ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಮಾರುಕಟ್ಟೆ ಸಾಲ ಹೆಚ್ಚಳ: ಆರ್‌ಬಿಐ ಮಾಹಿತಿ

ಸಾಮಾಜಿಕ ವಲಯದ ವೆಚ್ಚದಲ್ಲಿ ಮುಂಚೂಣಿ
Last Updated 12 ಮೇ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ತೆರಿಗೆ, ತೆರಿಗೆಯೇತರ ವರಮಾನ ಸಂಗ್ರಹದಲ್ಲಿನ ಕುಸಿತ ಮತ್ತು ರೈತರ ಸಾಲ ಮನ್ನಾ ನಿರ್ಧಾರವು ಕರ್ನಾಟಕ ಸರ್ಕಾರದ ಬೊಕ್ಕಸದ ಪಾಲಿಗೆ ಭಾರಿ ಹೊರೆಯಾಗಿ ಪರಿಣಮಿಸಿವೆ.

ಈ ಕಾರಣಕ್ಕೆ ವೆಚ್ಚಗಳನ್ನು ಸರಿದೂಗಿಸಲು ರಾಜ್ಯ ಸರ್ಕಾರವು ಮಾರುಕಟ್ಟೆಯಿಂದ ಸಂಗ್ರಹಿಸುವ ಸಾಲದ ‍ಪ್ರಮಾಣವು 2018–19ರಲ್ಲಿ (ವರ್ಷದಿಂದ ವರ್ಷಕ್ಕೆ) ಶೇ 81ರಷ್ಟು ಹೆಚ್ಚಳಗೊಂಡಿರುವುದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಂಕಿಅಂಶಗಳಿಂದ ತಿಳಿದು ಬರುತ್ತದೆ.

ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರವು ಮಾರುಕಟ್ಟೆಯಿಂದ ಎತ್ತಿರುವ ಸಾಲದ ಪ್ರಮಾಣವು ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇಕಡಾವಾರು ಲೆಕ್ಕದಲ್ಲಿ ಸುಸ್ಥಿರ ಏರಿಕೆ ದಾಖಲಿಸಿದೆ.

ತೆರಿಗೆ ಸಂಗ್ರಹ ಕುಸಿತ: ರಾಜ್ಯದಲ್ಲಿನ ತೆರಿಗೆ ವರಮಾನವು ರಾಜ್ಯದ ಒಟ್ಟಾರೆ ಆರ್ಥಿಕತೆಯ ಶೇಕಡಾವಾರು ಪ್ರಮಾಣದಲ್ಲಿ ಕಡಿಮೆಯಾಗಿದೆ. 2011–12ರಲ್ಲಿ ಶೇ 16ರಷ್ಟಿದ್ದ ಇದು, 2017–18ರಲ್ಲಿ ಶೇ 11ಕ್ಕೆ ಇಳಿದಿದೆ.

ರಾಜ್ಯದ ತೆರಿಗೆಯೇತರ ವರಮಾನದ ‘ಜಿಎಸ್‌ಡಿಪಿ’ ಶೇಕಡಾವಾರು ಪ್ರಮಾಣವೂ ಕುಸಿತ ಕಂಡಿದೆ. 2011–12ರಲ್ಲಿ ಶೇ 11ರಷ್ಟು ಏರಿಕೆಯಾಗಿದ್ದ ಈ ವರಮಾನವು 2018–19ರಲ್ಲಿ ಶೇ 7ರಷ್ಟಾಗಿದೆ.

ವಿತ್ತೀಯ ಕೊರತೆ ಹೆಚ್ಚಳ: 2019–20ರ ಸಾಲಿನ ಬಜೆಟ್‌ನಲ್ಲಿ ಸರ್ಕಾರದ ಒಟ್ಟಾರೆ ವರಮಾನವು ₹ 1.66 ಲಕ್ಷ ಕೋಟಿಗಳಷ್ಟಿದ್ದರೆ, ಒಟ್ಟಾರೆ ವೆಚ್ಚವು ₹ 2.17 ಲಕ್ಷ ಕೋಟಿಗಳಷ್ಟಾಗಿದೆ. ವಿತ್ತೀಯ ಕೊರತೆಯು ಬಜೆಟ್‌ ಅಂದಾಜಿಗಿಂತ ಹೆಚ್ಚಾಗಿದೆ.

ವಿತ್ತೀಯ ಕೊರತೆಯು ಗಮನಾರ್ಹವಾಗಿ ಹೆಚ್ಚಳಗೊಳ್ಳಲು ₹ 47 ಸಾವಿರ ಕೋಟಿಗಳ ಸಾಲ ಮನ್ನಾ ನಿರ್ಧಾರವೇ ಪ್ರಮುಖ ಕಾರಣ. ಇದರಿಂದಾಗಿ ಭೂಮಿ, ಕಟ್ಟಡ, ಯಂತ್ರೋಪಕರಣ ಮತ್ತಿತರ ಮೂಲ ಸೌಕರ್ಯಗಳಿಗೆ ಮಾಡುವ ಬಂಡವಾಳ ವೆಚ್ಚವು ಕಡಿಮೆಯಾಗಲಿದೆ.

ಇದರ ಜತೆಗೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದಲೂ ರಾಜ್ಯವು ಶೇ 20ರಷ್ಟು ವರಮಾನ ಕೊರತೆ ಎದುರಿಸುತ್ತಿದೆ. ಈ ಕಾರಣಕ್ಕೆ ಜಿಎಸ್‌ಟಿ ಪರಿಹಾರ ಯೋಜನೆಯನ್ನು ಮೂರು ವರ್ಷಗಳವರೆಗೆ ವಿಸ್ತರಿಸಲು ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ.

ಮುಂಚೂಣಿಯಲ್ಲಿ: ವೆಚ್ಚದ ವಿಷಯದಲ್ಲಿ ಅದರಲ್ಲೂ ವಿಶೇಷವಾಗಿ ಸಾಮಾಜಿಕ ವಲಯಕ್ಕೆ ಮಾಡುವ ವೆಚ್ಚದಲ್ಲಿ ರಾಜ್ಯವು, ದಕ್ಷಿಣ ಭಾರತದ ಇತರ ರಾಜ್ಯಗಳಿಗಿಂತ ಮುಂಚೂಣಿಯಲ್ಲಿ ಇದೆ.

2011–12 ಮತ್ತು 2018–19ರ ಅವಧಿಯಲ್ಲಿ ಈ ವಲಯಕ್ಕೆ ಮಾಡಿದ ವೆಚ್ಚವು ಶೇ 185ರಷ್ಟು ಏರಿಕೆಯಾಗಿದೆ. ಸರ್ಕಾರಿ ನೌಕರರ ವೇತನವೂ ಗಮನಾರ್ಹವಾಗಿ ಹೆಚ್ಚಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT