ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲ್ಲರೆ ಹಣದುಬ್ಬರ 1 ವರ್ಷದ ಕನಿಷ್ಠ: ಕೈಗಾರಿಕಾ ಉತ್ಪಾದನೆ ಐದು ತಿಂಗಳ ಗರಿಷ್ಠ

Last Updated 12 ಜನವರಿ 2023, 19:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ರಾಯಿಟರ್ಸ್): ಚಿಲ್ಲರೆ ಹಣದುಬ್ಬರ ಪ್ರಮಾಣವು ಡಿಸೆಂಬರ್ ತಿಂಗಳಿನಲ್ಲಿ ಶೇಕಡ 5.72ಕ್ಕೆ ಇಳಿಕೆಯಾಗಿದೆ. ಇದೇ ವೇಳೆ, ಕೈಗಾರಿಕಾ ಉತ್ಪಾದನೆಯು ಶೇ 7.1ಕ್ಕೆ ಏರಿಕೆ ಕಂಡಿದೆ. ಹಣದುಬ್ಬರ ಇಳಿಕೆ ಹಾಗೂ ಕೈಗಾರಿಕಾ ಉತ್ಪಾದನೆಯ ಏರಿಕೆಯು ಅರ್ಥ ವ್ಯವಸ್ಥೆಯ ಪಾಲಿಗೆ ಒಳ್ಳೆಯ ಸೂಚನೆಗಳು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಣದುಬ್ಬರ ತಗ್ಗಿರುವ ಕಾರಣ, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ಹೆಚ್ಚಳದ ಪ್ರಮಾಣವನ್ನು ಕಡಿಮೆ ಮಾಡಬಹುದು ಅಥವಾ ರೆಪೊ ಏರಿಕೆಗೆ ಅಲ್ಪವಿರಾಮ ಕೂಡ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಆರ್‌ಬಿಐ 2022ರ ಮೇ ತಿಂಗಳಿನಿಂದ ರೆಪೊ ದರವನ್ನು ಹೆಚ್ಚಿಸುತ್ತಿದೆ.

ಡಿಸೆಂಬರ್‌ನಲ್ಲಿ ದಾಖಲಾಗಿರುವ ಚಿಲ್ಲರೆ ಹಣದುಬ್ಬರ ದರವು ಒಂದು ವರ್ಷದ ಕನಿಷ್ಠ ಮಟ್ಟ. ಆಹಾರ ವಸ್ತುಗಳ ಬೆಲೆ ಏರಿಕೆ ತಗ್ಗಿರುವುದು ಹಣದುಬ್ಬರ ಇಳಿಕೆಗೆ ಕಾರಣ.

ಚಿಲ್ಲರೆ ಹಣದುಬ್ಬರವು 2022ರ ಜನವರಿಯಿಂದ ಅಕ್ಟೋಬರ್‌ವರೆಗೆ ಆರ್‌ಬಿಐ ಹಾಕಿಕೊಂಡಿರುವ ಗರಿಷ್ಠ ಮಿತಿಯಾದ ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇತ್ತು. ನವೆಂಬರ್‌ನಲ್ಲಿ ಶೇ 5.88ಕ್ಕೆ ಇಳಿಕೆ ಕಂಡಿತು. ಡಿಸೆಂಬರ್‌ನಲ್ಲಿ ಇನ್ನಷ್ಟು ಇಳಿದಿದೆ. 2021ರ ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 5.66ರಷ್ಟು ಇತ್ತು.

ಆಹಾರ ವಸ್ತುಗಳ ಹಣದುಬ್ಬರವು ನವೆಂಬರ್‌ನಲ್ಲಿ ಶೇ 4.67ರಷ್ಟು ಇದ್ದಿದ್ದು ಡಿಸೆಂಬರ್‌ನಲ್ಲಿ ಶೇ 4.19ಕ್ಕೆ ಇಳಿಕೆ ಆಗಿದೆ.

ಕಂಪನಿಗಳು ತಯಾರಿಕಾ ವೆಚ್ಚದಲ್ಲಿನ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿವೆ. ಸೇವೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ 2022–23ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರವು ಏರುಮುಖವಾಗಿಯೇ ಇರುವ ನಿರೀಕ್ಷೆ ಇದೆ. 2023ರ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರವು 2022ರ ಡಿಸೆಂಬರ್‌ಗಿಂತಲೂ ತುಸು ಹೆಚ್ಚಿನ ಅಂದರೆ ಶೇ 5.8ರಿಂದ ಶೇ 6ರ ಮಟ್ಟದಲ್ಲಿ ಇರುವ ಅಂದಾಜು ಮಾಡಲಾಗಿದೆ ಎಂದು ಐಸಿಆರ್‌ಎನ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್‌ ಹೇಳಿದ್ದಾರೆ.

ಕೈಗಾರಿಕಾ ಉತ್ಪಾದನೆ ಶೇ 7.1ಕ್ಕೆ ಏರಿಕೆ
ಅಕ್ಟೋಬರ್‌ನಲ್ಲಿ ಇಳಿಕೆ ಕಂಡಿದ್ದ ದೇಶದ ಕೈಗಾರಿಕಾ ಉತ್ಪಾದನೆಯು ನವೆಂಬರ್‌ನಲ್ಲಿ ಶೇ 7.1ಕ್ಕೆ ಏರಿಕೆ ಕಂಡಿದೆ. ಐದು ತಿಂಗಳ ಗರಿಷ್ಠ ಮಟ್ಟ ಇದಾಗಿದೆ. 2022ರ ಜೂನ್‌ನಲ್ಲಿ ಶೇ 12.6ರಷ್ಟು ಗರಿಷ್ಠ ಮಟ್ಟದ ಬೆಳವಣಿಗೆ ಕಂಡಿತ್ತು.

ಕೈಗಾರಿಕಾ ಉತ್ಪಾದನಾ ಸೂಚ್ಯಂಕವು (ಐಐಪಿ) ಅಕ್ಟೋಬರ್‌ನಲ್ಲಿ ಶೇ 4.2ರಷ್ಟು ಕುಸಿದಿತ್ತು.

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ, ತಯಾರಿಕಾ ವಲಯವು ನವೆಂಬರ್‌ನಲ್ಲಿ ಶೇ 6.1ರಷ್ಟು ಬೆಳವಣಿಗೆ ಕಂಡಿದೆ. ಗಣಿ ವಲಯದ ಬೆಳವಣಿಗೆ ಶೇ 9.7ರಷ್ಟು, ವಿದ್ಯುತ್ ವಲಯದ ಬೆಳವಣಿಗೆ ಶೇ 12.7ರಷ್ಟು ಆಗಿದೆ.

ಬಂಡವಾಳ ಸರಕುಗಳ ವಲಯವು ಡಿಸೆಂಬರ್‌ನಲ್ಲಿ ಶೇ 20.7ರಷ್ಟು ಬೆಳವಣಿಗೆ ಕಂಡಿದೆ. ನವೆಂಬರ್‌ನಲ್ಲಿ ಶೇ 2.6ರಷ್ಟು ಇಳಿಕೆ ಕಂಡಿತ್ತು.

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ನವೆಂಬರ್‌ ಅವಧಿಯಲ್ಲಿ ಐಐಪಿ ಶೇ 5.5ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಶೇ 17.6ರಷ್ಟು ಬೆಳವಣಿಗೆ ಕಂಡಿತ್ತು.

*

ಹಣದುಬ್ಬರ ಇಳಿಕೆಯಾಗಿರುವುದರಿಂದ ಆರ್‌ಬಿಐಗೆ ಬಡ್ಡಿ ದರ ಹೆಚ್ಚಿಸುವ ವಿಚಾರದಲ್ಲಿ ನಿಧಾನವಾಗಿ ಹೆಜ್ಜೆ ಇರಿಸಲು ಸಾಧ್ಯವಾಗುತ್ತದೆ. ಕೈಗಾರಿಕಾ ಬೆಳವಣಿಗೆ ಏರಿಕೆಯಾಗಿರುವುದು ಭಾರತ ಆರ್ಥಿಕ ಬೆಳವಣಿಗೆ ಪುಟಿದೆದ್ದಿದೆ ಎಂಬುದನ್ನು ತೋರಿಸುತ್ತಿದೆ. ಅಂದರೆ, 2023–24ರಲ್ಲಿ ದೇಶವು ಶೇ 6ರಷ್ಟು ಬೆಳವಣಿಗೆ ಸಾಧಿಸಲು ಸಾಧ್ಯವಿದೆ.
-ಡಾ.ವಿ.ಕೆ. ವಿಜಯಕುಮಾರ್, ಮುಖ್ಯ ಹೂಡಿಕೆ ತಜ್ಞ, ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT