ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕತೆ ಉತ್ತೇಜನಕ್ಕೆ ವಿತ್ತೀಯ ಹಣಕಾಸು ಕ್ರಮ ಅಗತ್ಯ: ಎಸ್‌ಬಿಐ

Last Updated 17 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಮುಂಬೈ: ‘ಕೊರೊನಾ–2’ ವೈರಸ್‌ ಸಾಂಕ್ರಾಮಿಕವಾಗಿ ಹಬ್ಬುತ್ತಿರುವುದರಿಂದ ಉದ್ಭವಿಸಿರುವ ತಯಾರಿಕಾ ಚಟುವಟಿಕೆ ಸ್ಥಗಿತ, ಪೂರೈಕೆ ಕೊರತೆ ಮತ್ತು ಬೆಲೆ ಏರಿಕೆಯ ಸಂಕಷ್ಟಕ್ಕೆ ಗುರಿಯಾಗಿರುವ ದೇಶಿ ಆರ್ಥಿಕತೆಯನ್ನು ಈ ಬಿಕ್ಕಟ್ಟಿನಿಂದ ಪಾರು ಮಾಡಲು ವಿತ್ತೀಯ ಮತ್ತು ಹಣಕಾಸು ಉತ್ತೇಜನಾ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇದೆ ಎಂದು ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾದ ಸಂಶೋಧನಾ ಕೇಂದ್ರದ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೋಟೆಲ್‌, ವಾಯುಯಾನ, ಸಾರಿಗೆ, ಲೋಹ, ವಾಹನ ಬಿಡಿಭಾಗ ಮತ್ತು ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ ವಿವೇಕಯುತ ನಿರ್ಧಾರ ಕೈಗೊಳ್ಳಬೇಕಾಗಿದೆ. ಹೆಚ್ಚೆಚ್ಚು ನಗರಗಳಲ್ಲಿ ಜನಜೀವನ ಸ್ಥಗಿತಗೊಳ್ಳುವುದು ಜಾರಿಗೆ ಬರುತ್ತಿದ್ದಂತೆ ಆರ್ಥಿಕ ಸಂಕಷ್ಟ ಉಲ್ಬಣಗೊಳ್ಳಲಿದೆ. ಸಾರಿಗೆ, ಪ್ರವಾಸೋದ್ಯಮ ಮತ್ತು ಹೋಟೆಲ್‌ಗಳ ಕಾರ್ಯನಿರ್ವಹಣೆ ಸ್ಥಗಿತಗೊಳ್ಳುವುದು ಬೇಡಿಕೆ ಮತ್ತು ಉತ್ಪಾದನೆ ಮೇಲೆ ನೇರ ಪರಿಣಾಮ ಬೀರಲಿದೆ. ಈ ವಲಯಗಳು ಶೇ 5ರಷ್ಟು ಕಾರ್ಯನಿರ್ವಹಿಸದಿದ್ದರೆ ಅದು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಮೇಲೆ ಶೇ 0.9ರಷ್ಟು ವ್ಯತಿರಿಕ್ತ ಪರಿಣಾಮ ಬೀರಲಿದೆ.

ಈ ಮೂರೂ ವಲಯಗಳ ಜತೆಗೆ ಸರಕುಗಳ ದಾಸ್ತಾನು ಮತ್ತು ಸಂವಹನ ವಲಯಗಳ ಕಾರ್ಯನಿರ್ವಹಣೆಯೂ ಇದೇ ಬಗೆಯಲ್ಲಿ ಸ್ಥಗಿತಗೊಂಡರೆ 2021ರ ಹಣಕಾಸು ವರ್ಷದಲ್ಲಿಯೂ ಪ್ರತಿಕೂಲ ಪರಿಣಾಮ ವಿಸ್ತರಣೆಯಾಗಲಿದೆ ಎಂದು ಸಂಶೋಧನಾ ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಸರಕು ದುಬಾರಿ: ಚೀನಾದಿಂದ ಆಮದು ಆಗುತ್ತಿರುವ ಸರಕುಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವುದರಿಂದ ಕಚ್ಚಾ ಸರಕುಗಳ ಬೆಲೆ ಏರಿಕೆಯಾಗಲಿದೆ. ಇದರಿಂದ ಸರಕುಗಳ ಬೆಲೆ ದುಬಾರಿಯಾಗಲಿದೆ. ರಾಸಾಯನಿಕಗಳು, ಎಲೆಕ್ಟ್ರಿಕಲ್‌, ಲೋಹ, ಜವಳಿ ಮತ್ತು ಸಾರಿಗೆ ಬಿಡಿಭಾಗಗಳ ಬೆಲೆ ಶೇ 7ರಿಂದ ಶೇ 8ರಷ್ಟು ತುಟ್ಟಿಯಾಗಲಿದೆ.

ಸರಕು – ಸೇವೆಗಳ ಬೇಡಿಕೆ ಮತ್ತು ಪೂರೈಕೆ ಆಘಾತಗಳು ಬ್ಯಾಂಕಿಂಗ್‌ ಮತ್ತು ವಿಮೆ ಕ್ಷೇತ್ರಗಳ ಮೇಲೂ ಗಂಭೀರ ಸ್ವರೂಪದ ಪರಿಣಾಮ ಬೀರಲಿವೆ. ಈ ಕಾರಣಕ್ಕೆ ಆರ್ಥಿಕ ಸಂಕಷ್ಟಗಳಿಗೆ ವಿತ್ತೀಯ ಮತ್ತು ಹಣಕಾಸಿನ ಜಂಟಿ ಕ್ರಮಗಳು ಉತ್ತಮ ಪರಿಹಾರ ಒದಗಿಸಲಿವೆ. ಸಾಂಕ್ರಾಮಿಕ ಪಿಡುಗನ್ನು ಹೇಗೆ ಎದುರಿಸಬೇಕು ಎನ್ನುವುದಕ್ಕೆ ಯಾವುದೇ ನಿರ್ದಿಷ್ಟ ಮಾನದಂಡಗಳಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರತಿಯೊಂದು ವಲಯಗಳಿಗೆ ನಿರ್ದಿಷ್ಟ ಸ್ವರೂಪದ ವಿತ್ತೀಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ, ನಗದು ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು. ಬಂಡವಾಳ ಮಾರುಕಟ್ಟೆಯ ಸ್ಥಿರತೆ ಕಾಯ್ದುಕೊಳ್ಳಬೇಕು. ಆರ್‌ಬಿಐ ಬಡ್ಡಿ ದರ ಕಡಿತ ಮಾಡಬೇಕು. ಠೇವಣಿಗಳ ಮೇಲಿನ ಬಡ್ಡಿ ಕಡಿತವು ಪ್ರತಿಕೂಲ ಪರಿಣಾಮ ಬೀರದಂತೆ ನಿಗಾವಹಿಸಬೇಕು ಎಂದು ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕ ಹೆಚ್ಚಳದಿಂದ ಬರುವ ₹ 40 ಸಾವಿರ ಕೋಟಿವರೆಗಿನ ಮೊತ್ತವನ್ನು ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡು ಸಂಕಷ್ಟಕ್ಕೆ ಸಿಲುಕುವ ಜನರಿಗೆ ಪರಿಹಾರ ಒದಗಿಸಲು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT