ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಟ್‌: ಬ್ಯಾಂಕ್‌ಗಳ ಪರ್ಯಾಯ ಕ್ರಮ?

ಹರಾಜು ಪ್ರಕ್ರಿಯೆ ವಿಫಲವಾದರೆ, ‘ಐಬಿಸಿ’ ಹೊರಗೆ ಪರಿಹಾರ
Last Updated 21 ಏಪ್ರಿಲ್ 2019, 15:04 IST
ಅಕ್ಷರ ಗಾತ್ರ

ನವದೆಹಲಿ: ಜೆಟ್‌ ಏರ್‌ವೇಸ್‌ನಲ್ಲಿನ ಬಂಡವಾಳದ ಹರಾಜು ಪ್ರಕ್ರಿಯೆ ವಿಫಲವಾದರೆ, ದಿವಾಳಿ ಸಂಹಿತೆಯ (ಐಬಿಸಿ ಕಾಯ್ದೆ) ವ್ಯಾಪ್ತಿಯ ಹೊರಗೆ ಪರಿಹಾರ ಕಂಡುಕೊಳ್ಳಲು ಬ್ಯಾಂಕ್‌ಗಳ ಒಕ್ಕೂಟ ಚಿಂತಿಸುತ್ತಿದೆ.

ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ (ಎಸ್‌ಬಿಐ) ನೇತೃತ್ವದಲ್ಲಿನ ಏಳು ಬ್ಯಾಂಕ್‌ಗಳ ಒಕ್ಕೂಟವು, ನಷ್ಟಪೀಡಿತ ವಿಮಾನಯಾನ ಸಂಸ್ಥೆಗೆ ತಾನು ನೀಡಿರುವ ಸಾಲ ವಸೂಲಾತಿಗೆ ಬಿಡ್‌ಗಳನ್ನು ಆಹ್ವಾನಿಸಿದೆ. ₹ 13,500 ಕೋಟಿಗೂ ಹೆಚ್ಚಿನ ಪ್ರಮಾಣದ ಸಾಲದ ಸುಳಿಗೆ ಸಿಲುಕಿರುವ ಜೆಟ್‌ ಏರ್‌ವೇಸ್‌ ಈಗಾಗಲೇ ತನ್ನ ವಿಮಾನಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಸಂಸ್ಥೆಗೆ ತುರ್ತು ಹಣಕಾಸು ನೆರವು ನೀಡಲು ನಿರಾಕರಿಸಿರುವ ಬ್ಯಾಂಕ್‌ಗಳ ಒಕ್ಕೂಟವು ಆಹ್ವಾನಿಸಿರುವ ಬಿಡ್‌ ಪ್ರಕ್ರಿಯೆಯ ಹಣೆಬರಹವು ಮೇ 10ರಂದು ಸ್ಪಷ್ಟಗೊಳ್ಳಲಿದೆ. ಈ ಹರಾಜು ಪ್ರಕ್ರಿಯೆ ಯಶಸ್ವಿಯಾಗುವ ಬಗ್ಗೆ ಒಕ್ಕೂಟವು ಆಶಾವಾದ ತಳೆದಿದೆ. ಆದರೆ, ನಿರೀಕ್ಷಿಸಿದಂತೆ ಈ ಪ್ರಕ್ರಿಯೆ ಯಶಸ್ವಿಯಾಗಿ ನಡೆಯದಿದ್ದರೆ ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ (ಐಬಿಸಿ) ಚೌಕಟ್ಟಿನ ಹೊರಗೆ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಬ್ಯಾಂಕ್‌ ಒಕ್ಕೂಟ ಉದ್ದೇಶಿಸಿದೆ.

ಸಂಸ್ಥೆಗೆ ಸೇರಿದ ಕಟ್ಟಡ, ಮೂಲಸೌಕರ್ಯ, ಭೂಮಿ ಮುಂತಾದ ಸ್ಥಿರಾಸ್ತಿಗಳನ್ನು ಆಧರಿಸಿ ಪರಿಹಾರಕ್ಕೆ ಯತ್ನಿಸುವುದು ಅದರ ಇನ್ನೊಂದು ಆಯ್ಕೆಯಾಗಿದೆ.

ದಿವಾಳಿ ಸಂಹಿತೆಯಡಿ ಪರಿಹಾರ ಕಂಡುಕೊಳ್ಳಲು ಮುಂದಾದರೆ, ಅದಕ್ಕೆ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಅನುಮೋದನೆ ಪಡೆಯಬೇಕಾಗುತ್ತದೆ. ಈ ಪ್ರಕ್ರಿಯೆ ಮಾರುಕಟ್ಟೆ ಆಧಾರಿತವಾಗಿದ್ದು, ನಿರ್ದಿಷ್ಟ ಕಾಲಮಿತಿಗೆ ಒಳಪಟ್ಟಿರುತ್ತದೆ.

ಪರ್ಯಾಯ ಮಾರ್ಗ: ಪರ್ಯಾಯ ಮಾರ್ಗೋಪಾಯಗಳಡಿ, ‘ದಿವಾಳಿ ಸಂಹಿತೆ’ಯ ಕಾರ್ಯವ್ಯಾಪ್ತಿಯ ಹೊರಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ ಆಯ್ಕೆಯಾಗಿರಲಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಬ್ಯಾಂಕ್‌ಗಳು ವಿಮಾನಯಾನ ಸಂಸ್ಥೆಯ ಸ್ಥಿರಾಸ್ತಿಯಿಂದ ಉತ್ತಮ ಪರಿಹಾರ ಪಡೆದುಕೊಳ್ಳಲಿವೆ.

ಸಂಸ್ಥೆಯ ಒಡೆತನದಲ್ಲಿ ಇರುವ 16 ವಿಮಾನಗಳನ್ನು ಬಳಸಿಕೊಂಡು ನಿಧಿ ಸಂಗ್ರಹಿಸಲೂ ಬ್ಯಾಂಕ್‌ಗಳೂ ಚಿಂತನೆ ನಡೆಸುತ್ತಿವೆ.

ಜೆಟ್‌ ಏರ್‌ವೇಸ್‌ನಲ್ಲಿನ ಪಾಲು ಬಂಡವಾಳ ಖರೀದಿಸಲು ಎತಿಹಾದ್‌ ಏರ್‌ವೇಸ್‌, ಟಿಪಿಜಿ ಕ್ಯಾಪಿಟಲ್‌, ಇಂಡಿಗೊ ಪಾರ್ಟನರ್ಸ್‌ ಮತ್ತು ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್‌ಐಐಎಫ್‌) ಆಸಕ್ತಿ ವ್ಯಕ್ತಪಡಿಸಿವೆ.

ಪ್ರವರ್ತಕರ ವಿಳಂಬ ಧೋರಣೆ

ಈ ಬಿಕ್ಕಟ್ಟಿಗೆ ಬ್ಯಾಂಕ್‌ಗಳು ಹೊಣೆಯಲ್ಲ. ಒಂಬತ್ತು ತಿಂಗಳಿನಿಂದ ಸಂಸ್ಥೆಯು ನಗದು ಬಿಕ್ಕಟ್ಟು ಎದುರಿಸುತ್ತಿತ್ತು. ನಿರ್ದಿಷ್ಟ ಪರಿಹಾರ ಸೂತ್ರ ಮುಂದಿಟ್ಟುಕೊಂಡು ಚರ್ಚೆಗೆ ಬರಲು ಬ್ಯಾಂಕ್‌ಗಳು ಸಂಸ್ಥೆಯ ನಿರ್ದೇಶಕ ಮಂಡಳಿಗೆ ಒತ್ತಾಯಿಸುತ್ತಿದ್ದವು.

ಆಡಳಿತ ಮಂಡಳಿ ಮತ್ತು ಸಂಸ್ಥೆಯ ಪ್ರವರ್ತಕರು ಖಚಿತ ತೀರ್ಮಾನಕ್ಕೆ ಬರಲು ವಿಳಂಬ ಮಾಡಿದ್ದರಿಂದ ಸದ್ಯದ ಬಿಕ್ಕಟ್ಟು ಉದ್ಭವವಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT