ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇ–ಕಾಮರ್ಸ್‌ಗೆ ಕಾಲಿಟ್ಟ ಲಿಡ್ಕರ್‌

ಶೀಘ್ರ ಉತ್ಪನ್ನಗಳು ಗ್ರಾಹಕರಿಗೆ ಲಭ್ಯ
Published 27 ಆಗಸ್ಟ್ 2024, 23:30 IST
Last Updated 27 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಡಾ.ಬಾಬು ಜಗಜೀವನರಾಂ ಚರ್ಮೋತ್ಪನ್ನ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (ಲಿಡ್ಕರ್‌) ಉತ್ಪನ್ನಗಳು, ಶೀಘ್ರವೇ ಇ–ಕಾಮರ್ಸ್‌ ವೇದಿಕೆಗಳಲ್ಲಿ ಗ್ರಾಹಕರ ಖರೀದಿಗೆ ದೊರೆಯಲಿವೆ.

ಚರ್ಮದ ಶೂ, ಚಪ್ಪಲಿ, ಪರ್ಸ್‌, ಬೆಲ್ಟ್‌, ಬ್ಯಾಗ್‌ಗಳನ್ನು ಇ–ಕಾಮರ್ಸ್‌ ವ್ಯವಸ್ಥೆಯಡಿ ಮಾರಲು ಲಿಡ್ಕರ್ ಸಂಸ್ಥೆಯು ಸಿದ್ಧತೆ ನಡೆಸಿದೆ. 

‘ಇ–ಕಾಮರ್ಸ್‌ ಪ್ರಕ್ರಿಯೆಗೆ ಕರೆದ ಟೆಂಡರ್‌ನಲ್ಲಿ ಸನ್ ಪ್ಲಸ್‌ ಏಜೆನ್ಸಿ ಆಯ್ಕೆಯಾಗಿದೆ. ಅಮೆಜಾನ್, ಫ್ಲಿಪ್‌ಕಾರ್ಟ್‌ನಂತಹ ಇ–ಕಾಮರ್ಸ್‌ ವೇದಿಕೆಗಳಲ್ಲಿ ಲಿಡ್ಕರ್ ಉತ್ಪನ್ನಗಳು ಲಭ್ಯವಾಗಲು ಅಗತ್ಯ ಸಾಫ್ಟ್‌ವೇರ್‌ ಅಭಿವೃದ್ಧಿ ಕೆಲಸ ನಿರ್ವಹಿಸುತ್ತಿದೆ. ಈಗಾಗಲೇ, ಅಂಚೆ ಕಚೇರಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆನ್‌ಲೈನ್‌ನಲ್ಲಿ ದರ ಪಾವತಿಗಾಗಿ ಪೇಮೆಂಟ್‌ ಗೇಟ್‌ ವೇ ಖರೀದಿಗೆ ಕೆನರಾ ಬ್ಯಾಂಕ್‌ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು ಲಿಡ್ಕರ್‌ ವ್ಯವಸ್ಥಾಪಕ ನಿರ್ದೇಶಕಿ ವಸುಂಧರಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ಪನ್ನಗಳ ‘3 ಡಿ’ ಚಿತ್ರಗಳನ್ನು ತೆಗೆಯಬೇಕಿದೆ. ದರ, ಲಭ್ಯತೆ, ಬಣ್ಣ, ವಿಧ, ಅಳತೆ ಮಾಹಿತಿ ಸಿದ್ಧಪಡಿಸಿ, ಸಾಫ್ಟ್‌ವೇರ್ ವಿನ್ಯಾಸವನ್ನು ಅಂತಿಮಗೊಳಿಸಬೇಕಿದೆ. ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಆಗಸ್ಟ್‌ ಅಂತ್ಯಕ್ಕೆ ಅಥವಾ ಸೆಪ್ಟೆಂಬರ್‌ ಆರಂಭದಲ್ಲಿ ಸಾಫ್ಟ್‌ವೇರ್‌ ಬಿಡುಗಡೆ ಆಗಲಿದೆ’ ಎಂದರು.

ಲಿಡ್ಕರ್‌ನ ಚರ್ಮದ ಬ್ಯಾಗ್‌
ಲಿಡ್ಕರ್‌ನ ಚರ್ಮದ ಬ್ಯಾಗ್‌
ಲಿಡ್ಕರ್‌ನ ಚರ್ಮದ ಬೆಲ್ಟ್‌
ಲಿಡ್ಕರ್‌ನ ಚರ್ಮದ ಬೆಲ್ಟ್‌
ರಾಜ್ಯದಲ್ಲಿ 18 ಲಿಡ್ಕರ್‌ ಉತ್ಪನ್ನ ಮಾರಾಟ ಮಳಿಗೆಗಳಿವೆ. ಇ–ಕಾಮರ್ಸ್‌ನಿಂದ ಉತ್ಪನ್ನ ಮಾರಾಟಕ್ಕೆ ಅತ್ಯಾಧುನಿಕ ವೇದಿಕೆ ಸಿಗಲಿದೆ
ವಸುಂಧರಾ ವ್ಯವಸ್ಥಾಪಕ ನಿರ್ದೇಶಕಿ ಲಿಡ್ಕರ್

ಶಾಲಾ ವಿದ್ಯಾರ್ಥಿಗಳಿಗೆ ಲಿಡ್ಕರ್ ಶೂ ‘ಲಿಡ್ಕರ್‌ ಉತ್ಪನ್ನಗಳಿಗೆ ನಟ ಡಾಲಿ ಧನಂಜಯ ರಾಯಭಾರಿ ಆಗಿದ್ದಾರೆ. ಲಿಡ್ಕರ್ ಸಂಸ್ಥೆಯ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಗಳು ನಡೆದಿವೆ. ಸಂಸ್ಥೆಗೆ ಸೇರಿದ ತಯಾರಿಕಾ ಘಟಕಗಳು ಇರದ ಕಾರಣ ಫಲಾನುಭವಿಗಳು ಹಾಗೂ ವ್ಯಾಪಾರಿಗಳಿಂದ ಖರೀದಿಸುವ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಸಮಿತಿ ರಚಿಸಲಾಗಿದೆ’ ಎಂದು ವಸುಂಧರಾ ಹೇಳಿದರು.   ‘ಪೊಲೀಸರಿಗೆ ಶೂ ಪೂರೈಸಲು ಮಾತುಕತೆ ನಡೆದಿದೆ. ವಸತಿ ಶಾಲೆ ವಿದ್ಯಾರ್ಥಿಗಳಿಗೆ ಶೂ ಭಾಗ್ಯ ಯೋಜನೆಯಡಿ ಶೂ ಪೂರೈಸಲಾಗಿದೆ. ಮೈಸೂರು ಚಾಮರಾಜನಗರ ಹಾಗೂ ಮಂಡ್ಯದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೂ ಶೂ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೂ ಶೂ ಪೂರೈಸಲು ಮಾತುಕತೆ ನಡೆಸಲಾಗುವುದು. ಇತರೆ ಕಂಪನಿಗಳಿಂತ ಕಡಿಮೆ ಮೊತ್ತದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನ ಪೂರೈಸಲು ಶ್ರಮಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT