ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿಯಲ್ಲಿ ₹ 1.05 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

Last Updated 1 ಮಾರ್ಚ್ 2020, 17:53 IST
ಅಕ್ಷರ ಗಾತ್ರ

ನವದೆಹಲಿ: ಫೆಬ್ರುವರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು ₹ 1.05 ಲಕ್ಷ ಕೋಟಿಗಳಷ್ಟಾಗಿದೆ.

ಈ ವರ್ಷದ ಜನವರಿಯಲ್ಲಿನ ₹ 1.10 ಲಕ್ಷ ಕೋಟಿಗೆ ಹೋಲಿಸಿದರೆ ತೆರಿಗೆ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಆದರೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿನ ಸಂಗ್ರಹಕ್ಕೆ ಹೋಲಿಸಿದರೆ ಶೇ 8ರಷ್ಟು ಹೆಚ್ಚಳ ದಾಖಲಿಸಿದೆ.

ಒಟ್ಟು ಸಂಗ್ರಹವಾದ ₹ 1,05,366 ಕೋಟಿ ಮೊತ್ತದ ಜಿಎಸ್‌ಟಿಯಲ್ಲಿ ಕೇಂದ್ರೀಯ ಜಿಎಸ್‌ಟಿ ₹ 20,569 ಕೋಟಿ, ರಾಜ್ಯಗಳ ಜಿಎಸ್‌ಟಿ ₹ 27,348 ಕೋಟಿ, ಸಮಗ್ರ ಜಿಎಸ್‌ಟಿ ₹ 48,503 ಕೋಟಿ ಮತ್ತು ಸೆಸ್‌ ರೂಪದಲ್ಲಿ ಸಂಗ್ರಹವಾದ ₹ 8,947 ಕೋಟಿ ಸೇರ್ಪಡೆಯಾಗಿದೆ.

ಆಮದು ಸರಕುಗಳಿಗೆ ಸಂಬಂಧಿಸಿದ ಜಿಎಸ್‌ಟಿ ಪರಿಗಣಿಸಿದರೆ, 2019ರ ಇದೇ ಅವಧಿಯಲ್ಲಿನ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ ಶೇ 8ರಷ್ಟು ಹೆಚ್ಚಳ ಕಂಡು ಬಂದಿದೆ.

ಜನವರಿಯಿಂದ ಫೆಬ್ರುವರಿವರೆಗಿನ ಅವಧಿಯಲ್ಲಿ 83 ಲಕ್ಷ ‘ಜಿಎಸ್‌ಟಿಆರ್‌ 3ಬಿ’ ರಿಟರ್ನ್ಸ್‌ಗಳು ಸಲ್ಲಿಕೆಯಾಗಿವೆ. ಇದು ಹಿಂದಿನ ತಿಂಗಳಿನಷ್ಟೇ ಇದೆ.

ಜಿಎಸ್‌ಟಿ ಲಾಟರಿ:ಏಪ್ರಿಲ್‌ 1ರಿಂದ ನಿರೀಕ್ಷೆ
ಪ್ರತಿ ಖರೀದಿಗೂ ಬಿಲ್‌ ಪ‍ಡೆಯುವುದನ್ನು ಉತ್ತೇಜಿಸಲು ಏಪ್ರಿಲ್‌ 1ರಿಂದ ಜಿಎಸ್‌ಟಿ ಲಾಟರಿ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ತಿಂಗಳ 14ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ರೆವಿನ್ಯೂ ಇಲಾಖೆಯು ಈ ಯೋಜನೆ ಜಾರಿಗೊಳಿಸಲಿದ್ದು, ಜಿಎಸ್‌ಟಿ ವಂಚನೆ ತಪ್ಪಿಸಲು ಅನುಕೂಲ ಮಾಡಿಕೊಡಲಿದೆ.

ಇಲಾಖೆಯು ಪ್ರತಿ ತಿಂಗಳಿಗೆ ಒಮ್ಮೆ ಲಕ್ಕಿ ಡ್ರಾ ಮೂಲಕ ಒಬ್ಬ ವಿಜೇತರನ್ನು ಆಯ್ಕೆ ಮಾಡಲಿದ್ದು, ಅವರಿಗೆ ಬಂಪರ್‌ ಬಹುಮಾನ ನೀಡಲಿದೆ. ರಾಜ್ಯವಾರು ದ್ವಿತೀಯ ಮತ್ತು ತೃತೀಯ ಬಹುಮಾನವೂ ಸಿಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಲಾಟರಿ ಬಹುಮಾನದ ಮೊತ್ತವು ₹ 10 ಲಕ್ಷದಿಂದ ₹ 1 ಕೋಟಿಯವರೆಗೆ ಇರಲಿದೆ ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ (ಸಿಬಿಐಸಿ) ಹೇಳಿದೆ.

ಗ್ರಾಹಕರು ತಾವು ಪಡೆದ ಬಿಲ್‌ ಅನ್ನು ಮೊಬೈಲ್‌ ಆ್ಯಪ್‌ ಮೂಲಕ ಸ್ಕ್ಯಾನ್‌ ಮಾಡಿ ಅದನ್ನು ಜಿಎಸ್‌ಟಿಎನ್‌ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಬೇಕು. ಗ್ರಾಹಕ ಕ್ಷೇಮಾಭಿವೃದ್ಧಿ ನಿಧಿಯನ್ನು ಇದಕ್ಕೆ ಬಳಸಲು ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT