ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಯುವ ಬಂಡವಾಳದ ಕೊರತೆ: ಸಣ್ಣ ಉದ್ಯಮಕ್ಕೆ ಸಮಸ್ಯೆಗಳೇ ದೊಡ್ಡವು

ಜಮೀನು ಮಂಜೂರಾತಿ ವಿಳಂಬ
Last Updated 10 ಮೇ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ದುಡಿಯುವ ಬಂಡವಾಳದ ಕೊರತೆ, ಸಾಲ ಸಿಗದೇ ಇರುವುದು, ಜಮೀನು ಮಂಜೂರಾತಿಯಲ್ಲಿ ವಿಳಂಬ ... ಇಂತಹ ಸಮಸ್ಯೆಗಳನ್ನು ರಾಜ್ಯದ ಸಣ್ಣ ಉದ್ದಿಮೆಗಳು ಎದುರಿಸುತ್ತಿವೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದರೂ ಪ್ರಯೋಜನ ಆಗುತ್ತಿಲ್ಲ ಎಂದು ಉದ್ಯಮ ವಲಯ ಅಸಮಾಧಾನ ವ್ಯಕ್ತಪಡಿಸಿದೆ.

‘ಕಾರ್ಮಿಕರಿಗೆ ವೇತನ ನೀಡಲು, ಕಚ್ಚಾ ಸಾಮಗ್ರಿ ಖರೀದಿಸಲು ಅಗತ್ಯ ಇರುವ ದುಡಿಯುವ ಬಂಡವಾಳ ಹೊಂದಿಸಿಕೊಳ್ಳುವುದೇ ಸಣ್ಣ ಉದ್ದಿಮೆಗಳಿಗೆ ಸವಾಲು. ಆದರೆ, ಯಾರಿಗೆ ಸಾಲದ ಅಗತ್ಯ ಇದೆಯೋ ಅವರಿಗೆ ಬ್ಯಾಂಕುಗಳಲ್ಲಿ ಸಾಲ ಸಿಗುತ್ತಿಲ್ಲ. ಯಾರು ಆರ್ಥಿಕವಾಗಿ ಸಬಲರಾಗಿದ್ದಾರೋ ಅವರಿಗೆ ಮಾತ್ರ ಸಾಲ ಸಿಗುತ್ತಿದೆ. ಕಳೆದ ವರ್ಷದ ಲಾಕ್‌ಡೌನ್‌ ಪರಿಣಾಮಗಳಿಂದ ಹೊರಬರುವ ನಿರೀಕ್ಷೆಯಲ್ಲಿದ್ದ ಉದ್ದಿಮೆಗಳಿಗೆ ವಿದ್ಯುತ್‌ ದರ ಏರಿಕೆ ಎದುರಾಯಿತು. ಕಚ್ಚಾ ವಸ್ತುಗಳ ಬೆಲೆ ಹೆಚ್ಚುತ್ತಲೇ ಇದೆ. ಇಂಧನ ದರ ಏರಿಕೆಯಿಂದ ಸರಕು ಸಾಗಣೆ ವೆಚ್ಚ ಹೆಚ್ಚಾಗಿದೆ. ಹೀಗಾಗಿ, ತಯಾರಿಕಾ ವೆಚ್ಚ ಗಣನೀಯ ಏರಿಕೆ ಆಗುತ್ತಿದೆ. ಹೀಗಾದರೆ ರಾಜ್ಯದಲ್ಲಿ ಸಣ್ಣ ಉದ್ದಿಮೆಗಳು ಉಳಿಯುವುದೇ ಕಷ್ಟವಾಗುತ್ತದೆ’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಕೆ.ಬಿ. ಅರಸಪ್ಪ ಅವರು ಸಮಸ್ಯೆಯನ್ನು ವಿವರಿಸಿದರು.

ರಾಜ್ಯದಲ್ಲಿ ಶೇಕಡ 98ರಷ್ಟು ಸಣ್ಣ ಕೈಗಾರಿಕೆಗಳು ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿವೆ. ಅವುಗಳಿಗೆ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಜಾಗ ಕೊಡುವಂತೆ ಆಗಬೇಕು. ಪರ್ಚೇಸ್‌ ಪ್ರೊಕ್ಯೂರ್‌ಮೆಂಟ್‌ ನಿಯಮದಂತೆ ದೊಡ್ಡ ಕೈಗಾರಿಕೆಗಳು ಎಂಎಸ್‌ಎಂಇಗಳಿಂದ ಶೇಕಡ 20ರಷ್ಟು ಸರಕುಗಳನ್ನು ಖರೀದಿಸಬೇಕು. ಆದರೆ ವಾಸ್ತವದಲ್ಲಿ ಇದು ಜಾರಿಯಾಗುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.

‘ಸಣ್ಣ ಉದ್ದಿಮೆಗಳಿಗೆ ಅಗತ್ಯವಿರುವ ನೆರವು ಸಿಗುತ್ತಿಲ್ಲ. ಸಾಲ ಅಥವಾ ಯಾವುದೇ ಪ್ಯಾಕೇಜ್‌ ಮಂಜೂರು ಮಾಡಿದಾಕ್ಷಣ ಅದು ಸಂಬಂಧಪಟ್ಟವರಿಗೆ ತಲುಪಿದೆ ಎಂದು ಭಾವಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ವಿತರಣೆಯೇ ಆಗುತ್ತಿಲ್ಲ’ ಎಂದು ಅಸೋಸಿಯೇಷನ್‌ ಚೇಂಬರ್ಸ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿಯ (ಎಎಸ್‌ಎಸ್‌ಒಸಿಸಿಐ) ಅಧ್ಯಕ್ಷ ಆರ್‌. ಶಿವಕುಮಾರ್ ಪರಿಸ್ಥಿತಿ ವಿವರಿಸಿದರು.

‘ಸರ್ಕಾರಗಳ ನೆರವಿನ ಪ್ರಯೋಜನ ಪಡೆಯಲು ನಾನಾ ನಿಯಮಗಳಿವೆ. ಕಳೆದ ಬಾರಿ ಕೈಗಾರಿಕೆಗಳ ಆರ್ಥಿಕ ಸ್ಥಿತಿ ಹೇಗಿತ್ತು, ಸಾಲದ ಕಂತುಗಳನ್ನು ತಪ್ಪದೆ ಪಾವತಿ ಮಾಡಲಾಗಿದೆಯೇ ಎಂಬುದನ್ನು ಪರಿಗಣಿಸಲಾಗುತ್ತದೆ. ಕ್ರಿಸಿಲ್ ಮತ್ತು ಸಿಬಿಲ್ ರೇಟಿಂಗ್ ಉತ್ತಮವಾಗಿದ್ದರೆ ಮಾತ್ರ ಸಾಲ ದೊರೆಯುತ್ತದೆ. ಆದರೆ, ಒಂದಲ್ಲಾ ಒಂದು ಕಾರಣಕ್ಕೆ ಸಣ್ಣ ಉದ್ದಿಮೆಗಳು ಸಂಕಷ್ಟ ಎದುರಿಸುತ್ತಲೇ ಇರುವುದರಿಂದ ಅವುಗಳ ಸ್ಥಿತಿ ಉತ್ತಮವಾಗಿರಲು ಹೇಗೆ ಸಾಧ್ಯ’ ಎಂದು ಶಿವಕುಮಾರ್ ಪ್ರಶ್ನೆ ಮಾಡಿದರು.

ಈ ಕುರಿತು ಪ್ರತಿಕ್ರಿಯೆಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಲಭ್ಯರಾಗಲಿಲ್ಲ.

*
ಸರ್ಕಾರದ ಕಡೆಯಿಂದ ಸಣ್ಣಪುಟ್ಟ ನೆರವು ಸಿಗುತ್ತಿದೆ ಎಂದಷ್ಟೇ ಹೇಳಬಹುದು. ಉದ್ದಿಮೆಗಳು ಉಳಿದು, ಬೆಳೆಯಲು ಆ ಮೂಲಕ ರಾಜ್ಯದ ಜಿಡಿಪಿಗೆ ಕೊಡುಗೆ ನೀಡುವಂತಹ ದೊಡ್ಡ ಮಟ್ಟದ ಯಾವುದೇ ಸಹಾಯ ಸಿಗುತ್ತಿಲ್.ಲ
–ಕೆ.ಬಿ. ಅರಸಪ್ಪ, ಕಾಸಿಯಾ ಅಧ್ಯಕ್ಷ

*
ಹೊಸದಾಗಿ ಸಣ್ಣ ಕೈಗಾರಿಕೆ ಸ್ಥಾಪಿಸಲು ರಾಜ್ಯದಲ್ಲಿ ಪೂರಕ ವಾತಾವರಣ ಇಲ್ಲ. ಜಮೀನು ಮಂಜೂರಾತಿ, ನೀರು, ವಿದ್ಯುತ್ ಸೌಲಭ್ಯಗಳು ಸುಲಭಕ್ಕೆ ಸಿಗುವುದಿಲ್ಲ.
–ಆರ್‌. ಶಿವಕುಮಾರ್, ಎಎಸ್‌ಎಸ್‌ಒಸಿಸಿಐ ಅಧ್ಯಕ್ಷ

ಕೆ.ಬಿ. ಅರಸಪ್ಪ ಹಾಗೂ ಆರ್. ಶಿವಕುಮಾರ್
ಕೆ.ಬಿ. ಅರಸಪ್ಪ ಹಾಗೂ ಆರ್. ಶಿವಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT