ಶುಕ್ರವಾರ, ಫೆಬ್ರವರಿ 21, 2020
24 °C
ತಯಾರಿಕಾ ವಲಯದ ಬೆಳವಣಿಗೆ ಶೇ 2.9ರಿಂದ ಶೇ 1.2ಕ್ಕೆ ಇಳಿಕೆ

ಕುಸಿದ ಕೈಗಾರಿಕಾ ವಲಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶಿ ಅರ್ಥ ವ್ಯವಸ್ಥೆಯಲ್ಲಿ ಚೇತರಿಕೆಯ ಲಕ್ಷಣಗಳು ಕಂಡು ಬರುತ್ತಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರತಿಪಾದಿಸಿದ ಮರುದಿನವೇ ಪ್ರಕಟಗೊಂಡಿರುವ ಚಿಲ್ಲರೆ ಹಣದುಬ್ಬರ ಮತ್ತು ಕೈಗಾರಿಕಾ ಉತ್ಪಾದನೆಯ ಅಂಕಿ ಅಂಶಗಳು ಬೇರೆಯೇ ಆದ ಚಿತ್ರಣ ನೀಡಿವೆ.

ದೇಶದ ಕೈಗಾರಿಕಾ ವಲಯದ ಬೆಳವಣಿಗೆಯು 2019ರ ಡಿಸೆಂಬರ್‌ನಲ್ಲಿ ನಕಾರಾತ್ಮಕ ಹಾದಿ ಹಿಡಿದಿದ್ದು, ಶೇ (–) 0.3ಕ್ಕೆ ಕುಸಿತ ಕಂಡಿದೆ. ಜನವರಿಯಲ್ಲಿ ಚಿಲ್ಲರೆ ಹಣದುಬ್ಬರವು ಶೇ 7.59ಕ್ಕೆ ಏರಿಕೆಯಾಗಿದೆ.

ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ಆಧಾರದ ಮೇಲೆ ಪರಿಗಣಿಸುವ ಕೈಗಾರಿಕಾ ವಲಯದ ಬೆಳವಣಿಗೆಯು 2018ರ ಡಿಸೆಂಬರ್‌ನಲ್ಲಿ ಶೇ 2.5ರಷ್ಟಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಮಾಹಿತಿ ನೀಡಿದೆ.

ತಯಾರಿಕಾ ವಲಯದ ಬೆಳವಣಿಗೆಯು ಶೇ 2.9ರಿಂದ ಶೇ 1.2ಕ್ಕೆ ಇಳಿಕೆಯಾಗಿದೆ. ಇದು ಕೈಗಾರಿಕಾ ವಲಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ವಿದ್ಯುತ್‌ ಉತ್ಪಾದನೆ ಶೇ 4.5 ರಿಂದ ಶೇ 0.1ಕ್ಕೆ ಇಳಿಕೆಯಾಗಿದೆ. ಗಣಿಗಾರಿಕಾ ಚಟುವಟಿಕೆಯು ಮಾತ್ರ ಶೇ 1 ರಿಂದ ಶೇ 5.4ಕ್ಕೆ ಏರಿಕೆಯಾಗಿದೆ.  

ಆಗಸ್ಟ್‌, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಇಳಿಮುಖವಾಗಿದ್ದ ಬೆಳವಣಿಗೆಯು ನವೆಂಬರ್‌ನಲ್ಲಿ ಶೇ 1.8ಕ್ಕೆ ಏರಿಕೆಯಾಗಿತ್ತು. ಆದರೆ, ಇದೀಗ ಡಿಸೆಂಬರ್‌ನಲ್ಲಿ ಮತ್ತೆ ನಕಾರಾತ್ಮಕ ಹಾದಿಗೆ ಮರಳಿದೆ. 23ರಲ್ಲಿ 16 ಕೈಗಾರಿಕೆಗಳು ನಕಾರಾತ್ಮಕ ಬೆಳವಣಿಗೆ ಕಂಡಿವೆ.  ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿನ ಕೈಗಾರಿಕಾ ಬೆಳವಣಿಗೆ ಶೇ 4.7 ರಿಂದ ಶೇ 0.5ಕ್ಕೆ ಭಾರಿ ಇಳಿಕೆ ಕಂಡಿದೆ.

‘ಜಾಗತಿಕ ವಿದ್ಯಮಾನಗಳು ಭಾರತದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಸಂದರ್ಭದಲ್ಲಿ ಕೈಗಾರಿಕಾ ವಲಯದ ನಕಾರಾತ್ಮಕ ಚಲನೆ ಅತ್ಯಂತ ಕಳವಳಕಾರಿಯಾಗಿದೆ. ಇದು ಆರ್ಥಿಕ ಬೆಳವಣಿಗೆ ತೊಡಕಾಗಲಿದೆ’ ಎಂದು ಡೆಲಾಯ್ಟ್‌ ಇಂಡಿಯಾದ ಆರ್ಥಿಕತಜ್ಞೆ ರೂಮ್ಕಿ ಮಜುಂದಾರ್‌ ಅಭಿಪ್ರಾಯಪಟ್ಟಿದ್ದಾರೆ.

‘ಚೀನಾದ ಕೊರೊನಾ ವೈರಸ್‌ನಿಂದಾಗಿ ಭಾರತದ ವ್ಯಾಪಾರಕ್ಕೆ ಹೆಚ್ಚು ಪೆಟ್ಟು ಬೀಳಲಿದೆ. ಚೀನಾವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ಆದರೆ, ವೈರಸ್‌ ಸೋಂಕಿನಿಂದಾಗಿ ಚೀನಾದಲ್ಲಿ ಹಲವು ಕಾರ್ಖಾನೆಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿವೆ. ಎಲೆಕ್ಟ್ರಾನಿಕ್ಸ್‌ ಮತ್ತು ವಾಹನ ಉದ್ಯಮವು ಇದರಿಂದ ಹೆಚ್ಚು ಸಮಸ್ಯೆ ಎದುರಿಸಲಿದೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು