ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಸಂಗ್ರಹ ₹ 1.46 ಲಕ್ಷ ಕೋಟಿ: ಈ ಬಾರಿ ಶೇಕಡ 11ರಷ್ಟು ಹೆಚ್ಚಳ

₹ 1.50 ಲಕ್ಷ ಕೋಟಿಯಲ್ಲಿ ಸ್ಥಿರವಾಗುತ್ತಿರುವ ವರಮಾನ ಸಂಗ್ರಹ
Last Updated 1 ಡಿಸೆಂಬರ್ 2022, 20:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ನವೆಂಬರ್‌ನಲ್ಲಿ ₹ 1.46 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ಅಕ್ಟೋಬರ್‌ನಲ್ಲಿ ಆಗಿದ್ದ ವರಮಾನ ಸಂಗ್ರಹಕ್ಕೆ ಹೋಲಿಸಿದರೆ ಇದು ಶೇ 3.9ರಷ್ಟು ಕಡಿಮೆ.

ಆದರೆ, ಹಿಂದಿನ ವರ್ಷದ ನವೆಂಬರ್ ತಿಂಗಳ ಜಿಎಸ್‌ಟಿ ಸಂಗ್ರಹಕ್ಕೆ ಹೋಲಿಸಿದರೆ ಈ ಬಾರಿ ಶೇಕಡ 11ರಷ್ಟು ಹೆಚ್ಚಳ ಕಂಡುಬಂದಿದೆ.

ಹಿಂದಿನ ವರ್ಷದ ನವೆಂಬರ್‌ಗೆ ಹೋಲಿಸಿದರೆ, ಈ ವರ್ಷದ ನವೆಂಬರ್‌ನಲ್ಲಿ ಗ್ರಾಹಕರು ಉತ್ಪನ್ನಗಳನ್ನು ಹೆಚ್ಚು ಖರೀದಿಸಿದ್ದಾರೆ ಮತ್ತು ಸೇವೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಂಡಿದ್ದಾರೆ ಎಂಬುದನ್ನು ಜಿಎಸ್‌ಟಿ ಸಂಗ್ರಹಕ್ಕೆ ಸಂಬಂಧಿಸಿದ ಅಂಕಿ–ಅಂಶಗಳು ಹೇಳುತ್ತಿವೆ. ನವೆಂಬರ್‌ ತಿಂಗಳನ್ನೂ ಪರಿಗಣಿಸಿದರೆ ಜಿಎಸ್‌ಟಿ ವರಮಾನ ಸಂಗ್ರಹವು ಸತತ ಒಂಬತ್ತುತಿಂಗಳುಗಳಿಂದ ₹ 1.40 ಲಕ್ಷ ಕೋಟಿ ಗಿಂತ ಹೆಚ್ಚಿನ ಮಟ್ಟದಲ್ಲಿ ಇದ್ದಂತಾಗಿದೆ.

ಈ ವರ್ಷದ ಅಕ್ಟೋಬರ್‌ನಲ್ಲಿ ಜಿಎಸ್‌ಟಿ ವರಮಾನ ಸಂಗ್ರಹವು ₹ 1.52 ಲಕ್ಷ ಕೋಟಿ ಆಗಿತ್ತು. ಜಿಎಸ್‌ಟಿ ವರಮಾನ ಸಂಗ್ರಹ ಪ್ರಮಾಣವು ₹ 1.50 ಲಕ್ಷ ಕೋಟಿಯ ಆಸುಪಾಸಿನಲ್ಲಿ ಸ್ಥಿರವಾಗುತ್ತಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮದುವೆಯ ಋತು ಶುರುವಾಗಿರುವುದು ಹಾಗೂ ನವೆಂಬರ್‌ ತಿಂಗಳ ಹಬ್ಬಗಳು ಜಿಎಸ್‌ಟಿ ಸಂಗ್ರಹ ಹೆಚ್ಚಲು ನೆರವಾಗಿವೆ ಎಂದು ಎನ್‌.ಎ. ಶಾ ಅಸೋಸಿಯೇಟ್ಸ್‌ನ ಪಾಲುದಾರ ಪರಾಗ್ ಮೆಹ್ತಾ ಹೇಳಿದ್ದಾರೆ. ‘ರಿಯಲ್ ಎಸ್ಟೇಟ್ ವಲಯದ ಉದ್ಯಮಗಳಲ್ಲಿ ಹೆಚ್ಚಿನ ಮಾರಾಟ ಕಂಡುಬಂದಿದೆ. ಅಲ್ಲದೆ, ವಾಹನ ಮಾರುಕಟ್ಟೆಯಲ್ಲಿ ಕೂಡ ಏರಿಕೆ ದಾಖಲಾಗಿದೆ. ಗ್ರಾಹಕರು ಹೆಚ್ಚು ಹಣ ಖರ್ಚು ಮಾಡಿದ್ದಾರೆ. ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ವಂಚಕರ ವಿರುದ್ಧ ಕ್ರಮ ಜರುಗಿಸುತ್ತಿದ್ದಾರೆ’ ಎಂದು ಮೆಹ್ತಾ ವಿವರಿಸಿದ್ದಾರೆ.

ನವೆಂಬರ್‌ನಲ್ಲಿ ಸರಕುಗಳ ಆಮದಿನಿಂದ ಬರುವ ವರಮಾನದಲ್ಲಿ ಶೇ 20ರಷ್ಟು ಹೆಚ್ಚಳ ಆಗಿದೆ.

ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ತಯಾರಿಕಾ ಚಟುವಟಿಕೆ

ದೇಶದಲ್ಲಿ ತಯಾರಿಕಾ ವಲಯದ ಚಟುವಟಿಕೆಗಳು ನವೆಂಬರ್‌ನಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿವೆ. ರಫ್ತು ಹೆಚ್ಚಾಗಿದ್ದು ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆಯು ಸ್ಥಿರವಾಗಿ ಇದ್ದಿದ್ದು ಈ ಏರಿಕೆಗೆ ಕಾರಣ.

ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಮ್ಯಾನು ಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ) ನವೆಂಬರ್‌ನಲ್ಲಿ 55.7ಕ್ಕೆ ತಲುಪಿದೆ. ಇದು ಅಕ್ಟೋಬರ್‌ನಲ್ಲಿ 55.3 ಆಗಿತ್ತು.

ತಯಾರಿಕಾ ವಲಯದ ಒಟ್ಟಾರೆ ಕಾರ್ಯಾಚರಣೆ ಪರಿಸ್ಥಿತಿಯು ಸತತ 17ನೆಯ ತಿಂಗಳಿನಲ್ಲಿಯೂ
ಸುಧಾರಿಸಿದೆ ಎಂಬುದನ್ನು ನವೆಂಬರ್‌ ತಿಂಗಳ ಪಿಎಂಐ ಅಂಕಿ–ಅಂಶ ಹೇಳುತ್ತಿದೆ. ಪಿಎಂಐ ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿದ್ದರೆ ಅದನ್ನು ಬೆಳವಣಿಗೆ ಎಂದುಪರಿಗಣಿಸಲಾಗುತ್ತದೆ.

ರಾಜ್ಯದಲ್ಲೂ ಏರಿಕೆ

ಬೆಂಗಳೂರು: ರಾಜ್ಯದ ಜಿಎಸ್‌ಟಿ ವರಮಾನ ಸಂಗ್ರಹವು ನವೆಂಬರ್‌ನಲ್ಲಿ ₹ 10,238 ಕೋಟಿ ಆಗಿದೆ. ಹಿಂದಿನ ವರ್ಷದ ನವೆಂಬರ್ ಅವಧಿಗೆ ಹೋಲಿಸಿದರೆ ಇದು ಶೇಕಡ 13 ಹೆಚ್ಚು. ಈ ವರ್ಷದ ಅಕ್ಟೋಬರ್‌ನಲ್ಲಿ ₹ 10,996 ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಅಕ್ಟೋಬರ್‌ಗೆ ಹೋಲಿಸಿದರೆ ವರಮಾನ ಸಂಗ್ರಹ ತುಸು ಕಡಿಮೆಯಾಗಿದೆ. ‘ನವೆಂಬರ್‌ ತಿಂಗಳ ಹಬ್ಬಗಳು, ಮದುವೆಯ ಋತು ಆರಂಭವಾಗಿದ್ದುದು ರಿಯಲ್ ಎಸ್ಟೇಟ್, ವಾಹನ, ಚಿನ್ನಾಭರಣ, ಉಡುಪುಗಳ ಮಾರಾಟ ಹೆಚ್ಚಿಸಿವೆ. ಅಕ್ಟೋ ಬರ್‌ಗೆ ಹೋಲಿಸಿದರೆ ವರಮಾನ ಸಂಗ್ರಹವು ದೊಡ್ಡ ಮಟ್ಟದಲ್ಲಿ ಇಳಿಕೆ ಆಗಿಲ್ಲ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಜಿಎಸ್‌ಟಿ ಸಮಿತಿ ಅಧ್ಯಕ್ಷ ಬಿ.ಟಿ. ಮನೋಹರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT