ಶನಿವಾರ, ಜನವರಿ 18, 2020
21 °C
ವಿಶ್ವಬ್ಯಾಂಕ್‌ನ ಜಾಗತಿಕ ಆರ್ಥಿಕ ಮುನ್ನೋಟ ವರದಿ ಪ್ರಕಟ: ದಕ್ಷಿಣ ಏಷ್ಯಾದಲ್ಲಿ ಬಾಂಗ್ಲಾ ಮುನ್ನಡೆ

ಕುಸಿತ: ಭಾರತಕ್ಕೇ ಹೊಡೆತ

ಪ್ರಜಾವಾಣಿ ವಾರ್ತೆ/ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಡೀ ದಕ್ಷಿಣ ಏಷ್ಯಾದಲ್ಲಿ ಆರ್ಥಿಕ ಪ್ರಗತಿಯು ಕುಂಟುತ್ತಿರುವುದು ಭಾರತ ಮತ್ತು ಪಾಕಿಸ್ತಾನದಲ್ಲಿ ಮಾತ್ರ. ಮೂರನೇ ಅತ್ಯಂತ ದೊಡ್ಡ ಆರ್ಥಿಕತೆಯಾಗಿರುವ ಬಾಂಗ್ಲಾ ದೇಶದ ಪ್ರಗತಿಯು ಈ ವರ್ಷ ಶೇ 8.1ರಷ್ಟಿದೆ ಎಂದು ವಿಶ್ವಬ್ಯಾಂಕ್‌ ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ.  

‘ದಕ್ಷಿಣ ಏಷ್ಯಾದ ಆರ್ಥಿಕ ಪ್ರಗತಿಯು 2019ರಲ್ಲಿ ಶೇ 4.9ಕ್ಕೆ ಕುಸಿದಿದೆ. ಅದಕ್ಕೂ ಹಿಂದಿನ ವರ್ಷ ಪ್ರಗತಿಯ ಪ್ರಮಾಣವು ಶೇ 7.1ರಷ್ಟಿತ್ತು. ಎರಡು ಪ್ರಮುಖ ದೇಶಗಳಾದ ಭಾರತ ಮತ್ತು ಪಾಕಿಸ್ತಾನದಲ್ಲಿ ಪ್ರಗತಿ ಕುಸಿತವು ತೀವ್ರವಾಗಿದೆ. ಭಾರತದಲ್ಲಿ ವ್ಯಾಪಾರ ಆತ್ಮವಿಶ್ವಾಸದ ಕೊರತೆ ಮತ್ತು ನಗದು ಸಮ
ಸ್ಯೆಯು ಹೂಡಿಕೆ ಕುಸಿತಕ್ಕೆ ಕಾರಣವಾಗಿದೆ. ಗ್ರಾಹಕ ಬಳಕೆಯೂ ತೀವ್ರವಾಗಿ ಕುಸಿದಿದೆ’ ಎಂದು ಜಾಗತಿಕ ಆರ್ಥಿಕ ಮುನ್ನೋಟ ವರದಿಯಲ್ಲಿ ವಿಶ್ವಬ್ಯಾಂಕ್ ಹೇಳಿದೆ. 

ಜನರಲ್ಲಿ ಬೇಡಿಕೆ ಕುಸಿತವು ಉದ್ಯಮದ ವಿಶ್ವಾಸಕ್ಕೆ ದೊಡ್ಡ ಪೆಟ್ಟು ಕೊಟ್ಟಿದೆ. ಸಾಲ ನೀಡಿಕೆಯನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ವಸೂಲಾಗದ ಸಾಲದ ಮೊತ್ತವು ಯಾವ ಪ್ರಮಾಣದಲ್ಲಿದೆ ಎಂಬುದಕ್ಕೆ ಇದೊಂದು ಸೂಚನೆ ಎಂದು ವರದಿಯಲ್ಲಿ ವಿವರಿಸಲಾಗಿದೆ. 

ಭಾರತದಲ್ಲಿ 2019ರಲ್ಲಿ ಆರ್ಥಿಕ ಚಟುವಟಿಕೆಗಳು ಗಣನೀಯವಾಗಿ ನಿಧಾನಗತಿಗೆ ಜಾರಿವೆ. ತಯಾರಿಕೆ ಮತ್ತು ಕೃಷಿ ಕ್ಷೇತ್ರಗಳು ದೊಡ್ಡ ಹೊಡೆತ ತಿಂದಿವೆ. ಸರ್ಕಾರಕ್ಕೆ ಸಂಬಂಧಿಸಿದ ಉಪ ವಲಯಗಳಿಗೆ ಸರ್ಕಾರದ ಬೆಂಬಲ ದೊರೆತಿದೆ.

ಆದರೆ, ಬ್ಯಾಂಕಿಂಗ್ ಕ್ಷೇತ್ರದ ಬಿಕ್ಕಟ್ಟಿನಿಂದಾಗಿ ಉತ್ಪಾದಕ ಹೂಡಿಕೆಗಳಿಗೆ ಉದ್ಯಮ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ. ನಿರುದ್ಯೋಗವು ಚಿಂತೆಗೆ ಕಾರಣವಾಗಿದೆ. ಮೂಲಸೌಕರ್ಯ ಕೊರತೆ ನೀಗಿಸಲು ಸಾಧ್ಯವಾಗಿಲ್ಲದಿರುವುದು ಉತ್ಪಾದನೆ ಮತ್ತು ಉದ್ಯೋಗ ಎರಡರ ಮೇಲೂ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ವರದಿ ಹೇಳಿದೆ.

ಆಶಾಕಿರಣಗಳೇನು?: ಇತ್ತೀಚೆಗೆ ಘೋಷಿಸಲಾದ ಬ್ಯಾಂಕ್‌ ಪುನರ್ಧನ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವಿಲೀನ ಮತ್ತು ವಿದೇಶಿ ನೇರ ಹೂಡಿಕೆಗೆ ಉತ್ತೇಜನವು ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬಹುದು. ಆದರೆ, ಈ ಸುಧಾರಣೆಗಳ ಜಾರಿಯಲ್ಲಿನ ವಿಳಂಬ ಇಲ್ಲಿನ ದೊಡ್ಡ ತೊಡಕು ಎಂದು ವರದಿಯಲ್ಲಿ ಹೇಳಲಾಗಿದೆ.

ಶೇ 5ಕ್ಕೆ ಇಳಿಯಲಿದೆ ಜಿಡಿಪಿ

ವಾಷಿಂಗ್ಟನ್‌ : ಭಾರತದ ಆರ್ಥಿಕ ಬೆಳವಣಿಗೆ ದರ (ಜಿಡಿಪಿ) 2019–20ನೇ ಹಣಕಾಸು ವರ್ಷದಲ್ಲಿ ಶೇ 5ರಷ್ಟಿರಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜು ಮಾಡಿದೆ. ದೇಶದ ಹಣಕಾಸು ವಲಯದ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ಜಿಡಿಪಿ ಅಂದಾಜನ್ನು ಶೇ 6ರಿಂದ ಶೇ 5ಕ್ಕೆ ತಗ್ಗಿಸಿರುವುದಾಗಿ ತಿಳಿಸಿದೆ.

ಬಜೆಟ್‌ ಸಭೆಗೆ ನಿರ್ಮಲಾ ಇಲ್ಲ

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ದೆಹಲಿಯಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಸಿದ್ದಾರೆ. ಸಂಪುಟ ಸಚಿವರು, ನೀತಿ ಆಯೋಗದ ಅಧಿಕಾರಿಗಳು ಮತ್ತು ಸರ್ಕಾರದ ಉನ್ನತಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಆದರೆ,  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಿರಲಿಲ್ಲ.

ಆದಾಯ ತೆರಿಗೆ ಮಿತಿ ಏರಿಕೆ?: ಸಭೆಯಲ್ಲಿ ವಿವಿಧ ಕ್ಷೇತ್ರಗಳ 150 ಪರಿಣಿತರು ಭಾಗವಹಿಸಿದ್ದರು. ಅವರೆಲ್ಲರೂ  ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ. ಹೀಗಾಗಿ ಮುಂದಿನ ಬಜೆಟ್‌ನಲ್ಲಿ ಸರ್ಕಾರವು ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.

ಲೇವಡಿ: ಈ ಸಭೆಯಲ್ಲಿ ಹಣಕಾಸು ಸಚಿವರೇ ಗೈರು ಹಾಜರಾಗಿರುವುದನ್ನು ವಿರೋಧ ಪಕ್ಷಗಳು ಲೇವಡಿ ಮಾಡಿವೆ. ‘ಮುಂದಿನ ಬಜೆಟ್‌ ಸಭೆಗೆ ಹಣಕಾಸು ಸಚಿವರನ್ನು ಆಹ್ವಾನಿಸುವುದನ್ನು ಪರಿಗಣಿಸಿ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ‘ಹಣಕಾಸು ಸಚಿವರಿಗೆ ಬೇರೆ ಸಭೆ ಇತ್ತು. ಹೀಗಾಗಿ ಅವರು ಈ ಸಭೆಗೆ ಬರಲು ಸಾಧ್ಯವಾಗಲಿಲ್ಲ’ ಎಂದು ಸರ್ಕಾರದ ಮೂಲಗಳು ಹೇಳಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು