ಎಫ್‌ಪಿಐ ಹೂಡಿಕೆ ₹ 20,574 ಕೋಟಿ

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಜೂನ್ 1 ರಿಂದ 14ರವರೆಗೆ ಬಂಡವಾಳ ಮಾರುಕಟ್ಟೆಯಲ್ಲಿ ₹ 20,574 ಕೋಟಿ ಹೂಡಿಕೆ ಮಾಡಿದ್ದಾರೆ.
ಹೂಡಿಕೆದಾರರು ₹ 22,840 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರೆ, ₹ 2,266 ಕೋಟಿ ಮೌಲ್ಯದ ಸಾಲಪತ್ರಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ ಒಟ್ಟಾರೆ ಹೂಡಿಕೆ ₹ 20,574 ಕೋಟಿಗಳಷ್ಟಾಗಿದೆ.
‘ಬಹುತೇಕ ಎಲ್ಲಾ ದೇಶಗಳು ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಮಾರುಕಟ್ಟೆಯಲ್ಲಿ ನಗದು ಕೊರತೆ ಎದುರಾಗದಂತೆ ನೋಡಿಕೊಳ್ಳುತ್ತಿವೆ. ಇದರಿಂದಾಗಿಯೇ ಭಾರತದಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಹೂಡಿಕೆ ಹೆಚ್ಚಾಗುತ್ತಿದೆ’ ಎಂದು ಗ್ರೋವ್ ಕಂಪನಿಯ ಸಹಸ್ಥಾಪಕ ಹರ್ಷ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.
‘ಮೊದಲ ವಾರಕ್ಕೆ ಹೋಲಿಸಿದರೆ ಎರಡನೇ ವಾರದಲ್ಲಿ ಎಫ್‌ಪಿಐ ಹೂಡಿಕೆ ಕಡಿಮೆಯಾಗಿದೆ. ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಹೂಡಿಕೆದಾರರು ಹಿಂದೆ ಸರಿಯುತ್ತಿದ್ದಾರೆ’ ಎಂದು ಮಾರ್ನಿಂಗ್‌ಸ್ಟಾರ್ ಇಂಡಿಯಾದ ವ್ಯವಸ್ಥಾಪಕ ಸಂಶೋಧಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.
ಬಹುತೇಕ ಎಲ್ಲಾ ಆರ್ಥಿಕತೆಗಳೂ ಹಿಂಜರಿತದ ಭೀತಿಯಲ್ಲಿವೆ. ಜತೆಗೆ ಅಮೆರಿಕ–ಚೀನಾ ಬಿಕ್ಕಟ್ಟು ಸಹ ಭಾರತದ ದೃಷ್ಟಿಯಿಂದ ಉತ್ತಮ ಸೂಚನೆಯಲ್ಲ ಎಂದೂ ಹೇಳಿದ್ದಾರೆ.
‘ಅಲ್ಪಾವಧಿ ಹೂಡಿಕೆ ಅವಕಾಶಗಳಷ್ಟೇ ಇದ್ದರೆ ಸಾಲದು. ಷೇರುಪೇಟೆಯಲ್ಲಿನ ಹೂಡಿಕೆ ಸ್ಥಿರವಾಗುವಂತೆ ಮಾಡಬೇಕು. ಕೋವಿಡ್ ಪರಿಸ್ಥಿತಿ ಉಲ್ಬಣಿಸಿದರೆ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಮರಳುವ ಸಾಧ್ಯತೆಯೇ ಹೆಚ್ಚಿದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬಂಡವಾಳದ ಹೊರ ಹರಿವು
ಮಾರ್ಚ್; ₹1.1 ಲಕ್ಷ ಕೋಟಿ
ಏಪ್ರಿಲ್; ₹ 15,403 ಕೋಟಿ
ಮೇ; ₹ 7,366 ಕೋಟಿ
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.