ಶುಕ್ರವಾರ, ಜೂಲೈ 3, 2020
22 °C
ಭಾರತೀಯ ಕೈಗಾರಿಕಾ ಒಕ್ಕೂಟ

ಆರ್ಥಿಕ ಚೇತರಿಕೆ ಕಾಣಲು ವರ್ಷಕ್ಕೂ ಹೆಚ್ಚು ಅವಧಿ ಬೇಕು: ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶಿ ಅರ್ಥ ವ್ಯವಸ್ಥೆಯಲ್ಲಿ ಸಹಜ ಸ್ಥಿತಿ ನಿರ್ಮಾಣವಾಗಲು ಒಂದು ವರ್ಷಕ್ಕೂ ಹೆಚ್ಚು ಅವಧಿ ಬೇಕಾಗಬಹುದು ಎಂದು ಕಾರ್ಪೊರೇಟ್‌ಗಳ ಮುಖ್ಯಸ್ಥರು ಅಂದಾಜಿಸಿದ್ದಾರೆ.

ಆರ್ಥಿಕ ದಿಗ್ಬಂಧನ ಕೊನೆಗೊಂಡ ನಂತರದ ದಿನಗಳಲ್ಲಿ ಮಂದಗತಿಯ ಆರ್ಥಿಕ ಪ್ರಗತಿಯು ದೀರ್ಘ ಸಮಯದವರೆಗೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ 300ಕ್ಕೂ ಹೆಚ್ಚು ಸಿಇಒಗಳು ಅಭಿಪ್ರಾಯಪಟ್ಟಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಎರಡು ಮೂರಾಂಶದಷ್ಟು ಸಿಇಒಗಳು ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್ಎಂಇ) ಕೈಗಾರಿಕೆಗಳಿಗೆ ಸೇರಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಈ ಸಮೀಕ್ಷೆ ನಡೆಸಿದೆ.

ಮಾರ್ಚ್‌ 25 ರಿಂದ ದೇಶದಾದ್ಯಂತ ಜಾರಿಗೆ ಬಂದಿರುವ ದಿಗ್ಬಂಧನವು  ಆರ್ಥಿಕ ಚಟುವಟಿಕೆಗಳಿಗೆ ಭಾರಿ ಪೆಟ್ಟು ನೀಡಿದ್ದು, ಚೇತರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳಲಿರುವುದು ಸಮೀಕ್ಷೆಯಲ್ಲಿ ದೃಢಪಟ್ಟಿದೆ.

ಸಂಪೂರ್ಣ ದಿಗ್ಬಂಧನ ಮತ್ತು ಉತ್ಪನ್ನಗಳಿಗೆ ಬೇಡಿಕೆಯೇ ಇಲ್ಲದಿರುವುದರಿಂದ  ಉದ್ದಿಮೆಗಳ ವಹಿವಾಟಿಗೆ ತೀವ್ರ ಅಡಚಣೆ ಒಡ್ಡಿದೆ ಎಂದು ಪ್ರತಿ ನಾಲ್ಕು ಕಂಪನಿಗಳ ಪೈಕಿ ಮೂರು ಕಂಪನಿಗಳು ಹೇಳಿಕೊಂಡಿವೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌–ಜೂನ್‌) ವರಮಾನವು ಶೇ 40ರಷ್ಟು ಕಡಿಮೆಯಾಗಲಿದೆ ಎಂದು ಉದ್ದಿಮೆಗಳು ನಿರೀಕ್ಷಿಸಿವೆ.

ಉದ್ಯೋಗ ನಷ್ಟ: ಆರ್ಥಿಕತೆಯಲ್ಲಿ ಶೇ 15 ರಿಂದ ಶೇ 30ರಷ್ಟು ಉದ್ಯೋಗ ನಷ್ಟವಾಗಲಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಅರ್ಧಕ್ಕೂ ಹೆಚ್ಚು ಕಂಪನಿಗಳು ಎಣಿಕೆ ಹಾಕಿವೆ.

ಕೋವಿಡ್‌ ಬಿಕ್ಕಟ್ಟಿನಿಂದಾಗಿ ತಮ್ಮ ವೇತನ ಕಡಿತವಾಗಿಲ್ಲ ಎಂದು ಎರಡು ಮೂರಾಂಶದಷ್ಟು ಸಿಇಒಗಳು ಹೇಳಿಕೊಂಡಿದ್ದಾರೆ.

‘ಅರ್ಥ ವ್ಯವಸ್ಥೆಯ ಚೇತರಿಕೆಗೆ ಉದ್ದಿಮೆ ವಲಯವು ಉತ್ತೇಜನಾ ಕೊಡುಗೆಯ ನಿರೀಕ್ಷೆಯಲ್ಲಿ ಇದೆ. ದಿಗ್ಬಂಧನದಿಂದ ಆರ್ಥಿಕತೆಯನ್ನು ಹಂತ ಹಂತವಾಗಿ ಮುಕ್ತಗೊಳಿಸುವ ಅಗತ್ಯವೂ ಇದೆ’ ಎದು ಸಿಐಐ ಮಹಾ ನಿರ್ದೇಶಕ ಚಂದ್ರಜಿತ್‌ ಬ್ಯಾನರ್ಜಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು