ಅಮೆಜಾನ್, ಟ್ವಿಟರ್ ಬಳಿಕ ಇದೀಗ ಗೂಗಲ್ನಲ್ಲೂ ನೌಕರಿ ಕಡಿತ: 10,000 ಮಂದಿ ವಜಾ?

ನವದೆಹಲಿ: ಅಮೆಜಾನ್, ಟ್ವಿಟರ್, ಸ್ನಾಪ್ಚಾಟ್ ಮುಂತಾದ ಟೆಕ್ ದೈತ್ಯ ಕಂಪನಿಗಳು ಸಾವಿರಾರು ನೌಕರರನ್ನು ಕೆಲಸದಿಂದ ಕಿತ್ತು ಹಾಕಿದ ಬೆನ್ನಲ್ಲೇ, ಇದೀಗ ಗೂಗಲ್ನ ಮಾತೃ ಕಂಪನಿ ಆಲ್ಫಾಬೆಟ್ ಕೂಡ 10,000 ಮಂದಿ ಕೆಲಸಗಾರರನ್ನು ತೆಗೆದು ಹಾಕಲು ಮುಂದಾಗಿದೆ.
ಈ ಬಗ್ಗೆ ಸುದ್ದಿಸಂಸ್ಥೆ ‘ಎನ್ಡಿಟಿವಿ‘ ವರದಿ ಮಾಡಿದೆ.
ಅಲ್ಫಾಬೆಟ್ ತನ್ನ ಒಟ್ಟು ನೌಕರರ ಸಂಖ್ಯೆಯನ್ನು ಶೇ 6ರಷ್ಟು ಇಳಿಕೆ ಮಾಡಲು ಮುಂದಾಗಿದೆ ಎಂದು ವರದಿ ತಿಳಿಸಿದೆ. ಶೇ 6 ಅಂದರೆ 10,000 ಮಂದಿಗೆ ಸಮ.
ಇದನ್ನೂ ಓದಿ: ಐಟಿ ಕಂಪನಿಗಳ ಸಾಮೂಹಿಕ ಉದ್ಯೋಗ ಕಡಿತಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ
ನಿರೀಕ್ಷೆಗಿಂತ ಕಡಿಮೆ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಗುರುತಿಸಿ ಅವರನ್ನು ಕೆಲಸದಿಂದ ಕಿತ್ತು ಹಾಕಲು ಆಲ್ಫಾಬೆಟ್ ಮುಂದಾಗಿದೆ.
ಕಂಪನಿಯ ‘ಶ್ರೇಯಾಂಕ ಮತ್ತು ಕಾರ್ಯಕ್ಷಮತೆ ಸುಧಾರಣೆ ಯೋಜನೆ’ಯಡಿ ನೌಕರರ ಮೌಲ್ಯಮಾಪನ ಮಾಡಬೇಕು ಎಂದು ಮ್ಯಾನೇಜರ್ಗಳಿಗೆ ಕಂಪನಿ ಸೂಚನೆ ನೀಡಿದೆ. 2023ರ ಜನವರಿ ಆರಂಭದಲ್ಲಿ ನೌಕರರ ವಜಾ ಪ್ರಕ್ರಿಯೆ ಆರಂಭವಾಗಲಿದೆ.
‘ನೌಕರರಿಗೆ ಬೋನಸ್ ಪಾವತಿ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಮ್ಯಾನೇಜರ್ಗಳ ವಿವೇಚನೆಗೆ ಬಿಡಲಾಗಿದೆ. ಸಿಲಿಕಾನ್ ವ್ಯಾಲಿಯ ಹಲವು ಕಂಪನಿಗಳು ನೌಕರರನ್ನು ವಜಾ ಮಾಡುತ್ತಿವೆ. ಆದರೆ ಗೂಗಲ್, ನೌಕರರ ವಜಾ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ನೌಕರರ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಹೊರಗಿನಿಂದ ಉಂಟಾಗುತ್ತಿರುವ ಒತ್ತಡದಿಂದಾಗಿ, ನೌಕರರನ್ನು ವಜಾ ಮಾಡುವ ಪ್ರಕ್ರಿಯೆಗೆ ಮುಂದಾಗಿದೆ‘ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ:Amazon layoffs | ಉದ್ಯೋಗ ಕಡಿತ ಮುಂದಿನ ವರ್ಷದವರೆಗೂ ಮುಂದುವರಿಯಲಿದೆ: ಅಮೆಜಾನ್
ಈ ಬಗ್ಗೆ ಮಾಹಿತಿ ಬಯಸಿ ಗೂಗಲ್ಗೆ ಕಳುಹಿಸಿದ ಇಮೇಲ್ಗೆ ಈವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಎನ್ಡಿಟಿವಿ ಹೇಳಿದೆ.
ಇತ್ತೀಚೆಗಷ್ಟೇ ಟ್ವಿಟರ್ 4000 ನೌಕರರನ್ನುಕೆಲಸದಿಂದ ವಜಾ ಮಾಡಿತ್ತು. ಅಮೇಜಾನ್ 10,000 ಮಂದಿಯನ್ನು ಕೆಲಸದಿಂದ ವಜಾ ಮಾಡುವ ಪ್ರಕ್ರಿಯೆ ಆರಂಭಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.