ನವದೆಹಲಿ: ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಕಾಪರ್ ಲಿಮಿಟೆಡ್‌ನಲ್ಲಿ (ಎಚ್‌ಸಿಎಲ್) ತನ್ನ ಒಡೆತನದಲ್ಲಿದ್ದ ಷೇರುಗಳ ಪೈಕಿ ಶೇ 2.09ರಷ್ಟು ಷೇರುಗಳನ್ನು ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಮುಕ್ತ ಮಾರುಕಟ್ಟೆ ಮೂಲಕ ಮಾರಾಟ ಮಾಡಿದೆ.
ಪ್ರತಿ ಷೇರಿಗೆ ₹221.64 ದರ ನಿಗದಿಪಡಿಸಲಾಗಿತ್ತು. ಈ ಷೇರುಗಳ ಒಟ್ಟು ಮೌಲ್ಯ ₹447 ಕೋಟಿ ಆಗಿದೆ ಎಂದು ಎಲ್‌ಐಸಿ, ಷೇರುಪೇಟೆಗೆ ತಿಳಿಸಿದೆ.
ಹಿಂದುಸ್ತಾನ್ ಕಾಪರ್ ಕಂಪನಿಯಲ್ಲಿ ಎಲ್‌ಐಸಿ ಶೇ 8.17ರಷ್ಟು ಷೇರುಗಳ ಮೇಲೆ ಒಡೆತನ ಹೊಂದಿತ್ತು. ಸದ್ಯ ಶೇ 6.09ಕ್ಕೆ ಇಳಿಕೆಯಾಗಿದೆ.
ಎಚ್‌ಸಿಎಲ್ ಕೇಂದ್ರ ಗಣಿಗಾರಿಕೆ ಸಚಿವಾಲಯದ ಅಧೀನದಲ್ಲಿ ಬರುತ್ತದೆ. ಈ ಕಂಪನಿಯು ತಾಮ್ರದ ಅದಿರು ಗಣಿಗಾರಿಕೆ ನಡೆಸುತ್ತದೆ. ಜೊತೆಗೆ, ಸಂಸ್ಕರಿಸಿದ ತಾಮ್ರ ಉತ್ಪಾದಿಸುವ ಸರ್ಕಾರದ ಏಕೈಕ ಕಂಪನಿಯಾಗಿದೆ.