ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಡ್‌, ಸ್ಮಾಲ್‌ ಕ್ಯಾಪ್‌ನಲ್ಲಿ ಗಳಿಕೆ ಇದ್ದರೂ ಅಪಾಯವಿದೆ!

Last Updated 30 ಜನವರಿ 2021, 17:21 IST
ಅಕ್ಷರ ಗಾತ್ರ

ದೇಶದ ಷೇರುಪೇಟೆಗಳು ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಇದ್ದಾಗ ಸ್ಮಾಲ್‌ ಕ್ಯಾಪ್‌ ಷೇರು ಸೂಚ್ಯಂಕವು ಅತ್ಯುತ್ತಮ ಗಳಿಕೆ ಕಂಡಿದೆ. ಡಿಸೆಂಬರ್‌ 28ರವರೆಗಿನ ಮಾಹಿತಿಯ ಪ್ರಕಾರ, ಆರು ತಿಂಗಳ ವರೆಗಿನ ಬಿಎಸ್‌ಇ ಸ್ಮಾಲ್‌ ಕ್ಯಾಪ್‌ ಇಂಡೆಕ್ಸ್‌ ಗಳಿಕೆಯು ಶೇಕಡ 43ರಷ್ಟಾ ಗಿದೆ. ಒಂದು ವರ್ಷದ ಗಳಿಕೆಯು ಶೇ 32ರಷ್ಟು ಇದೆ. ಆದರೆ ಬಿಎಸ್‌ಇ ಗಳಿಕೆ ಶೇ 13ರಷ್ಟು.

ಬಿಎಸ್‌ಇ ಸ್ಮಾಲ್‌ ಕ್ಯಾಪ್‌ ಇಂಡೆಕ್ಸ್‌ನ ಮೂರು ವರ್ಷಗಳ ಗಳಿಕೆಯು ನಕಾರಾತ್ಮಕ ಮಟ್ಟದಲ್ಲಿದ್ದು, ಶೇ (–)6.6 ರಷ್ಟಿದೆ. ಇದೇ ವೇಳೆ ಸೆನ್ಸೆಕ್ಸ್‌ನ ಮೂರು ವರ್ಷಗಳ ಗಳಿಕೆಯು ಶೇ 39.47ರಷ್ಟಿದೆ. ಮೂರು ವರ್ಷಗಳ ಬಿಎಸ್‌ಇ ಮಿಡ್‌ ಕ್ಯಾಪ್‌ ಗಳಿಕೆ ಶೂನ್ಯಮಟ್ಟದಲ್ಲಿದೆ.

ಷೇರುಪೇಟೆಯು ಗರಿಷ್ಠ ಮಟ್ಟ ದಲ್ಲಿ ವಹಿವಾಟು ನಡೆಸುತ್ತಿದೆ ಎನ್ನುವ ಸುದ್ದಿಯಿಂದಾಗಿ ಚಿಲ್ಲರೆ ಹೂಡಿಕೆದಾರರು ಷೇರುಪೇಟೆಯತ್ತ ಆಕರ್ಷಿತರಾದರು. ಇದು ಸ್ಮಾಲ್‌ ಕ್ಯಾಪ್‌ನ ಉತ್ತಮ ಗಳಿಕೆಗೆ ಕಾರಣವಾಗಿದೆ. 2017ರಲ್ಲಿ ಇದೇ ರೀತಿಯ ಸ್ಥಿತಿ ನಿರ್ಮಾಣವಾಗಿ ಸ್ಮಾಲ್‌ ಕ್ಯಾಪ್‌ ಇಂಡೆಕ್ಸ್‌ ಶೇ 52ರಷ್ಟು ಏರಿಕೆ ದಾಖಲಿಸಿತ್ತು. ರಿಟೇಲ್‌ ಹೂಡಿಕೆದಾರರು ಸ್ಮಾಲ್‌ ಕ್ಯಾಪ್‌ ಮ್ಯೂಚುವಲ್ ಫಂಡ್‌ಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಿರುವುದು ಸಹ ನಿಧಿ ನಿರ್ವಾಹಕರಿಗೆ ಕಡಿಮೆ ಗುಣಮಟ್ಟದ ಷೇರುಗಳಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸಿತು.

ಷೇರುಪೇಟೆಯಲ್ಲಿ ಪರಿಸ್ಥಿತಿ ಬದ ಲಾಗಿ ಯಾವಾಗ ಕರಡಿ ಕುಣಿತ ಆರಂಭವಾಗುತ್ತದೆಯೋ ಆಗ ಸ್ಮಾಲ್‌ ಕ್ಯಾಪ್‌ ಷೇರುಗಳ ಬೆಳವಣಿಗೆಯು ಕುಸಿಯುತ್ತದೆ. ಗರಿಷ್ಠ ಗುಣಮಟ್ಟದ ಮಿಡ್‌–ಸ್ಮಾಲ್‌ ಕ್ಯಾಪ್‌ಗಳು ಮಾತ್ರವೇ ಕರಡಿ ಹಿಡಿತದಿಂದ ತಪ್ಪಿಸಿಕೊಂಡು, ಉತ್ತಮ ಲಾಭ ತಂದುಕೊಡಲು ಸಾಧ್ಯ.

ಸದ್ಯಕ್ಕೆ ಷೇರುಪೇಟೆಯಲ್ಲಿ ಚಂಚಲತೆ ಇಲ್ಲ. ಒಂದು ವರ್ಷಕ್ಕೆ ಪ್ರತಿ ಷೇರಿನ ಗಳಿಕೆ ಶೇ 26ರಷ್ಟು, ದೀರ್ಘಾವಧಿಯ ಗಳಿಕೆ ಸರಾಸರಿ ಶೇ 16ರಷ್ಟು ಇದೆ. ಹೆಚ್ಚಿನ ನಗದು ಲಭ್ಯತೆ ಮತ್ತು ಕಡಿಮೆ ಬಡ್ಡಿದರವು ಷೇರುಪೇಟೆಯಲ್ಲಿ ಖರೀದಿಯನ್ನು ಹೆಚ್ಚಿಸಿದೆ.

ಭಾರತದ ಕಾರ್ಪೊರೇಟ್‌ ವಲಯದ ಶೇ 70ರಿಂದ ಶೇ 75ರಷ್ಟು ಲಾಭವು ಕೇವಲ 5 ವಲಯಗಳಾದ ಹಣಕಾಸು, ಐ.ಟಿ, ಇಂಧನ ಮತ್ತು ಅನಿಲ, ಗ್ರಾಹಕ ಉತ್ಪನ್ನಗಳು ಮತ್ತು ಸರಕುಗಳಿಂದಲೇ ಬರುತ್ತಿವೆ. ಬಹಳ ಮುಖ್ಯವಾಗಿ, ಈ ಐದರಲ್ಲಿ ಪ್ರತಿಯೊಂದು ವಲಯದ ಪ್ರತಿ ಐದು ಕಂಪನಿಗಳ ಲಾಭವು ಶೇ 70 ರಿಂದ ಶೇ 75ರಷ್ಟಿದೆ. ಇನ್ನೊಂದು ರೀತಿ ಹೇಳುವುದಾದರೆ, ದೇಶದ ಕಾರ್ಪೊರೇಟ್‌ ವಲಯದ ಶೇ 50ರಷ್ಟು ಲಾಭವನ್ನು ಒಟ್ಟು 25 ಕಂಪನಿಗಳು ಸೃಷ್ಟಿಸುತ್ತಿವೆ. ಈ ಕಾರಣಕ್ಕಾಗಿಯೇ ಲಾರ್ಜ್‌ ಕ್ಯಾಪ್‌ ಅಥವಾ ಮಲ್ಟಿ ಕ್ಯಾಪ್‌ ಫಂಡ್‌ಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಕೋಟಕ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ, ಬಜಾಜ್‌ ಫೈನಾನ್ಸ್‌, ಟಿಸಿಎಸ್‌, ಇನ್ಫೊಸಿಸ್‌, ಎಚ್‌ಸಿಎಲ್‌ ಟೆಕ್‌, ಆರ್‌ಐಎಲ್‌, ಬಿಪಿಸಿಎಲ್‌, ಎಚ್‌ಪಿಸಿಎಲ್‌ ಇತ್ಯಾದಿ ಕಂಪನಿಗಳ ಷೇರುಗಳಿವೆ.

ನಿರೀಕ್ಷೆಗಿಂತಲೂ ಹೆಚ್ಚಿನ ಏರಿಕೆಯಲ್ಲಿ ಇರುವ ಮಾರುಕಟ್ಟೆಯು ಯಾವಾಗ ಬೇಕಿದ್ದರೂ ಕುಸಿತ ಕಾಣಬಹುದು. ಮಾರುಕಟ್ಟೆಯು ತೀಕ್ಷ್ಣವಾದ ಬದಲಾವಣೆಗೆ ಒಳಗಾದರೂ ಹಣಕಾಸು ಸ್ಥಿತಿ ಉತ್ತಮವಾಗಿರುವ ಕಂಪನಿಗಳು (ಬ್ಲೂಚಿಪ್‌ ಕಂಪನಿಗಳು) ಪುಟಿದೇಳಲಿವೆ. ದೀರ್ಘಾವಧಿಗೆ ಮಿಡ್‌–ಸ್ಮಾಲ್‌ ಕ್ಯಾಪ್‌ಗಳು ಇಳಿಮುಖವಾಗಿಯೇ ಇರಲಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಲಾರ್ಜ್‌ ಕ್ಯಾಪ್‌ಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ. ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ಗಳಲ್ಲಿ ಹೂಡಿಕೆಗೆ ‘ಎಸ್‌ಐಪಿ’ಯು (ವ್ಯವಸ್ಥಿತ ಹೂಡಿಕೆ ಯೋಜನೆ) ಉತ್ತಮ ಹೂಡಿಕೆಯ ಮಾರ್ಗವಾಗಿದೆ.

(ಲೇಖಕ: ಜಿಯೋಜಿತ್‌ ಹಣಕಾಸು ಸೇವೆಗಳ ಮುಖ್ಯ ಹೂಡಿಕೆ ತಜ್ಞ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT