ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಪಿಂಚಣಿಗೆ ಕ್ರಮ ವಿವರಿಸಿದ ಇಪಿಎಫ್‌ಒ

ಇಪಿಎಸ್: ‘ಜಂಟಿ ಆಯ್ಕೆ ನಮೂನೆ’ಯ ಮಾಹಿತಿ
Last Updated 20 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ನವದೆಹಲಿ: ಉದ್ಯೋಗಿಗಳ ಪಿಂಚಣಿ ಯೋಜನೆಯ (ಇಪಿಎಸ್) ಅಡಿಯಲ್ಲಿ ಹೆಚ್ಚಿನ ಪಿಂಚಣಿಗೆ ನೌಕರರು ಹಾಗೂ ಉದ್ಯೋಗದಾತರು ಜಂಟಿಯಾಗಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುವ ಪ್ರಕ್ರಿಯೆಯ ವಿವರವನ್ನು ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಸೋಮವಾರ ಪ್ರಕಟಿಸಿದೆ.

ನೌಕರರ ಪಿಂಚಣಿ (ತಿದ್ದುಪಡಿ) ಯೋಜನೆ – 2014ರ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ 2022ರ ನವೆಂಬರ್‌ ನಲ್ಲಿ ಎತ್ತಿ ಹಿಡಿದಿದೆ. 2014ರ ಆಗಸ್ಟ್‌ 22ರಂದು ತಂದ ತಿದ್ದುಪಡಿಯು, ಪಿಂಚಣಿಗೆ ಅರ್ಹವಾದ ವೇತನ ತಿಂಗಳಿಗೆ ₹ 6,500 ಇದ್ದಿದ್ದನ್ನು ₹ 15 ಸಾವಿರಕ್ಕೆ ಹೆಚ್ಚು ಮಾಡಿತ್ತು. ಅಲ್ಲದೆ, ಉದ್ಯೋಗಿಗಳು ಹಾಗೂ ಉದ್ಯೋಗದಾತರು ತಮ್ಮ ವಾಸ್ತವ ವೇತನದ (ವೇತನವು ಪಿಂಚಣಿಗೆ ಅರ್ಹವಾದ ಮಿತಿಗಿಂತಲೂ ಹೆಚ್ಚಿದ್ದರೆ) ಶೇಕಡ 8.33ರಷ್ಟನ್ನು ಇಪಿಎಸ್‌ಗೆ ವಂತಿಗೆಯಾಗಿ ನೀಡಲು ಅವಕಾಶ ಕಲ್ಪಿಸಿತ್ತು.

ಇಪಿಎಫ್‌ಒ ಕ್ಷೇತ್ರ ಅಧಿಕಾರಿಗಳು ‘ಜಂಟಿ ಆಯ್ಕೆ ನಮೂನೆ’ಯನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ವಿವರವನ್ನು ಸಂಘಟನೆಯು ಸೋಮವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

‘ಜಂಟಿ ಆಯ್ಕೆ ನಮೂನೆಗೆ ಅವಕಾಶ ಕಲ್ಪಿಸಿ ಶೀಘ್ರದಲ್ಲಿಯೇ ಯುಆರ್‌ಎಲ್‌ ನೀಡಲಾಗುತ್ತದೆ. ಅದು ಸಿಕ್ಕ ನಂತರದಲ್ಲಿ ಪ್ರಾದೇಶಿಕ ಪಿಎಫ್ ಆಯುಕ್ತರು ಅದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು’ ಎಂದು ಇಪಿಎಫ್‌ಒ ಹೇಳಿದೆ.

ಅರ್ಜಿಗಳನ್ನು ನೋಂದಾಯಿಸಿಕೊಳ್ಳಲಾಗುತ್ತದೆ, ಅವುಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿಟ್ಟುಕೊಳ್ಳಲಾಗುತ್ತದೆ ಹಾಗೂ ಅರ್ಜಿ ಸಲ್ಲಿಸಿದವರಿಗೆ ಸ್ವೀಕೃತಿ ಸಂಖ್ಯೆಯನ್ನು ನೀಡಲಾಗುತ್ತದೆ.

ಪ್ರಾದೇಶಿಕ ಪಿಎಫ್‌ ಕಚೇರಿಯ ಉಸ್ತುವಾರಿ ಹೊತ್ತಿರುವವರು ಪ್ರತಿ ಅರ್ಜಿಯನ್ನು ಪರಿಶೀಲಿಸಿ, ತಮ್ಮ ತೀರ್ಮಾನವನ್ನು ಅರ್ಜಿದಾರರಿಗೆ ಇ–ಮೇಲ್ ಅಥವಾ ಅಂಚೆ ಮೂಲಕ ಹಾಗೂ ನಂತರದಲ್ಲಿ ಎಸ್‌ಎಂಎಸ್‌ ಮೂಲಕ ತಿಳಿಸಬೇಕು ಎಂದು ಸೂಚಿಸಲಾಗಿದೆ. ಜಂಟಿ ಆಯ್ಕೆ ನಮೂನೆ ಸಲ್ಲಿಸಿದ ನಂತರದಲ್ಲಿ, ಬಾಕಿ ವಂತಿಗೆ ಇದ್ದಲ್ಲಿ ಅದನ್ನು ಪಾವತಿಸಿ, ಅರ್ಜಿದಾರರು ತಮ್ಮ ದೂರುಗಳನ್ನು ಇಪಿಎಫ್‌ಐಜಿಎಂಎಸ್‌ ಪೋರ್ಟಲ್‌ ಮೂಲಕ ಹೇಳಿಕೊಳ್ಳಬಹುದು.

ಎಲ್ಲ ಅರ್ಹ ಚಂದಾದಾರರಿಗೆ ಹೆಚ್ಚಿನ ಪಿಂಚಣಿ ಆಯ್ಕೆ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್‌ ತೀರ್ಪಿಗೆ ಅನುಗುಣವಾಗಿ ಅವಕಾಶ ಕಲ್ಪಿಸುವಂತೆ ಇಪಿಎಫ್‌ಒ ತನ್ನ ಕ್ಷೇತ್ರ ಅಧಿಕಾರಿಗಳಿಗೆ ಸೂಚನೆ ನೀಡಿದೆ.

‘ಇದು ಅಂತೂ ಎಲ್ಲರಿಗೂ ಸಂತಸ ತಂದುಕೊಡುವಂತಹ ಅಂತ್ಯ. ಇಪಿಎಫ್‌ಒ ಅಧಿಕಾರಿಗಳಿಗೆ ಹಾಗೂ ಕಾರ್ಮಿಕ ಸಚಿವಾಲಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಇಪಿಎಫ್‌ಒ ಧರ್ಮದರ್ಶಿಗಳ ಮಂಡಳಿ ಸದಸ್ಯ ಕೆ.ಇ. ರಘುನಾಥನ್ ಹೇಳಿದ್ದಾರೆ.

ಇಪಿಎಫ್‌: ಪಾವತಿಯಾಗದ ಬಡ್ಡಿ

ನವದೆಹಲಿ (ಪಿಟಿಐ): ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ 2021–22ನೇ ಸಾಲಿನ ಬಡ್ಡಿ ಮೊತ್ತ ಪಾವತಿ ಆಗದೇ ಇರುವ ಬಗ್ಗೆ ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಕೇಂದ್ರೀಯ ಧರ್ಮದರ್ಶಿಗಳ ಮಂಡಳಿಯ ಸದಸ್ಯರು ಪ್ರಸ್ತಾಪಿಸಿದ್ದಾರೆ.

ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಅವರ ನೇತೃತ್ವದಲ್ಲಿ 2022ರ ಮಾರ್ಚ್‌ನಲ್ಲಿ ನಡೆದ ಇಪಿಎಫ್‌ಒ ಕೇಂದ್ರೀಯ ಧರ್ಮದರ್ಶಿ ಮಂಡಳಿ ಸಭೆಯಲ್ಲಿ ಶೇ 8.1ರಷ್ಟು ಬಡ್ಡಿ ದರ ಪಾವತಿಸಲು ಒಪ್ಪಿಗೆ ನೀಡಲಾಗಿತ್ತು. ನಾಲ್ಕು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಇದು ಅತಿ ಕಡಿಮೆ ಬಡ್ಡಿ ದರ.

ಬಡ್ಡಿ ಪಾವತಿ ಆಗದಿರುವ ವಿಷಯವನ್ನು ಮಂಡಳಿಯ ಕೆಲವು ಸದಸ್ಯರು ಇಪಿಎಫ್‌ಒ ಅಧಿಕಾರಿಗಳ ಬಳಿ ಪ್ರಸ್ತಾಪಿಸಿದ್ದಾರೆ.

‘ಪಾವತಿ ಆಗಲಿದೆ’: ಈ ನಡುವೆ, ಬಡ್ಡಿ ಪಾವತಿ ಆಗದಿರುವ ವಿಷಯವನ್ನು ಕೆಲವರು ಟ್ವಿಟರ್ ಮೂಲಕವೂ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಪಿಎಫ್‌ಒ, ‘2021–22ನೆಯ ಸಾಲಿನ ಬಡ್ಡಿಯನ್ನು ಪಾವತಿಸುವ ಕೆಲಸ ನಡೆಯುತ್ತಿದೆ. ಬಡ್ಡಿಯು ಖಾತೆಗೆ ಶೀಘ್ರದಲ್ಲಿಯೇ ಜಮಾ ಆಗಲಿದೆ’ ಎಂದು ಹೇಳಿದೆ.

ಬಡ್ಡಿ ಪಾವತಿಸುವಾಗ, ಮೊತ್ತವನ್ನು ಪೂರ್ತಿಯಾಗಿ ಪಾವತಿ ಮಾಡಲಾಗುತ್ತದೆ. ಬಡ್ಡಿ ಮೊತ್ತದಲ್ಲಿ ನಷ್ಟ ಆಗುವುದಿಲ್ಲ ಎಂದು ಇಪಿಎಫ್‌ಒ ತನ್ನ @socialepfo ಟ್ವಿಟರ್ ಹ್ಯಾಂಡಲ್ ಮೂಲಕ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT