ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಗೋ ಫಸ್ಟ್' ಜೊತೆ ಇರಲಿದೆ ವಾಡಿಯಾ ಸಮೂಹ: ಸಿಇಒ ಕೌಶಿಕ್ ಖೋನಾ ಸ್ಪಷ್ಟನೆ

Published 3 ಮೇ 2023, 15:27 IST
Last Updated 3 ಮೇ 2023, 15:27 IST
ಅಕ್ಷರ ಗಾತ್ರ

ಬೆಂಗಳೂರು/ಮುಂಬೈ : ‘ಗೋ' ಏರ್‌ಲೈನ್ಸ್‌ನ ಮಾಲೀಕತ್ವ ಹೊಂದಿರುವ ವಾಡಿಯಾ ಸಮೂಹಕ್ಕೆ ಕಂಪನಿಯಿಂದ ಹೊರ ನಡೆಯುವ ಆಲೋಚನೆ ಇಲ್ಲ ಎಂದು ಕಂಪನಿ ಬುಧವಾರ ಸ್ಪಷ್ಟಪಡಿಸಿದೆ.

‘ವಾಡಿಯಾ ಸಮೂಹ, ಅದರಲ್ಲೂ ಮುಖ್ಯವಾಗಿ ನುಸ್ಲಿ ವಾಡಿಯಾ ಅವರು ಕಂಪನಿಯ ಚಟುವಟಿಕೆಗಳು ಮುನ್ನಡೆಯುತ್ತಿರಬೇಕು ಎಂದು ಯಾವಾಗಲೂ ಬಯಸಿದ್ದಾರೆ’ ಎಂದು ಕಂಪನಿಯ ಸಿಇಒ ಕೌಶಿಕ್ ಖೋನಾ ಹೇಳಿದ್ದಾರೆ. 'ಗೋ' ಏರ್‌ಲೈನ್ಸ್‌ ಕಂಪನಿಯು ಈಚೆಗೆ ‘ಗೋ ಫಸ್ಟ್’ ಎಂದು ಬ್ರ್ಯಾಂಡ್ ಬದಲಾಯಿಸಿಕೊಂಡಿದೆ.

ಭಾರತದ ವಿಮಾನಯಾನ ಮಾರುಕಟ್ಟೆಯಲ್ಲಿ 2019ರಲ್ಲಿ ಜೆಟ್ ಏರ್‌ವೇಸ್‌ ಕಂಪನಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ನಂತರದಲ್ಲಿ, ಹಣಕಾಸಿನ ಸಂಕಷ್ಟಕ್ಕೆ ಸಿಲುಕಿರುವ ಮತ್ತೊಂದು ಕಂಪನಿ 'ಗೋ ಫಸ್ಟ್'. ಇದು ಭಾರತದ ವಿಮಾನಯಾನ ಮಾರುಕಟ್ಟೆಯಲ್ಲಿನ ತೀವ್ರ ಪೈಪೋಟಿಯನ್ನು ತೋರಿಸುತ್ತಿದೆ.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ (ಎನ್‌ಸಿಎಲ್‌ಟಿ) ಸಲ್ಲಿಸಿರುವ ಅರ್ಜಿಯು ಕಂಪನಿಯ ಪುನಶ್ಚೇತನದ ಉದ್ದೇಶವನ್ನು ಹೊಂದಿದೆಯೇ ವಿನಾ, ಕಂಪನಿಯನ್ನು ಮಾರಾಟ ಮಾಡುವ ಇರಾದೆ ಹೊಂದಿಲ್ಲ ಎಂದು ಖೋನಾ ಹೇಳಿದ್ದಾರೆ.

2021ರ ಚಳಿಗಾಲದಲ್ಲಿ ಗೋ ಫಸ್ಟ್ ಕಂಪನಿಯು ಭಾರತದ ಮಾರುಕಟ್ಟೆಯಲ್ಲಿ ಶೇ 10ರಷ್ಟು ಪಾಲು ಹೊಂದಿತ್ತು. ಇದು 2022ರ ಅಕ್ಟೋಬರ್‌ ವೇಳೆಗೆ ಶೇ 7ಕ್ಕೆ ಕುಸಿಯಿತು.

ಕಂಪನಿಯಲ್ಲಿ ಷೇರು ಪಾಲು ಹೊಂದಲು ಕೆಲವರು ಆಸಕ್ತಿ ತೋರಿದ್ದಾರೆ ಎಂದು ಖೋನಾ ತಿಳಿಸಿದ್ದಾರೆ. ಅಲ್ಲದೆ, ‘ನಾವು ಸೋಲಬಾರದು ಎಂಬುದು ಕೇಂದ್ರ ಸರ್ಕಾರದ ಬಯಕೆಯೂ ಆಗಿದೆ’ ಎಂದಿದ್ದಾರೆ. ಈ ವಿಮಾನಯಾನ ಕಂಪನಿಯು ಒಟ್ಟು ₹ 6,521 ಕೋಟಿ ಸಾಲ ಹೊಂದಿದೆ. ಆದರೆ ಏಪ್ರಿಲ್‌ 30ರವರೆಗೆ ಕಂಪನಿಯು ಯಾವುದೇ ಸಾಲದ ಕಂತನ್ನು ಬಾಕಿ ಇರಿಸಿಕೊಂಡಿಲ್ಲ.

ಗೋ ಫಸ್ಟ್‌ ಕಂಪನಿಯು ವಿಮಾನಯಾನ ಸೇವೆ ಸ್ಥಗಿತಗೊಳಿಸಿರುವುದು ಹೆಚ್ಚಿನ ಅವಧಿಗೆ ಮುಂದುವರಿದಲ್ಲಿ, ಪ್ರತಿಸ್ಪರ್ಧಿ ಕಂಪನಿಗಳು ಹೆಚ್ಚಿನ ಮಾರುಕಟ್ಟೆ ಪಾಲು ಹೊಂದಲು ಮುಂದಾಗಬಹುದು ಎಂದು ಜೆಫರಿಸ್‌ ಸಂಸ್ಥೆಯ ವಿಶ್ಲೇಷಕ ಪ್ರತೀಕ್ ಕುಮಾರ್ ಹೇಳಿದ್ದಾರೆ.

ಈ ನಡುವೆ, ‘ಎಲ್ಲ ಸಿಬ್ಬಂದಿಯ ಬಗ್ಗೆ ಕಾಳಜಿ ಇಟ್ಟುಕೊಂಡು, ಕಂಪನಿಯನ್ನು ಈ ಸ್ಥಿತಿಯಿಂದ ಹೊರತರಲು ಸಾಧ್ಯವಿರುವ ಎಲ್ಲವನ್ನೂ ಮಾಡಲಾಗುತ್ತಿದೆ’ ಎಂಬ ಭರವಸೆಯನ್ನು ಖೋನಾ ನೀಡಿದ್ದಾರೆ. ಕಂಪನಿಯ ಸಿಬ್ಬಂದಿಗೆ ಮಂಗಳವಾರ ಸಂದೇಶ ರವಾನಿಸಿರುವ ಖೋನಾ, ಪ್ರಾಟ್‌ ಆ್ಯಂಡ್‌ ವಿಟ್ನಿ ಕಂಪನಿಯು ಎಂಜಿನ್‌ ಪೂರೈಸಲು ವಿಫಲವಾದ ಕಾರಣದಿಂದಾಗಿ ವಿಮಾನಯಾನ ಕಂಪನಿಗೆ ಸಮಸ್ಯೆ ಎದುರಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT