‘ಅದಾನಿ’ಗೆ ಸಾಲ: ಪ್ರಕ್ರಿಯೆ ಬಿಗಿ? ಬ್ಯಾಂಕ್ ಜೊತೆ ಅದಾನಿ ಸಮೂಹ ಮಾತುಕತೆ

ಮುಂಬೈ/ನವದೆಹಲಿ (ರಾಯಿಟರ್ಸ್/ಎಎಫ್‌ಪಿ/ಪಿಟಿಐ): ಅದಾನಿ ಸಮೂಹಕ್ಕೆ ಹೊಸ ಸಾಲ ಮಂಜೂರು ಮಾಡುವ ಪ್ರಕ್ರಿಯೆಯನ್ನು ಬಿಗಿಗೊಳಿಸಲು ತೀರ್ಮಾನ ಮಾಡಿರುವುದಾಗಿ ಆರು ಬ್ಯಾಂಕ್‌ಗಳ ಪ್ರತಿನಿಧಿಗಳು ಶುಕ್ರವಾರ ಹೇಳಿದ್ದಾರೆ.
ಇವು ಅದಾನಿ ಸಮೂಹಕ್ಕೆ ಈಗಾಗಲೇ ಸಾಲ ನೀಡಿರುವ ಬ್ಯಾಂಕ್ ಗಳು. ಆದರೆ ಈ ಬ್ಯಾಂಕ್‌ಗಳ ಹೆಸರು ಗಳನ್ನು ಸುದ್ದಿಸಂಸ್ಥೆ ರಾಯಿಟರ್ಸ್ ಉಲ್ಲೇ ಖಿಸಿಲ್ಲ.
ಈ ನಡುವೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಆರ್‌ಬಿಐ, ದೇಶದ ಬ್ಯಾಂಕಿಂಗ್ ವಲಯವು ಸ್ಥಿರ ವಾಗಿದ್ದು, ತಾನು ಎಲ್ಲ ಬ್ಯಾಂಕ್‌ಗಳ ಮೇಲೆ ನಿರಂತರವಾಗಿ ನಿಗಾ ಇರಿಸಿರುವುದಾಗಿ ಹೇಳಿದೆ. ಅದಾನಿ ಸಮೂಹದ ಸಾಲದ ವಿಚಾರವಾಗಿ ಕಳವಳಗಳು ವ್ಯಕ್ತವಾಗಿರುವ ಸಂದರ್ಭ ದಲ್ಲಿ ಈ ಹೇಳಿಕೆ ಬಂದಿದೆ. ಆದರೆ ಆರ್‌ಬಿಐ ಹೇಳಿಕೆಯಲ್ಲಿ ಅದಾನಿ ಸಮೂಹದ ಹೆಸರು ಉಲ್ಲೇಖವಾಗಿಲ್ಲ.
ಬ್ಯಾಂಕ್‌ಗಳ ಕಳವಳವನ್ನು ನಿವಾರಿಸುವ ಯತ್ನದ ಭಾಗವಾಗಿ ಅದಾನಿ ಸಮೂಹವು ಹಲವು ಬ್ಯಾಂಕ್ ಗಳ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿದೆ.
ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯ ವರದಿ ಪ್ರಕಟವಾದ ನಂತರದಲ್ಲಿ ಅದಾನಿ ಸಮೂಹದ ಹಲವು ಕಂಪನಿಗಳ ಷೇರು ಮೌಲ್ಯವು ಭಾರಿ ಪ್ರಮಾಣದಲ್ಲಿ ಕುಸಿದಿದೆ. ವರದಿಯಲ್ಲಿನ ಆರೋಪಗಳನ್ನು ಸಮೂಹ ಅಲ್ಲಗಳೆದಿದೆ. ಈ ನಡುವೆ ಅದಾನಿ ಸಮೂಹದ ಪ್ರತಿನಿಧಿಗಳು ಎಸ್‌ಬಿಐ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಸಾಲ ಮರುಪಾವತಿ ವಿಚಾರದಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಸಮೂಹದ ವಿರುದ್ಧ ಬಂದಿರುವ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ತನಿಖೆ ಆಗಬೇಕು ಹಾಗೂ ಆರೋಪಗಳ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಎಂದು ವಿರೋಧ ಪಕ್ಷಗಳು ಶುಕ್ರವಾರ ಸಂಸತ್ತಿನಲ್ಲಿ ಘೋಷಣೆ ಕೂಗಿವೆ. ಎರಡೂ ಸದನಗಳ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ಎಸ್‌ಬಿಐ ಹೇಳಿಕೆ: ಎಸ್‌ಬಿಐ ತಾನು ಅದಾನಿ ಸಮೂಹಕ್ಕೆ ನೀಡಿರುವ ಸಾಲಗಳ ಒಟ್ಟು ಮೊತ್ತವು ₹ 27 ಸಾವಿರ ಕೋಟಿ ಎಂದು ತಿಳಿಸಿದೆ. ಅದಾನಿ ಸಮೂಹವು ಪಡೆದಿರುವ ಒಟ್ಟು ಸಾಲಗಳಲ್ಲಿ ವಿವಿಧ ಬ್ಯಾಂಕ್‌ಗಳಿಂದ ಪಡೆದಿರುವ ಸಾಲದ ಪ್ರಮಾಣವು ಶೇ 38ರಷ್ಟು ಆಗುತ್ತದೆ ಎಂದು ಜೆಫ್ರಿಸ್ ವರದಿ ಹೇಳಿದೆ.
ಸಮೂಹವು ಹೊಸ ಸಾಲ ಕೋರಿದರೆ, ಆರೋಪಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದಾದ ನಂತರದಲ್ಲಿ ಸೂಕ್ತ ತೀರ್ಮಾನ
ಕೈಗೊಳ್ಳಲಾಗುತ್ತದೆ ಎಂದು ಬ್ಯಾಂಕಿಂಗ್ ಮೂಲಗಳು ಹೇಳಿವೆ.
ಈ ವಿಚಾರವಾಗಿ ಎಸ್‌ಬಿಐ ಹಾಗೂ ಅದಾನಿ ಸಮೂಹದಿಂದ ಪ್ರತಿಕ್ರಿಯೆ ಸಿಕ್ಕಿಲ್ಲ.
‘ಕ್ಷುಲ್ಲಕ ಸಂಗತಿಗೆ ಅತಿಯಾದ ಪ್ರತಿಕ್ರಿಯೆ’: ಅರ್ಥ ವ್ಯವಸ್ಥೆಯ ಅಗಾಧ ವ್ಯಾಪ್ತಿಯನ್ನು ಗಮನಿಸಿ ಹೇಳುವುದಾದರೆ, ಅದಾನಿ ಸಮೂಹದ ಕಂಪನಿಗಳ ಷೇರುಮೌಲ್ಯ ಕುಸಿತದ ಕಾರಣದಿಂದಾಗಿ ಷೇರು ಮಾರುಕಟ್ಟೆಯಲ್ಲಿ ಆಗಿರುವ ಅಸ್ಥಿರತೆಯು ‘ಕ್ಷುಲ್ಲಕ ಸಂಗತಿಗೆ ವ್ಯಕ್ತವಾಗಿರುವ ಅತಿಯಾದ ಪ್ರತಿಕ್ರಿಯೆ’ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಹೇಳಿದ್ದಾರೆ.
‘ಹಣಕಾಸಿನ ಸ್ಥಿರತೆಯ ದೃಷ್ಟಿಯಿಂದ ಹೇಳುವುದಾದರೆ, ಕಳವಳ ಬೇಕಿಲ್ಲ. ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದವರು ಅಥವಾ ವಿಮಾ ಕಂಪನಿಗಳಲ್ಲಿ ಹೂಡಿಕೆ ಮಾಡಿರುವವರು ಅಥವಾ ಈ ಎರಡು ವಲಯಗಳಲ್ಲಿ ಹೂಡಿಕೆ ಮಾಡಿರುವವರು ಕಳವಳ ಹೊಂದಬೇಕಿಲ್ಲ’ ಎಂದು ಅವರು ಹೇಳಿದ್ದಾರೆ.
‘ಹೂಡಿಕೆದಾರರ ವಿಶ್ವಾಸಕ್ಕೆ ಧಕ್ಕೆಯಿಲ್ಲ’: ದೇಶದ ಷೇರುಪೇಟೆಗಳು ಅಗತ್ಯ ಪ್ರಮಾಣದ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿವೆ. ಅದಾನಿ ಸಮೂಹಕ್ಕೆ ಸಂಬಂಧಿಸಿದ ಆರೋಪಗಳು ಹೂಡಿಕೆದಾರರ ವಿಶ್ವಾಸದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಹೂಡಿಕೆದಾರರಲ್ಲಿ ಈ ಮೊದಲು ಇದ್ದ ವಿಶ್ವಾಸವೇ ಈಗಲೂ ಮುಂದುವರಿಯುತ್ತದೆ ಎಂಬುದು ತಮ್ಮ ಭಾವನೆ ಎಂದು ಅವರು ನ್ಯೂಸ್18 ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಎಲ್‌ಐಸಿಯು ಮಾಡಿರುವ ಹೂಡಿಕೆ ಹಾಗೂ ಎಸ್‌ಬಿಐ ನೀಡಿರುವ ಸಾಲವು ಮಿತಿಯೊಳಗೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ಅದಾನಿ ಸಮೂಹದ ಕಂಪನಿಗಳ ಸಾಲ ಪಡೆಯುವ ಸಾಮರ್ಥ್ಯದ ಮೇಲೆ ತಕ್ಷಣಕ್ಕೆ ಯಾವುದೇ ಪರಿಣಾಮ ಆಗದು’ ಎಂದು ಫಿಚ್ ರೇಟಿಂಗ್ಸ್ ಹೇಳಿದೆ.
ಹಿಂಡನ್‌ಬರ್ಗ್ ವರದಿ: ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ಗೆ ಮನವಿ
ನವದೆಹಲಿ (ಪಿಟಿಐ): ಅದಾನಿ ಸಮೂಹ ಕಂಪನಿಗಳ ವಿರುದ್ಧ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್ ಮಾಡಿರುವ ‘ಕ್ರಿಮಿನಲ್ ಪಿತೂರಿ’ ಬಗ್ಗೆ ತನಿಖೆ ನಡೆಸಲು ಕೇಂದ್ರ ಮತ್ತು ಸೆಬಿಗೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಮನೋಹರ್ ಲಾಲ್ ಶರ್ಮಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಹಿಂಡನ್ ಬರ್ಗ್ ರಿಸರ್ಚ್‌ನ ಅಮೆರಿಕ ನಿವಾಸಿ ನೇಟ್ ಅಂಡರ್ಸನ್ ಮತ್ತು ಅವರ ಭಾರತೀಯ ಕಂಪನಿಗಳು ಕ್ರಿಮಿನಲ್ ಪಿತೂರಿ ನಡೆಸಿವೆ. ಅದಾನಿ ಸಮೂಹವು ಷೇರು ಮಾರುಕಟ್ಟೆಯಲ್ಲಿ ಹಾಗೂ ಉದ್ಯಮದಲ್ಲಿ ಅವ್ಯವಹಾರ ನಡೆಸಿದೆ ಎಂಬುದಾಗಿ ‘ಹಿಂಡನ್‌ಬರ್ಗ್ ರಿಸರ್ಚ್’ ಸಂಸ್ಥೆ ಜ.25ರಂದು ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ಆರೋಪಿಸಿದೆ. ಆದರೆ, ಇದು ಕಪೋಲಕಲ್ಪಿತ ವರದಿ ಎಂದು ಅರ್ಜಿದಾರರು ಹೇಳಿದ್ದಾರೆ.
‘ಸೆಬಿ, ಅದಾನಿ ಸಮೂಹ ಷೇರುಗಳ ವಹಿವಾಟು ಸ್ಥಗಿತಗೊಳಿಸದೆ ಮುಗ್ಧ ಹೂಡಿಕೆದಾರರ ಶೋಷಣೆಗೆ ಅವಕಾಶ ನೀಡಿತು’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.