ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್‌ ಆ್ಯಪ್‌: ಬಿಗಿ ನಿಯಮಕ್ಕೆ ಚಿಂತನೆ

ಮೊದಲೇ ಇನ್‌ಸ್ಟಾಲ್ ಮಾಡಿರುವ ಆ್ಯಪ್‌ ತೆಗೆದುಹಾಕುವ ಆಯ್ಕೆ ಕಡ್ಡಾಯ
Last Updated 14 ಮಾರ್ಚ್ 2023, 22:56 IST
ಅಕ್ಷರ ಗಾತ್ರ

ನವದೆಹಲಿ: ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಗಳು ತಾವು ಫೋನ್‌ಗಳಲ್ಲಿ ಮೊದಲೇ ಇನ್‌ಸ್ಟಾಲ್ ಮಾಡುವ ಆ್ಯಪ್‌ಗಳನ್ನು ತೆಗೆದುಹಾಕಲು ಬಳಕೆದಾರರಿಗೆ ಅವಕಾಶ ಕೊಡಲೇಬೇಕು ಎಂಬ ನಿಯಮವನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ.

ಅಲ್ಲದೆ, ಕಾರ್ಯಾಚರಣಾ ವ್ಯವಸ್ಥೆಗೆ ಕಾಲಕಾಲಕ್ಕೆ ನೀಡುವ ಅಪ್ಡೇಟ್‌ಗಳನ್ನು ಪರಿಶೀಲಿಸುವ ಪದ್ಧತಿಯನ್ನು ಜಾರಿಗೆ ತರಲು ಕೂಡ ಕೇಂದ್ರ ಚಿಂತನೆ ನಡೆಸಿದೆ.

ಬಳಕೆದಾರರಿಗೆ ಸಂಬಂಧಿಸಿದ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಕಳವಳ ವ್ಯಕ್ತವಾಗಿರುವ ನಡುವೆಯೇ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ (ಐ.ಟಿ.) ಸಚಿವಾಲಯವು ಈ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

‘ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲೇ ಇನ್‌ಸ್ಟಾಲ್ ಮಾಡಲಾಗಿರುವ ಕೆಲವು ಆ್ಯಪ್‌ಗಳು ಭದ್ರತೆಯ ದೃಷ್ಟಿಯಿಂದ ಸಮಸ್ಯೆ ಸೃಷ್ಟಿಸಬಹುದು. ಚೀನಾ ಸೇರಿದಂತೆ ಯಾವುದೇ ದೇಶವು ಇವನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಲಾಗದು’ ಎಂದು ಸರ್ಕಾರದ ಅಧಿಕಾರಿಯೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂದು ಷರತ್ತಿನೊಂದಿಗೆ ತಿಳಿಸಿದ್ದಾರೆ.

2020ರಲ್ಲಿ ಗಡಿಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದ ನಂತರದಲ್ಲಿ ಕೇಂದ್ರವು ಚೀನಾದ ವಾಣಿಜ್ಯ ಚಟುವಟಿಕೆಗಳ ಪರಿಶೀಲನೆಯನ್ನು ಬಿಗಿಗೊಳಿಸಿದೆ. ಜಾಗತಿಕವಾಗಿಯೂ ಹಲವು ದೇಶಗಳು ಚೀನಾದ ತಂತ್ರಜ್ಞಾನ ಕಂಪನಿಗಳ ಮೇಲೆ ಕೆಲವು ನಿರ್ಬಂಧಗಳನ್ನು ಹೇರಿವೆ.

ಈಗಿನ ನಿಯಮಗಳ ಅಡಿಯಲ್ಲಿ, ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲೇ ಇನ್‌ಸ್ಟಾಲ್ ಮಾಡಲಾಗಿರುವ ಆ್ಯಪ್‌ಗಳು ಇರುತ್ತವೆ. ಈ ಆ್ಯಪ್‌ಗಳನ್ನು ತೆಗೆದುಹಾಕಲು ಬಳಕೆದಾರರಿಗೆ ಅವಕಾಶವೇ ಇರುವುದಿಲ್ಲ. ಚೀನಾದ ಶಓಮಿ ಕಂಪನಿಯ ‘ಗೆಟ್‌ಆ್ಯಪ್ಸ್‌’ ಹೆಸರಿನ ಆ್ಯಪ್, ಸ್ಯಾಮ್‌ಸಂಗ್‌ ಫೋನ್‌ಗಳಲ್ಲಿ ಇರುವ ‘ಸ್ಯಾಮ್‌ಸಂಗ್ ಪೇ ಮಿನಿ’, ಆ್ಯಪಲ್‌ ಫೋನ್‌ಗಳಲ್ಲಿ ಇರುವ ‘ಸಫಾರಿ’ ಮೊದಲೇ ಇನ್‌ಸ್ಟಾಲ್ ಮಾಡಿರುವ ಆ್ಯಪ್‌ಗಳ ಸಾಲಿಗೆ ಸೇರಿವೆ. ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆಯ ಇರುವ ಸ್ಮಾರ್ಟ್‌ ಫೋನ್‌ಗಳಲ್ಲಿ ಗೂಗಲ್‌ನ ಕೆಲವು ಆ್ಯಪ್‌ಗಳನ್ನು ತೆಗೆದುಹಾಕಲು ಅವಕಾಶ ಇಲ್ಲ.

ಆದರೆ, ಹೊಸ ನಿಯಮಗಳ ಅಡಿಯಲ್ಲಿ, ಇಂತಹ ಆ್ಯಪ್‌ಗಳನ್ನು ತೆಗೆದುಹಾಕಲು ಕಂಪನಿಗಳು ಅವಕಾಶ ಕಲ್ಪಿಸಬೇಕಾಗುತ್ತದೆ. ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳು ಈ ನಿಯಮವನ್ನು ಪಾಲಿಸುತ್ತಿವೆಯೇ ಎಂಬುದನ್ನು ಭಾರತೀಯ ಗುಣಮಟ್ಟ ಮಾಪನ ಸಂಸ್ಥೆಯಿಂದ (ಬಿಐಎಸ್) ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರಿಶೀಲಿಸಲಾಗುತ್ತದೆ ಎಂದು ಮೂಲಗಳು ವಿವರಿಸಿವೆ.

ಸ್ಮಾರ್ಟ್‌ಫೋನ್‌ ಕಾರ್ಯಾಚರಣಾ ವ್ಯವಸ್ಥೆಗೆ (ಒ.ಎಸ್.) ಅಪ್ಡೇಟ್‌ ನೀಡುವ ಮೊದಲು, ಅದನ್ನು ಪರಿಶೀಲನೆಗೆ ಒಳಪಡಿಸುವ ಪದ್ಧತಿಯನ್ನು ಜಾರಿಗೆ ತರಲು ಸರ್ಕಾರವು ಚಿಂತನೆ ನಡೆಸಿದೆ. ‘ಭಾರತದಲ್ಲಿ ಬಳಕೆಯಲ್ಲಿ ಇರುವ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲೇ ಇನ್‌ಸ್ಟಾಲ್ ಮಾಡಿರುವ ಆ್ಯಪ್‌ಗಳು ಇರುತ್ತವೆ. ಇವು ಖಾಸಗಿತನ, ಮಾಹಿತಿಯ ಭದ್ರತೆಗೆ ಸಂಬಂಧಿಸಿದಂತೆ ಗಂಭೀರ ಸವಾಲು ಸೃಷ್ಟಿಸುತ್ತವೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಭೆಯೊಂದರ ಗೋಪ್ಯ ದಾಖಲೆಯೊಂದರಲ್ಲಿ ಉಲ್ಲೇಖವಾಗಿದೆ.

ಈ ಸಭೆಯಲ್ಲಿ ಶಓಮಿ, ಸ್ಯಾಮ್‌ಸಂಗ್‌, ಆ್ಯಪಲ್, ವಿವೊ ಕಂಪನಿಯ ಪ್ರತಿನಿಧಿಗಳು ಭಾಗಿಯಾಗಿದ್ದರು. ಹೊಸ ನಿಯಮಗಳು ಜಾರಿಗೆ ಬಂದ ನಂತರದಲ್ಲಿ ಅವುಗಳನ್ನು ಜಾರಿಗೆ ತರಲು ಒಂದು ವರ್ಷ ಕಾಲಾವಕಾಶ ನೀಡಲು ಸರ್ಕಾರ ತೀರ್ಮಾನಿಸಿದೆ. ಆದರೆ ಹೊಸ ನಿಯಮಗಳು ಯಾವತ್ತಿನಿಂದ ಜಾರಿಗೆ ಬರಲಿವೆ ಎಂಬುದು ಖಚಿತವಾಗಿಲ್ಲ.

ವೇಗವಾಗಿ ಬೆಳೆಯುತ್ತಿರುವ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾದ ಶಓಮಿ ಕಂಪನಿಯ ಸ್ಮಾರ್ಟ್‌ಫೋನ್‌ಗಳು, ಬಿಬಿಕೆ ಎಲೆಕ್ಟ್ರಾನಿಕ್ಸ್ ಕಂಪನಿಯ ವಿವೊ ಮತ್ತು ಒಪ್ಪೊ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಪಾಲು ಹೊಂದಿವೆ. ಯುರೋಪಿನಲ್ಲಿ ಜಾರಿಯಲ್ಲಿರುವ ನಿಯಮಗಳ ಅನ್ವಯ, ಅಲ್ಲಿನ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಪನಿಗಳು ಮೊದಲೇ ಇನ್‌ಸ್ಟಾಲ್ ಮಾಡುವ ಆ್ಯಪ್‌ಗಳನ್ನು ತೆಗೆದುಹಾಕಲು ಅವಕಾಶ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT