ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲೆಕಾಳು ದರ ಕುಸಿತ: ಸಂಕಷ್ಟಕ್ಕೆ ಸಿಲುಕಿದ ಬೆಳೆಗಾರರು

Last Updated 17 ಫೆಬ್ರುವರಿ 2020, 2:02 IST
ಅಕ್ಷರ ಗಾತ್ರ

ಹೊಸದುರ್ಗ: ಕಳೆದ ವರ್ಷ ಒಂದು ಕ್ವಿಂಟಲ್‌ಗೆ ₹ 4,500 ಇದ್ದ ಕಡಲೆಕಾಳು ಬೆಲೆ ಈ ಬಾರಿ ₹ 3,500ಕ್ಕೆ ಕುಸಿತಗೊಂಡಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರತಿ ಕ್ವಿಂಟಲ್‌ಗೆ ₹ 4,000 ಬೆಲೆ ಇರುವುದರಿಂದ ಒಳ್ಳೆಯ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಹೊಸದುರ್ಗ ತಾಲ್ಲೂಕಿನಲ್ಲಿ ಈ ಬಾರಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬಿತ್ತನೆ ಮಾಡಿದ್ದರು. ಆದರೆ, ಇದೀಗ ದರ ಕುಸಿದಿರುವುದು ಆಘಾತ
ತಂದಿದೆ.

‘ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಕಡಲೆ ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ಬೆಲೆ ಕುಸಿದಿರುವುದು ಬೇಸರ ಮೂಡಿಸಿದೆ. ಇಷ್ಟೊಂದು ಪ್ರಮಾಣದಲ್ಲಿ ಏಕೆ ಬೆಲೆ ಕುಸಿತವಾಗಿದೆ ಎಂಬುದು ತಿಳಿಯುತ್ತಿಲ್ಲ’ ಎಂದು ಬೆಳೆಗಾರ ಬಾಗೂರು ಆರ್‌.ವೆಂಕಟೇಶ್‌ ಹೇಳಿದರು.

ಅಕ್ಟೋಬರ್‌ನಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಈರುಳ್ಳಿ ಬೆಳೆ ಬಹುತೇಕ ಕೊಳೆತು ಹೋಗಿತ್ತು. ಪ್ರತಿ ವರ್ಷ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಈರುಳ್ಳಿ ಬೆಳೆ ಕಟಾವು ಮಾಡಿದ ನಂತರ ಅದೇ ಜಮೀನಿಗೆ ಹಿಂಗಾರಿನಲ್ಲಿ ಮತ್ತೆ ಕಡಲೆ ಬಿತ್ತನೆ ಮಾಡುವುದು ವಾಡಿಕೆ. ಈರುಳ್ಳಿ ಕೊಳೆತಿದ್ದರಿಂದ ಈ ಬಾರಿ ವಾಡಿಕೆಗಿಂತ ಹೆಚ್ಚು ಪ್ರದೇಶದಲ್ಲಿ ರೈತರು ಕಡಲೆ ಕಾಳು ಬಿತ್ತನೆ ಮಾಡಿದ್ದರು. ಕೃಷಿ ಇಲಾಖೆ ಮೂಲಗಳ ಪ್ರಕಾರ ತಾಲ್ಲೂಕಿನಲ್ಲಿ ಈ ಬಾರಿ 1,786 ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದೆ.

ಈ ಬಾರಿ ಜಮೀನಿನಲ್ಲಿ ತೇವಾಂಶ ಹೆಚ್ಚಿದ್ದರಿಂದ ಬೆಳೆ ಹುಲುಸಾಗಿ ಬಂದಿತ್ತು. ಬೆಳೆಗಾರರು ಒಕ್ಕಲು ಕಾರ್ಯ ಮಾಡುತ್ತಿದ್ದಾರೆ. ಎಕರೆಗೆ 5ರಿಂದ 6 ಕ್ವಿಂಟಲ್‌ ಇಳುವರಿ ಬಂದಿದೆ. ಮಧ್ಯವರ್ತಿಗಳು ಜಮೀನಿಗೆ ಬಂದು ಒಂದು ಕ್ವಿಂಟಲ್‌ ಕಡಲೆಕಾಳನ್ನು
₹ 3,200ರಿಂದ ₹ 3,500ಕ್ಕೆ ಖರೀದಿಸುತ್ತಿದ್ದಾರೆ. ಕಷ್ಟಪಟ್ಟು ಬೆಳೆದಿರುವ ಬೆಳೆ ಆದಾಯ ಕೈಸೇರುವ ಹೊತ್ತಿನಲ್ಲಿ ಬೆಲೆ ಕುಸಿತವಾಗಿರುವುದರಿಂದ ದಿಕ್ಕು ತೋಚದಂತಾಗಿದೆ’ ಎನ್ನುತ್ತಾರೆ ಬೆಳೆಗಾರ ಚಂದ್ರಪ್ಪ.

ಎಕರೆಗೆ ₹ 10 ಸಾವಿರ ಖರ್ಚು: ‘ಕಡಲೆ ಬಿತ್ತನೆ ಮಾಡುವ ಒಂದು ಎಕರೆ ಜಮೀನಿನಲ್ಲಿ ನೇಗಿಲು ಹೊಡೆಸಿದ್ದು, ಬಿತ್ತನೆ ಬೀಜ ಖರೀದಿಸಿದ್ದು, ಬಿತ್ತನೆ ಮಾಡಲು ಟ್ರ್ಯಾಕ್ಟರ್‌ ಹಾಗೂ ಇಬ್ಬರು ಕೂಲಿಯವರಿಗೆ ಕೊಟ್ಟಿದ್ದು, ಬಿತ್ತನೆ ನಂತರ ಟ್ರ್ಯಾಕ್ಟರ್‌ ಕುಂಟೆ ಹೊಡೆಸಿದ್ದು, ಕೀಟಬಾಧೆ ನಿಯಂತ್ರಣ, 3 ಬಾರಿ ಔಷಧ ಸಿಂಪಡಣೆ ಹಾಗೂ ಕೂಲಿಯವರಿಗೆ ಕೊಟ್ಟಿದ್ದು, ಕಟಾವಿಗೆ ಬಂದ ಬೆಳೆ ಕೀಳಿಸಲು ಕಾರ್ಮಿಕರಿಗೆ ಕೂಲಿ, ಒಕ್ಕಣೆ ಮಾಡುವ ಯಂತ್ರದವರಿಗೆ ಹಣ ಕೊಟ್ಟಿರುವುದು ಸೇರಿ ಎಕರೆಗೆ ₹ 10 ಸಾವಿರ ಖರ್ಚಾಗಿದೆ’ ಎಂದು ರೈತ ಮಲ್ಲೇಪ್ಪ ಲೆಕ್ಕ ಒಪ್ಪಿಸಿದರು.

ಪ್ರಸ್ತುತ ಮಾರುಕಟ್ಟೆ ದರದಿಂದ ನಿರೀಕ್ಷಿಸಿದಷ್ಟು ಆದಾಯ ಸಿಗದಂತಾಗಿದೆ. ಹೀಗಾಗಿ ರೈತರ ಹಿತ ಕಾಪಾಡಲು ಪ್ರತಿ ಕ್ವಿಂಟಲ್‌ ಕಡಲೆಕಾಳನ್ನು ₹ 5,000 ಬೆಂಬಲ ಬೆಲೆಗೆ ಖರೀದಿಸಲು ಸರ್ಕಾರ ಮುಂದಾಗಬೇಕು ಎಂದು ತಾಲ್ಲೂಕಿನ ರೈತರ ಮನವಿ ಮಾಡಿದ್ದಾರೆ.

*
ರೈತರು ಬೆಳೆ ಬೆಳೆಯದಿದ್ದಾಗ ಮಾರುಕಟ್ಟೆಯಲ್ಲಿ ದರ ಏರಿಕೆಯಾಗುವುದು, ಹೆಚ್ಚು ಬೆಳೆ ಬೆಳೆದಾಗ ಬೆಲೆ ಕುಸಿತವಾಗುವುದು ವಿಪರ್ಯಾಸ.
-ಎ.ಎನ್‌. ಮಲ್ಲೇಶಪ್ಪ, ನಿವೃತ್ತ ಆಡಿಟರ್‌ ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT