ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದೊಂದಿಗೆ ರಷ್ಯಾ ವಹಿವಾಟು: ತಗ್ಗಿದ ಡಾಲರ್ ಪ್ರಭಾವ

Last Updated 8 ಮಾರ್ಚ್ 2023, 19:43 IST
ಅಕ್ಷರ ಗಾತ್ರ

ನವದೆಹಲಿ/ಲಂಡನ್: ಅಮೆರಿಕದ ನೇತೃತ್ವದಲ್ಲಿ ರಷ್ಯಾದ ಮೇಲೆ ಹೇರಲಾಗಿರುವ ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ನಿರ್ಬಂಧಗಳು, ದಶಕಗಳಿಂದಲೂ ಡಾಲರ್‌ ಹೊಂದಿದ್ದ ಪ್ರಾಬಲ್ಯವನ್ನು ಕುಗ್ಗಿಸಿವೆ. ಭಾರತದ ಜೊತೆಗೆ ರಷ್ಯಾ ನಡೆಸುತ್ತಿರುವ ಬಹುತೇಕ ವಹಿವಾಟುಗಳು ಡಾಲರ್‌ನಲ್ಲಿ ನಡೆಯುತ್ತಿಲ್ಲದಿರುವುದು ಇದಕ್ಕೆ ಮುಖ್ಯ ಕಾರಣ.

ವಿಶ್ವದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ದೇಶಗಳ ಸಾಲಿನಲ್ಲಿ ಭಾರತವು ಮೂರನೆಯ ಸ್ಥಾನದಲ್ಲಿದೆ. ಉಕ್ರೇನ್–ರಷ್ಯಾ ಯುದ್ಧ ಆರಂಭವಾದ ನಂತರದಲ್ಲಿ, ಭಾರತಕ್ಕೆ ಕಚ್ಚಾ ತೈಲ ಪೂರೈಸುವ ದೇಶಗಳ ಸಾಲಿನಲ್ಲಿ ರಷ್ಯಾ ಮೊದಲ ಸ್ಥಾನಕ್ಕೆ ಬಂದಿದೆ.

ರಷ್ಯಾದ ಕಚ್ಚಾ ತೈಲದ ಮೇಲೆ ಪಶ್ಚಿಮದ ದೇಶಗಳು ಡಿಸೆಂಬರ್ 5ರಂದು ಬೆಲೆ ಮಿತಿ ಹೇರಿದ ನಂತರದಲ್ಲಿ, ರಷ್ಯಾದ ಕಚ್ಚಾ ತೈಲಕ್ಕೆ ಭಾರತವು ಹೆಚ್ಚಾಗಿ ಡಾಲರ್ ಹೊರತುಪಡಿಸಿದ ಕರೆನ್ಸಿಗಳಲ್ಲಿ ಪಾವತಿ ಮಾಡುತ್ತಿದೆ. ಯುಎಇ ಕರೆನ್ಸಿಯಾಗಿರುವ ದಿರ್ಹಂ ಮತ್ತು ರಷ್ಯಾದ ಕರೆನ್ಸಿಯಾಗಿರುವ ರೂಬಲ್‌ನಲ್ಲಿಯೂ ಪಾವತಿಗಳು ಆಗುತ್ತಿವೆ ಎಂದು ಮೂಲಗಳು ಹೇಳಿವೆ.

ಕಳೆದ ಮೂರು ತಿಂಗಳುಗಳಲ್ಲಿ ಹೀಗೆ ಆಗಿರುವ ವಹಿವಾಟುಗಳ ಮೊತ್ತವು ಶತಕೋಟಿ ಡಾಲರ್‌ಗಳಿಗೆ ಸಮ ಎಂದು ಗೊತ್ತಾಗಿದೆ. ಬೇರೆ ಕರೆನ್ಸಿಗಳ ಬಳಕೆ ವಿಚಾರದಲ್ಲಿ ಈ ಪರಿಯ ಪರಿವರ್ತನೆಯು ಹಿಂದೆಂದೂ ವರದಿಯಾಗಿರಲಿಲ್ಲ. ದುಬೈ ಮೂಲದ ಕೆಲವು ವರ್ತಕರು ಹಾಗೂ ರಷ್ಯಾದ ತೈಲ ಮಾರಾಟ ಕಂಪನಿಗಳಾದ ಗ್ಯಾಜ್‌ಪ್ರಂ ಮತ್ತು ರೊಸ್ನೆಫ್ಟ್‌, ಡಾಲರ್ ಹೊರತುಪಡಿಸಿ ಬೇರೆ ಕರೆನ್ಸಿಗಳಲ್ಲಿ ಹಣ ಪಾವತಿಸುವಂತೆ ಕೋರುತ್ತಿವೆ.

ರಷ್ಯಾ ದೇಶವು ಆರ್ಥಿಕ ನಿರ್ಬಂಧಗಳ ಪರಿಣಾಮಗಳಿಂದ ಹೊರಬರಲು, ತನ್ನ ಅರ್ಥ ವ್ಯವಸ್ಥೆಯನ್ನು ಡಾಲರ್ ಪ್ರಭಾವದಿಂದ ಹೊರತರಲು ಯತ್ನಿಸುತ್ತಿದೆ. ಭಾರತದ ಕೆಲವು ಬ್ಯಾಂಕ್‌ಗಳು ಡಾಲರ್‌ ಹೊರತುಪಡಿಸಿದ ಕರೆನ್ಸಿಗಳಲ್ಲಿ ವಹಿವಾಟು ನಡೆಸುವುದಕ್ಕೆ ಬೆಂಬಲ ನೀಡುತ್ತಿವೆ ಎಂದು ವರ್ತಕರ ಮೂಲಗಳು, ಅಮೆರಿಕ ಮತ್ತು ರಷ್ಯಾದ ಆರ್ಥಿಕ ವ್ಯವಹಾರಗಳ ಅಧಿಕಾರಿಗಳು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಭಾರತದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ, ರಷ್ಯಾದಲ್ಲಿ ವಿಶೇಷ ಖಾತೆಯೊಂದನ್ನು ತೆರೆದಿದೆ. ಇದೇ ರೀತಿಯಲ್ಲಿ ರಷ್ಯಾದ ಹಲವು ಬ್ಯಾಂಕ್‌ಗಳು ಭಾರತದ ಬ್ಯಾಂಕ್‌ಗಳಲ್ಲಿ ವಿಶೇಷ ಖಾತೆ ತೆರೆದು ವ್ಯಾಪಾರ ವಹಿವಾಟಿಗೆ ನೆರವು ಒದಗಿಸುತ್ತಿವೆ. ‘ರಷ್ಯಾ ಮೇಲಿನ ನಿರ್ಬಂಧಗಳು ಡಾಲರ್‌ನ ಪ್ರಾಬಲ್ಯವನ್ನು ಕುಗ್ಗಿಸಿ, ಸಣ್ಣ ವರ್ತಕ ಸಮುದಾಯಗಳು ಬೇರೆ ಕರೆನ್ಸಿಗಳನ್ನು ಬಳಸುವುದನ್ನು ಉತ್ತೇಜಿಸಬಹುದು’ ಎಂದು ಐಎಂಎಫ್ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಹಿಂದೆ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT