಬ್ಯಾಂಕ್‌ನಲ್ಲಿಟ್ಟಿರುವ ಎಲ್ಲ ಹಣ ಸುಭದ್ರ ಎಂಬ ನಂಬಿಕೆ ನೆಲೆಸಿದೆ. ಆದರೆ, ಕಾನೂನಿನ ಇತಿಮಿತಿಯಲ್ಲಿ ನೋಡಿದಾಗ ಬ್ಯಾಂಕ್‌ನಲ್ಲಿ ನೀವು ಎಷ್ಟೇ ದೊಡ್ಡ ಮೊತ್ತದ ಠೇವಣಿ ಇಟ್ಟರೂ ₹ 1 ಲಕ್ಷಕ್ಕೆ ಮಾತ್ರ ಸಂಪೂರ್ಣ ಸುರಕ್ಷತೆ ಇದೆ.

₹ 1 ಲಕ್ಷ ಹಣಕ್ಕೆ ಮಾತ್ರ ಡಿಪಾಸಿಟ್ ಇನ್ಶುರನ್ಸ್: ಬ್ಯಾಂಕ್‌ಗಳು ದಿವಾಳಿಯಾದರೆ ನಿಮ್ಮ ₹ 1 ಲಕ್ಷದವರೆಗಿನ ಹಣ ಮಾತ್ರ ಸಿಗುತ್ತದೆ. ಪ್ರತಿ ಬ್ಯಾಂಕ್‌ ಕೂಡ ಪ್ರತಿಯೊಬ್ಬ ಗ್ರಾಹಕನ ಠೇವಣಿ ಮೇಲೆ ವಿಮೆ (ಡಿಪಾಸಿಟ್ ಇನ್ಶುರನ್ಸ್) ಮಾಡಿಸಿರುತ್ತದೆ. ಆರ್‌ಬಿಐ ನ ಅಂಗ ಸಂಸ್ಥೆಯಾಗಿರುವ ಡಿಪಾಸಿಟ್ ಇನ್ಶುರನ್ಸ್ ಆ್ಯಂಡ್‌ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್‌ಗೆ (ಡಿಐಸಿಜಿಸಿ) ನಿರ್ದಿಷ್ಟ ಪ್ರೀಮಿಯಂ ಪಾವತಿಸುವ ಮೂಲಕ ಬ್ಯಾಂಕ್‌ಗಳು ಗ್ರಾಹಕರ ಠೇವಣಿಗಳಿಗೆ ಭದ್ರತೆ ಒದಗಿಸಿರುತ್ತವೆ. ಅಂದರೆ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕಿದಲ್ಲಿ ಅಥವಾ ದಿವಾಳಿಯಾದಲ್ಲಿ ಗ್ರಾಹಕರಿಗೆ ₹ 1 ಲಕ್ಷದ ವರೆಗಿನ ಠೇವಣಿ ಹಣವನ್ನು ಮಾತ್ರ ‘ಡಿಐಸಿಜಿಸಿ‘ ಗ್ರಾಹಕರಿಗೆ ಎರಡು ತಿಂಗಳ ಒಳಗಾಗಿ ಪಾವತಿಸುತ್ತದೆ.

ಆರ್‌ಬಿಐ ಹೇಳಿರೋದೇನು?: ಆರ್‌ಬಿಐ ಜೂನ್ 22, 2017 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ, ಬ್ಯಾಂಕ್‌ಗಳು ಠೇವಣಿ ಮತ್ತು ವಹಿವಾಟಿನ ಸಂಪೂರ್ಣ ಮಾಹಿತಿಯನ್ನು ಪಾಸ್‌ಬುಕ್ ನಲ್ಲಿ ನೋಂದಾಯಿಸುವ ಜತೆಗೆ ಡಿಪಾಸಿಟ್ ಇನ್ಶುರನ್ಸ್‌ನಲ್ಲಿ ಸಿಗುವ ವಿಮಾ ಮೊತ್ತದ ಬಗ್ಗೆ ಗ್ರಾಹಕರಿಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದೆ.

‘ಡಿಐಸಿಜಿಸಿ’ ಬಳಿ ವಿಮೆ ಹೊಂದಿರುವ ಬ್ಯಾಂಕ್‌ಗಳು ಯಾವವು: ಭಾರತದಲ್ಲಿ ಕಾರ್ಯನಿರ್ವಹಿಸುವ ವಿದೇಶಿ ಬ್ಯಾಂಕ್‌ಗಳು ಒಳಗೊಂಡಂತೆ ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳು, ಸ್ಥಳೀಯ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಮತ್ತು ಗ್ರಾಮೀಣ ಬ್ಯಾಂಕ್‌ಗಳು ‘ಡಿಐಸಿಜಿಸಿ’ ಅಡಿ ವಿಮೆ ಮಾಡಿಸಿವೆ.

ಹೆಚ್ಚು ಖಾತೆಗಳಿದ್ದರೆ ಹೆಚ್ಚು ಸುರಕ್ಷತೆ ಸಿಗುವುದೇ?: ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ಬ್ಯಾಂಕ್‌ನ ಹಲವು ಶಾಖೆಗಳಲ್ಲಿ ಠೇವಣಿಗಳಿದ್ದರೆ ಅವೆಲ್ಲವನ್ನೂ ಪರಿಗಣಿಸಿ ‘ಡಿಐಸಿಜಿಸಿ’ ಡೆಪಾಸಿಟ್ ಇನ್ಶುರೆನ್ಸ್ ನಿರ್ಧರಿಸುತ್ತದೆ. ಅಂದರೆ, ಈ ಸಂದರ್ಭದಲ್ಲಿ ನಿಮ್ಮ ಹಣಕ್ಕೆ ₹ 1 ಲಕ್ಷ ಇನ್ಶುರೆನ್ಸ್ ಕವರೇಜ್ ಮಾತ್ರ ಸಿಗುತ್ತದೆ. ಆದರೆ ಠೇವಣಿಗಳು ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿದ್ದರೆ ಅಥವಾ ಬೇರೆ ಬೇರೆ ಬ್ಯಾಂಕ್‌ ಖಾತೆಗಳಲ್ಲಿ ಇದ್ದರೆ ಅದಕ್ಕೆ ಪ್ರತ್ಯೇಕ ವಿಮಾ ಸುರಕ್ಷತೆ ಇರುತ್ತದೆ.

ಡೆಪಾಸಿಟ್ ಇನ್ಶುರೆನ್ಸ್ ಹೆಚ್ಚಳಕ್ಕೆ ಬೇಡಿಕೆ: ಬ್ಯಾಂಕಿಂಗ್ ಕ್ಷೇತ್ರದ ತಜ್ಞರು ಡೆಪಾಸಿಟ್ ಇನ್ಶುರೆನ್ಸ್ ಹೆಚ್ಚಳ ಮಾಡಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಸದ್ಯ ಇರುವ ₹ 1 ಲಕ್ಷವನ್ನು ಕನಿಷ್ಠ 2 ರಿಂದ 5 ಲಕ್ಷದ ವರೆಗೆ ಹೆಚ್ಚಳ ಮಾಡಬೇಕು ಎನ್ನುವ ಬೇಡಿಕೆ ಇದೆ.

ಐದು ತಿಂಗಳಲ್ಲೇ ಉತ್ತಮ ಗಳಿಕೆ

ದೀಪಾವಳಿ ಸನಿಹದಲ್ಲಿ ಷೇರುಪೇಟೆ ಸೂಚ್ಯಂಕಗಳು ಪುಟಿದೆದ್ದಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಲ್ಲಿ ಖರೀದಿ ಉತ್ಸಾಹ, ಅಮೆರಿಕ – ಚೀನಾ ನಡುವಿನ ಮಾತುಕತೆಯಲ್ಲಿ ಪ್ರಗತಿ ಸೇರಿ ಪ್ರಮುಖ ಕಾರಣಗಳಿಂದಾಗಿ ಪೇಟೆಯಲ್ಲಿ ಸಕಾರಾತ್ಮಕತೆ ಕಂಡುಬಂದಿದೆ. 39,298 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 3 ರಷ್ಟು ಏರಿಕೆ ದಾಖಲಿಸಿದ್ದರೆ, 11,661 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 3.2 ರಷ್ಟು ಏರಿಕೆ ಕಂಡಿದೆ. ಕಳೆದ ಐದು ತಿಂಗಳ ಅವಧಿಯಲ್ಲಿನ ಉತ್ತಮ ಗಳಿಕೆ ಇದಾಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ವಾರ ₹ 3,213 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರೆ, ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 2,185 ಕೋಟಿ ಮಾಲ್ಯದ ಷೇರುಗಳನ್ನು ಪಡೆದುಕೊಂಡಿದ್ದಾರೆ. ಈ ಕಾರಣದಿಂದಾಗಿ ಸೆನ್ಸೆಕ್ಸ್ ಒಂದೇ ವಾರದಲ್ಲಿ 1,171 ಅಂಶಗಳಷ್ಟು ಏರಿಕೆ ದಾಖಲಿಸಿದ್ದರೆ, ನಿಫ್ಟಿ 356 ಅಂಶಗಳ ಏರಿಕೆ ಕಂಡಿದೆ.

ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಯೆಸ್ ಬ್ಯಾಂಕ್ ಶೇ 30 ರಷ್ಟು ಏರಿಕೆ ದಾಖಲಿಸಿ ಅಗ್ರ ಕ್ರಮಾಂಕದಲ್ಲಿದೆ. ಟಾಟಾ ಮೋಟರ್ಸ್ ಮತ್ತು ಐಷರ್ ಮೋಟರ್ಸ್ ಕ್ರಮವಾಗಿ ಶೇ 13 ಮತ್ತು ಶೇ 11 ರಷ್ಟು ಗಳಿಸಿವೆ.

ಒಎನ್‌ಜಿಸಿ ಶೇ 11 ರಷ್ಟು ಜಿಗಿದಿದ್ದು, ಇಂಡಸ್ ಇಂಡ್ ಬ್ಯಾಂಕ್ ಶೇ 9.8 ರಷ್ಟು ಏರಿಕೆ ಕಂಡಿದೆ. ನಿಫ್ಟಿಯಲ್ಲಿ ಇನ್ಫೊಸಿಸ್ ಷೇರುಗಳು ಶೇ 6 ರಷ್ಟು ಕುಸಿದಿವೆ. ತ್ರೈಮಾಸಿಕ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಈ ಹಿನ್ನಡೆಯಾಗಿದೆ. ಸಿಪ್ಲಾ ಮತ್ತು ಹಿಂಡಾಲ್ಕೊ ಕಂಪನಿಗಳು ಸಣ್ಣ ಪ್ರಮಾಣದಲ್ಲಿ ಕುಸಿತ ಕಂಡಿದ್ದು ಕ್ರಮವಾಗಿ ಶೇ0.3 ಮತ್ತು ಶೇ0.2 ರಷ್ಟುಇಳಿದಿವೆ.

ಐಆರ್‌ಸಿಟಿಸಿ ಧಮಾಕಾ: ಷೇರುಪೇಟೆಗೆ ಈಗಷ್ಟೇ ಸೇರ್ಪಡೆಯಾಗಿರುವ ರೈಲ್ವೆ ಇಲಾಖೆಯ ಐಆರ್‌ಸಿಟಿಸಿ ಷೇರುಗಳು ವಾರದ ಅವಧಿಯಲ್ಲಿ ಶೇ 143 ರಷ್ಟು ಏರಿಕೆ ದಾಖಲಿಸಿದ್ದು ಸದ್ಯ ಷೇರಿನ ಬೆಲೆ ₹ 779 ಇದೆ. ಷೇರಿನ ಆರಂಭಿಕ ಬೆಲೆ ₹ 320 ಇತ್ತು. ಇದರ ಬೆಲೆ ₹ 600 ರ ವರೆಗೆ ಜಿಗಿಯಬಹುದು ಎಂದು ತಜ್ಞರು ಅಂದಾಜಿಸಿದ್ದರು. ಆದರೆ, ಲೆಕ್ಕಾಚಾರಗಳನ್ನು ಮೀರಿ ಷೇರು ಮುನ್ನಡೆದಿದೆ.

ಬಿಎಚ್ಇಎಲ್ ಷೇರು ಶೇ 26.62 ರಷ್ಟು ಏರಿಕೆ: ಬಿಎಚ್‌ಇಎಲ್‌ನಲ್ಲಿ ಸರ್ಕಾರ ತನ್ನ ಪಾಲುದಾರಿಕೆಯನ್ನು ಶೇ 63 ರಿಂದ ಶೇ 26 ಕ್ಕೆ ತರಲಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಕಂಪನಿ ಷೇರುಗಳು ಶೇ 26.62 ರಷ್ಟು ಏರಿಕೆಯಾಗಿವೆ.

ಮುನ್ನೋಟ: ಅಲ್ಟ್ರಾಟೆಕ್ ಸಿಮೆಂಟ್, ಭಾರ್ತಿ ಇನ್‌ಫ್ರಾಟೆಲ್ ಲಿ., ಆ್ಯಕ್ಸಿಸ್ ಬ್ಯಾಂಕ್, ಕೋಟಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಏಷಿಯನ್ ಪೇಂಟ್ಸ್, ಬಜಾಜ್ ಫಿನ್ ಸರ್ವ್, ಬಜಾಜ್ ಆಟೊ, ಎಚ್‌ಸಿಎಲ್, ಹೀರೊ ಮೋಟೊ ಕಾರ್ಪ್, ಜೆಎಸ್‌ಡಬ್ಲ್ಯು ಸ್ಟೀಲ್, ಎಲ್‌ ಅಂಡ್‌ಟಿ, ಐಟಿಸಿ, ಮಾರುತಿ ಸುಜುಕಿ ಮತ್ತು ಎಸ್‌ಬಿಐ ನ ತ್ರೈಮಾಸಿಕ ಫಲಿತಾಂಶಗಳು ಈ ವಾರ ಹೊರಬೀಳಲಿವೆ. ಜಾಗತಿಕ ವಿದ್ಯಮಾನಗಳು ಪ್ರಭಾವ ಬೀರದಿದ್ದರೆ ಈ ವಾರವೂ ಸೂಚ್ಯಂಕಗಳು ಸ್ಥಿರವಾಗಿ ಮುನ್ನಡೆಯುವ ನಿರೀಕ್ಷೆ ಇದೆ.

(ಲೇಖಕ; ಇಂಡಿಯನ್ ಮನಿ ಡಾಟ್ ಕಾಂ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT