ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಐಗೆ ಸತ್ಯ ನಾದೆಲ್ಲ ಪ್ರಶಂಸೆ

ಬೆಂಗಳೂರಿನಲ್ಲಿ ನಡೆದ ಮೈಕ್ರೊಸಾಫ್ಟ್‌ ತಂತ್ರಜ್ಞಾನ ಶೃಂಗ
Last Updated 5 ಜನವರಿ 2023, 21:53 IST
ಅಕ್ಷರ ಗಾತ್ರ

ಬೆಂಗಳೂರು: ಲಾಭದ ಉದ್ದೇಶ ಇಲ್ಲದೆ, ಡಿಜಿಟಲ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಯುಪಿಐ, ಒಎನ್‌ಡಿಸಿ ಮತ್ತು ಆಧಾರ್‌ನಂತಹ ಸೇವೆಗಳನ್ನು ಮೈಕ್ರೊಸಾಫ್ಟ್‌ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಸತ್ಯ ನಾದೆಲ್ಲ ಅವರು ಮುಕ್ತಕಂಠದಿಂದ ಪ್ರಶಂಸಿಸಿದರು.

ಬೆಂಗಳೂರಿನಲ್ಲಿ ಗುರುವಾರ ಆಯೋಜನೆ ಆಗಿದ್ದ ‘ಮೈಕ್ರೊಸಾಫ್ಟ್‌ ಫ್ಯೂಚರ್‌ ರೆಡಿ ತಂತ್ರಜ್ಞಾನ ಶೃಂಗ’ದಲ್ಲಿ ಅವರು ಮಾತನಾಡಿದರು. ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇಂತಹ ಸೇವೆಗಳ ಪಾತ್ರ ದೊಡ್ಡದು ಎಂದರು.

‘ಹಲವು ಯೋಜನೆಗಳು ಹಾಗೂ ತಂತ್ರಜ್ಞಾನದ ನೆರವು ಪಡೆದು ಭಾರತದಲ್ಲಿ ಸಾರ್ವಜನಿಕರಿಗೆ ಒದಗಿಸುತ್ತಿರುವ ಸೇವೆಗಳು ಬಹಳ ಬೃಹತ್ ಆಗಿವೆ. ಇವು ಭಾರತವು ಜಗತ್ತಿಗೆ ನೀಡಬಹುದಾದ ಅತಿದೊಡ್ಡ ಕೊಡುಗೆಗಳು ಎಂದು ನಾನು ಭಾವಿಸಿದ್ದೇನೆ’ ಎಂದು ಕಾರ್ಯಕ್ರಮದಲ್ಲಿ ನಾದೆಲ್ಲ ಅವರು ಇನ್ಫೊಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಅವರನ್ನು ಉದ್ದೇಶಿಸಿ ಹೇಳಿದರು.

ರಾಷ್ಟ್ರೀಯ ಪಾವತಿ ನಿಗಮ ಅಭಿವೃದ್ಧಿಪಡಿಸಿರುವ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ), ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ನೀಡುತ್ತಿರುವ ಆಧಾರ್ ಸಂಖ್ಯೆ, ಈಚೆಗೆ ಆರಂಭವಾಗಿರುವ ಒಎನ್‌ಡಿಸಿ ವೇದಿಕೆಯಂಥವುಗಳನ್ನು ಡಿಜಿಟಲ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳು (ಡಿಪಿಜಿ) ಎಂದು ಗುರುತಿಸಲಾಗಿದೆ.

‘ಇಂತಹ ಸೇವೆಗಳಲ್ಲಿ ಹಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೂ ಇಲ್ಲ. ಹೀಗಾಗಿ, ಇಂತಹ ಸೇವೆಗಳು ಪ್ರತಿ ವ್ಯಕ್ತಿಯನ್ನೂ ಹೇಗೆ ಸಶಕ್ತಗೊಳಿಸುತ್ತಿವೆ ಎಂಬುದಕ್ಕೆ ನಾವೇ ಒಂದು ಉದಾಹರಣೆ’ ಎಂದು ಮೈಕ್ರೊಸಾಫ್ಟ್‌ ಇಂಡಿಯಾ ಅಧ್ಯಕ್ಷ ಅನಂತ್ ಮಹೇಶ್ವರಿ ಹೇಳಿದರು.

ಇಸ್ರೊ–ಮೈಕ್ರೊಸಾಫ್ಟ್‌ ಒಪ್ಪಂದ (ಪಿಟಿಐ): ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತು ಮೈಕ್ರೊಸಾಫ್ಟ್‌ ಗುರುವಾರ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.

ಮೈಕ್ರೊಸಾಫ್ಟ್‌ ಫ್ಯೂಚರ್‌ ರೆಡಿ ಟೆಕ್ನಾಲಜಿ ಸಮ್ಮೇಳನದ ಜೊತೆಯಲ್ಲಿಯೇ ಈ ಒಪ್ಪಂದವೂ ನಡೆದಿದೆ. ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಸಂಶೋಧಕರು, ಉದ್ಯಮಿಗಳ ಮಾರುಕಟ್ಟೆ ಸಾಮರ್ಥ್ಯವನ್ನು ಉನ್ನತೀಕರಿಸುವ ಇಸ್ರೊದ ಮುನ್ನೋಟದ ಫಲವಾಗಿ ಈ ಒಪ್ಪಂದ ಏರ್ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT