ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದು, ಜಿಎಸ್‌ಟಿಯಿಂದ ಭಾರತದ ಆರ್ಥಿಕ ಪ್ರಗತಿಗೆ ಹಿನ್ನಡೆ: ರಘುರಾಂ ರಾಜನ್

Last Updated 10 ನವೆಂಬರ್ 2018, 18:31 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ನೋಟು ರದ್ದತಿ ಮತ್ತು ಜಿಎಸ್‌ಟಿಯಿಂದಾಗಿಯೇ ಕಳೆದ ವರ್ಷ ದೇಶದ ಆರ್ಥಿಕ ಪ್ರಗತಿಗೆ ಹಿನ್ನಡೆಯಾಯಿತು’ ಎಂದು ಆರ್‌ಬಿಐನ ಮಾಜಿ ಗವರ್ನರ್ ರಘುರಾಂ ರಾಜನ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಈ ಎರಡೂ ಕ್ರಮಗಳು ಆರ್ಥಿಕತೆಗೆ ಆಘಾತ ನೀಡಿವೆಎಂದು ಹೇಳಿರುವ ಅವರು,‘2012 ರಿಂದ 2016ರವರೆಗೆ ನಾಲ್ಕು ವರ್ಷಗಳಲ್ಲಿ ಭಾರತವು ಅತ್ಯಂತ ವೇಗವಾಗಿ ಪ್ರಗತಿ ಸಾಧಿಸಿತ್ತು. ಆದರೆ ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಯಾದ ಬಳಿಕ ಆರ್ಥಿಕ ಬೆಳವಣಿಗೆ ಇಳಿಕೆ ಕಾಣಲಾರಂಭಿಸಿತು’ ಎಂದು ಹೇಳಿದ್ದಾರೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ‘ಭವಿಷ್ಯದ ಭಾರತ’ ವಿಷಯದ ಕುರಿತು ಅವರು ಮಾತನಾಡಿದರು.

ಹೆಚ್ಚಿನ ಉದ್ಯೋಗ ಸೃಷ್ಟಿ ಅಗತ್ಯ: ‘ಈಗಿರುವ ಶೇ 7ರಷ್ಟು ಜಿಡಿಪಿ ಪ್ರಗತಿಯಿಂದ ದೇಶದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಉದ್ಯೋಗಾಕಾಂಕ್ಷಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ತಿಂಗಳಿಗೆ ಕನಿಷ್ಠ 10 ಲಕ್ಷ ಉದ್ಯೋಗ ಸೃಷ್ಟಿಸುವ ಅಗತ್ಯವಿದೆ.ಹೀಗಾಗಿ ಈಗಿರುವುದಕ್ಕೆ ತೃಪ್ತಿಪಟ್ಟುಕೊಳ್ಳದೆ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕಿದೆ.

‘ಭಾರತವು ಅತ್ಯಂತ ಮುಕ್ತ ಆರ್ಥಿಕತೆಯಾಗಿದೆ.ಜಾಗತಿಕ ಆರ್ಥಿಕತೆ ಪ್ರಗತಿ ಸಾಧಿಸಿದರೆ, ಅದರೊಟ್ಟಿಗೆ ಭಾರತವೂ ಬೆಳೆಯುತ್ತದೆ. 2017ರಲ್ಲಿ ಜಾಗತಿಕ ಆರ್ಥಿಕತೆ ಚೇತರಿಕೆ ಹಾದಿಗೆ ಮರಳುವಂತಹ ಸ್ಥಿತಿಯಲ್ಲಿತ್ತು. ಆಗ, ಭಾರತದ ಪ್ರಗತಿ ಇಳಿಕೆ ಕಂಡಿತು. ಇದಕ್ಕೆ ಜಿಎಸ್‌ಟಿ ಮತ್ತು ನೋಟು ರದ್ದತಿಯೇ ಕಾರಣ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಆ ಸಮಸ್ಯೆಗಳಿಂದ ಹೊರಬರುವ ಹೊತ್ತಿಗೆ ಕಚ್ಚಾ ತೈಲ ದರ ಕಾಡಿತು. ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ತೈಲ ದರ ಪ್ರಗತಿಗೆ ಅಡ್ಡಿಪಡಿಸುತ್ತಿದೆ’ ಎಂದಿದ್ದಾರೆ.

ಪ್ರಮುಖ ಮೂರು ಸಮಸ್ಯೆಗಳು:ದೇಶವು ಸದ್ಯ, ಪ್ರಮುಖ ಮೂರು ಸಮಸ್ಯೆಗಳಿಂದ ಬಳಲುತ್ತಿದೆ ಎಂದು ರಾಜನ್‌ ಹೇಳಿದ್ದಾರೆ.

‘ಮೊದಲನೇಯದು ಮೂಲಸೌಕರ್ಯ ವಲಯ. ಮೂಲಸೌಕರ್ಯ ವಲಯ ಪ್ರಗತಿ ಸಾಧಿಸಿದರೆ, ಅದರಿಂದ ಉದ್ಯೋಗ ಸೃಷ್ಟಿ ಸಾಧ್ಯವಾಗಲಿದ್ದು, ಆರ್ಥಿಕ ಬೆಳವಣಿಗೆಯೂ ಆಗಲಿದೆ.ಎರಡನೇಯದು ವಿದ್ಯುತ್‌ ವಲಯದ ಸಮಸ್ಯೆ. ಉತ್ಪಾದನೆಯಾಗುವ ವಿದ್ಯುತ್‌ ಅಗತ್ಯ ಇರುವವರಿಗೆ ತಲುಪುವಂತಾಗಬೇಕು. ಮೂರನೇಯದಾಗಿ ಬ್ಯಾಂಕ್‌ಗಳ ವಸೂಲಿಯಾಗದ ಸಾಲ (ಎನ್‌ಪಿಎ). ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಎನ್‌ಪಿಎ ಗರಿಷ್ಠ ಮಟ್ಟದಲ್ಲಿದೆ. ಇದು ಪ್ರಗತಿಗೆ ಹಿನ್ನಡೆಯಾಗಿ ಪರಿಣಮಿಸಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT