ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಸಮೂಹಕ್ಕೆ ಇಲ್ಲ ಬ್ಯಾಂಕ್‌ ಮಾಲೀಕತ್ವ

Last Updated 26 ನವೆಂಬರ್ 2021, 20:30 IST
ಅಕ್ಷರ ಗಾತ್ರ

ಮುಂಬೈ: ಖಾಸಗಿ ಬ್ಯಾಂಕ್‌ಗಳ ಷೇರು ಮಾಲೀಕತ್ವಕ್ಕೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆ ತರುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ತಿಳಿಸಿದೆ. ಆದರೆ, ಕೈಗಾರಿಕಾ ಸಮೂಹಗಳಿಗೆ ಬ್ಯಾಂಕ್‌ನ ಮಾಲೀಕತ್ವ ಹೊಂದುವ ಅವಕಾಶ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಹೊಸ ನಿಯಮಗಳ ಅನ್ವಯ ಖಾಸಗಿ ಬ್ಯಾಂಕ್‌ಗಳ ಪ್ರವರ್ತಕರು 15 ವರ್ಷಗಳ ನಂತರದಲ್ಲಿ ತಮ್ಮ ಷೇರು ಪಾಲನ್ನು ಶೇಕಡ 26ರಷ್ಟಕ್ಕೆ ಮಿತಿಗೊಳಿಸಬೇಕು. ಈವರೆಗಿನ ನಿಯಮಗಳ ಅನ್ವಯ 15 ವರ್ಷಗಳ ನಂತರದಲ್ಲಿ ಅವರು ತಮ್ಮ ಷೇರುಪಾಲನ್ನು ಶೇಕಡ 15ರಷ್ಟಕ್ಕೆ ಮಿತಿಗೊಳಿಸಬೇಕಿತ್ತು. ಕೈಗಾರಿಕಾ ಸಮೂಹಗಳಿಗೆ ಬ್ಯಾಂಕ್‌ನ ಮಾಲೀಕತ್ವ ಹೊಂದಲು ಭಾರತದಲ್ಲಿ ಅವಕಾಶ ಇಲ್ಲ. ಅವರು ಗರಿಷ್ಠ ಶೇಕಡ 10ರಷ್ಟು ಷೇರುಪಾಲು ಹೊಂದಲು ಮಾತ್ರ ಅವಕಾಶ ಇದೆ.

ಬೃಹತ್ ಕೈಗಾರಿಕಾ ಸಮೂಹಗಳಿಗೆ ಬ್ಯಾಂಕ್‌ನ ಪ್ರವರ್ತಕರಾಗಲು ಅವಕಾಶ ಕಲ್ಪಿಸಬೇಕು, ಅವರಿಗೆ ಖಾಸಗಿ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಷೇರುಪಾಲು ಹೊಂದಲು ಅವಕಾಶ ಇರಬೇಕು ಎಂದು ಆರ್‌ಬಿಐನ ಕಾರ್ಯಕಾರಿ ಸಮಿತಿ ಯೊಂದು ವರ್ಷದ ಹಿಂದೆ ಶಿಫಾರಸು ಮಾಡಿತ್ತು. ಇದನ್ನು ಕಾರ್ಯರೂಪಕ್ಕೆ ತರಲು ಆರ್‌ಬಿಐ ತೀವ್ರ ವಿರೋಧ ವ್ಯಕ್ತ ಪಡಿಸಿತ್ತು.

ಬ್ಯಾಂಕಿಂಗ್ ವಲಯ ಪ್ರವೇಶಿಸುವ ತಾಕತ್ತು ಬಜಾಜ್ ಸಮೂಹ, ಪಿರಾ ಮಲ್ ಸಮೂಹ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ಇದೆ ಎಂದು ಹೂಡಿಕೆ ಬ್ಯಾಂಕ್‌ ಪ್ರತಿನಿಧಿಯೊಬ್ಬರು ಈ ಹಿಂದೆ ಹೇಳಿದ್ದರು. ಆದರೆ, ಕಾರ್ಪೊರೇಟ್‌ ವಲಯಕ್ಕೆ ಬ್ಯಾಂಕ್‌ಗಳ ಮಾಲೀಕತ್ವ ಹೊಂದಲು ಅವಕಾಶ ಕಲ್ಪಿಸದೆ ಇರಲು ಆರ್‌ಬಿಐ ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.

ಪೇಮೆಂಟ್‌ ಬ್ಯಾಂಕ್‌ಗಳು ಐದು ವರ್ಷ ಕಾರ್ಯಾಚರಣೆ ನಡೆಸಿದ ನಂತರವಷ್ಟೇ ಕಿರು ಹಣಕಾಸು ಬ್ಯಾಂಕ್‌ ಆಗಿ ಪರಿವರ್ತನೆ ಹೊಂದಲು ಅರ್ಜಿ ಸಲ್ಲಿಸಬಹುದು ಎಂದು ಆರ್‌ಬಿಐ ಹೇಳಿದೆ.

ಪೇಮೆಂಟ್‌ ಬ್ಯಾಂಕ್‌ಗಳು ಮೂರು ವರ್ಷ ಕಾರ್ಯಾಚರಣೆ ನಡೆಸಿದ ನಂತರ, ಕಿರು ಹಣಕಾಸು ಬ್ಯಾಂಕ್‌ ಆಗಿ ಪರಿವರ್ತನೆ ಹೊಂದಲು ಅವಕಾಶ ಕೋರಿ ಅರ್ಜಿ ಸಲ್ಲಿಸಬಹುದು ಎಂದು ಕಾರ್ಯಕಾರಿ ಸಮಿತಿಯು ಶಿಫಾರಸು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT