ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ ಐಪಿಒ: ಇತರ ಕಂಪನಿಗಳಿಗೆ ಚಿಂತೆ

Last Updated 17 ಫೆಬ್ರುವರಿ 2022, 16:39 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಮಾರ್ಚ್‌ನಲ್ಲಿ ಷೇರು ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆ ಇದ್ದು, ಅದರಲ್ಲಿ ಹೂಡಿಕೆ ಮಾಡುವ ಉದ್ದೇಶದಿಂದ ಹೂಡಿಕೆದಾರರು ಬೇರೆ ವಿಮಾ ಕಂಪನಿಗಳಲ್ಲಿನ ಹೂಡಿಕೆ ಮೊತ್ತವನ್ನು ತಗ್ಗಿಸುತ್ತಿದ್ದಾರೆ!

ಈ ಐಪಿಒ ಮೂಲಕ ಎಲ್‌ಐಸಿ ₹ 60 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ನಿರೀಕ್ಷೆ ಇದೆ. ಎಲ್‌ಐಸಿ ಷೇರುಗಳು, ಷೇರು ಮಾರುಕಟ್ಟೆ ಪ್ರವೇಶಿಸಿದ ನಂತರದಲ್ಲಿ ಪ್ರತಿಸ್ಪರ್ಧಿ ಕಂಪನಿಗಳ ಮೇಲೆ ಒಂದು ವರ್ಷದವರೆಗೂ ಪರಿಣಾಮ ಉಂಟಾಗಬಹುದು ಎಂದು ಫಂಡ್‌ ನಿರ್ವಾಹಕರು ಹಾಗೂ ಮಾರುಕಟ್ಟೆ ಪರಿಣತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಲ್‌ಐಸಿಯ ಶೇಕಡ 5ರಷ್ಟು ಷೇರುಗಳ ಮಾರಾಟಕ್ಕೆ ಪ್ರಾಥಮಿಕ ಅರ್ಜಿಯನ್ನು ಕೇಂದ್ರ ಸರ್ಕಾರವು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಭಾನುವಾರ ಸಲ್ಲಿಸಿದೆ. ಎಲ್‌ಐಸಿ ಐಪಿಒ, ಇಡೀ ವಿಶ್ವದಲ್ಲಿ ಮೂರನೆಯ ಅತಿದೊಡ್ಡ ವಿಮಾ ಐಪಿಒ ಆಗುವ ಸಾಧ್ಯತೆ ಇದೆ. ‘ವಿಮಾ ಮಾರುಕಟ್ಟೆಯ ಶೇ 10 ಅಥವಾ ಶೇ 11ರಷ್ಟು ಪಾಲು ಹೊಂದಿರುವ ಕಂಪನಿಗಳಿಗಿಂತ, ಶೇಕಡ 60ರಷ್ಟು ಪಾಲನ್ನು ಹೊಂದಿರುವ ಕಂಪನಿಯ ಷೇರು ಖರೀದಿಸುವುದು ಹೂಡಿಕೆಗಳನ್ನು ನಿರ್ವಹಿಸುವ ಯಾವುದೇ ವ್ಯಕ್ತಿಯ ಸಹಜ ಬಯಕೆ’ ಎಂದು ಷೇರುಗಳು ಹಾಗೂ ಮ್ಯೂಚುವಲ್‌ ಫಂಡ್ ಸಂಶೋಧನಾ ಸಂಸ್ಥೆ ಪ್ರೈಮ್‌ಇನ್ವೆಸ್ಟರ್‌ನ ಸಹ ಸಂಸ್ಥಾಪಕಿ ವಿದ್ಯಾ ಬಾಲಾ ಹೇಳಿದರು.

ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಇತರ ಖಾಸಗಿ ಜೀವ ವಿಮಾ ಕಂಪನಿಗಳಲ್ಲಿನ ಹೂಡಿಕೆ ತಗ್ಗಿಸಲು ಫಂಡ್‌ ನಿರ್ವಾಹಕರು ಈಗಾಗಲೇ ಮುಂದಾಗಿದ್ದಾರೆ ಎಂದು ವಿದ್ಯಾ ತಿಳಿಸಿದರು.

ಎಲ್‌ಐಸಿಯ ಮೌಲ್ಯ ನಿಗದಿಯು ಆಕರ್ಷಕವಾಗಿ ಇದ್ದರೆ, ಎಲ್‌ಐಸಿ ಷೇರು ಮಾರುಕಟ್ಟೆ ಪ್ರವೇಶಿಸಿದ ನಂತರದಲ್ಲಿ ಅದರ ಪರಿಣಾಮವು ವಿಮಾ ವಲಯದ ಖಾಸಗಿ ಕಂಪನಿಗಳ ಮೇಲೆ ಮಾತ್ರವೇ ಅಲ್ಲದೆ, ಇತರ ವಲಯಗಳ ಕಂಪನಿಗಳ ಮೇಲೆಯೂ ಆಗಬಹುದು ಎಂದು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ಇಬ್ಬರು ಫಂಡ್ ನಿರ್ವಾಹಕರು ಹೇಳಿದರು.

‘ಎಲ್‌ಐಸಿಯಷ್ಟು ದೊಡ್ಡದಾದ ಕಂಪನಿ ಐಪಿಒಗೆ ಮುಂದಾದಾಗ, ವ್ಯವಸ್ಥೆಯಲ್ಲಿನ ನಗದು ಲಭ್ಯತೆಯನ್ನು ಅದು ತನ್ನತ್ತ ಸೆಳೆದುಕೊಳ್ಳುತ್ತದೆ’ ಎಂದು ಫಂಡ್ ನಿರ್ವಾಹಕರೊಬ್ಬರು ಅಭಿ‍ಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT