ಬುಧವಾರ, ಸೆಪ್ಟೆಂಬರ್ 29, 2021
20 °C

ಕೋವಿಡ್‌–19 ಸೋಂಕಿನ ಭೀತಿ: ಕಬ್ಬು ಕಟಾವು ವಿಳಂಬ ಸಾಧ್ಯತೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ನ್ಯೂಯಾರ್ಕ್‌: ಕೋವಿಡ್‌–19 ಭೀತಿಯಿಂದಾಗಿ ವಲಸೆ ಕಾರ್ಮಿಕರ ಕೊರತೆ ಉಂಟಾಗಿದೆ. ಹೀಗಾಗಿ ಈ ಬಾರಿ ಭಾರತದಲ್ಲಿ ಕಬ್ಬು ಕಟಾವು ವಿಳಂಬವಾಗಲಿದೆ ಎಂದು ವೆಸ್ಟ್‌ ಇಂಡಿಯನ್‌ ಶುಗರ್‌ ಮಿಲ್ಸ್‌ ಅಸೋಸಿಯೇಷನ್‌ ಹೇಳಿದೆ.

ಭಾರತದಲ್ಲಿ ಕಬ್ಬು ಕಟಾವು ಅಕ್ಟೋಬರ್‌ನಿಂದ ಆರಂಭವಾಗಲಿದೆ. ಈ ವೇಳೆಗೆ ಜಾಗತಿಕ ಮಟ್ಟದಲ್ಲಿ ಪ್ರಮುಖ ದೇಶಗಳ ಕಬ್ಬು ಕಟಾವು ಮುಗಿದಿರುತ್ತದೆ. ಭಾರತದಲ್ಲಿ ಕಬ್ಬು ಕಟಾವು ಕೆಲಸವು ವಲಸೆ ಕಾರ್ಮಿಕರ ಮೇಲೆಯೇ ಅವಲಂಬಿತವಾಗಿದೆ. ಅತಿ ಹೆಚ್ಚು ಕೋವಿಡ್ ಪ್ರಕರಣಗಳ ಪಟ್ಟಿಯಲ್ಲಿ ಭಾರತವು ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ಹೀಗಾಗಿ  ಕಬ್ಬು ಕಟಾವಿಗೆ ಬಂದರೆ ಸೋಂಕು ಇನ್ನಷ್ಟು ಹರಡುವ ಆತಂಕ ಎದುರಾಗಿದೆ.

ಕಟಾವು ಮಾಡುವುದು ತಡವಾದಷ್ಟೂ ಸಕ್ಕರೆ ಉತ್ಪಾದನೆಯೂ ನಿಧಾನವಾಗಲಿದೆ. ಆದರೆ, ಬ್ರೆಜಿಲ್‌ನಲ್ಲಿ ಸಕ್ಕರೆ ಉತ್ಪಾದನೆ ಮುಕ್ತಾಯದ ಹಂತಕ್ಕೆ ಬಂದಿರುತ್ತದೆ. ಥಾಯ್ಲೆಂಡ್‌ನಲ್ಲಿ 10 ವರ್ಷಗಳಿಗೊಮ್ಮೆ ಕಬ್ಬು ಬೆಳೆಯಲಾಗುತ್ತದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆ ಪ್ರಮಾಣ ತಗ್ಗಲಿದೆ.

ಭಾರತದಲ್ಲಿ ಕಬ್ಬು ಅರೆಯುವಿಕೆ ನಿಧಾನವಾದಷ್ಟೂ ಜಾಗತಿಕ ಮಾರುಕಟ್ಟೆಗೆ ಪೂರೈಕೆ ತಡವಾಗಲಿದೆ. ಇದರಿಂದ ಸಕ್ಕರೆ ಬೆಲೆ ಇಳಿಕೆಗೂ ಕಾರಣವಾಗಬಹುದು. ಸದ್ಯ ಸಕ್ಕರೆ ಬೆಲೆಯು ಐದು ತಿಂಗಳ ಗರಿಷ್ಠ ಮಟ್ಟದಲ್ಲಿದೆ.

‘ಸ್ಥಳೀಯ ಮಟ್ಟದಲ್ಲಿ ಲಭ್ಯವಿರುವ ಕಾರ್ಮಿಕರ ಸಂಖ್ಯೆ ಹಾಗೂ ಅಕ್ಟೋಬರ್‌ನಲ್ಲಿ ಸೋಂಕು ಎಷ್ಟರ ಮಟ್ಟಿಗೆ ನಿಯಂತ್ರಣಕ್ಕೆ ಬರಲಿದೆ ಎನ್ನುವುದರ ಆಧಾರದ ಮೇಲೆ ಕಬ್ಬು ಕಟಾವು ಮಾಡುವುದು ನಿರ್ಧಾರವಾಗಲಿದೆ’ ಎಂದು ವೆಸ್ಟ್‌ ಇಂಡಿಯನ್‌ ಶುಗರ್‌ ಮಿಲ್ಸ್‌ ಅಸೋಸಿಯೇಷನ್‌ನ (ಡಬ್ಲ್ಯುಐಎಸ್‌ಎಂಎ) ಅಧ್ಯಕ್ಷ ಬಿ.ಬಿ. ಥೋಂಬರೆ ಹೇಳಿದ್ದಾರೆ.

ಸೋಂಕು ಹರಡುವ ಭಯ ಇರುವುದರಿಂದ ಕಡಿಮೆ ಲಾಭ ಸಿಗುವ ಕೆಲಸಗಳನ್ನು ಮಾಡಲು ಕೆಲವರು ಅನಿವಾರ್ಯವಾಗಿ ಒಪ್ಪಿಕೊಳ್ಳುವಂತೆ ಆಗಲಿದೆ.

ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್‌ನಲ್ಲಿನ ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಮಾಡಲು ವಲಸೆ ಕಾರ್ಮಿಕರ ಮೇಲೆ ಹೆಚ್ಚು ಅಲವಂಬಿತವಾಗಿವೆ. ಇವರಲ್ಲಿ ಬಹಳಷ್ಟು ಕಾರ್ಮಿಕರು ಈ ವರ್ಷ ಕೆಲಸಕ್ಕೆ ಬರುವುದು ಅನುಮಾನ’ ಎಂದೂ ಅವರು ಹೇಳಿದ್ದಾರೆ.

‘ಭಾರತದಲ್ಲಿ ಬಹುತೇಕವಾಗಿ ಸಣ್ಣ ಸಣ್ಣ ಪ್ರದೇಶಗಳಲ್ಲಿ ಕಬ್ಬು ಬೆಳೆಯಲಾಗುತ್ತದೆ. ಹೀಗಾಗಿ ರೈತರು ಯಂತ್ರಗಳ ಮೇಲೆ ವೆಚ್ಚ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ಕಾರ್ಖಾನೆಗಳು ನಿಧಾನವಾಗಿ ಯಂತ್ರಗಳ ಮೇಲೆ ಹೂಡಿಕೆ ಮಾಡಲು ಆರಂಭಿಸಿವೆ’ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕಬ್ಬು ಕಟಾವು ಮಾಡಲು 7 ಲಕ್ಷದಿಂದ 9 ಲಕ್ಷ ಕಾರ್ಮಿಕರ ಅಗತ್ಯವಿದೆ. ಇವರು ರಾಜ್ಯದ ಬೇರೆ ಭಾಗಗಳಿಂದ ಹಾಗೂ ಇತರೆ ರಾಜ್ಯಗಳಿಂದ ಕೆಲಸಕ್ಕೆ ಬರಬೇಕು. ಆದರೆ,  ರಾಜ್ಯಗಳ ಮಧ್ಯೆ ಸಂಚಾರಕ್ಕೆ ಎಷ್ಟರ ಮಟ್ಟಿಗೆ ಅವಕಾಶ ಇದೆ ಎನ್ನುವುದರ ಮೇಲೆ ಕಟಾವು ಮಾಡುವುದು ನಿರ್ಧಾರವಾಗಲಿದೆ’ ಎಂದು ನ್ಯೂಯಾರ್ಕ್‌ನ ಪಾರಗನ್‌ ಗ್ಲೋಬಲ್‌ ಮಾರ್ಕೇಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮೈಕೆಲ್‌ ಮೆಕ್‌ಡಾಗಲ್‌ ಹೇಳಿದ್ದಾರೆ.

ಅಂಕಿಅಂಶ

37 ಕೋಟಿ ಟನ್ – ವಾರ್ಷಿಕ ಕಬ್ಬು ಉತ್ಪಾದನೆ

5% – ಯಂತ್ರಗಳ ಬಳಕೆ

5 ಕೋಟಿ – ಕಬ್ಬು ಬೆಳೆಯುತ್ತಿರುವ ರೈತರು

700 – ದೇಶದಲ್ಲಿನ ಫ್ಯಾಕ್ಟರಿಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು