ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೇತರಿಕೆಯತ್ತ ಆರ್ಥಿಕತೆ’: ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್ ಅಭಿಪ್ರಾಯ

Last Updated 11 ಜುಲೈ 2020, 19:32 IST
ಅಕ್ಷರ ಗಾತ್ರ

ಮುಂಬೈ: ‘ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸುತ್ತಿರುವುದರಿಂದ ದೇಶದ ಆರ್ಥಿಕತೆಯು ಸಹಜ ಸ್ಥಿತಿಯತ್ತ ಮರಳುವ ಸೂಚನೆಗಳು ಕಾಣಿಸುತ್ತಿವೆ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್‌ ಅಭಿಪ್ರಾಯಪಟ್ಟಿದ್ದಾರೆ.

‘ಕೋವಿಡ್‌ನಿಂದ ಆರ್ಥಿಕತೆ ಮೇಲೆ ಆಗಲಿರುವ ಪರಿಣಾಮಗಳನ್ನು ತಡೆಯಲು ಇಲ್ಲಿಯವರೆಗೆ ಆರ್‌ಬಿಐ ಕೈಗೊಂಡಿರುವ ಕ್ರಮಗಳು ಪ್ರಯೋಜನಕಾರಿ ಆಗಿರುವಂತೆ ಕಾಣುತ್ತಿದೆ. ಆದರೆ, ಕೋವಿಡ್ ನಿಯಂತ್ರಣಕ್ಕೆ ಬಂದ ಬಳಿಕ ಆರ್ಥಿಕತೆಯನ್ನು ಸಹಜ ಸ್ಥಿತಿಗೆ ತರಲು ಇನ್ನೂ ಹೆಚ್ಚಿನ ಸುಧಾರಣಾ ಕ್ರಮಗಳ ಅಗತ್ಯವಿದ್ದು, ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ’ ಎಂದಿದ್ದಾರೆ.

ಆರ್ಥಿಕ ಬೆಳವಣಿಗೆಯ ಮಧ್ಯಮಾವಧಿಯ ಮುನ್ನೋಟ ಅನಿಶ್ಚಿತವಾಗಿದ್ದು, ಕೋವಿಡ್‌ ಮೇಲೆ ಅವಲಂಬಿತವಾಗಿರಲಿದೆ ಎಂದೂ ಹೇಳಿದ್ದಾರೆ.

ಎಸ್‌ಬಿಐನ 7ನೇ ಬ್ಯಾಂಕಿಂಗ್‌ ಆ್ಯಂಡ್‌ ಎಕನಾಮಿಕ್ಸ್‌ ಕಾನ್‌ಕ್ಲೇವ್‌ನಲ್ಲಿ ವಿಡಿಯೊ ಸಂವಾದ ನಡೆಸಿದ ಅವರು, ‘ಆರ್‌ಬಿಐ ಜಾರಿಗೊಳಿಸಿರುವ ಹಲವು ಕ್ರಮಗಳಿಂದಾಗಿ ಬ್ಯಾಂಕ್‌ಗಳು ತಕ್ಷಣಕ್ಕೆ ಕೋವಿಡ್ ಪರಿಣಾಮಕ್ಕೆ ಗುರಿಯಾಗದಂತೆ ತಡೆದಿವೆ.

‘ನಗದು ಲಭ್ಯತೆಗಷ್ಟೇ ಅಲ್ಲದೆ ಒಟ್ಟಾರೆ ಹಣಕಾಸು ವ್ಯವಸ್ಥೆಯಲ್ಲಿ ಸ್ಥಿರತೆ ಮೂಡಿಸುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಹೆಚ್ಚುವರಿ ಬಂಡವಾಳ ಸಂಗ್ರಹಿಸುವ ಅಗತ್ಯವಿದೆ. ಬ್ಯಾಂಕ್‌ಗಳು ತಮ್ಮ ಆಡಳಿತ‌ ಮತ್ತು ವಿಪತ್ತು ನಿರ್ವಹಣೆಯಲ್ಲಿ ಸುಧಾರಣೆ ತರಬೇಕು. ತುರ್ತು ಅಗತ್ಯ ಎದುರಾಗುವವರೆಗೆ ಕಾಯುವುದಕ್ಕಿಂತಲೂ ಮೊದಲೇ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಸಂಗ್ರಹ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

ಪಿಎಂಸಿ ಬ್ಯಾಂಕ್‌: ‘ಪಂಜಾಬ್‌ ಆ್ಯಂಡ್ ನ್ಯಾಷನಲ್‌ ಕೊ–ಆಪರೇಟಿವ್‌ (ಪಿಎಂಸಿ) ಬ್ಯಾಂಕ್‌ ಅನ್ನು ಪುನಶ್ಚೇತನಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಪಾಲುದಾರರು ಮತ್ತು ಆಡಳಿತ ವರ್ಗಗಳ ಜತೆ ಚರ್ಚಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ಯೆಸ್‌ ಬ್ಯಾಂಕ್‌: ‘ಯೆಸ್‌ ಬ್ಯಾಂಕ್‌ ಅನ್ನು ಆರ್ಥಿಕ ನಷ್ಟದಿಂದ ಹೊರತರಲು ಮಾರುಕಟ್ಟೆ ಆಧಾರಿತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಯಾವುದೇ ಬ್ಯಾಂಕ್‌ನ ಹಣಕಾಸು ಸ್ಥಿತಿಯ ಮೇಲೆ ಅಡ್ಡ ಪರಿಣಾಮ ಬೀರದೇ ಇರುವ ರೀತಿಯಲ್ಲಿ ಯೆಸ್‌ ಬ್ಯಾಂಕ್‌ನ ಪುನಶ್ಚೇತನ ಯೋಜನೆ ರೂಪಿಸಲಾಗಿದೆ.

ದೇಶದ ಹಣಕಾಸು ಸಂಸ್ಥೆಗಳ ಸರ್ಕಾರಿ–ಖಾಸಗಿ ಸಹಭಾಗಿತ್ವದ ಯೋಜನೆ ಇದಾಗಿದೆ.ಯೆಸ್‌ ಬ್ಯಾಂಕ್‌, 8 ಹಣಕಾಸು ಸಂಸ್ಥೆಗಳಿಂದ ₹ 10 ಸಾವಿರ ಕೋಟಿ ಬಂಡವಾಳ ಪಡೆದುಕೊಂಡಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಇರುವಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಅದು ದೊಡ್ಡದಾಗದಂತೆ ಮಾಡುವುದರ ಬಗ್ಗೆ ಆರ್‌ಬಿಐ ಗಮನ ಹರಿಸಿದೆ. ಆದರೆ, ಹೆಚ್ಚಿನ ಜವಾಬ್ದಾರಿಯು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಮೇಲೆಯೇ ಇದೆ’ ಎಂದಿದ್ದಾರೆ.

ಕೋವಿಡ್‌ ಪರಿಣಾಮ

ಬ್ಯಾಂಕ್‌ಗಳ ವಸೂಲಾಗದ ಸಾಲದಲ್ಲಿ (ಎನ್‌ಪಿಎ) ಏರಿಕೆ

ಬ್ಯಾಂಕ್‌ಗಳಿಗೆ ಬಂಡವಾಳ ನಷ್ಟ ಸಾಧ್ಯತೆ

ಬ್ಯಾಂಕಿಂಗ್‌ ವಲಯಕ್ಕೆ ಪುನರ್ಧನದ ಅಗತ್ಯ

ಬಡ್ಡಿದರ ಕಡಿತದಿಂದ ಪ್ರಯೋಜನವಾಗುತ್ತಿಲ್ಲ: ರೆಪೊ ದರ ಕಡಿತದ ಪ್ರಯೋಜನವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ಸರಿಯಾಗಿ ವರ್ಗಾಯಿಸುತ್ತಿಲ್ಲ. ಹೀಗಾಗಿ ಬಡ್ಡಿದರ ಕಡಿತದಿಂದ ಆರ್ಥಿಕ ಬೆಳವಣಿಗೆಗೆ ಪ್ರಯೋಜನ ಆಗಲಿದೆ ಎನ್ನುವುದು ಅಂದುಕೊಂಡಷ್ಟು ಸರಳವಾಗಿ ಕೆಲಸ ಮಾಡುತ್ತಿಲ್ಲ’ ಎಂದು ಹಿರಿಯ ಆರ್ಥಿಕ ತಜ್ಞ ರಥಿನ್‌ ರಾಯ್‌ ಹೇಳಿದ್ದಾರೆ.

ಆರ್ಥಿಕತೆಯ ಮೇಲೆ ಕೋವಿಡ್‌ ಪರಿಣಾಮ ತಡೆಯಲು ಆರ್‌ಬಿಐ ರೆಪೊ ದರದಲ್ಲಿ ಶೇ 1.15ರಷ್ಟು ಇಳಿಕೆ ಮಾಡಿದೆ. 2019ರ ಫೆಬ್ರುವರಿಯಿಂದ ಇಲ್ಲಿಯವರೆಗೆ ಒಟ್ಟಾರೆ ಶೇ 2.50ರಷ್ಟು ಬಡ್ಡಿದರ ಕಡಿತ ಆಗಿದೆ ಎಂದು ಗವರ್ನರ್‌ ಹೇಳಿದ್ದಾರೆ. ಈ ಬಗ್ಗೆ ರಥಿನ್‌ ಪ್ರತಿಕ್ರಿಯಿಸಿದ್ದಾರೆ.

ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಪಬ್ಲಿಕ್‌ ಫೈನಾನ್ಸ್‌ ಆ್ಯಂಡ್‌ ಪಾಲಿಸಿಯ (ಎನ್‌ಐಪಿಎಫ್‌ಪಿ) ನಿರ್ದೇಶಕರಾಗಿರುವ ಅವರು, ಆರ್‌ಬಿಐನ ಹಣಕಾಸು ನೀತಿ ಪ್ರಕಟಣೆ ಮತ್ತು ಗವರ್ನರ್‌ ಅವರ ಹೇಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬಡ್ಡಿದರ ಕಡಿತದಿಂದ ಆರ್ಥಿಕ ಬೆಳವಣಿಗೆ ಆಗಲಿದೆ ಎನ್ನುವ ಊಹೆಯು ಅಂದಕೊಂಡಷ್ಟು ಸರಳವಾಗಿಲ್ಲ. ಗವರ್ನರ್‌ ಅವರ ಮಾತುಗಳನ್ನು ಒಪ್ಪಲು ಆಗುತ್ತಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT