ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಆರ್ಥಿಕ ಜಾತಕ ಬಿಡಿಸಿ ಹೇಳುವ 26 ಎ.ಎಸ್.

ಡಿಪಿಶ್ರೀ ದೈತೋಟ Updated:

ಅಕ್ಷರ ಗಾತ್ರ : | |

Prajavani

‘ಯಾರ ಕೈಯಿಂದ ಬೇಕಿದ್ದರೂ ತಪ್ಪಿಸಿಕೊಳ್ಳಬಹುದು, ಆದಾಯ ತೆರಿಗೆ ಇಲಾಖೆಯ ಕೈಯಿಂದ ತಪ್ಪಿಸಿಕೊಳ್ಳುವುದು ಕಷ್ಟ’ ಎಂಬ ಮಾತಿದೆ. ಜನರ ಆದಾಯವೇ ಪರೋಕ್ಷವಾಗಿ ಸರ್ಕಾರಕ್ಕೂ ಆದಾಯ ಮೂಲ. ಜನ ತೆರಿಗೆ ರೂಪದಲ್ಲಿ ಪಾವತಿಸುವ ಹಣ ಅತ್ಯಂತ ಮುಖ್ಯ. ಹೀಗಾಗಿ ಆದಾಯ ತೆರಿಗೆ ಇಲಾಖೆ, ಜನರ ಆದಾಯ ಮೂಲದ ಮೇಲೆ ನಿಗಾ ಇಟ್ಟಿರುತ್ತದೆ. ತನ್ನ ಆದಾಯದ ಸ್ವರೂಪ ಎಂಥದ್ದು ಎಂಬ ಅರಿವು ತೆರಿಗೆದಾರನಿಗೂ, ತೆರಿಗೆದಾರನಿಗೆ ಎಲ್ಲಿಂದ ಎಷ್ಟು ಆದಾಯವಿದೆ ಎಂಬುದರ ಅರಿವು ಇಲಾಖೆಗೂ ಇದ್ದರೆ ಅನೇಕ ಬಗೆಯ ತೆರಿಗೆ ವ್ಯಾಜ್ಯಗಳನ್ನು ಮೂಲದಲ್ಲೇ ಬಗೆಹರಿಸಿಕೊಳ್ಳಬಹುದು ಎನ್ನುವ ಪ್ರಮುಖ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆಯು ‘ಫಾರ್ಮ್ 26 ಎ.ಎಸ್.’ ಎಂಬ ಪರಿಷೃತ ಫಾರ್ಮ್ಅನ್ನು ಇತ್ತೀಚೆಗೆ ಪ್ರಕಟಿಸಿದೆ. ತೆರಿಗೆದಾರರ ಆದಾಯಕ್ಕೆ ಸಂಬಂಧಿಸಿದಂತೆ ಅನೇಕ ಮಾಹಿತಿ ನೀಡುತ್ತದೆ ಈ ಫಾರ್ಮ್‌.

ಏನಿದು 26 ಎ.ಎಸ್.?
ಫಾರ್ಮ್ 26 ಎ.ಎಸ್. ತೆರಿಗೆದಾರರ ವಾರ್ಷಿಕ ಆದಾಯ ಹಾಗೂ ತೆರಿಗೆ ಜಮಾ ಕುರಿತ ವಿವರವನ್ನು ಹೊಂದಿದೆ. ಆದಾಯ ತೆರಿಗೆ ಇಲಾಖೆಯ ದತ್ತಾಂಶದ ಪ್ರಕಾರ ಪ್ರತಿ ತೆರಿಗೆದಾರ ಎಷ್ಟು ಆದಾಯ ಹೊಂದಿದ್ದಾನೆ ಹಾಗೂ ಆತನ ಹೆಸರಲ್ಲಿ ಎಷ್ಟು ತೆರಿಗೆ ಜಮಾ ಆಗಿದೆ ಎಂಬ ವಿವರ ಇದರಲ್ಲಿ ಇರುತ್ತದೆ.

ಫಾರ್ಮ್ 26 ಎ.ಎಸ್.ಅನ್ನು ನಿಮ್ಮ ಪ್ಯಾನ್‌ನೊಂದಿಗೆ ಹೊಂದಿಸುವ ಮೂಲಕ ನೀವು 2008-09ನೇ ಸಾಲಿನಿಂದ ಫಾರ್ಮ್ 26 ಎ.ಎಸ್.ಅನ್ನು ವೀಕ್ಷಿಸಬಹುದು. ನಿಮ್ಮ ಬ್ಯಾಂಕ್ ಖಾತೆಯ ನೆಟ್‌ಬ್ಯಾಂಕಿಂಗ್ ಸೌಲಭ್ಯದ ಮೂಲಕ ಅಥವಾ ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್‍ಗೆ ಲಾಗಿನ್ ಆಗಿ ಕೂಡ ಈ ಫಾರ್ಮ್‌ಅನ್ನು ನೋಡಬಹುದು. ಈ ಸೇವೆ ಉಚಿತವಾಗಿದ್ದು ಬಹುತೇಕ ಬ್ಯಾಂಕ್‍ಗಳು ತಮ್ಮ ನೆಟ್ ಬ್ಯಾಂಕಿಂಗ್ ಸೌಲಭ್ಯದ ಭಾಗವಾಗಿ ಖಾತೆದಾರರಿಗೆ ಇದರ ಸೌಲಭ್ಯ ಒದಗಿಸುತ್ತಿವೆ.

ಇಲಾಖೆಗೆ ಮಾಹಿತಿ ಎಲ್ಲೆಲ್ಲಿಂದ ಲಭ್ಯವಾಗುತ್ತದೆ?
ಫಾರ್ಮ್ 26 ಎ.ಎಸ್‍.ನಲ್ಲಿ ದಾಖಲಾಗುವ ಮಾಹಿತಿ ಎಲ್ಲಿಂದ ಸಿಗುತ್ತದೆ ಎಂಬ ಪ್ರಶ್ನೆ ಮೂಡಬಹುದು. ತೆರಿಗೆ ಕಡಿತಗೊಳಿಸುವ ಸಂಸ್ಥೆ ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆಗೆ ತನ್ನ ಕಡೆಯಿಂದ ಯಾರ ಹೆಸರಿನಲ್ಲಿ ಎಷ್ಟು ತೆರಿಗೆ ಕಡಿತ ಆಗಿದೆ ಎಂಬ ಮಾಹಿತಿ ನೀಡಬೇಕಾಗುತ್ತದೆ. ಈ ಮಾಹಿತಿಯು ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್‍ನಲ್ಲಿ ತೆರಿಗೆ ಪಾವತಿದಾರರ ಪ್ಯಾನ್ ವಿವರದೊಂದಿಗೆ ಫಾರ್ಮ್ 26 ಎ.ಎಸ್. ರೂಪದಲ್ಲಿ ಸಿಗುತ್ತದೆ.

ಒಂದು ವೇಳೆ ನಿಮ್ಮ ಆದಾಯದ ಮೇಲೆ ತೆರಿಗೆ ಕಡಿತಗೊಳಿಸಿದ್ದರೂ, ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಆ ವಿವರ ಫಾರ್ಮ್ 26 ಎ.ಎಸ್‍.ನಲ್ಲಿ ಕಂಡುಬರದಿದ್ದರೆ, ಅಂತಹ ಸಂಸ್ಥೆಗಳಿಂದ ನೀವು ಆ ಬಗ್ಗೆ ವಿವರಣೆ ಕೇಳಬಹುದು. ಅಥವಾ ಆದಾಯ ತೆರಿಗೆ ಇಲಾಖೆಗೆ ಪರಿಹಾರಕ್ಕಾಗಿ ದೂರು ಸಲ್ಲಿಸಬಹುದು.

ಫಾರ್ಮ್ 26 ಎ.ಎಸ್‍.ನಲ್ಲಿ ಏನೇನಿರುತ್ತದೆ?
ಜೂನ್ 1, 2020ರಿಂದ ಜಾರಿಗೆ ಬರುವಂತೆ, ಎಲ್ಲಾ ತೆರಿಗೆದಾರರ ಮಾಹಿತಿ ಹೊಸ ಫಾರ್ಮ್ 26 ಎ.ಎಸ್.‌ನಲ್ಲಿ ಲಭ್ಯವಿರುತ್ತದೆ. ಈ ಮಾಹಿತಿ ಪ್ರತಿ ತ್ರೈಮಾಸಿಕ ಅವಧಿಗೊಮ್ಮೆ ತೆರಿಗೆ ಇಲಾಖೆಯ ಜಾಲತಾಣದಲ್ಲಿ ಪರಿಷ್ಕೃತವಾಗುತ್ತದೆ.

1ನಿಮ್ಮ ವೇತನ ಆದಾಯ, ಬಡ್ಡಿ ಆದಾಯ, ಪಿಂಚಣಿ ಆದಾಯ ಇತ್ಯಾದಿಗಳ ಮೇಲೆ ಕಡಿತಗೊಳಿಸಲಾಗುವ ತೆರಿಗೆ ಮೊತ್ತ, ಕಡಿತಗೊಳಿಸುವವರ ಹೆಸರು, ಟಿಎಎನ್, ಠೇವಣಿ ಮೊತ್ತ ಇತ್ಯಾದಿ ವಿವರ ಇದರಲ್ಲಿ ಉಲ್ಲೇಖವಾಗಿರುತ್ತದೆ.

2 ತೆರಿಗೆ ಪಾವತಿದಾರನು ಫಾರ್ಮ್ 15ಜಿ ಅಥವಾ ಫಾರ್ಮ್ 15ಎಚ್ ಅನ್ನು ಸಲ್ಲಿಸಿದ್ದರೆ ಆ ಮಾಹಿತಿ ಇರುತ್ತದೆ. 

3 ₹ 50 ಲಕ್ಷಕ್ಕಿಂತ ಅಧಿಕ ಮೌಲ್ಯದ ಸ್ಥಿರ ಆಸ್ತಿಯ ಮಾರಾಟದ ಮೇಲೆ ಮೂಲದಲ್ಲಿ ಕಡಿತಗೊಳಿಸಲಾಗುವ ಶೇಕಡ 1ರಷ್ಟು ತೆರಿಗೆಯ ವಿವರ ಇರುತ್ತದೆ.

4ನಿರ್ದಿಷ್ಟ ಮೊತ್ತಕ್ಕಿಂತ ಮೇಲ್ಪಟ್ಟ ಸರಕು ಖರೀದಿಗಾಗಿ ಸಂಗ್ರಹಿಸಿರುವ ಟಿಸಿಎಸ್ ಮೊತ್ತ.

ಉದಾಹರಣೆಗೆ, ನೀವು ಹತ್ತು ಲಕ್ಷ ರೂಪಾಯಿಗಿಂತ ಅಧಿಕ ಮೌಲ್ಯದ ವಾಹನ ಖರೀದಿಸಿದರೆ, ವಾಹನ ಮಾರಾಟ ಕಂಪನಿಗಳು ನಿಮ್ಮಿಂದ ಶೇಕಡ  1ರಷ್ಟು ತೆರಿಗೆ ಸಂಗ್ರಹಿಸಿ ನಿಮ್ಮ ಪ್ಯಾನ್ ಸಂಖ್ಯೆಯಡಿ ಭರಿಸಿರುವ ಮೊತ್ತ ಇಲ್ಲಿ ಉಲ್ಲೇಖವಾಗುತ್ತದೆ.

5 ಮುಂಗಡ ತೆರಿಗೆ ಮತ್ತು ಸ್ವಯಂ ಮೌಲ್ಯಮಾಪನದ ಮೂಲಕ ಜಮಾ ಮಾಡಿದ ತೆರಿಗೆ ವಿವರ.

6 ತೆರಿಗೆ ಮರುಪಾವತಿಯ ವಿವರ. ಉದಾಹರಣೆಗೆ, ರಿಫಂಡ್‍ಗೆ ಸಂಬಂಧಿಸಿದ ಮೌಲ್ಯಮಾಪನ ವರ್ಷ, ಪಾವತಿ ವಿಧಾನ, ಪಾವತಿಸಿದ ಮೊತ್ತ, ಪಾವತಿಸಿದ ಬಡ್ಡಿ ಮತ್ತು ಪಾವತಿ ದಿನಾಂಕವನ್ನು ಸಹ ಉಲ್ಲೇಖಿಸಲಾಗುತ್ತದೆ.

7 ಇಷ್ಟೇ ಅಲ್ಲದೆ ತೆರಿಗೆ ಇಲಾಖೆಯೊಂದಿಗೆ ಬಾಕಿ ಇರುವ ವ್ಯಾಜ್ಯಗಳ ಉಲ್ಲೇಖ ಇರುತ್ತದೆ. 

ಹೊಸ ಮಾಹಿತಿ ಏನೇನು ಲಭ್ಯ?
1) ವಾರ್ಷಿಕವಾಗಿ ₹ 10 ಲಕ್ಷಕ್ಕಿಂತ ಅಧಿಕ ಮೊತ್ತದ ಬ್ಯಾಂಕ್ ಡ್ರಾಫ್ಟ್, ಪೂರ್ವ ಪಾವತಿ ಸಾಧನಗಳು, ಷೇರು-ಡಿಬೆಂಚರ್-ಮ್ಯೂಚುವಲ್ ಫಂಡ್ ವ್ಯವಹಾರ, ವಿದೇಶಿ ನಗದು ಹಣದ ವ್ಯವಹಾರ, ಚಾಲ್ತಿ ಖಾತೆ ಹೊರತಾಗಿ ಇತರ ಖಾತೆಗಳಿಗೆ ಮಾಡಿರುವ ನಗದು ಜಮಾ ವಿವರ.

2) ವಾರ್ಷಿಕವಾಗಿ ₹ 10 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ನಗದು ಅಥವಾ ಇತರ ರೂಪದಲ್ಲಿ ಠೇವಣಿ ಖಾತೆ ತೆರೆಯಲು ಪಾವತಿಸಿದ್ದರೆ ಅದರ ಮಾಹಿತಿ ಇದರಲ್ಲಿ ದಾಖಲಾಗಿರುತ್ತದೆ.

3) ಚಾಲ್ತಿ ಖಾತೆಗೆ ಸಂಬಂಧಿಸಿದಂತೆ ವಾರ್ಷಿಕವಾಗಿ ₹ 50 ಲಕ್ಷಕ್ಕಿಂತ ಹೆಚ್ಚಿನ ನಗದು ಜಮಾ ಅಥವಾ ನಗದು ವಾಪಸಾತಿ ವ್ಯವಹಾರ ಮಾಡಿದ್ದಲ್ಲಿ, ಅದರ ಮಾಹಿತಿ ಇರುತ್ತದೆ.

4) ಕ್ರೆಡಿಟ್ ಕಾರ್ಡ್‌ಗೆ ನಗದು ಮೂಲಕ ₹ 1 ಲಕ್ಷಕ್ಕಿಂತ ಅಧಿಕ ಮೊತ್ತ ಪಾವತಿಸಿದ್ದರೆ ಅಥವಾ ವಾರ್ಷಿಕವಾಗಿ ₹ 10 ಲಕ್ಷಕ್ಕಿಂತ ಅಧಿಕ ಮೊತ್ತದ ವ್ಯವಹಾರ.

5) ₹ 30 ಲಕ್ಷಕ್ಕಿಂತ ಅಧಿಕ ಮೊತ್ತದ ಸ್ಥಿರಾಸ್ತಿ ಖರೀದಿ-ಮಾರಾಟ ವ್ಯವಹಾರ.

6) ಸರಕು-ಸೇವೆಯ ಮಾರಾಟಕ್ಕೆ ಸಂಬಂಧಿಸಿದಂತೆ ₹ 2 ಲಕ್ಷಕ್ಕಿಂತ ಅಧಿಕ ಮೊತ್ತದ ನಗದು ಸ್ವೀಕೃತಿ

7) ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಅವಧಿಯಲ್ಲಿ ಬ್ಯಾಂಕ್ ಉಳಿತಾಯ ಖಾತೆಗೆ ₹ 2.50 ಲಕ್ಷಕ್ಕಿಂತ ಅಧಿಕ ನಗದು ಜಮಾ ಮಾಡಿದ ವಿವರ

8) ಆದಾಯ ತೆರಿಗೆ ಕಾನೂನಿನ ಅಡಿ ಮಾತ್ರವಲ್ಲದೆ, ಇತರ ಸರ್ಕಾರಿ ಇಲಾಖೆಗಳಿಂದ ಕ್ರೋಢೀಕರಿಸಿರುವ ನಿಗದಿತ ಹಣಕಾಸು ಮಾಹಿತಿ (ಉದಾಹರಣೆಗೆ, ಜಿಎಸ್‌ಟಿ, ಕಾರ್ಮಿಕ ವಿಮಾ ಇಲಾಖೆ, ಆರ್‌ಟಿಒ, ಸಬ್ ರೆಜಿಸ್ಟ್ರಾರ್‌, ಪ್ರಾವಿಡೆಂಡ್ ಫಂಡ್ ಇತ್ಯಾದಿ.)

ತೆರಿಗೆದಾರರ ಜವಾಬ್ದಾರಿ ಏನು?

ತೆರಿಗೆದಾರ ತನ್ನ ಆದಾಯ ತೆರಿಗೆ ವಿವರಗಳನ್ನು ತಾನೇ ಸಲ್ಲಿಸಬಹುದು ಅಥವಾ ತನ್ನ ತೆರಿಗೆ ಸಲಹೆಗಾರರ ಮೂಲಕ ಸಲ್ಲಿಸಬಹುದು. ಆದರೆ ಈ ಸಂದರ್ಭದಲ್ಲಿ ತಾನು ಸಲ್ಲಿಸುವ ಆದಾಯ ಮೊತ್ತ  ಫಾರ್ಮ್ 26 ಎ.ಎಸ್‌.ನಲ್ಲಿ ಇರುವ ಮೊತ್ತಕ್ಕಿಂತ ಕಡಿಮೆ ಇದ್ದರೆ ಆದಾಯ ತೆರಿಗೆ ಇಲಾಖೆಯಿಂದ ಮುಂದೆ ಯಾವುದೇ ಸಂದರ್ಭದಲ್ಲಿ ‘ಪೂರ್ಣ ಆದಾಯ ಘೋಷಿಸಿಲ್ಲ’ ಎಂಬ ನೊಟೀಸ್ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಫಾರ್ಮ್ 26 ಎ.ಎಸ್.ನಲ್ಲಿರುವ ಸಂಪೂರ್ಣ ಮೊತ್ತವನ್ನು ಪರಾಮರ್ಶಿಸಿ ಘೋಸಿಸುವುದು ಅನಿವಾರ್ಯ. ಒಂದು ವೇಳೆ, ಯಾವುದೇ ಸಂಸ್ಥೆ ತಪ್ಪಾಗಿ ನಿಮ್ಮ ಪ್ಯಾನ್ ಸಂಖ್ಯೆ ನಮೂದಿಸಿ ನಿಮ್ಮ ಫಾರ್ಮ್ 26 ಎ.ಎಸ್. ಖಾತೆಯಲ್ಲಿ ಆದಾಯ ತೋರಿಸಿದ್ದರೆ, ನೀವು ಅಂತಹ ಆದಾಯವನ್ನು ಹಾಗೂ ಟಿಡಿಎಸ್ ಮೊತ್ತವನ್ನೂ ರಿಟರ್ನ್ಸ್ ಸಲ್ಲಿಸುವಾಗ ಬಿಟ್ಟುಬಿಡಬಹುದು. ಆದರೆ, ಅಂತಹ ವ್ಯವಹಾರ ನಿಮ್ಮ ಬ್ಯಾಂಕ್ ಖಾತೆಯಲ್ಲಿ ನಡೆದಿಲ್ಲ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ನಿಮ್ಮ ಮೇಲಿರುತ್ತದೆ.

ತೆರಿಗೆ ಇಲಾಖೆ ಇದನ್ನು ಹೇಗೆ ಬಳಸಿಕೊಳ್ಳುತ್ತದೆ?
ಆದಾಯ ತೆರಿಗೆ ಇಲಾಖೆಯು ಫಾರ್ಮ್ 26 ಎ.ಎಸ್‌.ನಲ್ಲಿ ದಾಖಲಾಗುವ ವ್ಯವಹಾರಗಳು ನಿಮ್ಮ ತೆರಿಗೆ ರಿಟರ್ನ್ಸ್‌ನಲ್ಲಿಯೂ ಉಲ್ಲೇಖವಾಗಬೇಕು ಎಂದು ನಿರೀಕ್ಷಿಸುತ್ತದೆ. ಫಾರ್ಮ್ 26 ಎ.ಎಸ್. ದಾಖಲೆಯಲ್ಲಿ ಬಹುತೇಕ ಸಣ್ಣ ಪುಟ್ಟ ವ್ಯವಹಾರಗಳು ದಾಖಲಾಗದಿದ್ದರೂ, ನಿಮ್ಮ ಬ್ಯಾಂಕ್ ಖಾತೆ ನಿಮ್ಮ ಬಹುತೇಕ ಆದಾಯವನ್ನು ತೋರಿಸಿಕೊಡುತ್ತದೆ. ಹೀಗಾಗಿ, ಫಾರ್ಮ್ 26 ಎಎಸ್‍ನಲ್ಲಿ ಕಂಡುಬರದ ಆದಾಯವಿದ್ದರೆ, ಅವನ್ನೂ ತೆರಿಗೆ ಪಾವತಿಸುವ ಸಂದರ್ಭದಲ್ಲಿ ಪರಿಗಣಿಸುವುದು ಅವಶ್ಯಕ.

ಇಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಯಾವುದೇ ಬ್ಯಾಂಕ್‍ಗಳು, ಹಣಕಾಸು ಸಂಸ್ಥೆಗಳು ಸಾಲ ಸೌಲಭ್ಯ ನೀಡುವ ಸಂದರ್ಭದಲ್ಲಿ ಇದನ್ನು ಒಂದು ಅಗತ್ಯ ದಾಖಲೆಯಾಗಿ ಪರಿಗಣಿಸಬಹುದು.

ಜವಾಬ್ದಾರಿಯುತ ತೆರಿಗೆ ಪಾವತಿದಾರರಿಗೆ ಸರ್ಕಾರ ಯಾವುದೇ ಕಾನೂನು ಕಟ್ಟಳೆ ಜಾರಿಗೆ ತಂದರೂ ಆತಂಕಪಡುವ ಪ್ರಮೇಯ ಬರುವುದಿಲ್ಲ. ತೆರಿಗೆದಾರ ಹಾಗೂ ಆದಾಯ ತೆರಿಗೆ ಇಲಾಖೆಯ ನಡುವಿನ ಕೊಂಡಿಯಂತೆ ಈ 26 ಎ.ಎಸ್. ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಈ ಪೂರ್ವ ಮಾಹಿತಿ ತೆರಿಗೆದಾರರಿಗೆ ಅನುಕೂಲಕರ ಹಾಗೂ ತೆರಿಗೆ ಇಲಾಖೆಗೆ ಆದಾಯ ಮೂಲ ಶೋಧಿಸುವಲ್ಲಿ ನೆರವಾಗುವ ಒಂದು ಮೂಲ ಮಾಹಿತಿಯೂ ಹೌದು.

ಫಾರ್ಮ್‌ 26ಎ.ಎಸ್. ಪಡೆಯುವುದು ಹೇಗೆ?

1) ಆದಾಯ ತೆರಿಗೆ ಇ–ಫೈಲಿಂಗ್ ವೆಬ್‌ಸೈಟ್‌ಗೆ (www.incometaxindiaefiling.gov.in/home) ಭೇಟಿ ಕೊಡಿ. ಅಲ್ಲಿ ಎಡಭಾಗದಲ್ಲಿ ಇರುವ ಪಟ್ಟಿಯಲ್ಲಿ ‘ವೀವ್ ಫಾರ್ಮ್ 26 ಎ.ಎಸ್.’ ಮೇಲೆ ಕ್ಲಿಕ್ ಮಾಡಿ.

2)ನಂತರ ನಿಮ್ಮ ಯೂಸರ್ ಐ.ಡಿ., ಪಾಸ್‌ವರ್ಡ್‌ ಬಳಸಿ ಲಾಗಿನ್ ಆಗಿ.

3) ಲಾಗಿನ್ ಆದ ನಂತರ, ಮೇಲ್ಭಾಗದಲ್ಲಿ ಕಾಣಿಸುವ ‘ಮೈ ಅಕೌಂಟ್’ ಮೇಲೆ ಕ್ಲಿಕ್ ಮಾಡಿ, ‘ವೀವ್ ಫಾರ್ಮ್ 26 ಎ.ಎಸ್.’ ಆಯ್ಕೆ ಮಾಡಿಕೊಳ್ಳಿ.

4) ನಂತರ, ಕನ್ಫರ್ಮ್ ಎಂದು ಕ್ಲಿಕ್ ಮಾಡಿ. ಷರತ್ತುಗಳಿಗೆ ಒಪ್ಪಿಗೆ ಸೂಚಿಸಿ.

5) ‘ವೀವ್ ಟ್ಯಾಕ್ಸ್ ಕ್ರೆಡಿಟ್ (ಫಾರ್ಮ್ 26 ಎ.ಎಸ್.)’ ಮೇಲೆ ಕ್ಲಿಕ್ ಮಾಡಿ, ನಿಮಗೆ ಬೇಕಿರುವ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ. ವೀವ್ ಅಥವಾ ಡೌನ್‌ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು