ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕ ಬಳಕೆ ವಸ್ತುಗಳ ಬೆಲೆ ಸದ್ಯಕ್ಕೆ ಇಳಿಯದು!

ಎಸ್‌ಬಿಐ ವರದಿಯಲ್ಲಿ ಅಂದಾಜು
Last Updated 16 ಜುಲೈ 2020, 15:39 IST
ಅಕ್ಷರ ಗಾತ್ರ

ನವದೆಹಲಿ: ಚಿಲ್ಲರೆ ಹಣದುಬ್ಬರ ದರವು ದೇಶದಲ್ಲಿ ಮುಂದಿನ ಕೆಲವು ತಿಂಗಳುಗಳವರೆಗೆ ಹೆಚ್ಚಿನ ಪ್ರಮಾಣದಲ್ಲೇ ಇರಲಿದೆ. ಅಂದರೆ, ಗ್ರಾಹಕರ ದಿನಬಳಕೆಯ ವಸ್ತುಗಳ ದರ ತಕ್ಷಣಕ್ಕೆ ಇಳಿಕೆಯಾಗುವ ಸಾಧ್ಯತೆ ಇಲ್ಲ. ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸಿದ್ಧಪಡಿಸಿರುವ ವರದಿಯೊಂದರ ಅನ್ವಯ, ಕಾರ್ಮಿಕರ ಕೊರತೆಯಿಂದ ಉಂಟಾಗಿರುವ ಪೂರೈಕೆಯಲ್ಲಿನ ಅಡಚಣೆಗಳು ಹೀಗಾಗುವುದಕ್ಕೆ ಕಾರಣ.

ಅಗತ್ಯ ವಸ್ತುಗಳನ್ನು ಜನ ಆನ್‌ಲೈನ್‌ ಅಂಗಡಿಗಳ ಮೂಲಕ ಖರೀದಿ ಮಾಡುವುದು ಹೆಚ್ಚುತ್ತಿರುವ ಕಾರಣ, ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು ಚಿಲ್ಲರೆ ಹಣದುಬ್ಬರವನ್ನು ಲೆಕ್ಕಹಾಕುವಾಗ ಆನ್‌ಲೈನ್‌ ಮೂಲಕ ಬಿಕರಿಯಾಗುವ ವಸ್ತುಗಳ ಬೆಲೆಯನ್ನೂ ಪರಿಗಣಿಸಬೇಕು ಎಂದು ಈ ವರದಿ ಹೇಳಿದೆ.

ಲಾಕ್‌ಡೌನ್‌ ಜಾರಿಗೆ ಬಂದ ನಂತರ ಕೆಲವು ಸೇವೆಗಳನ್ನು ಬಳಸುವ ಪ್ರಮಾಣ ಗಣನೀಯವಾಗಿ ತಗ್ಗಿತು. ಹೀಗಿದ್ದರೂ ಸಚಿವಾಲಯವು ಹಣದುಬ್ಬರ ಲೆಕ್ಕಹಾಕುವಾಗ ಇಂತಹ ಸೇವೆಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ. ಹಾಗಾಗಿ, ವಾಸ್ತವದಲ್ಲಿ ಚಿಲ್ಲರೆ ಹಣದುಬ್ಬರ ದರವು ಈಗ ಅಂದಾಜಿಸಿರುವುದಕ್ಕಿಂತಲೂ ಹೆಚ್ಚಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಅನ್ವಯ ಜೂನ್‌ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇಕಡ 6.09ರಷ್ಟು ಇತ್ತು.

‘ನಮ್ಮ ಅಂದಾಜಿನ ಪ್ರಕಾರ ಒಟ್ಟಾರೆ ಹಣದುಬ್ಬರ ದರವು ಹೆಚ್ಚಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಹೇಳಿರುವ ಹಣದುಬ್ಬರ ದರಕ್ಕಿಂತ ನಮ್ಮ ಅಂದಾಜು ಹೆಚ್ಚಿದೆ. ನಮ್ಮ ಪ್ರಕಾರ ಅದು ಶೇಕಡ 6.98ರಷ್ಟು’ ಎಂದು ವರದಿ ಹೇಳಿದೆ. ಕೋವಿಡ್–19 ಸಾಂಕ್ರಾಮಿಕ ಹರಡಲು ಆರಂಭವಾದ ನಂತರ, ಭಾರತ ಸೇರಿದಂತೆ ಮಧ್ಯಮ ಹಾಗೂ ಕಡಿಮೆ ಆದಾಯ ಹೊಂದಿರುವ ಇತರ ದೇಶಗಳಲ್ಲಿ ಗ್ರಾಹಕ ಬಳಕೆಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದೆ.

‘ಹಣದುಬ್ಬರವು ಮುಂದಿನ ಕೆಲವು ತಿಂಗಳುಗಳವರೆಗೆ ಹೆಚ್ಚಿನ ಪ್ರಮಾಣದಲ್ಲೇ ಇರಲಿದೆ ಎಂಬುದು ನಮ್ಮ ಅಂದಾಜು. ಇದಕ್ಕೆ ಪೂರೈಕೆಯಲ್ಲಿನ ಅಡಚಣೆಗಳೇ ಕಾರಣ ಹೊರತು, ವಿತ್ತೀಯ ಕೊರತೆ ಅಥವಾ ಇತರ ಯಾವುದೇ ಬಾಹ್ಯ ಅಂಶಗಳಲ್ಲ. ಆದರೆ, ಕಚ್ಚಾ ತೈಲದ ಬೆಲೆಯು ಹಣದುಬ್ಬರದ ಮೇಲೆ ತನ್ನದೇ ಆದ ಪ್ರಭಾವ ಬೀರಬಹುದು’ ಎಂದು ಎಸ್‌ಬಿಐ ತಿಳಿಸಿದೆ.

ಪರಿಸ್ಥಿತಿಯು ತೀರಾ ಅಸ್ಥಿರವಾಗಿದೆ. ಈ ಕಾರಣದಿಂದಾಗಿ ಮುಂಬರುವ ಆರ್‌ಬಿಐ ಹಣಕಾಸು ನೀತಿ ಸಮಿತಿಯು ತೀರ್ಮಾನ ಕೈಗೊಳ್ಳುವುದು ಕಷ್ಟಕರವಾಗಲಿದೆ.ಆಗಸ್ಟ್‌ನಲ್ಲಿ ರೆಪೊ ದರ ಕಡಿತವು ಆರ್‌ಬಿಐಗೆ ಕಷ್ಟವಾಗಬಹುದು ಎಂದು ವರದಿ ಹೇಳಿದೆ. ಆರ್‌ಬಿಐ ಹಣಕಾಸು ನೀತಿ ಸಮಿತಿಯ ಸಭೆಯು ಆಗಸ್ಟ್‌ 4ರಿಂದ 6ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT