ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾ ತೈಲ ದರ ಹೆಚ್ಚಳ ಪರಿಣಾಮ: ಇನ್ನಷ್ಟು ಕೈಸುಟ್ಟೀತು ತೈಲ ಬೆಲೆ

Last Updated 7 ಜುಲೈ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು ಇನ್ನಷ್ಟು ಹೆಚ್ಚಳವಾದರೆ, ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಲೀಟರಿಗೆ ಗರಿಷ್ಠ ₹ 15ರವರೆಗೆ ಏರಿಕೆ ಕಾಣುವ ಸಾಧ್ಯತೆ ಇದೆ!

ಬ್ರೆಂಟ್‌ ಕಚ್ಚಾತೈಲದ ದರವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗ ಪ್ರತಿ ಬ್ಯಾರಲ್‌ಗೆ 75.75 ಡಾಲರ್ ಇದೆ. ಇದು ಬ್ಯಾರಲ್‌ಗೆ 80 ಡಾಲರ್‌ ಅಥವಾ 100 ಡಾಲರ್‌ಗೆ ಏರಿಕೆ ಆಗಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ‘ಕಚ್ಚಾ ತೈಲದ ದರವು ಈ ಮಟ್ಟಕ್ಕೆ ಏರಿದರೆ, ರಾಜ್ಯದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್, ಡೀಸೆಲ್ ಬೆಲೆಯು ₹ 10ರಿಂದ ₹ 15ರವರೆಗೆ ಏರಿಕೆ ಆಗಬಹುದು’ ಎಂದು ಕರ್ನಾಟಕ ರಾಜ್ಯ ಪೆಟ್ರೋಲಿಯಂ ವಿತರಕರ ಒಕ್ಕೂಟದ ಅಧ್ಯಕ್ಷ ಎಚ್‌.ಎಸ್‌. ಮಂಜಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಿಂದ ಸರಕು ಸಾಗಣೆ ವೆಚ್ಚ ಹೆಚ್ಚಾಗುತ್ತಿದೆ. ಕೋವಿಡ್‌ನಿಂದಾಗಿ ಈಗಾಗಲೇ ಆದಾಯಕ್ಕೆ ಕತ್ತರಿ ಬಿದ್ದಿದೆ. ಹೀಗಿರುವಾಗ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಇನ್ನಷ್ಟು ಹೆಚ್ಚಾದರೆ ಮಾರಾಟ ಮತ್ತಷ್ಟು ಕಡಿಮೆ ಆಗಲಿದ್ದು, ಆರ್ಥಿಕ ಬೆಳವಣಿಗೆಗೆ ಹೊಡೆತ ಬೀಳಲಿದೆ. ಇಂಧನ ದರ ತಗ್ಗಿಸುವ ನಿರ್ಧಾರವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೈಯಲ್ಲೇ ಇದ್ದು, ಜನರ ಮೇಲಿನ ಹೊರೆ ತಗ್ಗಿಸುವ ಮನಸ್ಸನ್ನು ಅವು ಮಾಡಬೇಕಿದೆ’ ಎಂದು ಬೆಂಗಳೂರು ಎಪಿಎಂಸಿ ವರ್ತಕರ ಒಕ್ಕೂಟದ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಹೇಳಿದರು.

ಬೆಲೆ ಏರಿಕೆ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಬುಧವಾರವೂ ದೇಶದಾದ್ಯಂತ ಇಂಧನ ದರ ಹೆಚ್ಚಿಸಿವೆ. ಇದರಿಂದಾಗಿ ದೆಹಲಿಯಲ್ಲಿ ಪೆಟ್ರೋಲ್‌ ದರವು ಲೀಟರಿಗೆ ₹ 100ರ ಗಡಿ ದಾಟಿದ್ದು, ₹ 100.21ಕ್ಕೆ ತಲುಪಿದೆ. ಎಚ್‌ಪಿಸಿಎಲ್‌ ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ, ಬುಧವಾರ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 103.62ರಷ್ಟು ಮತ್ತು ಡೀಸೆಲ್‌ ದರ ಲೀಟರಿಗೆ ₹ 94.95ರಷ್ಟಾಗಿದೆ.

‘ಶೇ 8ಕ್ಕೆ ಹಣದುಬ್ಬರ’
‘ಕಚ್ಚಾತೈಲ ದರ ಏರಿಕೆಯಿಂದಾಗಿ ಪೆಟ್ರೋಲ್, ಡೀಸೆಲ್‌ ದರವೂ ಏರಿದರೆ, ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ 8ರವರೆಗೂ ಏರಿಕೆ ಆಗುವ ಸಾಧ್ಯತೆ ಇದೆ’ ಎಂದು ಬೆಂಗಳೂರಿನ ಐಸೆಕ್‌ನಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕ ಪ್ರೊ. ಕೃಷ್ಣರಾಜ್ ಹೇಳಿದರು.

‘ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸುವುದು, ತೆರಿಗೆಯನ್ನು ಹೆಚ್ಚು ಹೊರೆ ಆಗದಂತೆ ನಿಗದಿ ಮಾಡುವುದು ಹಾಗೂ ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಇರುವಂತೆ ನೋಡಿಕೊಳ್ಳುವ ವಿಷಯದಲ್ಲಿ ಸರ್ಕಾರಗಳು ಎಡವಿವೆ. ಹೀಗಾಗಿ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT