ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ, ಮುಂಬೈನಲ್ಲಿ ಈರುಳ್ಳಿ ದರ ಇಳಿಕೆ: ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ

Published : 14 ಸೆಪ್ಟೆಂಬರ್ 2024, 14:45 IST
Last Updated : 14 ಸೆಪ್ಟೆಂಬರ್ 2024, 14:45 IST
ಫಾಲೋ ಮಾಡಿ
Comments

ನವದೆಹಲಿ: ರಿಯಾಯಿತಿ ದರದಡಿ ಈರುಳ್ಳಿ ಮಾರಾಟಕ್ಕೆ ಚಾಲನೆ ನೀಡಿರುವುದರಿಂದ ದೇಶದ ಪ್ರಮುಖ ನಗರಗಳ ವ್ಯಾಪ್ತಿಯ ಚಿಲ್ಲರೆ ಮಾರುಕಟ್ಟೆಯಲ್ಲಿ ಧಾರಣೆ ಇಳಿಕೆಯಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಶನಿವಾರ ತಿಳಿಸಿದೆ.

ಕೇಂದ್ರ ಸರ್ಕಾರವು ಸೆಪ್ಟೆಂಬರ್‌ 5ರಂದು ದೆಹಲಿ ಮತ್ತು ಮುಂಬೈನಲ್ಲಿ ಪ್ರತಿ ಕೆ.ಜಿಗೆ ₹35 ದರದಲ್ಲಿ ಸಂಚಾರ ವಾಹನಗಳು, ಎನ್‌ಸಿಸಿಎಫ್‌ ಮತ್ತು ನಾಫೆಡ್‌ ಮೂಲಕ ಮಾರಾಟಕ್ಕೆ ಚಾಲನೆ ನೀಡಿತ್ತು. ಎರಡನೇ ಹಂತದಲ್ಲಿ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಮಾರಾಟ ಆರಂಭಿಸುವುದಾಗಿ ಹೇಳಿದೆ.

ಸದ್ಯ ದೆಹಲಿಯಲ್ಲಿ ಪ್ರತಿ ಕೆ.ಜಿ ದರವು ₹60ರಿಂದ ₹55ಕ್ಕೆ ಇಳಿಕೆಯಾಗಿದೆ. ಮುಂಬೈನಲ್ಲಿ ₹61ರಿಂದ ₹56ಕ್ಕೆ ಹಾಗೂ ಚೆನ್ನೈನಲ್ಲಿ ₹65ರಿಂದ 58ಕ್ಕೆ ತಗ್ಗಿದೆ ಎಂದು ವಿವರಿಸಿದೆ.

ಬೇಡಿಕೆಗೆ ಅನುಗುಣವಾಗಿ ರಿಯಾಯಿತಿ ದರದಡಿ ಈರುಳ್ಳಿ ಮಾರಾಟ ಹೆಚ್ಚಳಕ್ಕೆ ಕೇಂದ್ರ ನಿರ್ಧರಿಸಿದೆ. ಇ–ಕಾಮರ್ಸ್ ವೇದಿಕೆಗಳು, ಕೇಂದ್ರೀಯ ಭಂಡಾರ ಮಳಿಗೆಗಳು ಮತ್ತು ಮದರ್‌ ಡೈರಿಯ ಸಫಲ್‌ ಮಳಿಗೆಗಳ ಮೂಲಕವೂ ಮಾರಾಟಕ್ಕೆ ಸಿದ್ಧತೆ ನಡೆಸಿದೆ. 

ಈರುಳ್ಳಿ ಕಟಾವು ಮಾಡಿದ ಬಳಿಕ ಸಕಾಲದಲ್ಲಿ ಸಂಸ್ಕರಣೆ ಮಾಡದಿದ್ದರೆ ಬಹುಬೇಗ ಹಾಳಾಗುತ್ತದೆ. ಹಾಗಾಗಿ, ಸಂಸ್ಕರಣಾ ಸ್ಥಳಗಳಿಗೆ ಸಾಗಿಸಲು ಅನುವಾಗುವಂತೆ ರಸ್ತೆ ಹಾಗೂ ರೈಲು ಸಾಗಣೆಯನ್ನು ಬಲಪಡಿಸಲಾಗಿದೆ. ಮಾರುಕಟ್ಟೆಯಲ್ಲಿನ ಬೆಲೆ ಮತ್ತು ಬೇಡಿಕೆಗೆ ಅನುಗುಣವಾಗಿ ಈರುಳ್ಳಿ ಪೂರೈಸಲು ರಾಜ್ಯ ಸರ್ಕಾರಗಳ ಜೊತೆಗೆ ನಿರಂತರವಾಗಿ ಸಂಪರ್ಕ ಹೊಂದಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

‘ಸದ್ಯ 4.7 ಲಕ್ಷ ಟನ್‌ನಷ್ಟು ಈರುಳ್ಳಿಯ ಕಾಪು ದಾಸ್ತಾನಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಮುಂಗಾರು ಅವಧಿಯಲ್ಲಿ ಈರುಳ್ಳಿ ಬಿತ್ತನೆ ಪ್ರದೇಶದಲ್ಲಿ ಏರಿಕೆಯಾಗಿದೆ. ಮುಂಬರುವ ತಿಂಗಳುಗಳಲ್ಲೂ ಬೆಲೆ ನಿಯಂತ್ರಣದಲ್ಲಿ ಇರಲಿದೆ’ ಎಂದು ಹೇಳಿದೆ.

ರೈತರ ಬಳಿ ಸರಕು ಖಾಲಿ:

ಕನಿಷ್ಠ ರಫ್ತು ದರ ರದ್ದು ಹಾಗೂ ರಫ್ತು ಸುಂಕವನ್ನು ಅರ್ಧದಷ್ಟು ಇಳಿಕೆ ಮಾಡಿರುವುದರಿಂದ ದೇಶದ ಅತಿದೊಡ್ಡ ಈರುಳ್ಳಿ ಸಗಟು ಮಾರುಕಟ್ಟೆಯಾದ ಲಾಸನ್‌ಗಾಂವ್‌ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶನಿವಾರ ಬೆಲೆ ಏರಿಕೆಯಾಗಿದೆ. ಪ್ರತಿ ಕ್ವಿಂಟಲ್‌ಗೆ ಸರಾಸರಿ ₹433 ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿ ಕ್ವಿಂಟಲ್‌ಗೆ ₹3700ರಿಂದ ₹4951 ಧಾರಣೆ ಇದೆ. ಸರಾಸರಿ ಬೆಲೆ ₹4700 ಆಗಿದೆ. ‘ಎಂಇಪಿ ರದ್ದುಪಡಿರುವುದು ಒಳ್ಳೆಯ ನಿರ್ಧಾರ. ರಫ್ತಿಗೆ ನಿರ್ಬಂಧ ಹೇರಿದರೆ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ. ಈಗ ಎಂಇಪಿ ರದ್ದುಪಡಿಸಿದರೂ ರೈತರ ಬಳಿ ಈರುಳ್ಳಿ ಖಾಲಿಯಾಗಿದೆ’ ಎಂದು ಎಪಿಎಂಸಿ ಅಧ್ಯಕ್ಷ ಬಾಳಸಾಹೇಬ್‌ ಕ್ಷೀರಸಾಗರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT