ಸೋಮವಾರ, ಜುಲೈ 4, 2022
24 °C
ಪೆಟ್ರೋಲ್‌ ಬಂಕ್‌ಗಳತ್ತ ಮುಖಮಾಡಿದ ಬಸ್‌, ಲಾರಿ, ಕೈಗಾರಿಕಾ ಉದ್ದೇಶದ ಬಳಕೆದಾರರು

ಭಾರಿ ಪ್ರಮಾಣದಲ್ಲಿ ಡೀಸೆಲ್‌ ಖರೀದಿ: ಸಗಟು ಖರೀದಿಗೆ ಲೀಟರಿಗೆ ₹25ರಷ್ಟು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬಸ್‌, ಲಾರಿ, ಕೈಗಾರಿಕೆಗಳಿಗೆ ಸಗಟು ಲೆಕ್ಕದಲ್ಲಿ ಡೀಸೆಲ್‌ ಖರೀದಿಸುವವರಿಗೆ ಪ್ರತಿ ಲೀಟರ್‌ಗೆ ಬೆಲೆಯನ್ನು ₹ 25ರಷ್ಟು ಹೆಚ್ಚಿಸಲಾಗಿದೆ. ಆದರೆ, ಪೆಟ್ರೋಲ್‌ ಪಂಪ್‌ಗಳಲ್ಲಿನ ರಿಟೇಲ್ ಮಾರಾಟ ದರದಲ್ಲಿ ಬದಲಾವಣೆ ಆಗಿಲ್ಲ ಎಂದು ಮೂಲಗಳು ಹೇಳಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯು ಶೇಕಡ 40ರಷ್ಟು ಏರಿಕೆ ಆಗಿರುವುದಕ್ಕೆ ಅನುಗುಣವಾಗಿ ಡೀಸೆಲ್‌ ಸಗಟು ದರದಲ್ಲಿ ಇಷ್ಟು ಏರಿಕೆ ಮಾಡಲಾಗಿದೆ ಎಂದು ತಿಳಿಸಿವೆ.

ಭಾರಿ ಪ್ರಮಾಣದಲ್ಲಿ ಡೀಸೆಲ್‌ ಖರೀದಿಸುವವವರು ತಮಗೆ ಬೇಕಾದಷ್ಟು ಡೀಸೆಲ್ಅನ್ನು ಸಾಮಾನ್ಯವಾಗಿ ತೈಲ ಕಂಪನಿಗಳಿಂದ ನೇರವಾಗಿ ಟ್ಯಾಂಕರ್‌ಗಳಲ್ಲಿ ಖರೀದಿಸುತ್ತಾರೆ. ಆದರೆ, ಲೀಟರ್‌ ಡೀಸೆಲ್ ದರವು ₹ 25ರಷ್ಟು ಹೆಚ್ಚಾಗಿರುವುದರಿಂದ ಅವರು ಈಗ ಡೀಸೆಲ್‌ ಖರೀದಿಸಲು ರಿಟೇಲ್ ಬಂಕ್‌ಗಳಿಗೆ ಬರುತ್ತಿದ್ದಾರೆ. ಇದರಿಂದಾಗಿ ಈ ತಿಂಗಳಿನಲ್ಲಿ ಪೆಟ್ರೋಲ್‌ ಪಂಪ್‌ಗಳಲ್ಲಿನ ಮಾರಾಟ ಪ್ರಮಾಣವು ಐದುಪಟ್ಟು ಹೆಚ್ಚಾಗಿದೆ. ಇದು ರಿಟೇಲ್‌ ಮಾರಾಟಗಾರರ ನಷ್ಟವನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.

ಖಾಸಗಿ ಕಂಪನಿಗಳಿಗೆ ಹೆಚ್ಚಿನ ನಷ್ಟ: ಖಾಸಗಿ ಕಂಪನಿಗಳಾದ ನಯಾರಾ ಎನರ್ಜಿ, ಜಿಯೊ–ಬಿಪಿ ಮತ್ತು ಶೆಲ್‌ ಕಂಪನಿಗಳಿಗೆ ಹೆಚ್ಚಿನ ನಷ್ಟವಾಗುತ್ತಿದೆ. ಈ ಕಂಪನಿಗಳು ಮಾರಾಟದಲ್ಲಿ ಏರಿಕೆ ಆಗಿದ್ದರೂ, ಅದಕ್ಕೆ ನಿಯಂತ್ರಣ ಹಾಕಲು ಮುಂದಾಗಿರಲಿಲ್ಲ. ಆದರೆ, 136 ದಿನಗಳಿಂದ ಬೆಲೆಯಲ್ಲಿ ಬದಲಾವಣೆ ಆಗದಿರುವ ಕಾರಣ, ಕಡಿಮೆ ಬೆಲೆಗೆ ಇಂಧನ ಮಾರುವುದಕ್ಕಿಂತ ಪಂಪ್‌ಗಳನ್ನು ಮುಚ್ಚುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಇವು ಬಂದಿವೆ ಎಂದು ಮೂಲಗಳು ತಿಳಿಸಿವೆ.

ಮಾರಾಟವು ಬಹುತೇಕ ಶೂನ್ಯ ಮಟ್ಟಕ್ಕೆ ಕುಸಿತ ಕಂಡಿದ್ದರಿಂದ ಹಾಗೂ ಸರ್ಕಾರಿ ಸ್ವಾಮ್ಯದ ಕಂಪನಿಗಳು ನೀಡುವ ಸಬ್ಸಿಡಿ ದರದೊಂದಿಗೆ ಪೈಪೋಟಿ ನೀಡಲು ಆಗದಿದ್ದ ಕಾರಣಕ್ಕೆ 2008ರಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ 1,432 ಪೆಟ್ರೋಲ್‌ ಪಂಪ್‌ಗಳನ್ನು ಮುಚ್ಚಿತ್ತು. ಭಾರಿ ಪ್ರಮಾಣದಲ್ಲಿ ಇಂಧನ ಬಳಸುವವರು ಇದೀಗ ಪೆಟ್ರೋಲ್‌ ಪಂಪ್‌ಗಳಿಗೆ ಬರುತ್ತಿರುವುದರಿಂದ ಖಾಸಗಿ ಕಂಪನಿಗಳಿಗೆ ಮತ್ತೊಮ್ಮೆ ಅಂಥದ್ದೇ ಪರಿಸ್ಥಿತಿ ಎದುರಾಗಬಹುದು ಎನ್ನಲಾಗಿದೆ.

ಸಗಟು ಲೆಕ್ಕದಲ್ಲಿ ಡೀಸೆಲ್ ಖರೀದಿಸುವವರಿಗೆ ಮುಂಬೈನಲ್ಲಿ ಪ್ರತಿ ಲೀಟರ್ ಬೆಲೆಯನ್ನು ₹ 122.05ಕ್ಕೆ ಹೆಚ್ಚಿಸಲಾಗಿದೆ. ಆದರೆ, ಪೆಟ್ರೋಲ್‌ ಪಂಪ್‌ಗಳಲ್ಲಿ ಮಾರಾಟ ಆಗುತ್ತಿರುವ ಡೀಸೆಲ್‌ನ ದರವು ಲೀಟರಿಗೆ ₹ 94.14ರಷ್ಟು ಇದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆ ಆಗುತ್ತಿದ್ದರೂ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಐದು ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ, 2021ರ ನವೆಂಬರ್‌ 24ರಿಂದ ಪೆಟ್ರೋಲ್‌, ಡೀಸೆಲ್‌ನ ರಿಟೇಲ್‌ ಮಾರಾಟ ದರ ಬದಲಾವಣೆ ಮಾಡಲಿಲ್ಲ. ಮಾರ್ಚ್‌ 10ರ ಮತ ಎಣಿಕೆ ಪ್ರಕ್ರಿಯೆ ಮುಗಿದ ಬಳಿಕ ಇಂಧನ ಬೆಲೆ ಏರಿಕೆ ಆಗುವ ನಿರೀಕ್ಷೆ ಮಾಡಲಾಗಿತ್ತು.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ರಿಟೇಲ್‌ ಮಾರಾಟ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರುವುದರಿಂದ ಖಾಸಗಿ ವಲಯದ ನಯಾರಾ ಎನರ್ಜಿ, ಜಿಯೊ–ಬಿಪಿ ಮತ್ತು ಶೇಲ್‌ ಕಂಪನಿಗಳು ಸಹ ಬೆಲೆ ಏರಿಕೆ ಮಾಡದೇ ಇರುವ ಅನಿವಾರ್ಯ ಪರಿಸ್ಥಿತಿಗೆ ಬಂದಿವೆ. ಒಂದೊಮ್ಮೆ ಬೆಲೆ ಏರಿಕೆ ಮಾಡಿದಲ್ಲಿ ಗ್ರಾಹಕರನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಬೆಲೆ ಏರಿಕೆಯ ಕುರಿತಾಗಿ ನಯಾರಾ ಎನರ್ಜಿ ಪ್ರತಿಕ್ರಿಯೆ ನೀಡಿಲ್ಲ. ‘ಬೆಲೆ ಏರಿಕೆಯಿಂದಾಗಿ ರಿಟೇಲ್‌ ಪೆಟ್ರೋಲ್‌ ಪಂಪ್‌ಗಳಲ್ಲಿ ಬೇಡಿಕೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಬೆಲೆ ಏರಿಕೆ ಆಗಬಹುದು ಎನ್ನುವ ಕಾರಣಕ್ಕೆ ತೈಲ ವಿತರಕರು, ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಇಂಧನ ಖರೀದಿಸಿ ಇಟ್ಟುಕೊಳ್ಳುತ್ತಿದ್ದಾರೆ. ಇದರಿಂದಾಗಿ ಮಾರ್ಚ್‌ನಲ್ಲಿ ಮಾರಾಟವು ದಾಖಲೆ ಮಟ್ಟಕ್ಕೆ ಏರಿಕೆ ಆಗಲಿದೆ’ ಎಂದು ಜಿಯೊ–ಬಿಪಿ ವಕ್ತಾರರೊಬ್ಬರು ತಿಳಿಸಿದ್ದಾರೆ.

ಡೀಸೆಲ್‌ ಮಾರಾಟ ಹೆಚ್ಚಳ

ಖಾಸಗಿ ಕಂಪನಿಗಳು ತೈಲ ಮಾರಾಟದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಸರ್ಕಾರಿ ಸ್ವಾಮ್ಯದ ಕಂಪನಿಗಳು ನೀಡಿರುವ ಮಾಹಿತಿಯ ಪ್ರಕಾರ, ಮಾರ್ಚ್‌ 1ರಿಂದ 15ರವರೆಗಿನ ಅವಧಿಯಲ್ಲಿ 35.3 ಲಕ್ಷ ಟನ್‌ ಡೀಸೆಲ್‌ ಮಾರಾಟ ಆಗಿದೆ. ಇದು ಫೆಬ್ರುವರಿ 1ರಿಂದ 15ರವರೆಗಿನ ಅವಧಿಗೆ ಹೋಲಿಸಿದರೆ ಶೇ 32.8ರಷ್ಟು ಹೆಚ್ಚು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರಾಟವು ಶೇ 23.7ರಷ್ಟು, 2019ರ ಮಾರ್ಚ್‌ 1–15ರ ಅವಧಿಗೆ ಹೋಲಿಸಿದರೆ ಶೇ 17.3ರಷ್ಟು ಹೆಚ್ಚಾಗಿದೆ.

ಬೆಲೆ ಏರಿಕೆ ಆಗಲಿದೆ ಎನ್ನುವ ಕಾರಣಕ್ಕೆ ಹೆಚ್ಚು ಇಂಧನ ದಾಸ್ತಾನು ಮಾಡಿದ್ದರಿಂದ ಇಂಧನ ಮಾರಾಟವು ಶೇ 20ರಷ್ಟು ಹೆಚ್ಚಾಗಿದೆ ಎಂದು ಪೆಟ್ರೋಲಿಯಂ ಸಚಿವ ಹರ್‌ದೀಪ್‌ ಸಿಂಗ್ ಪುರಿ ಅವರು ಕಳೆದವಾರ ಹೇಳಿದ್ದರು. ಆದರೆ ಮೂಲಗಳ ಪ್ರಕಾರ, ಭಾರಿ ಪ್ರಮಾಣದಲ್ಲಿ ಡೀಸೆಲ್‌ ಬಳಸುವವರು ಪೆಟ್ರೋಲ್‌ ಪಂಪ್‌ಗಳಲ್ಲಿ ಖರೀದಿ ಮಾಡುತ್ತಿರುವುದೇ ಬೇಡಿಕೆ ಹೆಚ್ಚಾಗಲು ಕಾರಣ.

‘ಎಲ್ಲಾ ಸವಾಲುಗಳ ನಡುವೆಯೂ ರಿಟೇಲ್‌ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಬದ್ಧವಿರುವುದಾಗಿ’ ಜಿಯೊ–ಬಿಪಿ ವಕ್ತಾರರೊಬ್ಬರು ಹೇಳಿದ್ದಾರೆ.

*
ದರ ಹೆಚ್ಚಳದಿಂದಾಗಿ ರಿಟೇಲ್‌ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಖರೀದಿ ಮಾಡಬೇಕಾಗಿದೆ. ದರ ಏರಿಕೆಯಿಂದ ಉದ್ಯಮಕ್ಕೆ ಪೆಟ್ಟು ಬಿದ್ದಿದೆ.
-ಸದಾನಂದ ಛಾತ್ರ, ದುರ್ಗಾಂಬ ಬಸ್‌ ಕಂಪನಿ ಮಾಲೀಕ

ಅಂಕಿ–ಅಂಶ

81,699 – ದೇಶದಲ್ಲಿನ ಒಟ್ಟಾರೆ ಪೆಟ್ರೋಲ್‌ ಪಂಪ್‌ಗಳು

90% – ಸರ್ಕಾರಿ ಸ್ವಾಮ್ಯದ ಕಂಪನಿಗಳ ಪಾಲು

6,510 – ನಯಾರಾ ಎನರ್ಜಿ

1,454 – ಜಿಯೊ–ಬಿಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು