ಭಾನುವಾರ, ಆಗಸ್ಟ್ 1, 2021
23 °C
‘ಫಿಕ್ಕಿ’ಯ ಆರ್ಥಿಕ ಮುನ್ನೋಟದ ಸಮೀಕ್ಷೆ

ನಕಾರಾತ್ಮಕ ಆರ್ಥಿಕ ವೃದ್ಧಿ ದರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶಿ ಆರ್ಥಿಕ ವೃದ್ಧಿ ದರವು ಪ್ರಸಕ್ತ (2020–21) ಹಣಕಾಸು ವರ್ಷದಲ್ಲಿ ನಕಾರಾತ್ಮಕ ಮಟ್ಟವಾದ  ಶೇ (–) 4.5ರಷ್ಟು ಇರಲಿದೆ ಎಂದು  ಭಾರತೀಯ ವಾಣಿಜ್ಯೋದ್ಯಮ ಸಂಘಟನೆಗಳ ಒಕ್ಕೂಟದ (ಫಿಕ್ಕಿ) ಆರ್ಥಿಕ ಮುನ್ನೋಟದ ಸಮೀಕ್ಷೆಯು ಅಂದಾಜಿಸಿದೆ.

ಕೋವಿಡ್‌ ಪಿಡುಗು ವಿಶ್ವದಾದ್ಯಂತ ಆರ್ಥಿಕ ಮತ್ತು ಆರೋಗ್ಯ ಬಿಕ್ಕಟ್ಟು ಸೃಷ್ಟಿಸಿರುವುದರಿಂದ ಜನವರಿಯಲ್ಲಿ ಅಂದಾಜಿಸಿದ್ದ ಶೇ 5.5ರಷ್ಟು ವೃದ್ಧಿ ದರವನ್ನು ಈಗ ಕೆಳಮುಖವಾಗಿ ಪರಿಷ್ಕರಿಸಲಾಗಿದೆ ಎಂದು ’ಫಿಕ್ಕಿ’ ತಿಳಿಸಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಕೂಡ ಜಿಡಿಪಿಯು ನಕಾರಾತ್ಮಕ ಮಟ್ಟದಲ್ಲಿ ಇರಲಿದೆ ಎಂದು ಮೇನಲ್ಲಿ ಹೇಳಿತ್ತು. ಪ್ರಗತಿಯು ಈ ಹಿಂದಿನ ಅಂದಾಜು ಅಥವಾ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಇರುವುದನ್ನು ನಕಾರಾತ್ಮಕ ಎಂದು ಪರಿಗಣಿಸಲಾಗುತ್ತಿದೆ. ಈ ಸಮೀಕ್ಷೆಯಲ್ಲಿ ಜೂನ್‌ನಲ್ಲಿ ನಡೆಸಲಾಗಿದ್ದು, ಕೈಗಾರಿಕೆ, ಬ್ಯಾಂಕಿಂಗ್‌ ಮತ್ತು ಹಣಕಾಸು ಸೇವಾ ವಲಯದ ಪ್ರಮುಖರ ಅಭಿಪ್ರಾಯ ಪಡೆಯಲಾಗಿದೆ.

ಈ ವೃದ್ಧಿ ದರದ ಅಂದಾಜಿನಲ್ಲಿ ಗರಿಷ್ಠ ನಕಾರಾತ್ಮಕ ಪ್ರಗತಿಯು ಶೇ (–) 6.4 ಮತ್ತು ಕನಿಷ್ಠ ಏರಿಕೆಯು ಶೇ 1.5ರಷ್ಟು ಇರುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಕೃಷಿ ಆಶಾದಾಯಕ: ಸದ್ಯಕ್ಕೆ ಕೃಷಿ ವಲಯದ ಪ್ರಗತಿ ಮಾತ್ರ ಆಶಾದಾಯಕವಾಗಿದೆ.  ಮುಂಗಾರು ಮಳೆ ಉತ್ತಮ ಮುನ್ನಡೆ ಸಾಧಿಸಿದೆ. ಜಲಾಶಯಗಳು ಭರ್ತಿಯಾಗುತ್ತಿವೆ. ಹೀಗಾಗಿ ಕೃಷಿ ಮತ್ತು ಪೂರಕ ಚಟುವಟಿಕೆಗಳು ಶೇ 2.7ರಷ್ಟು ಪ್ರಗತಿ ಸಾಧಿಸಲಿವೆ ಎಂದು ಅಂದಾಜಿಸಲಾಗಿದೆ.

ಕೃಷಿ ಕ್ಷೇತ್ರದಲ್ಲಿನ ಸುಸ್ಥಿರ ಪ್ರಗತಿ ಮತ್ತು ಕೋವಿಡ್‌ ಪ್ರಕರಣಗಳು ತಹಬಂದಿಗೆ ಬರುವುದು  ಸರಕು ಮತ್ತು ಸೇವೆಗಳ ಬೇಡಿಕೆ ಪ್ರಮಾಣ ನಿರ್ಧರಿಸಲಿವೆ. ಕೈಗಾರಿಕೆ ಮತ್ತು ಸೇವಾ ವಲಯಗಳು ಕ್ರಮವಾಗಿ ಶೇ 11.4 ಮತ್ತು ಶೇ 2.8ರಷ್ಟು ಕುಸಿತ ದಾಖಲಿಸಲಿವೆ.

ಸರಕು ಸೇವೆಗಳ ಬೇಡಿಕೆ, ಬಂಡವಾಳ ಹೂಡಿಕೆ  ಮತ್ತು ಕೋವಿಡ್‌ ಪಿಡುಗು ಹೆಚ್ಚಳವು ಆರ್ಥಿಕ ಚೇತರಿಕೆಯನ್ನು ವಿಳಂಬ ಮಾಡಲಿವೆ.

ಗೃಹೋಪಯೋಗಿ ಸಲಕರಣೆ, ತ್ವರಿತವಾಗಿ ಬಿಕರಿಯಾಗುವ ಗ್ರಾಹಕರ ಉತ್ಪನ್ನ (ಎಫ್‌ಎಂಸಿಜಿ) ತಯಾರಿಕಾ ಕಂಪನಿಗಳು  ಈಗಲೂ ತಮ್ಮ ಪೂರ್ಣ ಪ್ರಮಾಣದ ತಯಾರಿಕಾ ಸಾಮರ್ಥ್ಯ ಬಳಸಿಕೊಳ್ಳುತ್ತಿಲ್ಲ. ಕಾರ್ಮಿಕರ ಅಲಭ್ಯತೆ ಮತ್ತು ಬೇಡಿಕೆಯಲ್ಲಿ ಏರಿಕೆ ಕಾಣದಿರುವುದು ಕಂಪನಿಗಳ ಪಾಲಿಗೆ ಪ್ರಮುಖ ಸವಾಲಾಗಿ ಪರಿಣಮಿಸಿದೆ. ಆದಾಯ ನಷ್ಟ ಮತ್ತು ಉದ್ಯೋಗ ಕುರಿತ ಅನಿಶ್ಚಿತತೆಯು ಗ್ರಾಹಕರ ಬಳಕೆ ಪ್ರವೃತ್ತಿಯಲ್ಲಿ ಗಮನಾರ್ಹ ಬದಲಾವಣೆ ತಂದಿದೆ.

ಬೇಡಿಕೆ ಹೆಚ್ಚಿಸುವ ಉತ್ತೇಜನಾ ಕೊಡುಗೆಗಳ ಅಭಾವ, ಪಿಡುಗಿನ ಎರಡನೆ ಅಲೆ ಸಾಧ್ಯತೆ, ಮುಂದುವರೆದಿರುವ ಅಂತರ ಕಾಪಾಡಿಕೊಳ್ಳುವಿಕೆ ಮತ್ತು ಸೋಂಕಿತ ಲಕ್ಷಣ ಹೊಂದಿದವರನ್ನು ಪ್ರತ್ಯೇಕವಾಗಿ ಇರಿಸುವ ಕ್ರಮಗಳು ಆರ್ಥಿಕ ಬೆಳವಣಿಗೆಗೆ ಪ್ರಮುಖ ಅಡ್ಡಿಗಳಾಗಿವೆ.

 ಬೇಡಿಕೆ ಮತ್ತು ಹೂಡಿಕೆ ಮುನ್ನೋಟವು ನಿರಾಶಾದಾಯಕವಾಗಿರುವಾಗ, ಸರ್ಕಾರಿ ವೆಚ್ಚ ಹೆಚ್ಚಳವೊಂದೇ ಆರ್ಥಿಕತೆ ಪುನಶ್ಚೇತನಕ್ಕೆ ನೆರವಾಗಲಿದೆ. ದ್ವಿತೀಯ ತ್ರೈಮಾಸಿಕದ ನಂತರ ಬೆಳವಣಿಗೆಯು ಅತ್ಯಂತ ಕನಿಷ್ಠ ಮಟ್ಟ ತಲುಪಿ ನಂತರ ಸುಧಾರಣೆ ಕಾಣಲಿದೆ.

 ಕೇಂದ್ರ ಸರ್ಕಾರವು ಇನ್ನಷ್ಟು ಆಕ್ರಮಣಕಾರಿ ಸ್ವರೂಪದಲ್ಲಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇದೆ. ಬೇಡಿಕೆ ಹೆಚ್ಚಿಸುವ ಕ್ರಮಗಳು ಸದ್ಯದ ತುರ್ತು ಅಗತ್ಯಗಳಾಗಿವೆ ಎಂದು ಬಹುತೇಕ ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು