ಬುಧವಾರ, ಜೂನ್ 29, 2022
25 °C

ಮೇಕ್ ಇನ್ ಇಂಡಿಯಾ ಡ್ರೋನ್: ಜಾಗೃತಿ, ಸುರಕ್ಷತೆಯ ನಿರೀಕ್ಷೆಯಲ್ಲಿ

ಗಿರೀಶ್ ಲಿಂಗಣ್ಣ Updated:

ಅಕ್ಷರ ಗಾತ್ರ : | |

2022–23ರ ಬಜೆಟ್‌ ಮಂಡಿಸುವಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಡ್ರೋನ್‌ಗಳ ಬಳಕೆಯ ಕುರಿತು ಉದಾರ ನೀತಿಯನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಸರ್ಕಾರದ 'ಮೇಕ್ ಇನ್ ಇಂಡಿಯಾ' ಪರಿಕಲ್ಪನೆಗೆ ಮತ್ತಷ್ಟು ಉತ್ತೇಜನ ನೀಡಲು ಈ ನೀತಿಯನ್ನು ವಿನ್ಯಾಸಗೊಳಿಸಲಾಗಿದೆ.

ಡ್ರೋನ್‌ಗಳ ಸ್ಥಳೀಯ ಉತ್ಪಾದನೆಯನ್ನು ಸರ್ಕಾರ ಬೆಂಬಲಿಸಿದರೆ, ಸಾಕಷ್ಟು ಸಂಖ್ಯೆಯ ಉದ್ಯಮಿಗಳು ಈ ವಲಯದಲ್ಲಿ ಕೈಯಾಡಿಸಲು ಪ್ರಯತ್ನಿಸುತ್ತಾರೆ. ಮುಂದಿನ ಮೂರು ವರ್ಷಗಳಲ್ಲಿ ಡ್ರೋನ್ ಮತ್ತು ಅದರ ಘಟಕಗಳ ತಯಾರಿಕೆಯಲ್ಲಿ 5000 ಕೋಟಿ ರೂಪಾಯಿ ಹೂಡಿಕೆಯನ್ನು ಸರ್ಕಾರ ನಿರೀಕ್ಷಿಸುತ್ತದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರಾಟ ವಹಿವಾಟು 900 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಬೆಳವಣಿಗೆಯು 10,000 ನೇರ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಇದು ಸಾಧ್ಯವಾದರೆ, ಉದ್ಯೋಗಗಳಿಗೆ ಹೆಚ್ಚಿನ ಬೇಡಿಕೆಯಿರುವ ಭಾರತದಂತಹ ದೇಶದಲ್ಲಿ ಇದು ಸ್ವಾಗತಾರ್ಹ ಬೆಳವಣಿಗೆಯಾಗುತ್ತದೆ.

ಭಾರತವು ಸ್ಥಳೀಯ ಉತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದ್ದು, ಡ್ರೋನ್‌ಗಳ ಆಮದನ್ನು ಭಾಗಶಃ ನಿಷೇಧಿಸಿರುವುದರಿಂದ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಸದ್ಯಕ್ಕೆ ವಿಶ್ವ ಪ್ರಸಿದ್ಧ ಡ್ರೋನ್ ತಯಾರಕ ಸಂಸ್ಥೆಯಾದ ಚೀನಾದ SZ DJI ಟೆಕ್ನಾಲಜಿಯಿಂದ ಡ್ರೋನ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ಆಲೋಚನೆ ಭಾರತದ್ದು. ಸಂಶೋಧನೆ ಮತ್ತು ಅಭಿವೃದ್ಧಿ, ರಕ್ಷಣೆ ಮತ್ತು ಭದ್ರತಾ ಉದ್ದೇಶಗಳಿಗಾಗಿ ಬಳಸಲಾಗುವ ಡ್ರೋನ್‌ಗಳು ಆಮದು ಮಾಡಿದ ಉಪಕರಣಗಳನ್ನು ಮುಂದಕ್ಕೂ ಪಡೆಯಲಿವೆ ಎಂದು ಸರ್ಕಾರ ಹೇಳಿದೆ. 

ಭಾರತವು ರಕ್ಷಣಾ ಮತ್ತು ನಾಗರಿಕ ಉದ್ದೇಶಗಳಿಗಾಗಿ ಡ್ರೋನ್‌ಗಳ ಬಳಕೆಯನ್ನು ಅನುಮತಿಸಿದೆ. ನಾಗರಿಕ ಉದ್ದೇಶಗಳಿಗಾಗಿ ಡ್ರೋನ್‌ಗಳ ಬಳಕೆಯನ್ನು ನಿಯಂತ್ರಿಸುವ ನಿಯಮಗಳಿವೆ. ಮಾನವರಹಿತ ಡ್ರೋನ್‌ಗಳನ್ನು ಹಾರುವ ಟ್ಯಾಕ್ಸಿಗಳಾಗಿ ಬಳಸಬಹುದಾದ್ದರಿಂದ ಭಾರವಾದ ಪೇಲೋಡ್‌ಗಳನ್ನು ಅನುಮತಿಸಲು ಡ್ರೋನ್ ಬಳಕೆಯನ್ನು ನಿಯಂತ್ರಿಸುವ ನಿಯಮಗಳನ್ನು 2021ರಲ್ಲಿ ಸಡಿಲಗೊಳಿಸಲಾಯಿತು. ಭಾರತವು ಡ್ರೋನ್ ತಯಾರಕರಿಗೆ 1200 ಕೋಟಿ ರೂ. ಪ್ರೋತ್ಸಾಹಕಗಳನ್ನು ಘೋಷಿಸಿದೆ. ಇದು ಉತ್ಪಾದನೆ ಮತ್ತು ರಫ್ತಿಗೆ ಭಾರತವನ್ನು ತಮ್ಮ ನೆಲೆಯನ್ನಾಗಿ ಮಾಡಲು ವಿಶ್ವದರ್ಜೆಯ ಬ್ರ್ಯಾಂಡ್‌ಗಳನ್ನು ಆಕರ್ಷಿಸಲಿದೆ. 
ಉದ್ಯಮವನ್ನು ಉತ್ತೇಜಿಸಲು, ವಾಣಿಜ್ಯೇತರ ಉದ್ದೇಶಗಳಿಗಾಗಿ 2 ಕೆಜಿ ವರೆಗಿನ ಡ್ರೋನ್‌ಗಳನ್ನು ನಿರ್ವಹಿಸುವುದಕ್ಕೆ ಡ್ರೋನ್ ಪೈಲಟ್ ಪರವಾನಗಿ ವ್ಯವಸ್ಥೆಯ ಅಗತ್ಯವನ್ನು ಸರ್ಕಾರವು ಫೆಬ್ರವರಿ 11ರಂದು ತೆಗೆದುಹಾಕಿತು.
ಇಲ್ಲಿ ಪ್ರಶ್ನೆ ಬರುತ್ತದೆ - ಭಾರತೀಯ MSME ಗಳು ಹೇಗೆ ಪ್ರಯೋಜನ ಪಡೆಯುತ್ತವೆ? ಇದು ಸಹಯೋಗದಲ್ಲಿ ಅಥವಾ ತಂತ್ರಜ್ಞಾನ ವರ್ಗಾವಣೆ ವಿಧಾನಗಳಾಗಿರಬಹುದು, ಈ ಮತ್ತು ಹೆಚ್ಚಿನ ಪ್ರಶ್ನೆಗಳಿಗೆ ಸರ್ಕಾರವು ಇನ್ನಷ್ಟೇ ಉತ್ತರಿಸಬೇಕಾಗಿದೆ. 

ಮಾನವರಹಿತ ವೈಮಾನಿಕ ವಾಹನಗಳು ಅಂದರೆ, ರಸ್ತೆ ಅಥವಾ ರೈಲಿನಲ್ಲಿ ಸಾಂಪ್ರದಾಯಿಕ ವಿತರಣಾ ವ್ಯವಸ್ಥೆಯನ್ನು ಡ್ರೋನ್‌ಗಳು ಬದಲಿಸುವ ದಿನಗಳು ತುಂಬಾ ದೂರವಿಲ್ಲ. ಈ ಟ್ರೆಂಡ್ ಆಗಲೇ ಆರಂಭವಾಗಿದೆ. ಪ್ರಾಯೋಗಿಕ ನೆಲೆಯಲ್ಲಿ ವಿಮಾನ ಕಾರ್ಯಾಚರಣೆಗಳನ್ನು ಕೈಗೊಳ್ಳಲು 20 ಕಂಪನಿಗಳು ನಾಗರಿಕ ವಿಮಾನಯಾನ ಸಚಿವಾಲಯದಿಂದ (MoCA) ಅನುಮೋದನೆ ಪಡೆಯುತ್ತಿವೆ. ಅವು ಕಣ್ಣಿಗೆ ಕಾಣುವಷ್ಟು ದೂರವನ್ನು (BVLOS) ಮೀರಿ ಹಾರಲು ಅನುಮತಿಸಲಾಗಿದೆ. ಈ ರಿಮೋಟ್ ಚಾಲಿತ ವಾಯುಗಾಮಿ ವಾಹನಗಳು ಇತ್ತೀಚಿನ ತಿಂಗಳುಗಳಲ್ಲಿ ಔಷಧ, ಆಹಾರ ಮತ್ತು ಲಸಿಕೆಗಳನ್ನು ಯಶಸ್ವಿಯಾಗಿ ವಿತರಿಸಿವೆ. ಸ್ವಿಗ್ಗಿ,ಡುಂಜೊ, ಶಾಪ್‌ ಎಕ್ಸ್ ಮತ್ತು ಇತರ ಸಂಸ್ಥೆಗಳು, ಕೊರಿಯರ್ ಉದ್ದೇಶಗಳಿಗಾಗಿ ಡ್ರೋನ್‌ಗಳನ್ನು ಬಳಸಲು ವಿಶೇಷ ಪರವಾನಗಿಯನ್ನು ಹೊಂದಿವೆ. 

ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯ (National Aerospace Laboratory)ಮತ್ತು ವೈಜ್ಞಾನಿಕ ಕೈಗಾರಿಕಾ ಸಂಶೋಧನೆ ಪರಿಷತ್ತಿನ (CSIR) ಪ್ರಯೋಗಾಲಯವು ಅಭಿವೃದ್ಧಿಪಡಿಸಿದ ಡ್ರೋನ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವಿಡ್ ಲಸಿಕೆ ಪೂರೈಕೆ ಮಾಡಿರುವುದನ್ನು ನವೆಂಬರ್ 2021ರಲ್ಲಿ ಬೆಂಗಳೂರು ಕಣ್ಣಾರೆ ಕಂಡಿದೆ. 50 ಸೀಸೆಗಳನ್ನು ತಲುಪಿಸಲು ಚಂದಾಪುರದಿಂದ ಬೆಂಗಳೂರು ಗ್ರಾಮಾಂತರದ ಹಾರಗದ್ದೆಗೆ ಒಟ್ಟು 9.2 ಕಿ.ಮೀ. ದೂರವನ್ನು ಅದು ಕ್ರಮಿನಿದೆ. ಗುಡ್ಡಗಾಡು ಮತ್ತು ಅರಣ್ಯ ಪ್ರದೇಶಗಳಲ್ಲಿ ಇಂತಹ ಸೌಲಭ್ಯಗಳು ಹೆಚ್ಚು ಉಪಯುಕ್ತವಾಗುತ್ತವೆ. 

ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ ಡ್ರೋನ್‌ಗಳ ವಿನ್ಯಾಸ ಮತ್ತು ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಪೇಲೋಡ್ ಅನ್ನು ಸಾಗಿಸಲು ವಿನ್ಯಾಸಗೊಳಿಸಲಾದ ಡ್ರೋನ್‌ಗಳಾದ RUAV ಗೆ ಅಂತಿಮ ಸ್ಪರ್ಶ ನೀಡುವತ್ತ ಅದೀಗ ಗಮನ ಹರಿಸುತ್ತಿದೆ. ಇದು ಹೆಲಿಕಾಪ್ಟರ್ ಡ್ರೋನ್ ಪರಿಕಲ್ಪನೆಯಾಗಿದ್ದು, ಎತ್ತರದ ಪ್ರದೇಶಗಳನ್ನು ಒಳಗೊಂಡಂತೆ ಸಾಮಾನ್ಯವಾಗಿ ತೆರಳಲು ಸಾಧ್ಯವಾಗದ ಪ್ರದೇಶಗಳನ್ನು ತಲುಪಲು ಪ್ರಾಥಮಿಕವಾಗಿ ವಿನ್ಯಾಸಗೊಳಿಸಲಾಗಿದೆ. ಕುತೂಹಲಕಾರಿ ಸಂಗತಿ ಎಂದರೆ, ಬೆಂಗಳೂರು ಮೂಲದ ನವೋದ್ಯಮದ ಸಹಭಾಗಿತ್ವದಲ್ಲಿ, ಭಾರತೀಯ ರಕ್ಷಣಾ ವಿಭಾಗಗಳಿಗೆ ಅಗತ್ಯವಿರುವ ಮೂರು ರೀತಿಯ ಕಾಂಬ್ಯಾಟ್ ಏರ್ ಟೀಮಿಂಗ್ ಸಿಸ್ಟಮ್ (CATS)ಡ್ರೋನ್‌ಗಳನ್ನು ಎಚ್‌ಎಎಲ್ ಅಭಿವೃದ್ಧಿಪಡಿಸುತ್ತಿದೆ.

ಸಾಂಕ್ರಾಮಿಕ ಪಿಡುಗಿನ ಅವಧಿಯಲ್ಲಿ ಜನರು ಹೊಸ ಜೀವನ ಶೈಲಿಗೆ ಒಗ್ಗಿಕೊಳ್ಳಬೇಕಾಗಿದ್ದ ಕಾರಣ ಡ್ರೋನ್ ಉದ್ಯಮವು ಪ್ರಮುಖ ಉತ್ತೇಜನವನ್ನು ಪಡೆಯಿತು. ದಿನಸಿ, ಔಷಧಿಗಳು, ಸಿದ್ಧ ಆಹಾರದಂತಹ ಅಗತ್ಯ ವಸ್ತುಗಳ ಸ್ವಯಂಚಾಲಿತ ವಿತರಣೆ ಮತ್ತು ರಿಲಯನ್ಸ್‌ನಂತಹ ಕೆಲವು ಮೆಗಾ-ಕಂಪನಿಗಳಿಂದ ಕೋವಿಡ್ ನಿಯಮಗಳ ಅನುಷ್ಠಾನದ ಮೇಲ್ವಿಚಾರಣೆಯಲ್ಲಿ ಡ್ರೋನ್ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯನ್ನು ಪ್ರದರ್ಶಿಸಿತು. ಸಂಪರ್ಕರಹಿತ ವಿತರಣೆಯು ಸುರಕ್ಷಿತವಾಗಿದ್ದರೆ, ಅದು ಸಾಕಷ್ಟು ಜನಪ್ರಿಯವಾಗುವುದು. ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣಕ್ಕಾಗಿ ಡೇಟಾವನ್ನು ಸಂಗ್ರಹಕ್ಕಾಗಿ "ಕಿಸಾನ್ ಡ್ರೋನ್" ಬಳಕೆಯನ್ನು, ಜತೆಗೆ ಡ್ರೋನ್-ಸಂಬಂಧಿತ ಕೌಶಲ ಕೋರ್ಸ್‌ಗಳನ್ನು ಪ್ರಾರಂಭಿಸುವುದಾಗಿಯೂ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ. 

ಮುನ್ನೆಚ್ಚರಿಕೆಗಳು
ನಿಸ್ಸಂದೇಹವಾಗಿ, ಡ್ರೋನ್ ತಯಾರಿಕೆಯು ಭಾರತದಲ್ಲಿ ಉದಯೋನ್ಮುಖವಾದ ಉದ್ಯಮವಾಗಿದೆ. ಇದು ಏರೋಸ್ಪೇಸ್ ಮಾರುಕಟ್ಟೆಯನ್ನು ತನ್ನ ಕ್ರಿಯಾತ್ಮಕ ಬೆಳವಣಿಗೆಯೊಂದಿಗೆ ಮರು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದೆ. ಭಾರತೀಯ ರಕ್ಷಣೆಯಾಗಿರಲಿ, ಮನರಂಜನೆಯಾಗಿರಲಿ, ಪ್ರವಾಸೋದ್ಯಮವಾಗಿರಲಿ ಅಥವಾ ಸೇವಾ ಕ್ಷೇತ್ರವಾಗಿರಲಿ, ಡ್ರೋನ್‌ಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಅದು ಪ್ರಯತ್ನಿಸುತ್ತಿದೆ. ಪೊಲೀಸರು ಕಣ್ಗಾವಲು ಉದ್ದೇಶಕ್ಕಾಗಿ ಡ್ರೋನ್‌ಗಳನ್ನು ವ್ಯಾಪಕವಾಗಿ ಬಳಸುವ ದಿನಗಳು ದೂರವಿಲ್ಲ. 

ಅಭಿವೃದ್ಧಿಗಾಗಿ ಡ್ರೋನ್‌ಗಳಂತಹ ಹೊಸ ತಂತ್ರಜ್ಞಾನಗಳಿಗೆ ಉತ್ತೇಜನವನ್ನು ಸ್ವಾಗತಿಸುವಾಗ, ಎರಡು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು: ಒಂದು, ಡ್ರೋನ್‌ಗಳನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಲು ಮತ್ತು ತಯಾರಿಸಲು ದೇಶೀಯ ಕೈಗಾರಿಕೆಗಳನ್ನು ಉತ್ತೇಜಿಸುವುದು ಮತ್ತು ಪ್ರೋತ್ಸಾಹಿಸುವುದು. ಇನ್ನೊಂದು, ಡ್ರೋನ್‌ಗಳನ್ನು ಬಳಸುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು. ನಾಗರಿಕ ಉದ್ದೇಶಗಳಿಗಾಗಿ ಡ್ರೋನ್‌ಗಳನ್ನು ಬಳಸುವುದಕ್ಕೆ ಈಗಾಗಲೇ ನಿಗದಿತ ಮಾನದಂಡಗಳಿವೆ. ಆದರೆ ಅನುಷ್ಠಾನವನ್ನು ಹೇಗೆ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂಬುದು ಪ್ರಶ್ನೆ. ಡ್ರೋನ್‌ಗಳ ಬಳಕೆಯು ಕೆಲವು ಅಪಾಯಗಳನ್ನೂ ಒಳಗೊಂಡಿದೆ. ಅಪಘಾತಗಳಿಗೆ ತುತ್ತಾಗುವ ಸಂದರ್ಭದಲ್ಲಿ ಡ್ರೋನ್‌ಗಳ ಪ್ರೊಪೆಲ್ಲರ್‌ಗಳು ಅಪಾಯಕಾರಿಯಾಗಬಹುದು. ಡ್ರೋನ್‌ಗಳಲ್ಲಿ ಲಿಥಿಯಂ ಪಾಲಿಮರ್ ಬ್ಯಾಟರಿಗಳನ್ನು ಬಳಸಲಾಗುತ್ತದೆ. ಅವುಗಳನ್ನು ರಿಚಾರ್ಜ್ ಮಾಡಬಹುದು. ಅವು ಹೆಚ್ಚಿನ ಶಕ್ತಿಯ ಅಂಶವನ್ನು ಹೊಂದಿವೆ. ಅವುಗಳನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು. 

ಡ್ರೋನ್‌ಗಳನ್ನು ಬಳಸುವ ಸರಿಯಾದ ವಿಧಾನದ ಬಗ್ಗೆ ಸರ್ಕಾರ ಸಾಕಷ್ಟು ಜಾಗೃತಿ ಮೂಡಿಸಬೇಕು. ಪ್ರಸ್ತುತ, ಇದರ ಕೊರತೆಯಿದೆ. ಅಲ್ಲದೆ, ಖಾಸಗಿ ಸಂಸ್ಥೆಗಳು ಅಕ್ರಮ ಕಣ್ಗಾವಲು ಮೂಲಕ ವ್ಯಕ್ತಿಗಳು ಮತ್ತು ಸಂಸ್ಥೆಗಳ ಗೌಪ್ಯತೆಗೆ ಧಕ್ಕೆಯಾಗುವಂತೆ ಅತಿಕ್ರಮ ಪ್ರವೇಶ ಮಾಡಬಾರದು. ಡ್ರೋನ್ ಆಧಾರಿತ ಹ್ಯಾಕಿಂಗ್, ಕಳ್ಳಸಾಗಣೆ, ಮತ್ತು ಕಟ್ಟಡಗಳು ಮತ್ತು ಮನುಷ್ಯರೊಂದಿಗೆ ಉದ್ದೇಶಪೂರ್ವಕ ಘರ್ಷಣೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳುವುದು ತಯಾರಕರ ಮುಂದಿರುವ ಸವಾಲು. ನಿರ್ವಾಹಕರೂ ನಿಯಮಗಳನ್ನು ಉಲ್ಲಂಘಿಸುತ್ತಿಲ್ಲವೆಂದು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಡ್ರೋನ್‌ಗಳು ಜನವಸತಿ ಪ್ರದೇಶಗಳಲ್ಲಿ ಅಪಘಾತಗಳನ್ನು ಉಂಟುಮಾಡಿದರೆ, ಉದ್ಯಮಕ್ಕೆ ಸಾಕಷ್ಟು ಹಿನ್ನಡೆಯಾಗುತ್ತದೆ. 

ಬಜೆಟ್‌ನಲ್ಲಿ ಡ್ರೋನ್ ನೀತಿಯನ್ನು ಘೋಷಿಸಿದ್ದರೂ, ಹೊಸ ವಲಯವನ್ನು ಬಳಕೆಯ ವಿಷಯದಲ್ಲಿ ತಪ್ಪುಗಳಿಗೆ ಆಸ್ಪದವಿಲ್ಲದಂತೆ ಬೆಳೆಸುವುದು ಹೇಗೆಂಬುದನ್ನು ಸರ್ಕಾರ ಇನ್ನೂ ವಿವರಿಸಿಲ್ಲ. ‌

– ಗಿರೀಶ್ ಲಿಂಗಣ್ಣ,  ಕೈಗಾರಿಕೋದ್ಯಮಿ ಮತ್ತು ರಕ್ಷಣಾ ವಿಷಯಗಳ ತಜ್ಞ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು