ಗುರುವಾರ , ಅಕ್ಟೋಬರ್ 6, 2022
24 °C

ವಸತಿ ಗೃಹಗಳ ಬಾಡಿಗೆಯ ಮೇಲೆ ಜಿಎಸ್‌ಟಿ ಇಲ್ಲ: ಗೊಂದಲ ನಿವಾರಿಸಿದ ಕೇಂದ್ರ ಸರ್ಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ವಸತಿ ಗೃಹಗಳ ಬಾಡಿಗೆಯ ಮೇಲೆ ಶೇ 18 ಜಿಎಸ್‌ಟಿ ವಿಧಿಸಲಾಗಿದೆ. ಇದು ನಿಜವಾದ 'ಮಾಟ–ಮಂತ್ರ' ಎಂದು ಕಾಂಗ್ರೆಸ್‌ ಹೇಳಿಕೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ‘ವೈಯಕ್ತಿಕ ಬಳಕೆಗಾಗಿ ಮನೆಗಳನ್ನು ಬಾಡಿಗೆಗೆ ಪಡೆದರೆ ಜಿಎಸ್‌ಟಿ ಅನ್ವಯಿಸುವುದಿಲ್ಲ’ ಎಂದು ಸ್ಪಷ್ಟನೆ ನೀಡಿದೆ. 

ಮನೆಗಳ ಬಾಡಿಗೆ ಮೇಲಿನ ಜಿಎಸ್‌ಟಿ ಕುರಿತು ಟ್ವೀಟ್‌ ಮಾಡಿದ್ದ ದೆಹಲಿ ಘಟಕದ ಕಾಂಗ್ರೆಸ್ ಉಪಾಧ್ಯಕ್ಷ ಮುದಿತ್ ಅಗರ್ವಾಲ್‌, ‘ವಸತಿ ಗೃಹಗಳ ಬಾಡಿಗೆಯ ಮೇಲೆ ಶೇ 18 ಜಿಎಸ್‌ಟಿ ವಿಧಿಸಲಾಗಿದೆ. ಇದು ಮೋದಿ ಸರ್ಕಾರದ ಅಚ್ಛೇ ದಿನಕ್ಕೆ ಉದಾಹರಣೆಯಾಗಿದೆ’ ಎಂದು ತಿಳಿಸಿದ್ದರು. 

ಈ ಟ್ವೀಟ್‌ ಅನ್ನು ಹಂಚಿಕೊಂಡಿದ್ದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘ನಿತ್ಯ ಬಳಕೆಯ ಆಹಾರ ಪದಾರ್ಥಗಳ ಮೇಲಿನ ಅರ್ಥಹೀನ ಜಿಎಸ್‌ಟಿ ನಂತರ ಈಗ ಇದನ್ನು ವಿಧಿಸಲಾಗಿದೆ. ಇದು ಅಸಲಿ ಮಾಟ–ಮಂತ್ರ’ ಎಂದು ಹೇಳಿದ್ದರು.

ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ‘ಖಾಸಗಿ ವ್ಯಕ್ತಿಗಳಿಗೆ ವೈಯಕ್ತಿಕ ಬಳಕೆಗಾಗಿ ಬಾಡಿಗೆಗೆ ನೀಡಿರುವ ವಸತಿ ಕಟ್ಟಡಗಳಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲ' ಎಂದು ಸ್ಪಷ್ಟಪಡಿಸಿದೆ.

ಬಾಡಿಗೆಗೆ ಇರುವವರು ಪಾವತಿ ಮಾಡುವ ಬಾಡಿಗೆ ಮೊತ್ತದ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ಕೊಡಬೇಕಾಗುತ್ತದೆ ಎಂಬ ವರದಿಗಳು ತಪ್ಪು ಎಂದು ಸರ್ಕಾರವು ಹೇಳಿದೆ.

ವಸತಿ ಕಟ್ಟಡವನ್ನು ವಾಣಿಜ್ಯ ಸಂಸ್ಥೆಗೆ ಬಾಡಿಗೆಗೆ ನೀಡಿದಾಗ ಮಾತ್ರ ಜಿಎಸ್‌ಟಿ ಸಂಗ್ರಹ ಮಾಡಲಾಗುತ್ತದೆ ಎಂದು ಕೇಂದ್ರವು ಟ್ವೀಟ್ ಮಾಡಿದೆ.

ಬೆಲೆ ಏರಿಕೆ ವಿರುದ್ಧ ಆಗಸ್ಟ್‌ 5ರಂದು ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಸಂಸದರು, ಶಾಸಕರು ಹಾಗೂ ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದರು.

ಈ ವಿಚಾರವಾಗಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, 'ಆಗಸ್ಟ್‌ 5ರಂದು ಕೆಲವರು ಹೇಗೆ ಮಾಟ-ಮಂತ್ರಗಳನ್ನು ಮಾಡಲು ಯತ್ನಿಸಿದರು ಎಂಬುದನ್ನು ನೋಡಿದ್ದೇವೆ. ಕಪ್ಪು ಬಟ್ಟೆ ಧರಿಸಿದರೆ ಅವರ ಕೆಟ್ಟ ದಿನಗಳು ಕೊನೆಯಾಗುತ್ತವೆ ಎಂದು ಭಾವಿಸಿಕೊಂಡಿದ್ದಾರೆ. ಆದರೆ, ಮಾಟ-ಮಂತ್ರ, ವಾಮಾಚಾರದಂತಹ ಕೃತ್ಯಗಳಿಗೆ, ಮೌಢ್ಯಗಳಿಗೆ ಮೊರೆ ಹೋಗುವುದರಿಂದ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿಲ್ಲ' ಎಂದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು