ಬುಧವಾರ, ಮೇ 12, 2021
22 °C

ಸಮಗ್ರ ವಿಮೆ ಸೌಲಭ್ಯಕ್ಕೆ ‘ಇನ್ಶೂರ್‌ಮೈಲ್‌’

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ಭಾರತದಲ್ಲಿ ವಿಮೆ ಸೌಲಭ್ಯದ ಲಭ್ಯತೆ ಮತ್ತು ಬಳಕೆ ಪ್ರಮಾಣವು ಅಭಿವೃದ್ಧಿಹೊಂದಿದ ದೇಶಗಳಿಗೆ ಹೋಲಿಸಿದರೆ ತುಂಬ ಕಡಿಮೆ ಪ್ರಮಾಣದಲ್ಲಿ ಇದೆ. ದೇಶದ ಜನಸಂಖ್ಯೆಯಲ್ಲಿ ಶೇ 75ರಷ್ಟು ಜನರು ವಿಮೆ ಸೌಲಭ್ಯಕ್ಕೆ ಒಳಪಟ್ಟಿಲ್ಲ. ದೇಶದಲ್ಲಿ ವಿಮೆ ಸೌಲಭ್ಯದ ಲಭ್ಯತೆ ಪ್ರಮಾಣವು ಕೇವಲ ಶೇ 9 ರಷ್ಟಿದೆ. ನಮ್ಮಲ್ಲಿ ವಿಮೆ ಸೌಲಭ್ಯದ ಪರಿಕಲ್ಪನೆಯೇ ವಿಶಿಷ್ಟವಾಗಿದೆ. ಅದೊಂದು ವಿಲಾಸಿ ಸೌಲಭ್ಯ ಎನ್ನುವ ಭಾವನೆ ಹೆಚ್ಚಿನವರಲ್ಲಿ ಇದೆ. ಬಳಿಯಲ್ಲಿ ಹಣ ಹೆಚ್ಚಿಗೆ ಇದ್ದಾಗ ಮಾತ್ರ ಅನೇಕರು ವಿಮೆ ಬಗ್ಗೆ ಚಿಂತನೆ ಮಾಡುತ್ತಾರೆ. ಇದಕ್ಕೆ ವಿಮೆ ಸೌಲಭ್ಯದ ಬಗ್ಗೆ ತಿಳಿವಳಿಕೆ ಇಲ್ಲದಿರುವುದೂ ಮುಖ್ಯ ಕಾರಣವಾಗಿದೆ.

ಈಗ ಸಣ್ಣ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಅವಿಭಕ್ತ ಕುಟುಂಬದಲ್ಲಿನ ಆಸರೆ ಸಿಗುತ್ತಿಲ್ಲ. ಜನರ ಪ್ರಯಾಣಿಸುವ ಪ್ರಮಾಣವೂ ಏರಿಕೆಯಾಗಿದೆ. ವಾಹನಗಳ ಸಂಖ್ಯೆ ಹೆಚ್ಚಳಗೊಂಡಿದೆ. ಪರಿಸರ ಮಾಲಿನ್ಯದಿಂದ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಈ ಎಲ್ಲ ಕಾರಣಕ್ಕೆ ವಿವಿಧ ಬಗೆಯ ವಿಮೆಯ ಅನಿವಾರ್ಯತೆ ಹೆಚ್ಚುತ್ತಿದೆ. ಆದರೂ ನಮ್ಮಲ್ಲಿ ವಿಮೆ ಪಡೆಯುವ, ಸೇವೆ ಒದಗಿಸುವ ಪ್ರಕ್ರಿಯೆ ಹೆಚ್ಚು ಸಂಕೀರ್ಣವಾಗಿದೆ. ಅನೇಕರು ಪರಿಚಿತರ, ಸ್ನೇಹಿತರ ಒತ್ತಾಯಕ್ಕೆ ವಿಮೆ ಪಡೆದುಕೊಳ್ಳುತ್ತಾರೆ. ವಾಹನ, ಆರೋಗ್ಯ ಮತ್ತಿತರ ವಿಮೆಗಳನ್ನು ಸಕಾಲದಲ್ಲಿ ನವೀಕರಣ ಮಾಡುವುದನ್ನು ಮರೆತು ಬಿಡುತ್ತಾರೆ.

ವಾಹನ ಖರೀದಿದಾರರು ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನ ಮಾಲೀಕರು ಎರಡನೆ ವರ್ಷದಲ್ಲಿ ವಾಹನದ ವಿಮೆ ನವೀಕರಣ ಮಾಡುವುದಿಲ್ಲ. ಜತೆಗೆ ವಾಹನ ಅಪಘಾತ ಸಂದರ್ಭದಲ್ಲಿ ತಮಗೂ ರಕ್ಷಣೆ ಒದಗಿಸುವ ಥರ್ಡ್‌ಪಾರ್ಟಿ ವಿಮೆ ಮಾಡಿಸಲೂ ಮುಂದಾಗುವುದಿಲ್ಲ. ಅಪೂರ್ಣ ಮಾಹಿತಿಯ ಕಾರಣಕ್ಕೆ ಅನೇಕ ಸಂದರ್ಭಗಳಲ್ಲಿ ವಿಮೆ ಪರಿಹಾರ ಮೊತ್ತವು ಫಲಾನುಭವಿಗಳ ಕೈ ಸೇರುವುದಿಲ್ಲ. ಕುಟುಂಬದ ಸದಸ್ಯರಿಗೂ ಮಾಹಿತಿ ಗೊತ್ತಿರದ ಕಾರಣಕ್ಕೆ ಪರಿಹಾರ ಪಡೆಯದ ₹ 15,800 ಕೋಟಿಗಳಷ್ಟು ಮೊತ್ತ ಹಾಗೆಯೇ ಉಳಿದಿದೆ. ವಿಮೆ ಪಾಲಿಸಿಗಳೇನೂ ಸುಲಭವಾಗಿ ಮಾರಾಟಗೊಳ್ಳುತ್ತವೆ. ಆದರೆ, ಅವುಗಳ ನಿರ್ವಹಣೆ, ನವೀಕರಣ, ಕ್ಲೇಮ್‌ ಬಗ್ಗೆ ಗ್ರಾಹಕರಲ್ಲಿ ಹೆಚ್ಚಿನ ಅರಿವು ಮೂಡಿಲ್ಲ.

ದೇಶಿ ವಿಮೆ ವಹಿವಾಟು ಎದುರಿಸುವ ಈ ಎಲ್ಲ ಸಂಕೀರ್ಣ ಸಮಸ್ಯೆಗಳಿಗೆ ನವೋದ್ಯಮ ಇನ್ಶೂರ್‌ಮೈಲ್‌ (InsureMile),  ಡಿಜಿಟಲ್‌ ರೂಪದಲ್ಲಿ ಪರಿಹಾರ ಕಂಡು ಹಿಡಿದಿದೆ. ವಿಮೆ ಮತ್ತು ಹಣಕಾಸು ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಮಲ್ಲೇಶ್‌ ರೆಡ್ಡಿ ಮತ್ತು ವಿಜಯ ಕೃಷ್ಣಮೂರ್ತಿ ಜತೆಯಾಗಿ ಈ ನವೋದ್ಯಮ ಸ್ಥಾಪಿಸಿದ್ದಾರೆ. ವಿಮೆ ಸಂಬಂಧಿಸಿದ ಸಮಗ್ರ ಸೇವೆಗಳೆಲ್ಲ ಒಂದೆಡೆಯೇ ದೊರೆಯುವ ವಿಶಿಷ್ಟ ವೇದಿಕೆ ಇದಾಗಿದೆ.

ಇನ್ಶೂರ್‌ಮೈಲ್‌ (InsureMile) ಹೆಸರಿನ ಮೊಬೈಲ್‌ ಆ್ಯಪ್‌ನಲ್ಲಿಯೇ  ಜೀವ ವಿಮೆ ಮತ್ತು ಸಾಮಾನ್ಯ ವಿಮೆಗೆ ಸಂಬಂಧಿಸಿದ ಎಲ್ಲ ಬಗೆಯ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳುವ ಸೌಲಭ್ಯ ಅಭಿವೃದ್ಧಿಪಡಿಸಿದೆ. ವಿಮೆ ಸಂಸ್ಥೆಗಳು ವಿವಿಧ ಬಗೆಯ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಇನ್ಶೂರ್‌ಮೈಲ್‌, ಈ ಎಲ್ಲ ವಿಮೆ ಸಂಸ್ಥೆಗಳ ವಿಮೆ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಸಮಗ್ರ ಸೇವೆಯನ್ನು ಒಂದೆಡೆಯೇ ಒದಗಿಸುವ ವಿಶಿಷ್ಟ ನವೋದ್ಯಮವಾಗಿದೆ. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸೇರಿದಂತೆ 24 ವಿಮೆ ಸಂಸ್ಥೆಗಳ ಜತೆ ಇನ್ಶೂರ್‌ಮೈಲ್‌ ಪಾಲುದಾರಿಕೆ ಹೊಂದಿದೆ. ಎಲ್ಲ ವಿಮೆ ಸಂಸ್ಥೆಗಳ ಪಾಲಿಸಿ ವಿವರಗಳೆಲ್ಲ ಇಲ್ಲಿ ಲಭ್ಯ ಇವೆ.

ಗ್ರಾಹಕರು ತಮ್ಮ ವಿವಿಧ ಬಗೆಯ ವಿಮೆ ಪಾಲಿಸಿಗಳಿಗೆ ಸಂಬಂಧಿಸಿದ ಕೆಲಸಗಳಿಗೆ ಒಂದಕ್ಕಿಂತ ಹೆಚ್ಚು ವಿಮೆ ಸಂಸ್ಥೆಗಳ ಬಳಿಗೆ ತೆರಳದೆ, ಒಂದೆಡೆಯೇ ಈ ಎಲ್ಲ ಸೇವೆಗಳನ್ನು ಪಡೆದುಕೊಳ್ಳಲು ಈ ಆ್ಯಪ್‌ ನೆರವಾಗುತ್ತದೆ.

‘ಮೋಟರ್‌ ವಿಮೆ ಅಂದರೆ ಬರೀ ವಾಹನಕ್ಕೆ ಮಾತ್ರ ಎನ್ನುವ ಭಾವನೆ ಇದೆ. ಸಂಚಾರ ಪೊಲೀಸರು ಸವಾರರ ಬಳಿ ವಾಹನದ ವಿಮೆ ಬಗ್ಗೆ ಮಾಹಿತಿ ಕೇಳುವುದಿಲ್ಲ. ಥರ್ಡ್‌ ಪಾರ್ಟಿ ವಿಮೆ ಪಾಲಿಸಿ ಇದೆಯೇ ಎಂಬುದನ್ನು ಮಾತ್ರ ಕೇಳುತ್ತಾರೆ. ಹೆಲ್ಮೇಟ್‌ ಖರೀದಿಸುವುದಕ್ಕಿಂತ ಕಡಿಮೆ ವೆಚ್ಚದಲ್ಲಿ (₹ 280ಕ್ಕೆ) ವಿಮೆ ಪಡೆದುಕೊಳ್ಳುವುದಕ್ಕೂ ಅನೇಕರು ಮನಸ್ಸು ಮಾಡುವುದಿಲ್ಲ. ದೇಶಿ ವಿಮೆ ಉದ್ದಿಮೆ ಚೆನ್ನಾಗಿ ಬೆಳೆಯುತ್ತಿದೆ. ಪಾಲಿಸಿಗಳ ನವೀಕರಣ, ಕ್ಲೇಮ್‌ ಮತ್ತಿತರ ಸೇವೆಗಳ ವಿಷಯದಲ್ಲಿ ಮಾತ್ರ ಅಲೆದಾಟ, ವಿಳಂಬದ ಸಮಸ್ಯೆಗಳು ಹಾಗೆಯೇ ಇವೆ. ಇದಕ್ಕೆಲ್ಲ ಇನ್ಶೂರ್‌ಮೈಲ್‌ನಲ್ಲಿ ಉತ್ತರ ಇದೆ' ಎಂದು ಸಂಸ್ಥೆಯ ಸಿಇಒ ಮಲ್ಲೇಶ್‌ ರೆಡ್ಡಿ ಹೇಳುತ್ತಾರೆ.

‘ಈಗ ಮೊಬೈಲ್‌ ವಾಲೆಟ್‌ ಬಳಕೆ ಹೆಚ್ಚಾಗಿದೆ. ಅದೇ ಬಗೆಯಲ್ಲಿ ವಿಮೆ ಸೌಲಭ್ಯ ಪಡೆಯಲು, ಪಾಲಿಸಿಗಳನ್ನು ನವೀಕರಿಸಲು, ಇತರ ಸೇವೆಗಳನ್ನು ಪಡೆದುಕೊಳ್ಳಲು ಮೊಬೈಲ್‌ ಆ್ಯಪ್‌ ನೆರವು ಒದಗಿಸಲು ಇನ್ಶೂರ್‌ಮೈಲ್‌ ಮುಂದಾಗಿದೆ. ಆನ್‌ಲೈನ್‌ನಲ್ಲಿ ವಿಮೆ ಪಾಲಿಸಿ ಬಗ್ಗೆ ವಿವರ ಸಂಗ್ರಹಿಸಲು ಮುಂದಾಗುವವರ ವೈಯಕ್ತಿಕ ವಿವರಗಳಾದ ಮೊಬೈಲ್‌ ಸಂಖ್ಯೆ, ಇ–ಮೇಲ್‌ ಮುಂತಾದವುಗಳನ್ನು ಪಡೆದುಕೊಳ್ಳುವುದಿಲ್ಲ. ವಿಮೆ ಸೇವೆ ಪಡೆದುಕೊಳ್ಳಲು ಬಯಸಿದರೆ ಮಾತ್ರ ಗ್ರಾಹಕರು ಇಂತಹ ವಿವರಗಳನ್ನು ನೀಡಬೇಕಾಗುತ್ತದೆ.

‘ಪಾಲುದಾರ ವಿಮೆ ಸಂಸ್ಥೆಗಳ ಪಾಲಿಸಿಗಳನ್ನು ಪಡೆದುಕೊಂಡವರಿಗೆ ಉಚಿತವಾಗಿ ಪಾಲಿಸಿ ಸಂಬಂಧಿ ಸೇವೆಗಳನ್ನು ಇಲ್ಲಿ ಒದಗಿಸಲಾಗುತ್ತಿದೆ. ವಾಹನದ ಪಾಲಿಸಿಯನ್ನು ಮಧ್ಯದಲ್ಲಿಯೇ ರದ್ದು ಮಾಡಿದರೆ ಉಳಿದ ಹಣ ಮರಳಿ ಬರುವ ಸೌಲಭ್ಯವೂ ಇಲ್ಲಿದೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತುರ್ತು ಸಹಾಯ ಪಡೆದುಕೊಳ್ಳುವ ಸೌಲಭ್ಯವೂ ಈ ಆ್ಯಪ್‌ನಲ್ಲಿ ಇದೆ’ ಎಂದು ರೆಡ್ಡಿ ಹೇಳುತ್ತಾರೆ.

ಪಾಲಿಸಿದಾರರು ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ತಮ್ಮೆಲ್ಲ ಜೀವ ವಿಮೆ, ಆರೋಗ್ಯ, ವಾಹನ ಮತ್ತಿತರ ಪಾಲಿಸಿಗಳ ಸೇವೆಯನ್ನು ಬೆರಳ ತುದಿಯಲ್ಲಿಯೇ ಪಡೆದುಕೊಳ್ಳಬಹುದು. ಇಲ್ಲಿ ಎಲ್ಲ ಸೇವೆಯೂ ಉಚಿತವಾಗಿರುತ್ತದೆ. ಸಂಸ್ಥೆಯು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ (ಐಆರ್‌ಡಿಎಐ) ಲೈಸನ್ಸ್‌ ಪಡೆದುಕೊಂಡಿದೆ. ವಿಮೆ ನಿಯಂತ್ರಣ ಪ್ರಾಧಿಕಾರ ಸೂಚಿಸಿದ ಗಡುವಿನಲ್ಲಿ ವಿಮೆ ಸಂಸ್ಥೆಗಳು ವಿಮೆ ಇತ್ಯರ್ಥ ಕುರಿತು ಗ್ರಾಹಕರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಈ ವಿಷಯದಲ್ಲಿ ವಿಮೆ ಸಂಸ್ಥೆಗಳ ಸೇವಾ ಲೋಪದ ಕುರಿತು ಸಂಪರ್ಕಿಸಬೇಕಾದವರ ಕುರಿತ ಮಾಹಿತಿಯೂ ಇಲ್ಲಿ ದೊರೆಯುತ್ತದೆ.

‘ವಿಮೆ ಸೌಲಭ್ಯ ಹೊಂದಿಲ್ಲದಿದ್ದರೆ ಅದರ ಪ್ರಯೋಜನ, ವಿಮೆ ಹೊಂದಿದವರಿಗೆ ಅವುಗಳ ನಿರ್ವಹಣೆ ತಿಳಿವಳಿಕೆ ಮತ್ತು ವಿಮೆ ಸಂಬಂಧಿ ಸೇವೆ ಪಡೆದುಕೊಳ್ಳುವ ಬಗ್ಗೆ ಇಲ್ಲಿ ಮಾರ್ಗದರ್ಶನ ಇರಲಿದೆ. ಪ್ರತಿಯೊಂದು ಸೇವೆಗೆ ಶೇ 5ರಷ್ಟು ಸೇವಾ ಶುಲ್ಕದ ರೂಪದಲ್ಲಿ ವರಮಾನ ಬರುತ್ತದೆ. ಈ ವರ್ಷದ ಮಾರ್ಚ್‌ನಲ್ಲಿ ಕಾರ್ಯಾರಂಭ ಮಾಡಿರುವ ಈ ನವೋದ್ಯಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ವಿಮೆ ಯೋಜನೆಗಳಲ್ಲಿ ಪರಿಹಾರ ಪಡೆಯದ ಮೊತ್ತ ಶೇ 60ರಷ್ಟು (unclaimed money) ಇದೆ. ಆಧಾರ್‌ ಇದ್ದರೆ ವಿಮೆ ಪಾಲಿಸಿದಾರರನ್ನು ಸುಲಭವಾಗಿ ಗುರುತಿಸಬಹುದು. ಪೇಪಾಲ್‌, ಅಂತರರಾಷ್ಟ್ರೀಯ ಕ್ರೆಡಿಟ್‌ / ಡೆಬಿಟ್‌ ಕಾರ್ಡ್‌ ಮೂಲಕವೂ ಹಣ ಪಾವತಿಸಬಹುದು’ ಎಂದು ಮಲ್ಲೇಶ್‌ ರೆಡ್ಡಿ ಹೇಳುತ್ತಾರೆ. ಮಾಹಿತಿಗೆ ಅಂತರ್ಜಾಲ ತಾಣ https://insuremile.inಕ್ಕೆ ಭೇಟಿ ನೀಡಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು