ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ನೋಂದಣಿ ಅಮಾನತಿಗೆ ವಿರೋಧ

Last Updated 15 ಫೆಬ್ರುವರಿ 2021, 15:21 IST
ಅಕ್ಷರ ಗಾತ್ರ

ಬೆಂಗಳೂರು: ಸರಕುಗಳ ಪೂರೈಕೆದಾರ ನೀಡಿದ ಜಿಎಸ್‌ಟಿ ವಿವರ ಮತ್ತು ಖರೀದಿದಾರ ನೀಡಿದ ಜಿಎಸ್‌ಟಿ ವಿವರಗಳ ಮಧ್ಯೆ ಗಮನಾರ್ಹ ವ್ಯತ್ಯಾಸಗಳಿದ್ದರೆ ಅಂತಹ ವರ್ತಕರ ನೋಂದಣಿಯನ್ನು ತಕ್ಷಣವೇ ಅಮಾನತು ಮಾಡುವ ಕ್ರಮಕ್ಕೆ ವಾಣಿಜ್ಯೋದ್ಯಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು.

ಕರ್ನಾಟಕ ವಾಣಿಜ್ಯ ಮತ್ತುಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ಜಿಎಸ್‌ಟಿ ಮಂಡಳಿಯ ಸದಸ್ಯ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ‘ಜಿಎಸ್‌ಟಿ ಸಮಸ್ಯೆಗಳು’ ಕುರಿತುಸೋಮವಾರ ಸಂವಾದ ಆಯೋಜಿಸಿತ್ತು. ಜಾಲತಾಣದಲ್ಲಿ ಇರುವ ಸಮಸ್ಯೆ, ಎಚ್‌ಎಸ್‌ಎನ್‌ ಕೋಡ್‌ ಸೃಷ್ಟಿಸುತ್ತಿರುವ ಗೊಂದಲ, ಮರುಪಾವತಿ ವಿಳಂಬ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಬೊಮ್ಮಾಯಿ ಅವರ ಗಮನ ಸೆಳೆಯಲಾಯಿತು.

‘ನೋಂದಣಿ ಅಮಾನತು ಮಾಡಿದರೆ ವಹಿವಾಟು ಅಲ್ಲಿಗೇ ಸ್ಥಗಿತಗೊಳ್ಳುತ್ತದೆ. ಇದರಿಂದ ಉದ್ಯಮಿಗಳ ವಿಶ್ವಾಸಾರ್ಹತೆಗೆ ಧಕ್ಕೆ ಆಗಲಿದೆ. ಹೀಗಾಗಿ ಅಮಾನತು ಮಾಡುವ ಮುನ್ನ ಆಗಿರುವ ವ್ಯತ್ಯಾಸ ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು. ಈ ವಿಷಯವನ್ನು ಜಿಎಸ್‌ಟಿ ಮಂಡಳಿಯ ಗಮನಕ್ಕೆ ತರಬೇಕು’ ಎಂದು ಎಫ್‌ಕೆಸಿಸಿಐನ ಜಿಎಸ್‌ಟಿ ಸಮಿತಿಯ ಅಧ್ಯಕ್ಷ ಬಿ.ಟಿ. ಮನೋಹರ್‌, ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.

‘ತೆರಿಗೆದಾರರ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಾದೇಶಿಕ ಮತ್ತು ರಾಜ್ಯ ಮಟ್ಟದಲ್ಲಿ ಸಮಿತಿಗಳನ್ನು (ಜಿಎಸ್‌ಟಿ ಜಿಆರ್‌ಸಿ) ರಚಿಸಲಾಗಿದೆ. ತೆರಿಗೆ ಸುಧಾರಣೆಗಳನ್ನು ಜಾರಿಗೊಳಿಸುವ ಮುನ್ನ ಆ ಸಮಿತಿಯ ಸಲಹೆಗಳನ್ನು ಪಡೆಯುವಂತೆ ನಿಮ್ಮ ಮೂಲಕ ಜಿಎಸ್‌ಟಿ ಮಂಡಳಿಗೆ ಮನವಿ ಮಾಡುತ್ತೇವೆ’ ಎಂದರು.

ಶೀಘ್ರದಲ್ಲೇ ಸರಳೀಕೃತ ರಿಟರ್ನ್ಸ್‌: ‘ಜಿಎಸ್‌ಟಿ ವ್ಯವಸ್ಥೆಯಲ್ಲಿ ಸರ್ವರ್‌ ಜಾಮ್‌ ಸಮಸ್ಯೆ ಇದೆ. ಇದರಿಂದ ಸಕಾಲಕ್ಕೆ ರಿಟರ್ನ್ಸ್‌ ಸಲ್ಲಿಸಲು ಆಗು‌ತ್ತಿಲ್ಲ. ಇದನ್ನು ತಪ್ಪಿಸಲು, ಬೇರೆ ಬೇರೆ ವಲಯಗಳಿಗೆ ಬೇರೆ ಬೇರೆ ದಿನಾಂಕದಂದು ರಿಟರ್ನ್ಸ್‌ ಸಲ್ಲಿಸಲು ಅವಕಾಶ ನೀಡುವ ಕುರಿತು ಪರಿಶೀಲಿಸಲಾಗುತ್ತಿದೆ. ಶೀಘ್ರವೇ ಇದು ಜಾರಿಗೆ ಬರಲಿದೆ’ ಎಂದು ಬೊಮ್ಮಾಯಿ ಹೇಳಿದರು.

‘ತಯಾರಿಕೆ ಮತ್ತು ಬಳಕೆ ಹೀಗೆ ಎರಡು ರೀತಿಯಲ್ಲಿಯೂಕರ್ನಾಟಕ ರಾಜ್ಯವು ಜಿಎಸ್‌ಟಿಗೆ ಕೊಡುಗೆ ನೀಡುತ್ತಿದೆ. ಜಿಎಸ್‌ಟಿ ವ್ಯವಸ್ಥೆಯನ್ನು ಸರಿಯಾಗಿ ಜಾರಿಗೊಳಿಸುವಲ್ಲಿ ಸಹಕರಿಸುತ್ತಿರುವವರಿಗೆ ಉತ್ತೇಜನ ನೀಡುವ ಅಗತ್ಯವಿದೆ. ಇಂತಹ ರಾಜ್ಯಗಳನ್ನು ಗುರುತಿಸಿ ಬಹುಮಾನ ನೀಡದೇ ಇದ್ದರೂ ಶಿಕ್ಷಿಸದೇ ಇರುವಂತೆ ಜಿಎಸ್‌ಟಿ ಮಂಡಳಿಯನ್ನು ಒತ್ತಾಯಿಸುತ್ತಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT