ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಧಾನ್ಯ ಉತ್ಪಾದನೆ ಗುರಿ ನಿಗದಿ

ಹದ ಪ್ರಮಾಣದಲ್ಲಿ ಮುಂಗಾರು ನಿರೀಕ್ಷೆ; 29.83 ಕೋಟಿ ಟನ್‌ ಸಾಧನೆಯ ನಿರೀಕ್ಷೆ
Last Updated 17 ಏಪ್ರಿಲ್ 2020, 0:47 IST
ಅಕ್ಷರ ಗಾತ್ರ

ನವದೆಹಲಿ: 2020–21ರ ಬೆಳೆ ವರ್ಷದಲ್ಲಿ ಕೃಷಿ ಉತ್ಪಾದನೆಯನ್ನು 63.5 ಲಕ್ಷ ಟನ್‌ಗಳಷ್ಟು ಹೆಚ್ಚಿಸುವ ಗುರಿ ಹಾಕಿಕೊಂಡಿರುವ ಕೃಷಿ ಸಚಿವಾಲಯವು, ಮುಂಗಾರು ಮತ್ತು ಹಿಂಗಾರು ಹಂಗಾಮಿನ ಒಟ್ಟಾರೆ ಉತ್ಪಾದನೆಯು ದಾಖಲೆ ‍ಪ್ರಮಾಣದ 29.83 ಕೋಟಿ ಟನ್‌ಗಳಿಗೆ ತಲುಪಲಿದೆ ಎಂದು ಅಂದಾಜಿಸಿದೆ.

ಸಚಿವಾಲಯವು ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿದ್ದ ಎರಡನೇ ಮುಂಗಡ ಅಂದಾಜಿನ ಪ್ರಕಾರ, 2019–20ರ ಬೆಳೆ ವರ್ಷದಲ್ಲಿನ (ಜುಲೈನಿಂದ ಜೂನ್‌) ಕೃಷಿ ಉತ್ಪಾದನೆಯು 29.19 ಕೋಟಿ ಟನ್‌ಗಳಷ್ಟು ಇರುವ ನಿರೀಕ್ಷೆ ಇದೆ.

‘ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ದೇಶದಾದ್ಯಂತ ಸುರಿಯಲಿರುವ ನೈರುತ್ಯ ಮುಂಗಾರು ಮಳೆಯು ಈ ಬಾರಿ ಸಮೃದ್ಧವಾಗಿ ಸುರಿಯಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಇದು ಮಳೆ ಆಧಾರಿತ ಮುಂಗಾರು ಫಸಲಿನ ಉತ್ಪಾದನೆಗೆ ಸಂಬಂಧಿಸಿದ ಶುಭ ಸೂಚನೆಯಾಗಿದೆ’ ಎಂದು ಕೃಷಿ ಕಮಿಷನರ್‌ ಎಸ್‌. ಕೆ. ಮಲ್ಹೋತ್ರಾ ಹೇಳಿದ್ದಾರೆ.

ಮುಂಗಾರು ಬಿತ್ತನೆ ಕುರಿತು ರಾಜ್ಯ ಸರ್ಕಾರಗಳ ಜತೆ ನಡೆದ ರಾಷ್ಟ್ರೀಯ ಮಟ್ಟದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

‘ಕೋವಿಡ್‌–19’ ದಿಗ್ಬಂಧನ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ವಿನಾಯ್ತಿ ನೀಡಲಾಗಿದೆ. ಬಿತ್ತನೆ ಚಟುವಟಿಕೆ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳುವ ಮತ್ತು ನೈರ್ಮಲ್ಯದ ನಿಯಮಗಳನ್ನು ಪಾಲಿಸುವ ಬಗ್ಗೆ ರಾಜ್ಯ ಸರ್ಕಾರಗಳು ಗಮನ ಹರಿಸಬೇಕು ಎಂದು ಅವರು ತಾಕೀತು ಮಾಡಿದ್ದಾರೆ.

ದೇಶದ ಕೆಲ ಭಾಗಗಳಲ್ಲಿ ಈಗಾಗಲೇ ಮುಂಗಾರು ಪೂರ್ವ ಬಿತ್ತನೆ ಕಾರ್ಯ ಆರಂಭಗೊಂಡಿವೆ. ಶೇ 50ರಷ್ಟು ಸಾಗುವಳಿ ಭೂ ಪ್ರದೇಶವು ಮುಂಗಾರು ಮಳೆ ಆಧರಿಸಿದೆ. ಮಳೆಯು ಗ್ರಾಮೀಣ ಆರ್ಥಿಕತೆ ಮತ್ತು ಕೃಷಿ ಕ್ಷೇತ್ರದ ಜೀವನಾಧಾರವಾಗಿದೆ.

ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಭತ್ತ, ಬೇಳೆ, ಎಣ್ಣೆಬೀಜ ಮತ್ತು ವಾಣಿಜ್ಯ ಬೆಳೆಗಳಾದ ಹತ್ತಿ, ಸಕ್ಕರೆ ಬೆಳೆಯಲಾಗುತ್ತದೆ.

ಮಾರ್ಗದರ್ಶಿ ಸೂತ್ರಗಳು

ಕೃಷಿ ಚಟುವಟಿಕೆಗಳ ಸಂದರ್ಭದಲ್ಲಿ ರೈತರುಕಟ್ಟುನಿಟ್ಟಾಗಿ ಪಾಲಿಸಬೇಕಾದ ನಿರ್ದಿಷ್ಟ ನಿಯಮಗಳ ಸಂಬಂಧ ಕೃಷಿ ಸಚಿವಾಲಯವು ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

* ಅಂತರ ಕಾಯ್ದುಕೊಂಡು ಮುಖಗವಸು ಧರಿಸಿ ಬಿತ್ತನೆ

* ಊಟ ಮತ್ತು ವಿಶ್ರಾಂತಿಗಾಗಿ ಗದ್ದೆಯಿಂದ ಹೊರಬಂದಾಗ ಕೈ, ಕಾಲು ಮತ್ತು ಮುಖವನ್ನುಸೋಪಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು

* ಭೂಮಿ ಹದಗೊಳಿಸಲು, ಬಿತ್ತನೆ ಮತ್ತು ರಸಗೊಬ್ಬರ ಸಿಂಪಡನೆಗೆ ಕಾರ್ಮಿಕರ ಬಳಕೆಗೆ ಮಿತಿ ವಿಧಿಸಿ, ಯಂತ್ರೋಪಕರಣ ಬಳಕೆ ಹೆಚ್ಚಿಸಿ

* 1 ರಿಂದ 2 ಮೀಟರ್‌ ಅಂತರ ಕಾಯ್ದುಕೊಳ್ಳಿ

* ಬಳಕೆ ಮುನ್ನ ಕೃಷಿ ಯಂತ್ರೋಪಕರಣ ಸ್ವಚ್ಛಗೊಳಿಸಿ

* ಕಳೆ ತೆಗೆಯುವಾಗ, ಕೀಟನಾಶಕ, ರಸಗೊಬ್ಬರ ಬಳಸುವಾಗ ಸ್ವಚ್ಛತಾ ನಿಯಮ ಪಾಲಿಸಿ

* ಕೀಟನಾಶಕಗಳ ಖಾಲಿ ಪ್ಯಾಕೆಟ್‌ಗಳನ್ನು ಬೆಂಕಿಗೆ ಹಾಕಬೇಕು ಇಲ್ಲವೆ ಮಣ್ಣಿನಲ್ಲಿ ಹೂಳಬೇಕು

* ಬೀಜದ ಪ್ಯಾಕೆಟ್‌ಗಳನ್ನು ಎರಡು ದಿನ ಬಿಸಿಲಲ್ಲಿ ಒಣಗಿಸಿ ಮರು ಬಳಕೆ ಮಾಡಿ

* ದಿನದ ಕೆಲಸ ಮುಗಿದ ನಂತರ ಸ್ನಾನ ಮಾಡಬೇಕು. ಬಟ್ಟೆಗಳನ್ನು ಸೋಪ್‌ನಿಂದ ಸ್ವಚ್ಛಗೊಳಿಸಬೇಕು

* ಬೆಳೆ ಕಟಾವು, ಒಕ್ಕಲು ಮತ್ತು ಧಾನ್ಯಗಳನ್ನು ಚೀಲಕ್ಕೆ ತುಂಬುವಾಗ ಅಂತರ ಕಾಯ್ದುಕೊಳ್ಳಬೇಕು

* ಫಸಲನ್ನು ದಾಸ್ತಾನು ಮಾಡುವ ಮುನ್ನ 48 ಗಂಟೆಗಳ ಕಾಲ ಬಿಸಿಲಲ್ಲಿ ಒಣಗಿಸಬೇಕು

ಅಂಕಿ ಅಂಶ

ಆಹಾರ ಧಾನ್ಯ ಉತ್ಪಾದನೆ ಗುರಿ (ಕೋಟಿ ಟನ್‌ಗಳಲ್ಲಿ)

ಮುಂಗಾರು;14.99

ಹಿಂಗಾರು;14.84

ಒಟ್ಟು; 29.83

***

ಫಸಲು;2019–20ರ ಉತ್ಪಾದನೆ ಅಂದಾಜು;2020–21ರ ಗುರಿ (ಕೋಟಿ ಟನ್‌ಗಳಲ್ಲಿ)

ಭತ್ತ;11.74;11.75

ಗೋಧಿ;10.65;10.65

ಒರಟು ಧಾನ್ಯ;4.52;4.87

ಬೇಳೆ;2.30;2.56

***

(ಕೋಟಿ ಟನ್‌)

ಎಣ್ಣೆಬೀಜ;3.41;3.66

ಸಕ್ಕರೆ;35.38;39.00

***

ಹತ್ತಿ;3.49* ಲಕ್ಷ ಬೇಲ್ಸ್‌*;3.60* ಲಕ್ಷ ಬೇಲ್ಸ್‌

(* ಒಂದು ಬೇಲ್‌ = 170 ಕೆಜಿ)

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT