6 ಏರ್‌ಬ್ಯಾಗ್ ಕಡ್ಡಾಯ ಪ್ರಸ್ತಾವನೆ ಮರುಪರಿಶೀಲಿಸಬೇಕು: ಮಾರುತಿ ಸುಜುಕಿ ಆಗ್ರಹ

ನವದೆಹಲಿ: ಪ್ರಯಾಣಿಕ ವಾಹನಗಳಲ್ಲಿ ಆರು ಏರ್‌ಬ್ಯಾಗ್‌ಗಳು ಕಡ್ಡಾಯವಾಗಿ ಇರಬೇಕು ಎಂಬ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರವು ಮರುಪರಿಶೀಲಿಸಬೇಕು ಎಂದು ಮಾರುತಿ ಸುಜುಕಿ ಇಂಡಿಯಾ ಕಂಪನಿ ಆಗ್ರಹಿಸಿದೆ.
ಈ ನಿಯಮವನ್ನು ಜಾರಿಗೆ ತರುವುದರಿಂದ ಸಣ್ಣ ಕಾರುಗಳ ಮಾರುಕಟ್ಟೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ, ಮುಂದಿನ ದಿನಗಳಲ್ಲಿ ಆಟೊಮೊಬೈಲ್ ಉದ್ಯಮದಲ್ಲಿನ ಉದ್ಯೋಗಾವಕಾಶಗಳ ಮೇಲೆಯೂ ಪರಿಣಾಮ ಉಂಟಾಗಬಹುದು ಎಂದು ಕಂಪನಿ ಹೇಳಿದೆ.
ಶೇ 101.9ರಷ್ಟು ಹೊಸ ವಿನ್ಯಾಸದ ₹500 ನಕಲಿ ನೋಟುಗಳ ಸಂಖ್ಯೆ ಹೆಚ್ಚಳ
ಗರಿಷ್ಠ ಎಂಟು ಜನ ಕೂರಬಹುದಾದ ವಾಹನಗಳಲ್ಲಿ ಆರು ಏರ್‌ಬ್ಯಾಗ್‌ಗಳು ಇರುವುದು ಕಡ್ಡಾಯ ಎಂಬ ನಿಯಮವನ್ನು ಅಕ್ಟೋಬರ್‌ನಿಂದ ಜಾರಿಗೆ ತರುವುದಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಈ ಹಿಂದೆ ಹೇಳಿತ್ತು.
ಆದರೆ, ‘ಆರಂಭಿಕ ಹಂತದ ಕಾರುಗಳ ಬೆಲೆಯು ಈಗಾಗಲೇ ಜಾಸ್ತಿಯಾಗಿದೆ. ಇದರಿಂದಾಗಿ ಸಣ್ಣ ಕಾರುಗಳ ಮಾರಾಟದ ಮೇಲೆ ದುಷ್ಪರಿಣಾಮ ಉಂಟಾಗಿದೆ. ಆರು ಏರ್‌ಬ್ಯಾಗ್‌ಗಳು ಇರುವುದು ಕಡ್ಡಾಯ ಎಂಬ ನಿಯಮ ಜಾರಿಗೆ ಬಂದರೆ ಬೆಲೆಯು ಇನ್ನಷ್ಟು ಜಾಸ್ತಿ ಆಗುತ್ತದೆ. ಆಗ ಸಣ್ಣ ಕಾರುಗಳ ಉದ್ಯಮ ಕುಗ್ಗುತ್ತದೆ’ ಎಂದು ಮಾರುತಿ ಸುಜುಕಿ ಇಂಡಿಯಾ ಅಧ್ಯಕ್ಷ ಆರ್.ಸಿ. ಭಾರ್ಗವ ಹೇಳಿದ್ದಾರೆ.
‘ಆರು ಏರ್‌ಬ್ಯಾಗ್ ಕಡ್ಡಾಯ ಎಂಬ ನಿಯಮದಿಂದ ಸಣ್ಣ ಕಾರುಗಳ ಮಾರುಕಟ್ಟೆ ಇನ್ನಷ್ಟು ಚಿಕ್ಕದಾಗುತ್ತದೆ ಎಂಬ ಭಯ ಇದೆ. ಕಾರು ತಯಾರಿಕಾ ಉದ್ಯಮವು ಉದ್ಯೋಗಗಳನ್ನು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಸುತ್ತದೆ. ಮಾರುಕಟ್ಟೆಯಲ್ಲಿ ಒಂದು ಕಾರು ಮಾರಾಟವಾದರೆ ಅದು ಬಹಳಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತದೆ’ ಎಂದು ಭಾರ್ಗವ ಹೇಳಿದ್ದಾರೆ.
ಆರು ಏರ್‌ಬ್ಯಾಗ್ ಕಡ್ಡಾಯ ಎನ್ನುವ ನಿಯಮ ಜಾರಿಗೆ ತರಲು ಇದು ಸರಿಯಾದ ಸಮಯವಲ್ಲ. ಸರ್ಕಾರವು ಇಡೀ ವಿಚಾರವನ್ನು ಮರುಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆರು ಏರ್‌ಬ್ಯಾಗ್ ಕಡ್ಡಾಯ ಎಂಬ ನಿಯಮ ಜಾರಿಗೆ ಬಂದರೆ ಸಣ್ಣ ಕಾರುಗಳ ಬೆಲೆಯಲ್ಲಿ ಗರಿಷ್ಠ ₹ 25 ಸಾವಿರ ಹೆಚ್ಚಳ ಆಗಬಹುದಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.