ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ: ಅಕ್ಟೋಬರ್‌ನಿಂದ ಸಕ್ಕರೆ ರಫ್ತು ನಿಷೇಧ ಸಾಧ್ಯತೆ

Published 23 ಆಗಸ್ಟ್ 2023, 15:48 IST
Last Updated 23 ಆಗಸ್ಟ್ 2023, 15:48 IST
ಅಕ್ಷರ ಗಾತ್ರ

ಮುಂಬೈ/ನವದೆಹಲಿ: ಕೇಂದ್ರ ಸರ್ಕಾರವು ಅಕ್ಟೋಬರ್‌ನಿಂದ ಸಕ್ಕರೆ ರಫ್ತಿನ ಮೇಲೆ ನಿಷೇಧ ಹೇರುವ ಸಾಧ್ಯತೆ ಇದೆ. ಮಳೆಯ ಕೊರತೆಯ ಕಾರಣದಿಂದಾಗಿ ಕಬ್ಬು ಬೆಳೆ ಕಡಿಮೆ ಆಗಿರುವ ಕಾರಣ ಈ ತೀರ್ಮಾನ ಕೈಗೊಳ್ಳಬಹುದು ಎಂದು ಸರ್ಕಾರದ ಮೂಲಗಳು ಹೇಳಿವೆ.

ಅಕ್ಟೋಬರ್‌ನಿಂದ ಹೊಸ ಸಕ್ಕರೆ ಹಂಗಾಮು ಆರಂಭವಾಗುತ್ತದೆ. ಹೊಸ ಹಂಗಾಮಿಗೆ ಅನ್ವಯವಾಗುವಂತೆ ಸಕ್ಕರೆ ರಫ್ತು ನಿಷೇಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತವು ಸಕ್ಕರೆ ರಫ್ತು ನಿಷೇಧಿಸಿದರೆ, ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ವಸ್ತುಗಳ ಹಣದುಬ್ಬರ ಹೆಚ್ಚಾಗುವ ಆತಂಕ ಇದೆ. ಏಳು ವರ್ಷಗಳಿಂದ ಈಚೆಗೆ ಸಕ್ಕರೆ ರಫ್ತು ನಿಷೇಧಿಸಿದ ನಿದರ್ಶನ ಇಲ್ಲ.

‘ದೇಶಿ ಸಕ್ಕರೆ ಬೇಡಿಕೆಯನ್ನು ಪೂರೈಸುವುದು ನಮ್ಮ ಪ್ರಾಥಮಿಕ ಆದ್ಯತೆ. ಹೆಚ್ಚುವರಿ ಕಬ್ಬಿನಿಂದ ಎಥೆನಾಲ್ ಉತ್ಪಾದಿಸುವ ಗುರಿಯೂ ಇದೆ’ ಎಂದು ಸರ್ಕಾರದ ಮೂಲವೊಂದು ಹೇಳಿದೆ. ‘ಮುಂಬರುವ ಹಂಗಾಮಿನಲ್ಲಿ ರಫ್ತು ಮಾಡುವುದಕ್ಕೆ ಹೆಚ್ಚುವರಿ ಸಕ್ಕರೆ ನಮ್ಮಲ್ಲಿ ಅಗತ್ಯ ಪ್ರಮಾಣದಲ್ಲಿ ಇರುವುದಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆಪ್ಟೆಂಬರ್‌ 30ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಂಗಾಮಿನಲ್ಲಿ 61 ಲಕ್ಷ ಟನ್ ಸಕ್ಕರೆಯನ್ನು ಮಾತ್ರ ರಫ್ತು ಮಾಡಲು ಕೇಂದ್ರವು ಅವಕಾಶ ಕಲ್ಪಿಸಿದೆ. ಹಿಂದಿನ ಹಂಗಾಮಿನಲ್ಲಿ 1.11 ಕೋಟಿ ಟನ್ ರಫ್ತಿಗೆ ಅವಕಾಶ ನೀಡಲಾಗಿತ್ತು.

ಮಹಾರಾಷ್ಟ್ರ ಮತ್ತು ಕರ್ನಾಟಕ ಕಬ್ಬು ಬೆಳೆಯುವುದರಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿ ಇವೆ. ಆದರೆ ಈ ರಾಜ್ಯಗಳಲ್ಲಿ ಮಳೆಯ ಪ್ರಮಾಣವು ವಾಡಿಕೆಗಿಂತ ಶೇಕಡ 50ರಷ್ಟು ಕಡಿಮೆ ಇದೆ. ಈ ರಾಜ್ಯಗಳು ದೇಶದ ಒಟ್ಟು ಸಕ್ಕರೆ ಉತ್ಪಾದನೆಯಲ್ಲಿ ಶೇ 50ಕ್ಕಿಂತ ಹೆಚ್ಚಿನ ಪಾಲು ಹೊಂದಿವೆ.

ಮಳೆ ಕಡಿಮೆ ಆಗಿರುವ ಕಾರಣ ಅಕ್ಟೋಬರ್ 1ರಿಂದ ಶುರುವಾಗುವ ಹೊಸ ಹಂಗಾಮಿನಲ್ಲಿ ಸಕ್ಕರೆ ಉತ್ಪಾದನೆ ತಗ್ಗಬಹುದು. ಅಲ್ಲದೆ, 2024–25ರ ಹಂಗಾಮಿನಲ್ಲಿ ಕಬ್ಬು ಬೆಳೆಯುವ ಪ್ರಮಾಣ ಕೂಡ ಕಡಿಮೆ ಆಗಬಹುದು ಎಂದು ಉದ್ಯಮದ ಮೂಲಗಳು ಹೇಳಿವೆ.

ದೇಶದಲ್ಲಿ ಸಕ್ಕರೆ ಬೆಲೆಯು ಈ ವಾರದಲ್ಲಿ ಏರಿಕೆ ಕಂಡಿದೆ. ‘ಸಕ್ಕರೆಯ ಬೆಲೆಯಲ್ಲಿ ಈಚೆಗೆ ಆಗಿರುವ ಏರಿಕೆಯು, ರಫ್ತಿಗೆ ಅವಕಾಶ ನೀಡುವ ಸಾಧ್ಯತೆಯನ್ನು ಇಲ್ಲವಾಗಿಸಿದೆ’ ಎಂದು ಇನ್ನೊಬ್ಬರು ಅಧಿಕಾರಿ ತಿಳಿಸಿದ್ದಾರೆ. 2023–24ನೆಯ ಹಂಗಾಮಿನಲ್ಲಿ ದೇಶದ ಸಕ್ಕರೆ ಉತ್ಪಾದನೆಯು ಶೇ 3.3ರಷ್ಟು ಕಡಿಮೆ ಆಗುವ ಸಾಧ್ಯತೆ ಇದೆ.

ಬಾಸ್ಮತಿ ಹೊರತುಪಡಿಸಿ ಇತರ ಬಗೆಯ ಅಕ್ಕಿ ರಫ್ತಿಗೆ ಕೇಂದ್ರವು ಈಗಾಗಲೇ ನಿಷೇಧ ಹೇರಿದೆ. ಈರುಳ್ಳಿ ರಫ್ತಿನ ಮೇಲೆ ಶೇ 40ರಷ್ಟು ಸುಂಕ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT