ಸೋಮವಾರ, ಆಗಸ್ಟ್ 8, 2022
21 °C

ಆರ್‌ಬಿಐನಿಂದ ಶೇ 0.50ರಷ್ಟು ರೆಪೊ ದರ ಹೆಚ್ಚಳ; ಸಾಲ ಇನ್ನಷ್ಟು ತುಟ್ಟಿ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ರೆಪೊ ದರವನ್ನು ಶುಕ್ರವಾರ ಶೇಕಡ 0.50ರಷ್ಟು ಹೆಚ್ಚಿಸಿದೆ. ಇದರಿಂದ ಗೃಹ, ವಾಹನ ಮತ್ತು ಇತರ ಸಾಲಗಳ ಮೇಲಿನ ಇಎಂಐ ಮೊತ್ತ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ರೆಪೊ ದರ ಹೆಚ್ಚಳ ಮಾಡುತ್ತಿದೆ. ಮೇ ತಿಂಗಳಿನಿಂದ ಈವರೆಗೆ ಬಡ್ಡಿದರವನ್ನು ಒಟ್ಟು ಶೇ 1.40ರಷ್ಟು ಏರಿಕೆ ಮಾಡಿದೆ.

ರೆಪೊ ಹೆಚ್ಚಳ ನಿರ್ಧಾರವು ಕೈಗೆಟಕುವ ಮತ್ತು ಮಧ್ಯಮ ದರದ ಮನೆಗಳ ಮಾರಾಟದ ಮೇಲೆ ಅಲ್ಪಾವಧಿಯಲ್ಲಿ ಪರಿಣಾಮ ಬೀರಲಿದೆ ಎಂದು ರಿಯಲ್‌ ಎಸ್ಟೇಟ್‌ ಉದ್ಯಮದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಬಡ್ಡಿದರ ಹೆಚ್ಚಾಗುವುದರಿಂದ ಕಡಿಮೆ ಹಾಗೂ ಮಧ್ಯಮ ಬೆಲೆಯ ಮನೆಗಳ ಬೇಡಿಕೆ ಮೇಲೆ ತೀವ್ರ ಪರಿಣಾಮ ಉಂಟಾಗಲಿದೆ. ಆದರೆ, ಹೆಚ್ಚಿನ ಮೊತ್ತದ ಮತ್ತು ಐಷಾರಾಮಿ ಮನೆಗಳ ಬೇಡಿಕೆ ಮೇಲೆ ಜಾಸ್ತಿ ಪರಿಣಾಮ ಆಗುವುದಿಲ್ಲ’ ಎಂದು ಕೋಲಿಯರ್ಸ್‌ ಇಂಡಿಯಾದ ಸಿಇಒ ರಮೇಶ್‌ ನಾಯರ್‌ ಹೇಳಿದ್ದಾರೆ.

‘ಈವರೆಗಿನ ರೆಪೊ ದರ ಹೆಚ್ಚಳವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ಪೂರ್ತಿಯಾಗಿ ವರ್ಗಾಯಿಸಿವೆ ಎಂದು ಭಾವಿಸುವುದಾದರೆ, ಜನರ ಮನೆ ಖರೀದಿ ಸಾಮರ್ಥ್ಯವು ಶೇ 11ರಷ್ಟು ಇಳಿಕೆ ಆಗಿದೆ. ಅಂದರೆ ಈ ಮೊದಲು ₹ 1 ಕೋಟಿ ಮೌಲ್ಯದ ಮನೆ ಖರೀದಿಸುವ ಸಾಮರ್ಥ್ಯ ಇತ್ತು. ಬಡ್ಡಿದರ ಏರಿಕೆಯಿಂದಾಗಿ ಆ ಸಾಮರ್ಥ್ಯವು ಈಗ ₹ 89 ಲಕ್ಷಕ್ಕೆ ಇಳಿಕೆ ಆಗಿದೆ’ ಎಂದು ನೈಟ್‌ ಫ್ರ್ಯಾಂಕ್‌ ಇಂಡಿಯಾದ ಸಿಎಂಡಿ ಶಿಶಿರ್‌ ಬೈಜಲ್‌ ತಿಳಿಸಿದ್ದಾರೆ.

‘ರೆಪೊ ದರ ಹೆಚ್ಚಳವನ್ನು ಸಾಲದ ಬಡ್ಡಿದರಕ್ಕೆ ವರ್ಗಾಯಿಸಲು ಸಮಯ ಹಿಡಿಯಲಿದೆ. ಹೀಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆಯ ಮೇಲಿನ ಪರಿಣಾಮವು ಸೀಮಿತವಾಗಿರಲಿದೆ’ ಎಂದು ಪಿಡಬ್ಲ್ಯುಸಿ ಇಂಡಿಯಾದ ಆರ್ಥಿಕ ಸಲಹಾ ಸೇವೆಗಳ ಮುಖ್ಯಸ್ಥ ರೆನಿನ್‌ ಬ್ಯಾನರ್ಜಿ ಹೇಳಿದ್ದಾರೆ.

ಕೋವಿಡ್‌ ಪೂರ್ವ ಮಟ್ಟ ಮೀರಿದ ರೆಪೊ

ಶುಕ್ರವಾರದ ಹೆಚ್ಚಳದ ಪರಿಣಾಮವಾಗಿ ರೆಪೊ ದರವು ಶೇ 5.40ಕ್ಕೆ ತಲುಪಿದೆ. ಇದು ಕೋವಿಡ್‌ಗೂ ಮೊದಲು ಇದ್ದ ಮಟ್ಟಕ್ಕಿಂತ ಶೇ 0.25ರಷ್ಟು ಹೆಚ್ಚು.

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಮೂರು ದಿನಗಳ ಸಭೆಯು ಶುಕ್ರವಾರ ಅಂತ್ಯವಾಗಿದ್ದು, ರೆಪೊ ದರ ಹೆಚ್ಚಿಸಲು ಎಂಪಿಸಿಯ ಆರೂ ಸದಸ್ಯರು ಒಮ್ಮತ ಸೂಚಿಸಿದ್ದಾರೆ. ಇದೇ ವೇಳೆ, ಹೊಂದಾಣಿಕೆಯ ನೀತಿಯನ್ನು ಕೈಬಿಡುವ ನಿರ್ಧಾರಕ್ಕೆ ಬದ್ಧವಿರುವುದಾಗಿಯೂ ಹೇಳಿದ್ದಾರೆ.

ಚಿಲ್ಲರೆ ಹಣದುಬ್ಬರ ಪ್ರಮಾಣವು ಆರು ತಿಂಗಳಿನಿಂದಲೂ ಶೇ 6ರ ಮಟ್ಟಕ್ಕಿಂತ ಹೆಚ್ಚಿಗೆ ಇದೆ. ಹೀಗಾಗಿ ಇದನ್ನು ನಿಯಂತ್ರಿಸಲು ಶೇ 0.50ರಷ್ಟು ಬಡ್ಡಿದರ ಹೆಚ್ಚಳವು ಸಾಲದು ಎನ್ನುವ ಸುಳಿವನ್ನು ಆರ್‌ಬಿಐ ಗವರ್ನರ್ ದಾಸ್‌ ನೀಡಿದ್ದಾರೆ.

‘2022–23ನೇ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಹಣದುಬ್ಬರ ಪ್ರಮಾಣವು ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿಯೇ ಇರುವ ಅಂದಾಜು ಮಾಡಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಅಸ್ಥಿರತೆಯು ದೇಶದಲ್ಲಿ ಹಣದುಬ್ಬರ ಒತ್ತಡ ಹೆಚ್ಚಾಗಲು ಕಾರಣವಾಗುತ್ತಿದೆ’ ಎಂದು ದಾಸ್‌ ಹೇಳಿದ್ದಾರೆ.

ಇನ್ನಷ್ಟು ಹೆಚ್ಚಳ ನಿರೀಕ್ಷೆ:

ರೆಪೊ ದರವು ‘ತಟಸ್ಥ ದರ’ ಅಂದರೆ ಶೇ 6ರಿಂದ ಶೇ 6.5ರವರೆಗೆ ಬರುವ ತನಕವೂ ಬಡ್ಡಿದರ ಹೆಚ್ಚಳ ಮುಂದುವರಿಯಲಿದೆ ಎಂದು ಆರ್ಥಿಕ ತಜ್ಞರು ಮತ್ತು ವಿಶ್ಲೇಷಕರು ಹೇಳಿದ್ದಾರೆ.

ಎನ್‌ಆರ್‌ಐಗೂ ಭಾರತ್‌ ಬಿಲ್‌ ಪೇಮೆಂಟ್‌

ಅನಿವಾಸಿ ಭಾರತೀಯರು (ಎನ್‌ಆರ್‌ಐ) ಭಾರತದಲ್ಲಿ ಇರುವ ತಮ್ಮ ಕುಟುಂಬದವರ ಪರವಾಗಿ ಯುಟಿಲಿಟಿ ಬಿಲ್‌ಗಳು (ವಿದ್ಯುತ್‌, ಗ್ಯಾಸ್‌ ಇತ್ಯಾದಿ) ಹಾಗೂ ಶಿಕ್ಷಣ ಶುಲ್ಕಗಳ ಪಾವತಿಗೆ ಭಾರತ್‌ ಬಿಲ್‌ ಪೇಮೆಂಟ್‌ ವ್ಯವಸ್ಥೆಯನ್ನು ಶೀಘ್ರದಲ್ಲೇ ಬಳಸುವಂತೆ ಆಗಲಿದೆ ಎಂದು ಆರ್‌ಬಿಐ ತಿಳಿಸಿದೆ.

ಹಿರಿಯ ನಾಗರಿಕರಿಗೆ ಇದರಿಂದ ಹೆಚ್ಚಿನ ಅನುಕೂಲ ಆಗಲಿದೆ ಎಂದು ಹೇಳಿದೆ. ಸದ್ಯ, ಭಾರತದ ಬಳಕೆದಾರರು ಈ ವ್ಯವಸ್ಥೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದು, ಎನ್‌ಆರ್‌ಐಗಳಿಗೂ ಲಭ್ಯವಾಗುವಂತೆ ಮಾಡುವ ಪ್ರಸ್ತಾವ ಬಂದಿದೆ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು