ಬುಧವಾರ, ಡಿಸೆಂಬರ್ 7, 2022
23 °C

ಐಟಿ ಕಂಪನಿಗಳ ಸಾಮೂಹಿಕ ‌ಉದ್ಯೋಗ ಕಡಿತಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ವರ್ಷಾಂತ್ಯದ ಸಾಲು ಸಾಲು ರಜೆಯ ನಿರೀಕ್ಷೆಯಲ್ಲಿದ್ದ ಉದ್ಯೋಗಿಗಳಿಗೆ ಐಟಿ ಕಂಪನಿಗಳು ಶಾಕ್‌ ‌ನೀಡಿವೆ. ಪ್ರಮುಖ ಕಂಪನಿಗಳು ದಂಡಿಯಾಗಿ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಅಮೆಜಾನ್‌, ಟ್ವಿಟರ್‌, ಮೆಟಾ, ಸ್ನಾಪ್‌, ಮೈಕ್ರೋಸಾಫ್ಟ್‌ ಮುಂತಾದ ದೈತ್ಯ ಕಂಪನಿಗಳು ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡುತ್ತಿವೆ. ಆ್ಯಪಲ್‌ನಂತಹ ಕಂಪನಿಗಳು ನೌಕರರ ನೇಮಕಾತಿಯನ್ನು ಕಡಿಮೆ ಮಾಡುತ್ತಿವೆ. ಈವರ್ಷ ಜಾಗತಿಕವಾಗಿ ಸುಮಾರು 1.20 ಲಕ್ಷ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಅಮೆಜಾನ್ ಸುಮಾರು 10,000 ಉದ್ಯೋಗಿಗಳ ವಜಾ ಪ್ರಕ್ರಿಯೆಯನ್ನು ಆರಂಭಿಸಿದೆ. ಫೇಸ್‌ಬುಕ್‌ನ ಮಾತೃ ಸಂಸ್ಥೆ ಮೆಟಾ 11,000 ಮಂದಿಯನ್ನು ಮನೆಗೆ ಕಳುಹಿಸಿದೆ. ಟ್ವಿಟರ್‌ 3700 ನೌಕರರನ್ನು ಕೆಲಸದಿಂದ ಕಿತ್ತು ಹಾಕಿದೆ. ಸ್ನಾಪ್‌ಚಾಟ್‌ ಹಾಗೂ ಇಂಟೆಲ್‌ ಶೇ 20 ರಷ್ಟು ಉದ್ಯೋಗಿಗಳಿಗೆ ಗೇಟ್‌ಪಾಸ್‌ ನೀಡಿದೆ. ಹೀಗೆ ಪ್ರಮುಖ ಕಂಪನಿಗಳು ಏಕಾಏಕಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡುತ್ತಿರುವುದಕ್ಕೆ ಕಾರಣ ಏನು?

ಇದನ್ನೂ ಓದಿ: 

ಒಂದೇ ಪದದಲ್ಲಿ ಉತ್ತರಿಸುವುದಾದರೆ ‘ಕೋವಿಡ್‌ 19‘.

ಇತಿಹಾಸಲ್ಲಿ ಕಂಡು ಕೇಳರಿಯದ ತಲ್ಲಣಗಳನ್ನು ಸೃಷ್ಠಿ ಮಾಡಿದ್ದ ಕೊರೊನಾ ವೈರಸ್‌ ಎನ್ನುವ ವೈರಸ್‌ನಿಂದ ಜಗತ್ತು ಬಹುತೇಕವಾಗಿ ಚೇತರಿಸಿಕೊಂಡಿದೆ. ‘ನ್ಯೂ ನಾರ್ಮಲ್‌‘ಗೆ ಜನ ಒಗ್ಗಿಕೊಂಡಿದ್ದಾರೆ. ಕೋವಿಡ್‌ ವೇಳೆಯಲ್ಲಿ ಸಾವಿರಾರು ಮಂದಿ ಕೆಲಸ ಕಳೆದುಕೊಂಡಿದ್ದರು. ಇದೀಗ ಕೋವಿಡ್‌ ಮುಗಿದ ಬಳಿಕ ಉದ್ಯೋಗಕ್ಕೆ ಕುತ್ತು ಉಂಟಾಗುತ್ತಿದೆ.

ಕೋವಿಡ್‌ ಅವಧಿಯಲ್ಲಿ ಜನ ಮನೆಯೊಳಗೆ ಬಂಧಿಯಾಗಿದ್ದರಿಂದ ಸಾಮಾಜಿಕ ಜಾಲತಾಣಗಳ ಬ‌ಳಕೆ, ಆನ್‌ಲೈನ್‌ ಶಾಪಿಂಗ್‌ ಹಾಗೂ ಮನೆ ಬಾಗಿಲಿಗೆ ಸೇವೆ ಒದಗಿಸುವ ಆನ್‌ಲೈನ್‌ ಪ್ಲಾಟ್‌ಫಾರಂಗಳನ್ನು ಭಾರೀ ಪ್ರಮಾಣದಲ್ಲಿ ಬಳಕೆ ಮಾಡಲು ಆರಂಭಿಸಿದ್ದರು. ಇತಿಹಾಸದಲ್ಲೇ ಅತೀ ಹೆಚ್ಚು ಎನ್ನಬಹುದಾದ ಬಳಕೆದಾರರನ್ನು ಆನ್‌ಲೈನ್ ಪ್ಲಾಟ್‌ಫಾರಂಗಳು ಸೆಳೆದುಕೊಂಡವು. ಹೀಗಾಗಿ ಕಂಪನಿಗಳು ಹೆಚ್ಚಿನ ಉದ್ಯೋಗಿಗಳನ್ನು ನೇಮಕ ಮಾಡಿದ್ದವು.

ಇದನ್ನೂ ಓದಿ: 

ಇದೀಗ ಎಲ್ಲವೂ ‘ಹಳೆ ದಾರಿ‘ಗೆ ಮರಳುತ್ತಿದ್ದು, ಈ ಹಿಂದಿನಂತೆ ಜನ ತಮ್ಮ ನಿತ್ಯದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ವರ್ಕ್‌ ಫ್ರಂ ಹೋಮ್‌ ಇಳಿಕೆಯಾಗಿದೆ. ಸಹಜವಾಗಿ ಆನ್‌ಲೈನ್ ಪ‍್ಲಾಟ್‌ಫಾರಂ ಬಳಕೆ ಇಳಿಕೆಯಾಗಿದೆ. ಇದು ಕಂಪನಿಗಳ ಆದಾಯದ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ.

ಇದರ ಜತೆಗೆ ಹಣದುಬ್ಬರ ಏರಿಕೆ ಕೂಡ ಕಂಪನಿಗಳಿಗೆ ಹೊಡೆತ ನೀಡಿದೆ. ದೇಶದ ಕೇಂದ್ರೀಯ ಬ್ಯಾಂಕುಗಳಿಂದ ಬಡ್ಡಿ ದರ ಪರಿಷ್ಕರಣೆ, ಜಾಗತಿಕ ಹಿಂಜರಿಕೆಯ ಭೀತಿ ಇವೆಲ್ಲವೂ ಟೆಕ್ ಕಂಪನಿಗಳ ನಿದ್ದೆಗೆಡಿಸಿವೆ. ಖರ್ಚು ಕಡಿತದ ಮೊದಲ ಭಾಗವಾಗಿಯೇ ಉದ್ಯೋಗಿಗಳ ವಜಾ ಆರಂಭವಾಗಿದೆ.

ಸದ್ಯ ದೈತ್ಯ ಟೆಕ್‌ ಕಂಪನಿಗಳು ಉದ್ಯೋಗ ಕಡಿತ ಆರಂಭಿಸಿದ್ದು,‌ ಸಣ್ಣ ಪುಟ್ಟ ಕಂಪನಿಗಳು ಇದೇ ದಾರಿ ಅನುಸರಿಸುವ ಸಾಧ್ಯತೆ ಕೂಡ ಹೆಚ್ಚಿವೆ. ಇದೇ ಟ್ರೆಂಡ್‌ ಮುಂದುವರಿದರೆ ಕೆಲಸ ಮಾರುಕಟ್ಟೆ ಮತ್ತೊಂದು ಬಿರುಗಾಳಿಗೆ ಸಾಕ್ಷಿಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು